ವಿಶ್ವ ಕಾವ್ಯ ದಿನ; ಚಿದಂಬರ ನರೇಂದ್ರ ಅನುವಾದಿಸಿರುವ ಜಮಾ ಹಬೀಬ್ ಕವಿತೆ ಓದಿ

ಮಾರ್ಚ್ 21 ವಿಶ್ವ ಕಾವ್ಯ ದಿನ. ಕಾವ್ಯ ಅಭಿವ್ಯಕ್ತಿಯ ಮೂಲಕ ಭಾಷಾ ವೈವಿಧ್ಯವನ್ನು ಬೆಂಬಲಿಸಲು ಮತ್ತು ಅಳಿವಿನಂಚಿನ ಭಾಷೆಗಳಿಗೆ ಅವಕಾಶಗಳನ್ನು ಹೆಚ್ಚಿಸಿ ಅವುಗಳನ್ನು ಹೆಚ್ಚು ಕೇಳುವಂತೆ ಮಾಡುವುದಕ್ಕೆ ಯುನೆಸ್ಕೊ ಈ ದಿನವನ್ನು 1999ರಲ್ಲಿ ವಿಶ್ವ ಕಾವ್ಯ ದಿನವಾಗಿ ಘೋಷಿಸಿತು.

ಯಾವುದೇ ಕಲೆಯ ಅಭಿವ್ಯಕ್ತಿ ಆಗಲಿ, ಅದರ ಉದ್ದೇಶಗಳಿಗೆ ಮಿತಿಯೇ ಇಲ್ಲ. ವಿಶ್ವದೆಲ್ಲೆಡೆ ನಾಗರಿಕರ ಅಭಿವ್ಯಕ್ತಿಯನ್ನು- ಸ್ವಾತಂತ್ಯ್ರವನ್ನು ಕಸಿದು ತುಳಿಯುತ್ತಿರುವ ಪ್ರಭುತ್ವಗಳು ತಲೆಯೆತ್ತುತ್ತಿರುವ ಸಮಯದಲ್ಲಿ, ಕಾವ್ಯ ಪ್ರತಿಭಟನೆಯ ಅಸ್ತ್ರವಾಗಿದೆ. ರೂಪಕದ ಭಾಷೆ ಹಲವು ಬಾರಿ ಪ್ರಭುತ್ವಗಳಿಗೆ-ಸರ್ಕಾರಗಳಿಗೆ ಚಳ್ಳೆಹಣ್ಣು ತಿನ್ನಿಸಿ, ಜನರ ಹೋರಾಟ ಭಾವನೆಗೆ ಸ್ಪೂರ್ತಿ ತರಬಲ್ಲದು. ಜನರನ್ನು ಸಮುದಾಯದ ಒಳಿತಿನ ಕೆಲಸಗಳಿಗೆ ಒಗ್ಗೂಡಿಸುವ ಶಕ್ತಿ ಅದಕ್ಕೆ ಇದೆ. ಕಾವ್ಯದ ಲಯ ಎಲ್ಲ ವರ್ಗದ, ಎಲ್ಲ ವಯಸ್ಸಿನ ಜನರನ್ನು ತಲುಪಲು ಸುಲಭ ಮಾರ್ಗ ಆಗಬಹುದು.

ಕನ್ನಡದ ಆದಿಕವಿ ಪಂಪನೂ ತನ್ನ ಕಾವ್ಯದಲ್ಲಿ ಪ್ರತಿಭಟನೆಯನ್ನು ಅಡಗಿಸಿಟ್ಟುಕೊಂಡಿದ್ದ. ಜರ್ಮನಿಯ ನಾಜಿ ದೌರ್ಜನ್ಯಕ್ಕೆ ಗುರಿಯಾದ ಬರ್ಟೋಲ್ಟ್ ಬ್ರೆಕ್ಟ್ ನಿಗೂ ಸಶಕ್ತ ಪ್ರತಿಭಟನೆಯ ಭಾಷೆ ಕಾವ್ಯ ಆಗಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರ ವಿರುದ್ಧದ ಸಿ ಎ ಎ, ಎನ್ ಪಿ ಆರ್, ಎನ್ ಸಿ ಆರ್ ಶಾಂತಿಯುತ ಪ್ರತಿಭಟನೆಗಳಲ್ಲಿಯೂ ಕಾವ್ಯ ಅಸ್ತ್ರವಾಗಿತ್ತು. ಜನ ಪೈಜ್ ಅಹ್ಮದ್ ಪೈಜ್ ಅವರ “ಹಮ್ ದೇಖೇಂಗೆ” ಹಾಡನ್ನು ತಮ್ಮ ತಮ್ಮ ಭಾಷೆಗಳಲ್ಲಿ ಅನುವಾದ ಮಾಡಿಕೊಂಡು ಹಾಡಿದ್ದರು.

ವಿಶ್ವ ಕಾವ ದಿನದ ಈ ವಿಶೇಷ ದಿನದಂದು ಕನ್ನಡದ ಕವಿ ಚಿದಂಬರ ನರೇಂದ್ರ ಅವರು ಹಿಂದೂಸ್ಥಾನಿ ಕವಿ ಜಮಾ ಹಬೀಬ್ ಅವರ ಕವಿತೆಯೊಂದನ್ನು ಅನುವಾದ ಮಾಡಿದ್ದಾರೆ.

