ನರಮನುಷ್ಯರೆಂಬ ಭೂಮಿಗೆ ಅಂಟಿರುವ ವೈರಸ್‌ಗಳು

 

ಕೊರೊನಾ ವೈರಸ್‌ ಇಡೀ ಜಗತ್ತನ್ನೇ ತಲ್ಲಣಗೊಳಿಸಿ, ಸ್ತಬ್ಧಗೊಳಿಸಿದೆ. ಇದೂ ವರೆಗೂ 1,98,959 ಜನರು ಕೊರೊನಾ ಸೋಂಕು ಬಾಧಿತರೆಂದು ದೃಢಪಟ್ಟಿದೆ, 7,991 ಜನರು ಮೃತ ಪಟ್ಟಿದ್ದಾರೆ. 82,779 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದರಿಂದಾಗಿ ಜಾಗತಿಕ ಮಾರುಕಟ್ಟೆಯೂ ಸೇರಿದಂತೆ ಎಲ್ಲಾ ಕ್ಷೇತ್ರಗಳ ವ್ಯವಹಾರ-ವಹಿವಾಟುಗಳು ಗಣನೀಯವಾಗಿ ಇಳಿಮುಖಗೊಂಡಿವೆ. ಭಯದಲ್ಲಿರುವ ಜನರನ್ನು ಮೀಡೀಯಾಗಳು ಮತ್ತಷ್ಟು ಭಯಕ್ಕೆ ತಳ್ಳುತ್ತಿವೆ. ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದಲ್ಲಿ 15 ದಿನಗಳ ಶಾಲಾ-ಕಾಲೇಜು ರಜೆ ಹಾಗೂ ಮಾಲ್, ಸಮಾರಂಭಗಳನ್ನು ಮಾಡದಂತೆ ಬಂದ್‌ ಮಾಡಲಾಗಿದೆ.

ಈ ಮಧ್ಯೆ ಸ್ಯಾಂಡಲ್‌ವುಡ್‌ನ ನಿರ್ದೇಶಕ ಯೋಗರಾಜ್‌ ಭಟ್‌ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಕನ್ನಡಿಗರಲ್ಲಿ ಕುತೂಹಲ ಮೂಡಿಸಿದೆ. ಅಕಸ್ಮಾತ್‌, ನರಮನುಷ್ಯರೆಲ್ಲಾ ಭೂಲೋಕಕ್ಕೆ ವೈರಸ್‌ಗಳಾಗಿದ್ದು, ಈ ಕೊರೊನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ಔಷಧ ಆಗಿದ್ದರೆ, ಏನು ಮಾಡುವುದು? ಎಂದು ಪೋಸ್ಟ್‌ ಹಾಕಿದ್ದಾರೆ.

ಇಡೀ ಭೂಮಂಡಲವೇ ಅಳಿವಿನ ಅಂಚಿನಲ್ಲಿದ್ದು, ಋತುಮಾನವೇ ಬದಲಾಗುತ್ತಿದೆ. ವಿಪರೀತ ತಾಪಮಾನ, ಅಕಾಲಿಕ ಮಳೆ-ಗಾಳಿಯಿಂದಾಗಿ ಭೂಮಿಯ ಕಾಲಚಕ್ರದಲ್ಲಿ ಏರುಪೇರುಗಳಾಗುತ್ತಿವೆ. ಇದಕ್ಕೆಲ್ಲಾ ಕಾರಣವಾದ ಏಕೈಕ ಜೀವಿ ಎಂದರೆ ಅದು ಮನುಷ್ಯ ಸಂತತಿ.. ಈ ಮನುಷ್ಯನೆಂಬ ಜೀವಿ ಭೂಮಿಗೆ ಅಂಟಿರುವ ವೈರಸ್‌ ಆಗಿದ್ದು, ಅದನ್ನು ಪ್ರಕೃತಿಯೇ ತೆಗೆಯಬೇಕು. ಅದಕ್ಕಾಗಿ ಕೊರೊನಾ ಬಂದಿರಬಹುದೇ ಎಂಬರ್ಥದ ಯೋಗರಾಜ್‌ ಭಟ್‌ ಅವರ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.