ಅನರ್ಹರಾಗಿ ಕೋರ್ಟ್ ಮೂಲಕ ಮತ್ತೆ ಅರ್ಹರಾದ ಮತದಾರರು…!

ಶಾಸಕರ ಅನರ್ಹತೆ ಬಗ್ಗೆ ಕೇಳಿದಿರಿ ಆದ್ರೆ ಈ ಊರಲ್ಲಿ ಮತದಾರರೆ ಅನರ್ಹರಾಗಿ ಕೋರ್ಟ್ ಮೂಲಕ ಮತ್ತೆ ಅರ್ಹರಾಗಿದ್ದಾರೆ.

ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳೋಕೆ ಏನೆಲ್ಲ ಮಾಡಿದ್ರೂ ಅಂತಾ ನೋಡಿದ್ರಿ…ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳೋಕೆ ಶಾಸಕರೇ ಅನರ್ಹರಾಗಿದ್ದನ್ನೂ ತಾವು ಕಂಡಿದ್ದೀರಿ..ಅಲ್ಲದೇ..ಅನರ್ಹ ಶಾಸಕರು ಕೋರ್ಟ್ ಮೊರೆ ಹೋಗಿ ಅರ್ಹರಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದಕ್ಕೆ ಕಾರಣವಾಗಿರೋದನ್ನೂ ನೋಡಿದ್ದೀವಿ..ಆದ್ರೆ ಈ ಊರಲ್ಲಿ ಅಧಿಕಾರ ಉಳಿಸಿಕೊಳ್ಳೋಕೆ ಮತದಾರರನ್ನೇ ಅನರ್ಹ ಮಾಡಲಾಗಿತ್ತು..ಆದರೆ ಇದೀಗ ಕೋರ್ಟ್ ಮೊರೆ ಹೋಗಿ ಅನರ್ಹ ಮತದಾರರು ಅರ್ಹರಾಗಿ ಮತದಾನದ ಹಕ್ಕು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹದೊಂದು ಘಟನೆ ನಡೆದದ್ದು ಎಲ್ಲಿ ಗೊತ್ತಾ?

