ಎಡಿಜಿಪಿ ನೇತೃತ್ವದಲ್ಲಿ ಪೊಲೀಸರ ಪಥಸಂಚಲನ : ಶಾಂತಿ-ಸುವ್ಯವಸ್ಥೆಗಾಗಿ ಮನವಿ

ಪೌರತ್ವ ಮಸೂದೆ ತಿದ್ದುಪಡಿ ವಿರೋಧಿಸಿ ದೇಶದ ವಿವಿಧೆಡೆ ಹೋರಾಟ ನಡೆದಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ಮಾಹನಗರದಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಬೃಹತ್ ರೂಟ್ ಮಾರ್ಚ್ ನಡೆಸಲಾಯಿತು. ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿ, ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಯಿತು.

ನಿಷೇಧಾಜ್ಞೆ ಧಿಕ್ಕರಿಸಿ ಕಲಬುರ್ಗಿಯಲ್ಲಿ ಬಂದ್ ಆಚರಿಸಿ, ಬೃಹತ್ ರಾಲಿ ನಡೆಸಿದ ಹಿನ್ನೆಲೆಯಲ್ಲಿ ಕಲಬುರ್ಗಿ ನಗರದಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ. ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಕಲಬುರ್ಗಿಯೂ ಒಂದಾಗಿರುವುದರಿಂದಾಗಿ ನಗರದಲ್ಲಿ ಶಾಂತಿೃ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥ ಸಂಚಲನ ನಡೆಸಲಾಯಿತು. ಪೊಲೀಸರು, ಪ್ಯಾರಾ ಮಿಲಿಟರಿ ಪಡೆ, ಹೋಮ್ ಗಾರ್ಡ್, ಕೆ.ಎಸ್.ಆರ್.ಪಿ ತುಕಡಿ ಇತ್ಯಾದಿಗಳ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಗರೇಶ್ವರ ಶಾಲೆಯಿಂದ ಆರಂಭಗೊಂಡ ಪಥ ಸಂಚಲನ, ಜಗತ್ ವೃತ್ತದಲ್ಲಿ ಅಂತ್ಯಗೊಂಡಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶಾಂತಿ ಕಾಪಾಡಿಕೊಂಡು ಹೋಗುವಂತೆ ಜನತೆಯಲ್ಲಿ ಮನವಿ ಮಾಡಾಲಯಿತು.

ಈ ವೇಳೆ ಮಾತನಾಡಿದ ಅಲೋಕ್ ಕುಮಾರ್, ಕಲಬುರ್ಗಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಜನತೆಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದ್ದೇವೆ. ಯಾರೇ ಶಾಂತಿ ಕದಡಲು ಯತ್ನಿಸಿದರೂ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್, ಇದುವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರ ಮೇಲೆ ಹೂ ಚೆಲ್ಲಿದ ಬಿಜೆಪಿ ಕಾರ್ಯಕರ್ತರು ಪುಷ್ಪ ಚೆಲ್ಲಿ ಸ್ವಾಗತಿಸಿದರು. ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಮಾರ್ಗ ಮಧ್ಯದಲ್ಲಿ ಪೊಲೀಸರಿಗೆ ಹೂವಿನ ಹಾರ ಹಾಕಿ, ಹೂ ಚೆಲ್ಲುವ ಮೂಲಕ ಸ್ವಾಗತಿಸಲಾಯಿತು. ಸೂಪರ್ ಮಾರುಕಟ್ಟೆಯಲ್ಲಿ ಪಥ ಸಂಚಲನ ಆಗಮಿಸುತ್ತಿದ್ದಂತೆಯೇ ಗುಲಾಬಿ ಮತ್ತಿತರ ಹೂಗಳನ್ನು ಅವರ ಮೇಲೆ ಚೆಲ್ಲಿ, ಶಾಂತಿ ಕಾಪಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು.