ಮಕರ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಯಾಕೆ ಕೊಡುತ್ತಾರೆ..? ಇಲ್ಲಿದೆ ಮಾಹಿತಿ

ಸಂಕ್ರಾಂತಿ… ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ಸೂರ್ಯನು ತನ್ನ ಪಥ ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸುವ ದಿನ ಮಕರ ಸಂಕ್ರಮಣ. ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ನಮ್ಮ ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ.

ಉತ್ತರಾಯಣ ಪರ್ವ ಕಾಲದಲ್ಲಿ ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನ ಮಾಡ್ತಾರೆ. ಆಕೆಯನ್ನ ಇಕ್ಷು ದಂಡಿ ಅಂತಾರೆ. ಅಂದರೆ ಕಬ್ಬನ್ನ ಹಿಡಿದಿರುವವವಳು ಅಂತ. ಅಂಥಾ ಲಕ್ಷ್ಮಿಯನ್ನ ಆರಾಧಿಸಬೇಕು. ಲಕ್ಷ್ಮೀ ಅಂದ್ರೆ ” ಲಕ್ಷ್ಯತಿ ಸರ್ವಂ ಸದಾ ” ಅಂತ. ಯಾರು ಸರ್ವ ಕಾಲಕ್ಕೂ ಸರ್ವವನ್ನೂ ನೋಡುತ್ತಾಳೋ ಅವಳೇ ಲಕ್ಷ್ಮಿ. ಎಲ್ಲವನ್ನೂ ನೋಡುವವಳು ಅಂದರೆ ಸರ್ವ ಸಮಾನತೆ ಅಂತ. ಅಂದಹಾಗೆ ನಾವುಗಳು ಎಳ್ಳು ಬೆಲ್ಲ ಹಂಚೋದೇ ಈ ಕಾರಣಕ್ಕೆ. ಎಳ್ಳಿನಲ್ಲಿ ಲಕ್ಷ್ಮಿ ವಾಸವಿರ್ತಾಳೆ. ಎಳ್ಳನ್ನ ಹಂಚುವುದರಿಂದ ಸಂಪತ್ತನ್ನ ಹಂಚಿದಂತಾಗತ್ತೆ. ಲಕ್ಷ್ಮಿ ಎಲ್ಲಿಯೂ ನಿಲ್ಲುವವಳಲ್ಲ. ಹಾಗಾಗಿ ಆಕೆಯನ್ನ ಎಲ್ಲರಿಗೂ ಸಮರ್ಪಿಸಿ ಇತರರಲ್ಲಿ ಸಂಪತ್ ವೃದ್ಧಿ ಆಗಲಿ ಅಂತ ಆಶಿಸುವ ಕ್ರಮ ಇದು.

ದೇಶದ ಬೇರೆ ಬೇರೆ ರಾಜ್ಯದಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ ಹಬ್ಬ, ತಮಿಳು ನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು, ಆಂಧ್ರ ಪ್ರದೇಶದಲ್ಲಿ ಭೋಗಿ ಹಬ್ಬ, ಗುಜರಾತಿನಲ್ಲಿ ಉತ್ತರಾಯಣ, ಪಂಜಾಬ್ ನಲ್ಲಿ ಲೊಹ್ರಿ, ಅಸ್ಸಾಂನಲ್ಲಿ ಮಾಘು ಬಿಹು ಮತ್ತು ಸಿಖ್ ಸಮುದಾಯದವರು ವೈಸಾಖಿ ಎನ್ನುತ್ತಾರೆ.

ವರ್ಷದ ಪ್ರಥಮ ಹಬ್ಬಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಮಕರ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ.

ಗುಜರಾತ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ಬಳಿ ಉತ್ತರಾಯಣ ಗಾಳಿ ಪಟ ಹಾರಿಸುವ ಆಚರಣೆಯ ಚಿತ್ರಗಳನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.