ಅಧಿಕಾರ ಉಳಿಸಿಕೊಳ್ಳೋಕೆ ಅಂತಾ 1500ಕ್ಕೂ ಹೆಚ್ಚು ಮತದಾರರನ್ನು ಅನರ್ಹ ಮಾಡಿರೋ ಆರೋಪ…ಅನರ್ಹ ಮತದಾರರು ಕೋರ್ಟ್ ಮೊರೆ ಹೋಗಿ ಮತದಾನದ ಹಕ್ಕು ಪಡೆದುಕೊಂಡ ಇನ್ನೊಂದು ಗುಂಪು…ಮತದಾರರನ್ನು ಹೇಗೆಲ್ಲ ಬಳಕೆ ಮಾಡಿಕೊಂಡು ಸ್ವಾರ್ಥ ಮೆರೆಯುತ್ತಾರೆ ಅನ್ನೋದಕ್ಕೆ ಇರೋ ಸ್ಪಷ್ಟ ನಿದರ್ಶನ…ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇದೇ ಜನೆವರಿ 19 ರಂದು ಚುನಾವಣೆ ನಡೆಯುತ್ತಿದೆ. 9 ಸ್ಥಾನಗಳಿಗೆ ನಡೆಯುತ್ತಿರೋ ಈ ಚುನಾವಣೆಯಲ್ಲಿ 1900ಕ್ಕೂ ಹೆಚ್ಚು ಮತದಾರರು ಮತ ಚಲಾವಣೆ ಮಾಡೋ ಹಕ್ಕು ಹೊಂದಬೇಕಿತ್ತು. ಆದ್ರೆ ಏನೇನೋ ಸಬೂಬು ಹೇಳಿ 1981 ಸದಸ್ಯರ ಪೈಕಿ 355 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. ಆದ್ರೂ ಕೂಡ ಐದು ವರ್ಷಗಳ ಅವಧಿಗೆ ಚುನಾವಣೆಯನ್ನು ಘೋಷಣೆ ಮಾಡಿಯಾಗಿತ್ತು. ಅಷ್ಟೇ ಅಲ್ಲದೇ ಸ್ವಾಭಿಮಾನಿ ವಿಕಾಸ ಸಂಘ ಹಾಗೂ ಸೇತ್ಕರಿ ವಿಕಾಸ ಸಂಘ ಹೆಸರಿನಲ್ಲಿ ಎರಡು ಬಣಗಳು ಸ್ಪರ್ಧೆ ಮಾಡಿ ಚುನಾವಣೆ ಪ್ರಚಾರವನ್ನೂ ಕೂಡ ಮಾಡುತ್ತಿವೆ. ಆದ್ರೆ 1900 ಕ್ಕೂ ಹೆಚ್ಚು ಮತದಾರರು ಇರೋವಾಗ 355 ಜನರು ಮಾತ್ರ ಅರ್ಹರಾಗಿದ್ದು ಏಕೆ? ಎಂಬ ಸಂಶಯ ಸ್ವಾಭಿಮಾನಿ ವಿಕಾಸ ಸಂಘದ ಬಣಕ್ಕೆ ಬಂದಿದೆ. ಹೀಗಾಗಿ ಇವರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಇದೀಗ 820 ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಿ ಕೋರ್ಟ್ ಆದೇಶಸಿದೆ. ಪ್ರಸ್ತುತ ಅಧಿಕಾರರೂಢ ಆಡಳಿತ ಮಂಡಳಿಯ ಸದಸ್ಯರು ಚುನಾವಣೆ ಗೆಲ್ಲೋಕೆ ಇಷ್ಟೊಂದು ಸಂಖ್ಯೆಯ ಮತದಾರರು ಅನರ್ಹರಾಗೋದಕ್ಕೆ ಕಾರಣವಾಗಿತ್ತು ಎಂಬುವುದು ಸ್ವಾಭಿಮಾನಿ ವಿಕಾಸ ಸಂಘದ ಆರೋಪವಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಅನರ್ಹ ಅಸ್ತ್ರವನ್ನು ಈ ಹಿಂದಿನ ಸರ್ಕಾರ ಪ್ರಯೋಗ ಮಾಡಿತ್ತು. ಆದ್ರೆ ಇಲ್ಲಿ ತಮ್ಮ ಬಣ್ಣ ಬಯಲಾಗದಿರಲಿ ಅನ್ನೋ ಕಾರಣಕ್ಕಾಗಿಯೋ ಏನೋ ಅಧಿಕಾರರೂಢ ಆಡಳಿತ ಮಂಡಳಿಯು ಇಂತಹದೊಂದು ಪ್ರಯೋಗವನ್ನು ಮತದಾರರ ಮೇಲೆ ಮಾಡೋ ಮೂಲಕ ಅನ್ಯಾಯದ ಮಾರ್ಗ ತುಳಿದಿದ್ದು, ಆದ್ರೆ ಇದೀಗ ಕೋರ್ಟ್ ತಮಗೆ ನ್ಯಾಯ ನೀಡಿದೆ ಎಂಬುವುದು ಸ್ವಾಭಿಮಾನಿ ವಿಕಾಸ ಸಂಘದ ಸಮಜಾಯಿಷಿಯಾಗಿದ್ದು, ಈ ಕುರಿತು ಚುನಾವಣಾಧಿಕಾರಿಗಳನ್ನು ಕೇಳಿದ್ರೆ, ಸಹಕಾರಿ ಸಂಘದ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಇಂತಹದೊಂದು ಅಚಾತುರ್ಯ ನಡೆದಿರೋ ಸಾಧ್ಯತೆ ಇದ್ದು, ಇಂತಹ ಘಟನೆಗಳು ಈ ಪಿಕೆಪಿಎಸ್ ನಲ್ಲಿ ಮಾತ್ರವಲ್ಲ. ರಾಜ್ಯದ ಬೇರೆ ಬೇರೆ ಕಡೆಗೂ ನಡೆದಿರುವ ಉದಾಹರಣೆಗಳು ಇವೆ. ಕೋರ್ಟ್ ಆದೇಶದಂತೆ ಇದೀಗ 820 ಹಾಗೂ ಈ ಮೊದಲಿನ 355 ಸದಸ್ಯರು ಸೇರಿದಂತೆ 1175 ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ. ಎಂದಿದ್ದಾರೆ.

ಒಟ್ಟಿನಲ್ಲಿ, ಒಂದೆಡೆ ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳೋಕೆ ಶಾಸಕರನ್ನೇ ಅನರ್ಹರನ್ನು ಮಾಡಿದ್ರೆ, ಇಲ್ಲಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳೋಕೆ ಸಾವಿರಾರು ಜನ ಮತದಾರರನ್ನೇ ಅನರ್ಹ ಮಾಡಿದ್ದು ನೋಡಿದ್ರೆ ಅಧಿಕಾರಕ್ಕಾಗಿ ಜನರು ಏನೆಲ್ಲಾ ಮಾಡುತ್ತಾರೆ ಅನ್ನೋದಕ್ಕೆ ಇದೊಂದು ನಿದರ್ಶನವಾಗಿದೆ.