ಭಯೋತ್ಪಾದಕರ ಜೊತೆ ಈ ಪೊಲೀಸ್ ಅಧಿಕಾರಿಗೆ ಏನು ಕೆಲಸ…?

ಕಾಶ್ಮೀರದಿಂದ ಇತ್ತೀಚಿನ ದಿನಗಳಲ್ಲಿ ಹೊರಬಂದ ಅತ್ಯಂತ ರೋಚಕ ಸುದ್ದಿಯೊಂದರ ಪ್ರಕಾರ, ಪೊಲೀಸ್ ಉನ್ನತಾಧಿಕಾರಿಯೊಬ್ಬರನ್ನು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿಗಳ ಜೊತೆಯಲ್ಲಿ ಬಂಧಿಸಲಾಗಿದ್ದು, ಇವರಲ್ಲಿ ಒಬ್ಬಾತ ವಲಸೆ ಕಾರ್ಮಿಕರ ಕೊಲೆಗಳ ಆರೋಪದಲ್ಲಿ ಪೊಲೀಸರಿಗೆ ಬೇಕಾಗಿದ್ದವನು. ಹೀಗೆ ಬಂಧಿತನಾದ ದೇವಿಂದರ್ ಸಿಂಗ್ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಡೆಪ್ಯುಟಿ ಸುಪರಿಂಟೆಂಟ್ ಆಗಿದ್ದು, ಎರಡು ದಶಕಗಳ ಕಾಲ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳ ತಜ್ಞರಾಗಿದ್ದವರು ಮಾತ್ರವಲ್ಲ, ರಾಷ್ಟ್ರಪತಿಯವರಿಂದ ಶೌರ್ಯ ಪ್ರಶಸ್ತಿ ಪಡೆದವರು. ಆತ ಹಣಕ್ಕಾಗಿ ಉಗ್ರಗಾಮಿಗಳ ಸಾಗಾಟಗಾರನಾಗಿ ಕೆಲಸ ಮಾಡುತ್ತಿದ್ದುದು ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಆದರೂ, ಈ ಸ್ವಯಂಘೋಷಿತ ರಾಷ್ಟ್ರೀಯವಾದಿ ಟಿವಿಗಳಿಗೆ ಇದೊಂದು ದೊಡ್ಡ ಸುದ್ದಿಯಾಗಿ ಕಾಣಲೇ ಇಲ್ಲ.

ಈ ವಿಷಯ ಇನ್ನಷ್ಟು ಗಂಭೀರವಾಗಿರುವುದಕ್ಕೆ ಕಾರಣವೆಂದರೆ, ಸಂಸತ್ ಮೇಲಿನ ದಾಳಿಗಾಗಿ ಮರಣದಂಡನೆಗೆ ಗುರಿಯಾದ ಅಫ್ಜಲ್ ಗುರು, 2004ರಲ್ಲಿ ತಿಹಾರ್ ಜೈಲಿನಿಂದ ತನ್ನ ವಕೀಲ ಸುಶೀಲ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಈ ದೇವಿಂದರ್ ಸಿಂಗ್ ಬಗ್ಗೆ ಉಲ್ಲೇಖವಿದೆ. ದಾಳಿಕೋರರಿಗೆ ಕಾರು ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಸಿಂಗ್ ತನ್ನನ್ನು ಕೇಳಿಕೊಂಡದ್ದಾಗಿ ಈ ಪತ್ರದಲ್ಲಿ ಆರೋಪಿಸಲಾಗಿತ್ತು. ನಂತರ ತಾನು ಅಫ್ಜಲ್ ಗುರುವಿಗೆ ಚಿತ್ರಹಿಂಸೆ ನೀಡಿರುವುದಾಗಿ ಸಿಂಗ್ ಒಪ್ಪಿಕೊಂಡಿದ್ದರು.

ಈಗ, 2020ರಲ್ಲಿ ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ದಾಳಿ ನಡೆಸಲು ಹೋಗುತ್ತಿದ್ದರು ಎನ್ನಲಾದ ಇಬ್ಬರು ಉಗ್ರಗಾಮಿಗಳ ಜೊತೆ ಸಿಂಗ್ ಬಂಧಿತರಾಗಿದ್ದಾರೆ. ಸಾಮಾನ್ಯವಾಗಿ ಇಂತಹಾ ಮಹತ್ವದ ಸುದ್ದಿ ಹೆಚ್ಚಿನ ಸುದ್ದಿ ಚಾನೆಲ್‌ಗಳಲ್ಲಿ ಪ್ರಮುಖ ಸುದ್ದಿಯಾಗಿ ಬರುತ್ತಿತ್ತು. ನಾಗರಿಕ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವ ವಿದ್ಯಾರ್ಥಿಗಳನ್ನು ಮತ್ತು ಇತರರನ್ನು ಖಂಡಿಸಲು ಆದನ್ನು ಬಳಸಲಾಗುತ್ತಿತ್ತು. ‘ರಾಷ್ಟ್ರೀಯವಾದಿ’ ಟಿವಿ ನಿರೂಪಕರು “ಭಾರತದ ಮೇಲೆ ದಾಳಿ ಮಾಡಲು ಬರುತ್ತಿದ್ದ ಭಯೋತ್ಪಾದಕರ ಬಂಧನ! ಕನ್ನಯ್ಯ ಕುಮಾರ್ ಏನು ಹೇಳುತ್ತಾರೆ? ಅವರನ್ನು ಬೆಂಬಲಿಸುತ್ತಾರೊ?” ಎಂದು ಕಿರುಚಾಡುವುದನ್ನು ಊಹಿಸಬಹುದಿತ್ತು.

