ನಿರ್ಭಯಾ ಅಪರಾಧಿಗಳಿಗೆ ಗಲ್ಲು: ಮರದಂಡನೆ ರದ್ದುಗೊಳಿಸುವಂತೆ ವಿಶ್ವಸಂಸ್ಥೆ ಕರೆ

2012 ರಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೊಲೆ ಆರೋಪಿಗಳನ್ನು ನೇಣಿಗೇರಿಸಿದ ಒಂದು ದಿನದ ನಂತರ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಅಥವಾ ಅದರ ಮೇಲೆ ನಿಷೇಧ ಹೇರುವಂತೆ ವಿಶ್ವಸಂಸ್ಥೆ ತನ್ನೆಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.

‘ನಿರ್ಭಯಾ’ ಪ್ರಕರಣ ಎಂದು ಕರೆಯಲಾಗಿದ್ದ ದೆಹಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಚಲಿಸುವ ಬಸ್‌ನಲ್ಲಿ ಆರು ಜನ ಕಾಮುಖರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಘಟನೆ ನಡೆದ ಏಳು ವರ್ಷಗಳ ನಳಿಕನಾಲ್ವರು ಅಪರಾಧಿಗಳಿಗೆ ಶುಕ್ರವಾರ ಮುಂಜಾನೆ ಮರಣದಂಡನೆ ಶಿಕ್ಷೆಯಾಗಿದೆ.ಒಬ್ಬ ಜೈಲಿನಲ್ಲೇ ಆತ್ಮಹತ್ಯೆ ಮಾಡಿದ್ದ, ಮತ್ತೊಬ್ಬ ಬಾಲಾಪರಾಧಿಎಂದು ಜೈಲುಶಿಕ್ಷೆ ವಿಧಿಸಿ ಬಿಡುಗಡೆ ಮಾಡಲಾಗಿತ್ತು.

ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಿದ್ದರ ಕುರಿತು ಪ್ರತಿಕ್ರಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಕ್ತಾರರು “ವಿಶ್ವವ್ಯಾಪಿ ಮರಣದಂಡನೆ ಶಿಕ್ಷೆ ಜಾರಿಗೊಳ್ಳುವುದನ್ನು ನಿಲ್ಲಿಸಬೇಕು ಇಲ್ಲವೇ ಅದರ ಮೇಲೆ ನಿಷೇಧ ಹೇರಬೇಕು” ಎಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಕರೆ ಕೊಟ್ಟಿದ್ದಾರೆ.

“ನಮ್ಮ ನಿಲುವು ಸ್ಪಷ್ಟವಾಗಿದೆ, ಮರಣದಂಡನೆಯ ಬಳಕೆಯನ್ನು ನಿಲ್ಲಿಸುವಂತೆ ನಾವು ಎಲ್ಲಾ ರಾಜ್ಯಗಳಿಗೆ ಕರೆ ನೀಡುತ್ತೇವೆ ಅಥವಾ ಕನಿಷ್ಠ ಇದಕ್ಕೆ ನಿಷೇಧವನ್ನು ಹಾಕಬೇಕಿದೆ” ಎಂದು ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.