ಸಾರಿಗೆ ಇಲ್ಲದೆ ಹುಟ್ಟೂರು ತಲುಪಲು 430 ಕಿ.ಮೀ ಕಾಲ್ನಡಿಯಲ್ಲೇ ಹೊರಟ ಕಾರ್ಮಿಕರು

ಕೊರೊನಾ ನಿಯಂತ್ರಣಕ್ಕಾಗಿ 21 ದಿನಗಳ ಕಾಲ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದೆ. ಇದರಿಂದಾಗಿ ಎಲ್ಲಿಯೂ ಸಾರಿಗೆ ವ್ಯವಸ್ಥೆ ಇಲ್ಲ. ಹುಟ್ಟೂರನ್ನು ಬಿಟ್ಟು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಉದ್ಯೋಗ ಹರಸಿ ಹೋಗಿದ್ದ ಕಾರ್ಮಿಕರು ತಾವಿದ್ದಲ್ಲೇ ಬಂಧಿಯಾಗಿದ್ದಾರೆ. ದುಡಿಯಲು ಕೂಲಿಯಿಲ್ಲ, ಇರಲು ಮನೆಯಿಲ್ಲ, ತಿನ್ನಲು ಆಹಾರವೂ ಸಿಗುತ್ತಿಲ್ಲ. ಪಟ್ಟಣ ಪ್ರದೇಶಗಳಲ್ಲಿ ಸಿಕ್ಕಿಕೊಂಡಿರುವ ಬಡ ಜನರು ಒಂದೆಡೆ ಕೊರೊನಾ ಭೀತಿಯಿಂದ, ಮತ್ತೊಂದೆಡೆ ಬದುಕಿನ ಅಸಹಾಯಕತೆಯಿಂದ ತತ್ತರಿಸಿಹೋಗಿದ್ದಾರೆ.

ಕೊಪ್ಪಳ ಜಿಲ್ಲೆಯ ಕೆ.ರಾಮ್‌ಪುರ ಹಳ್ಳಿಯಿಂದ ಕೂಲಿ ಹರಸಿ ತಮಿಳುನಾಡಿನ ಹೊಸೂರಿನ ಬಂದಿದ್ದ ಕೂಲಿ ಕಾರ್ಮಿಕರು ತಮ್ಮ ಊರಿಗೆ ಮರಳಲು ಯಾವುದೇ ಸಾರಿಗೆಯೂ ಸಿಗದೆ ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ಊರು ಸೇರಲು ಮುಂದಾಗಿರುವ ಇವರು ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ್ದಾರೆ.

ಹೊಸೂರಿನ ಗಾಂಧಿನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಇವರು ಮಂಗಳವಾರ ರಾತ್ರಿ 02 ಗಂಟೆಗೆ ಪ್ರಯಾಣ ಆರಂಭಿಸಿದ್ದು, 430 ಕಿ.ಮೀ ದೂರವಿರುವ ಊರಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ. ಸಧ್ಯಕ್ಕೆ ತುಮಕೂರು ತುಲುಪಿದ್ದಾರೆ.

ನಡೆಯುವಾಗ ಸುಸ್ತಾದರೆ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದು, ನೀರು ಸಿಕ್ಕಾಗ ನೀರು ಕುಡಿದು ಪ್ರಯಾಣ ನಡೆಸುತ್ತಿದ್ದಾರೆ. ಹೋಗುವ ದಾರಿಯಲ್ಲಿ ಯಾವುದಾದರೂ ಅಂಗಡಿ, ಹೋಟೆಲ್‌ ತೆರೆದಿದ್ದರೆ ಅಂದಿನ ಊಟಕ್ಕೆ ವ್ಯವಸ್ಥೆ ಮಾಡಿಕೊಂಡು ಮುಂದೆ ಸಾಗುತ್ತಿದ್ದಾರೆ.

ನಾವು ಮೊದಲೆ ಬಿಸಿಲ ಬೇಗೆ ಬೆನ್ನತ್ತಿರುವ ಊರಿನ ಮಂದಿ, ಈ ಬಿಸಿಲು ನಮಗೇನೂ ಹೊಸದಲ್ಲ. ಇನ್ನೂ ಎಷ್ಟು ದಿನ ಆಗುತ್ತೋ ಊರು ಸೇರಲು ಗೊತ್ತಿಲ್ಲ. ಊರು ತಲುಪುತ್ತೇವೆ. ಹೊಗೋ ದಾರಿಯಲ್ಲಿ ಕೆಲವರು ನೀರಿನ ಬಾಟಲಿ ಕೊಡ್ತಿದ್ದಾರೆ ಎನ್ನುತ್ತಿದ್ದಾರೆ ಕಾರ್ಮಿಕರು.