ನಾವು ಈರುಳ್ಳಿ, ಬೆಳ್ಳುಳ್ಳಿ ತಿನ್ನಲ್ಲ, ಹೀಗಾಗಿ ಬೆಲೆ ಏರಿಕೆ ಚಿಂತೆಯಿಲ್ಲ – ನಿರ್ಮಲಾ ಸೀತಾರಾಮನ್

ದೇಶದ ಸಾಮಾನ್ಯ ಜನರಿಗೆ ಕುಸಿಯುತ್ತಿರುವ ಆರ್ಥಿಕತೆಗಿಂತ ಹೆಚ್ಚುತ್ತಿರುವ ಈರುಳ್ಳಿ ಬೆಲೆಯೆ ತಲೆನೋವಾಗಿ ಪರಿಣಮಿಸಿದೆ ಈ ಬೆಲೆ ಏರಿಕೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಅಡುಗೆ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬೆಲೆ ಏರಿಕೆ, ಆರ್ಥಿಕ ಹಿಂಜರಿತ ದೇಶದಲ್ಲಿ ಹೂಡಿಕೆ ಮಾಡಿದವರಿಗೆ ಮತ್ತು ಮಾಡುವವರಿಗೆ ಭೀತಿ ಉಂಟು ಮಾಡುತ್ತಿದೆ ಎಂಬ ವಿಪಕ್ಷದ ಟೀಕೆಗಳನ್ನು ನಿರಾಕರಿಸಿದ ಸಚಿವರು, ವಿದೇಶಿ ನೇರ ಹೂಡಿಕೆ ಈ ವರ್ಷ ಸುಂಆರು 17 ಬಿಲಿಯನ್ ಡಾಲರ್ ನಿಂದ 209 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಪ್ರತಿಪಾದಿಸಿದರು.

ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೇಲಿನ ಚರ್ಚೆಗೆ ನಿನ್ನೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, ಈರುಳ್ಳಿ ಬೆಲೆ ಏರಿಕೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿ ರಫ್ತುಗಳ ನಿಷೇಧ, ಷೇರು ಮಿತಿಯನ್ನು ಹೆಚ್ಚಿಸುವುದು, ಕೊರತೆಯ ಪ್ರದೇಶಕ್ಕೆ ಈರುಳ್ಳಿ ಆಮದು ಮತ್ತು ವರ್ಗಾವಣೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

2014ರಿಂದ ಈರುಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಹೆಚ್ಚುವರಿ ಬೆಳೆಯಾದಾಗ ರಫ್ತಿಗೆ ಬೆಂಬಲವನ್ನು ಸರ್ಕಾರ ನೀಡಿದೆ. ರಫ್ತಿಗೆ ಶೇಕಡಾ 5ರಿಂದ 7ರಷ್ಟು ಸಹಾಯ ಮಾಡಲಾಗಿದೆ.ಈರುಳ್ಳಿಗೆ ಸಂಬಂಧಿಸಿದಂತೆ ಸಾಕಷ್ಟು ರಚನಾತ್ಮಕ ಸಮಸ್ಯೆಗಳಿವೆ . ಸರಿಯಾದ ಸುಧಾರಿತ ಅತ್ಯಾಧುನಿಕ ಸಂಗ್ರಾಹಕ ವ್ಯವಸ್ಥೆ ನಮ್ಮಲ್ಲಿಲ್ಲ, ವೈಜ್ಞಾನಿಕ ವ್ಯವಸ್ಥೆಯೂ ಇಲ್ಲಾ. ಇದರಿಂದಾಗಿ ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಕಷ್ಟವಾಗುತ್ತಿದೆ ಎಂದರು.

ವಿವಾದ ಸೃಷ್ಠಿಸಿದ ವಿತ್ತ ಸಚಿವರ ಹೇಳಿಕೆ :

ಲೋಕಸಭೆಯಲ್ಲಿ ಹೀಗೆ ಚರ್ಚೆ ನಡೆಯುತ್ತಿರಬೇಕಾದರೆ ಮಾತಿನ ಮಧ್ಯೆ ಸಚಿವೆ, ನಮ್ಮ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದಿಲ್ಲ, ನಾನು ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಕುಟುಂಬಕ್ಕೆ ಸೇರಿದವಳು, ಹೀಗಾಗಿ ಬೆಲೆ ಏರಿಕೆಯ ಚಿಂತೆಯಿಲ್ಲ ಎಂದು ಹೇಳಿದ ನಂತರ ವಿಪಕ್ಷಗಳು ನೀವು ತಿನ್ನದಿದ್ದರೆ ದೇಶದ ಜನತೆಕೂಡ ತಿನ್ನುವುದನ್ನು ಬಿಟ್ಟು ಬಿಡಬೇಕೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published.