ಅಚಾತುರ್ಯದಿಂದ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದೇವೆ – ತಪ್ಪೊಪ್ಪಿಕೊಂಡ ಇರಾನ್

ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದು ನಾವೇ. ನಾವು ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿಲ್ಲ. ಅಚಾತುರ್ಯದಿಂದ ನಮ್ಮ ಸೇನೆ 176 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನ್ ಶನಿವಾರ ಘೋಷಿಸಿದೆ.

ಶನಿವಾರ ನೀಡಿದ ಪತ್ರಿಕಾಪ್ರಕಟನೆಯೊಂದನ್ನು ಬಿಡುಗಡೆ ಮಾಡಿರುವ ಇರಾನ್ ವಿಮಾನ ಪತನಕ್ಕೆ ‘ಮಾನವ ದೋಷ’ಕಾರಣ ಎಂದು ದೂಷಿಸಿದೆ.

ಉಕ್ರೇನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ಗೆ ಸೇರಿರುವ ಬೊಯಿಂಗ್ 737 ವಿಮಾನ ಟೇಕಾಫ್ ಆದ ಬಳಿಕ ಟೆಹ್ರಾನ್‌ನ ಹೊರವಲಯದಲ್ಲಿ ಪತನಗೊಂಡಿತ್ತು. ಇರಾನ್, ಅಮೆರಿಕ ಪಡೆಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಉಕ್ರೇನ್ ವಿಮಾನ ಪತನಗೊಂಡಿತ್ತು.

ಉಕ್ರೇನ್ ವಿಮಾನವನ್ನು ತಾನು ನಡೆಸಿದ ಕ್ಷಿಪಣಿ ದಾಳಿಯಿಂದ ಪತನಗೊಂಡಿದೆ ಎಂಬುದನ್ನು ಇರಾನ್ ಹಲವು ಬಾರಿ ನಿರಾಕರಿಸಿತು. ಆದರೆ, ಇರಾನ್ ದೇಶವೇ ವಿಮಾನವನ್ನು ಪತನಗೊಳಿಸಿದೆ ಎಂದು ಗುಪ್ತಚರ ಇಲಾಖೆಯನ್ನು ಉಲ್ಲೇಖಿಸಿ ಅಮೆರಿಕ ಹಾಗೂ ಕೆನಡಾ ಆರೋಪಿಸಿದ್ದವು.

ವಿಮಾನವು 167 ಪ್ರಯಾಣಿಕರು ಹಾಗೂ 9 ಸಿಬ್ಬಂದಿಗಳೊಂದಿಗೆ ಉಕ್ರೇನ್ ರಾಜಧಾನಿ ಕೀವ್‌ಗೆ ತೆರಳುತ್ತಿತ್ತು. ವಿಮಾನದಲ್ಲಿ ಇರಾನ್‌ನ 82, ಕೆನಡಾದ ಕನಿಷ್ಟ 63 ಹಾಗೂ ಉಕ್ರೇನ್‌ನ 11 ನಾಗರಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.