ವಿಚಿತ್ರವೆಂದರೆ, ಇಂತಹಾ ಕೋಡಂಗಿಯಾಟ ಈ ತನಕ ಈ ಸುದ್ದಿಯ  ಬಗ್ಗೆ ಕಂಡುಬಂದಿಲ್ಲ. ಸ್ವಯಂಘೋಷಿತ ರಾಷ್ಟ್ರೀಯವಾದಿ ಟಿವಿ ನಿರೂಪಕರು ಈ ಸುದ್ದಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ‘ಟೈಮ್ಸ್ ನೌ’ನಲ್ಲಿ ಅರ್ನಾಬ್ ಗೋಸ್ವಾಮಿಯ ಶಿಷ್ಯರಾದ ನವಿಕಾ ಕುಮಾರ್ ಮತ್ತು ಅರ್ನಾಬ್‌ವಾದಿ ರಾಹುಲ್ ಶಿವ ಶಂಕರ್ (ಆರೆಸ್ಸೆಸ್) ಜಾಮಿಯಾದಲ್ಲಿ ನಡೆಯುತ್ತಿರುವ “ಆತಂಕಕಾರಿ” ಪ್ರತಿಭಟನೆಗಳ ಬಗ್ಗೆ ಕಿರುಚಾಡುತ್ತಾ, ಅದಕ್ಕೆ ಸಂಪೂರ್ಣವಾಗಿ ಇಸ್ಲಾಮಿಕ್ ಬಣ್ಣ ಬಳಿದುಬಿಟ್ಟಿದ್ದಾರೆ. ಅದಕ್ಕೆ ಆರೆಸ್ಸೆಸ್ ನೀಡಿರುವ ಸಾಕ್ಷ್ಯವಾದರೂ ಏನು? ವಾಸ್ತವವಾಗಿ ಅಲ್ಲಿ ಕೂಗಲಾದ ಘೋಷಣೆಯನ್ನು ಶಿವ ಶಂಕರ್ “ಇಸ್ಲಾಮಿಕ್” ಎಂದು ಬಣ್ಣಿಸಿದ್ದರು.

ಇನ್ನು ರಿಪಬ್ಲಿಕ್ ಟಿವಿಯಲ್ಲಿ ಅರ್ನಾಬ್ ಗೋಸ್ವಾಮಿ ಮೂರು ಭಯಂಕರ ಚರ್ಚೆಗಳನ್ನು ನಡೆಸಿ,  ಫೇಸ್‌ಬುಕ್‌ನಲ್ಲಿ #CantStopRepublic #AzadiHypocrisy and #CongressVsBharat ಮುಂತಾದ ಹ್ಯಾಷ್‌ಟ್ಯಾಗ್‌ಗಳನ್ನು ಹಾಕಿದ್ದರು. ಆದರೆ, ದೇವಿಂದರ್ ಸಿಂಗ್ ಬಗ್ಗೆ ಏನೂ ಇರಲಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಕಾಶ್ಮೀರದಲ್ಲಿ ಭಯೋದ್ಪಾದಕ ದಾಳಿಯನ್ನು ವಿಫಲಗೊಳಿಸಿದ ಬಗ್ಗೆ ಏನೇನೂ ಇಲ್ಲ!

‘ಇಂಡಿಯಾ ಟುಡೆ’ಯ ನಿರೂಪಕ ಶಿವ ಆರೂರ್ ತನ್ನ ಶೋ ‘ ಇಂಡಿಯಾ ಫಸ್ಟ್’ನಲ್ಲಿ ಈ ಸುದ್ದಿಯ ವಿವರ ನೀಡಿ, ‘ರಾ’ಮತ್ತು ‘ಐಬಿ’ಯಂತಹ ಗುಪ್ತಚರ ಸಂಸ್ಥೆಗಳು ಬಂಧಿತ ಪೊಲೀಸ್ ಅಧಿಕಾರಿಯ ವಿಚಾರಣೆ ನಡೆಸಲಿರುವುದಾಗಿ ತಿಳಿಸಿದ್ದರು. ಆದರೆ, ಚಾನೆಲ್‌ನ ಸ್ವಯಂಘೋಷಿತ ‘ಆರ್ಮಿ ಕಮಾಂಡೊ’ ಗೌರವ್ ಸಾವಂತ್ ನಾಪತ್ತೆಯಾಗಿದ್ದರು. ಅವರು ಟ್ವಿಟರ್‌ನಲ್ಲಿ ಪಾಕಿಸ್ತಾನದ ಯಾವುದೋ ಮಂತ್ರಿಯನ್ನು ಟ್ರೋಲ್ ಮಾಡಿದ್ದು ಕಂಡುಬಂತು. ಇಂಡಿಯಾ ಟುಡೆಯ “ಸಮರ ಭೂಮಿ”ಯಲ್ಲಿ ಸಾವಂತ್ ಗೆಳೆಯನಾದ ರಾಹುಲ್ ಕನ್ವಲ್ ತನ್ನ ಶೋ “ನ್ಯೂಸ್ ಟ್ರ್ಯಾಕ್‌”ನಲ್ಲಿ ಯಾವುದೋ “ಜೆಎನ್‌ಯು ತಪ್ಪೊಪ್ಪಿಗೆ” ಟೇಪನ್ನು ನುಡಿಸುತ್ತಿದ್ದರು.

