ಅಗತ್ಯಕ್ಕಿಂತ ಹೆಚ್ಚು ತಿಂದ್ರೆ ವಾಂತಿಯಾಗುತ್ತೆ – ಮತ್ತೊಂದು ಅಪರೇಷನ್ ಕಮಲದ ವಿರುದ್ಧ ಹೊರಟ್ಟಿ ಕಿಡಿ

ಮತ್ತಷ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿಗೆ ಸೇರಲಿದ್ದು, ಬರಮಾಡಿಕೊಳ್ಳಲು ಸಿದ್ಧರಿರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಬಸವರಾಜ ಹೊರಟ್ಟಿ ಕಿಡಿಕಾರಿದ್ದಾರೆ. ಅಗತ್ಯವಿದ್ದಷ್ಟು ತಿಂದ್ರೆ ಮಾತ್ರ ಪಚನವಾಗುತ್ತೆ. ಹೆಚ್ಚು ತಿಂದ್ರೆ ವಾಂತಿಯಾದಂತೆ, ಬಿಜೆಪಿಗೆ ತೊಂದರೆಯಾಗೋದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಅಗತ್ಯವಿದ್ದಷ್ಟು ತಿನ್ನಬೇಕು, ಅಗತ್ಯಕ್ಕಿಂತ ಹೆಚ್ಚು ತಿಂದಲ್ಲಿ ವಾಂತಿಯಾಗೋದು ಖಚಿತ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಮತ್ತಷ್ಟು ನಾಯಕರು ಬರೋರಿದ್ದು, ಅವರ ಸ್ವಾಗತಕ್ಕೆ ಸಿದ್ಧರಾಗಿರಿ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ವಿರುದ್ಧ ಹೊರಟ್ಟಿ ಕಿಡಿಕಾರಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ಮತ್ತಷ್ಟು ಜನ ಜೆಡಿಎಸ್, ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರಲಿದ್ದಾರೆ ಎಂದ ಸಿಎಂ ಹೇಳ್ತಿದ್ದಾರೆ. ಆದರೆ ಈಗ ಹೋಗಿ ಏನು ಮಾಡೋದಿದೆ ಎಂದು ಪ್ರಶ್ನಿಸಿದ್ದಾರೆ.

ನಮ್ಮವರ ತಪ್ಪಿನಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೆಲ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಅಧಿಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರೆದಿದೆ. ಇನ್ನಸ್ಟು ಮಂದೀನ ತಗೊಂಡು ಕುಲಗೆಡಿಸೋ ಕೆಲಸ ಮಾಡೋದು ಸರಿಯಲ್ಲ. ಅಲ್ಲೇ ಬಹಳ ಜನ ಇದ್ದಾರೆ, ನಮ್ಮವರು ಹೋಗಿ ಮಾಡೋದೇನು. ಅಗತ್ಯವಿದ್ದಷ್ಟು ತಿಂದ್ರೆ ಜೀರ್ಣಿಸಿಕೊಳ್ಳಬಹುದು. ಹೆಚ್ಚು ತಿಂದರೆ ಪಚನ ಆಗಲ್ಲ. ಮತ್ತಷ್ಟು ಶಾಸಕರು ಯಾಕೆ ಬೇಕು ಅವ್ರೀಗೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿ ಕೆಟ್ಟ ಸಂಪ್ರದಾಯ ಹುಟ್ಟು ಹಾಕಿದೆ ಎಂದು ಕಿಡಿಕಾರಿದರು.

ಈಗ ಒಂದಷ್ಟು ಜನರನ್ನು ಕರೆದುಕೊಂಡು ಸರ್ಕಾರ ರಚಿಸಿದ ಮೇಲೆ ಮತ್ತೆ ಮತ್ತೆ ಶಾಸಕರನ್ನು ಸೆಳೆಯೋದು ಯಾಕೆ. ಜಾಸ್ತಿ ತಿಂದ್ರೆ ವಾಂತಿಮಾಡಿಕೊಂಡಂತೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ತೊಂದರೆ ಖಚಿತ ಎಂದು ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿ ಈಗ ಯಾರೂ ಹೋಗುತ್ತಾರೋ ಅವರಿಗೆ ಒಳ್ಳೆಯ ಗೌರವ ಸಿಗಲ್ಲ. ಅಲ್ಲೇ ಸಾಕಷ್ಟು ಜನ ಸಚಿವ ಸ್ಥಾನಕ್ಕಾಗಿ ಕಾದು ಕುಳಿತಿದ್ದಾರೆ. ಒಂದು ವೇಳೆ ನಮ್ಮ ಶಾಸಕರು ಬಿಜೆಪಿಗೆ ಹೋದರೂ ಸಚಿವ ಸ್ಥಾನ ನೀಡಬಹುದು. ಸಚಿವ ಸ್ಥಾನ ಎಷ್ಟು ವರ್ಷ ನೀಡಲಾಗುತ್ತದೆ. ಅಬ್ಬಬ್ಬ ಅಂದ್ರೆ ನಾಲ್ಕೈದು ವರ್ಷ. ಆಮೇಲೆ ಇವರೂ ಮಾಜಿ ಆಗಲೇಬೇಕಲ್ಲವೆ ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಹೊರಟ್ಟಿ ಗರಂ…
ಜೆಡಿಎಸ್ ನಾಯಕರ ವಿರುದ್ಧದ ನಮ್ಮ ಸಿಟ್ಟು ಬಹಳ ಸಣ್ಣದು ಎಂದು ಕುಮಾರಸ್ವಾಮಿ ವಿರುದ್ಧ ಹೊರಟ್ಟಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಶಾಸಕರು – ಎಚ್ ಡಿ ಕೆ ನಡುವೆ ಬಿರುಕಿನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಹೊರಟ್ಟಿ, ಅಧಿಕಾರ ಇದ್ದಾಗ ಎಂ.ಎಲ್.ಸಿ.ಗಳನ್ನ ವಿಶ್ವಾಸಕ್ಕೆ ತಗೋಬೇಕಿತ್ತು. ಆಗ ಕುಮಾರಸ್ವಾಮಿ ಯಾರನ್ನೂ ಕೇರ್ ಮಾಡಲಿಲ್ಲ. ಈಗ ಲೆಕ್ಕಕ್ಕೆ ತಗೊಂಡ್ರೆ ಯಾವ ಪ್ರಯೋಜನ ಆಗಲ್ಲ ಎಂದರು.

ದೇವೇಗೌಡರಸ್ಟು ಸಹನೆ ಕುಮಾರ ಸ್ವಾಮಿ ಕಡೆ ಇಲ್ಲ. ಹೀಗಾಗಿಯೇ ಈ ರೀತಿಯ ಸಮಸ್ಯೆಗಳು ಉದ್ಭವವಾಗಿವೆ. ದೇವೇಗೌಡರು ಭರವಸೆ ಕೊಟ್ಟಿದ್ದಾರೆ, ಮಕ್ಕಳು ಅತ್ತಾಗ ಚಾಕ್ ಲೆಟ್ ಕೊಟ್ಟ ರೀತಿಯಲ್ಲಿ ಸಮಾಧಾನ ಮಾಡಿದ್ದಾರೆ. ದೇವೇಗೌಡರ ಮಾತಿಗೆ ಮಣಿದು ನಾವು ಸುಮ್ಮನಾಗೀವಿ. ಆದರೆ ಅಧಿಕಾರ ಹೋದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ್ರೆ ಏನು ಪ್ರಯೋಜನವಾಗಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.