ಝೀ ಟಿವಿಯ ಭಾರತ ವಿರೋಧಿಗಳ ವಿರೋಧಿ ಸ್ವಯಂಘೋಷಿತ ಯೋಧ ಸುಧೀರ್ ಚೌಧರಿ, ಜೆಎನ್‌ಯು ವಿದ್ಯಾರ್ಥಿಗಳ “ಡಿಎನ್‌ಎ ಪರೀಕ್ಷೆ” ಮಾಡುತ್ತಾ, ಪೂರಿಗಳ ಚಿತ್ರಹಾಕುತ್ತಾ  ಉಪವಾಸ ಇರುವುದರ ಲಾಭಗಳ ಬಗ್ಗೆ ಚರ್ಚೆ ನಡೆಸುತ್ತಾ ಕುಳಿತಿದ್ದರು.

ಎಬಿಪಿ ನ್ಯೂಸ್‌ನ ರುಬಿಕಾ, “ಭಾರತದದ ಅತ್ಯಂತ ದೊಡ್ಡ ಶತ್ರು”- ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಕುರಿತು ಚರ್ಚಿಸುತ್ತಿದ್ದರು. ಅವರಿಗೆ ವಿಫಲಗೊಳಿಸಲಾದ ಭಯೋತ್ಪಾದಕ ದಾಳಿಗಿಂತ ಜಾಮಿಯಾದ ವಿದ್ಯಾರ್ಥಿಗಳು ಮತ್ತು ಉಪಕುಲಪತಿ ನಡುವಿನ ವಾಗ್ವಾದ ಮುಖ್ಯವಾಗಿತ್ತು. ರುಬಿಕಾರ ಅರೆ ಸಹೋದರಿ ಅಂಜನಾ ಓಂ ಕಷ್ಯಪ್ ಕ್ಯಾಂಪಸ್‌ಗಳ ಎಡ-ಬಲ ಕಾದಾಟದಲ್ಲಿ ಯಾರು ಸರಿ ಎಂದು ಚರ್ಚಿಸುತ್ತಿದ್ದರು.

ಇಲ್ಲಿ ಒಂದು ವಿನ್ಯಾಸ ಕಾಣುತ್ತಿದೆಯೆ? ಈ ಎಲ್ಲಾ ರಾಷ್ಟ್ರೀಯವಾದಿಗಳು ದೇಶದ ಮೇಲೆ ನಡೆಯಲುದ್ದೇಶಿಸಿದ್ದ ಭಯೋತ್ಪಾದಕ ದಾಳಿಯ ಕುರಿತು ಚರ್ಚಿಸಲಿಲ್ಲ. ಅವರಿಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳೇ ದೊಡ್ಡ ಶತ್ರುಗಳಂತೆ ಕಂಡರು.

ಇದೀಗ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಲು ಸುದ್ದಿಗೋಷ್ಟಿ ನಡೆಸಿದ ಬಳಿಕ ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿ ಕೊನೆಗೂ ಈ ಸುದ್ದಿ ಬಗ್ಗೆ ಎಚ್ಚರಗೊಂಡಿವೆ. ಗಂಟೆಗಟ್ಟಲೆ ಕಾಲ ಪ್ರೈಮ್ ಟೈಮ್‌ನಲ್ಲಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಪಾಕಿಸ್ತಾನದ ಪರವಾಗಿವೆ ಎಂದು ಕಿರಿಚಾಡುವುದರಲ್ಲೇ ಪ್ರಮುಖ ಚಾನೆಲ್‌ಗಳು ಕಾಲಕಳೆಯುತ್ತಿವೆ. ಈ ಗದ್ದಲದ ನಡುವೆ ಭಯೋತ್ಪಾದಕರ ಜೊತೆ ಈ ಪೊಲೀಸ್ ಅಧಿಕಾರಿಗೆ ಏನು ಕೆಲಸ ಎಂದು ಕೇಳುವುದನ್ನು ನಾವೆಲ್ಲರೂ ಮರೆತೇಬಿಡುತ್ತೇವೆ!