 

ನನ್ನ ಪ್ರಾರ್ಥನೆ……..

ನಿನ್ನತ್ತ ಹೇಗೆ ಬೆರಳು ಮಾಡಿ ತೋರಿಸಲಿ?

 

ಅವರು ಅಖಲಾಖ್ ನ  ಎದೆಗೆ ಚುಚ್ಚಿದಾಗ

ನೀನಲ್ಲಿ ಇರಲೇ ಇಲ್ಲವಲ್ಲ.

ಪೆಹಲೂನ ಕೊಂದಾಗ ಕೂಡ ನೀನಲ್ಲಿರಲಿಲ್ಲ,

ಎಲ್ಲೋ  ದೂರದಲ್ಲಿದ್ದೆ.

 

ಶಂಭೂ, ಅಫ್ರಝುಲ್ ನ ಕತ್ತರಿಸಿ

ತುಂಡು ತುಂಡು ಮಾಡಿ, ಸುಟ್ಟು ಬೂದಿ ಮಾಡಿದಾಗ,

ಹೌದು, ನೀನಲ್ಲಿರಲಿಲ್ಲ.

ಥಿಯೆಟರ್ ಲ್ಲಿ ಸಿನೇಮಾ ನೋಡುತ್ತಿದ್ದೆ.

 

ಅಲಿಯ ಬಾಯಿಯಲ್ಲಿ ಜನ

ಹಂದಿಯ ಮಾಂಸವನ್ನು

ಬಲವಂತವಾಗಿ ತುರುಕುತ್ತಿದ್ದಾಗ

ನೀನು,  ಒಮ್ಮೆ ದೀರ್ಘವಾಗಿ

ಉಸಿರೆಳೆದುಕೊಂಡು ಗೊಣಗಿದ್ದೆ

 

“ವಿಡಿಯೋ ಕ್ವಾಲಿಟಿ ಅಷ್ಟು ಚೆನ್ನಾಗಿಲ್ಲ“

 

ನಿನ್ನತ್ತ ಹೇಗೆ ಬೆರಳು ಮಾಡಿ ತೋರಿಸಲಿ?

ನೀನು  ಮಾತೇ ಆಡಿಲ್ಲವಲ್ಲ.

 

ಮುಸ್ಲೀಂ ಕಬ್ರಿಸ್ತಾನ್, ಹಿಂದೂ ಸ್ಮಶಾನ್,

ದೀಪಾವಳಿ, ರಮ್ಝಾನ್

ಘೋಷಣೆಗಳು ಸದ್ದು ಮಾಡುತ್ತಿದ್ದಾಗ,

ನೀನು ಆ ಗುಂಪಿನಲ್ಲಿ ಸುಮ್ಮನೇ ನಿಂತಿದ್ದೆ.

ಮೊಳಗುತ್ತಿದ್ದ ಹರ ಹರ ಮೋದಿ, ಘರ ಘರ ಮೋದಿ ಘೋಷಣೆಗಳಲ್ಲಿ

ನಿನ್ನ  ಮೂಕ ದನಿಯೂ ಒಂದಾಗಿತ್ತು.

 

ನಿನ್ನತ್ತ ಹೇಗೆ ಬೆರಳು ಮಾಡಿ ತೋರಿಸಲಿ?

ನೀನೇನನ್ನೂ ಕೇಳಿಸಿಕೊಳ್ಳಲೇ ಇಲ್ಲವಲ್ಲ.

 

“ಕಬ್ರಸ್ತಾನದ ಗೋರಿಗಳಿಂದ

ಆ ಹೆಂಗಸರ ಹೆಣ ಹೊರತೆಗೆದು

ರೇಪ್ ಮಾಡಿ,

ಕತ್ತರಿಸಿ, ಕೊಚ್ಚಿ, ತುಂಡು ತುಂಡು ಮಾಡಿ,

ಎಷ್ಟು ದಿನಗಳಿಂದ ಮೆರೆದಾಡುತ್ತಿದ್ದಾರೆ

ಇಲ್ಲಿ ಈ ದ್ರೋಹಿಗಳು,

ಮುಗಿಸಿ ಬಿಡಿ ಅವರನ್ನ”

 

ಎನ್ನುವ ಬೆದರಿಕೆಯ ದನಿಗಳು

ನಿನ್ನ ಕಿವಿಯ ಮೇಲೆ ಒಮ್ಮೆ ಸಹ ಬೀಳಲೇ ಇಲ್ಲವಲ್ಲ .

ಹೇಗೆ ಬೀಳುತ್ತಾವೆ ಹೇಳು?

ನೀನು ಬ್ಲೂ ಟೂಥ್ ಆನ್ ಮಾಡಿಕೊಂಡು

ಸೆನ್ಸೆಕ್ಸ ಏರುವ, ಇಳಿಯುವ ಸುದ್ದಿ ಮಾತನಾಡುತ್ತಿದ್ದೆ.

 

ನಿನ್ನತ್ತ  ಹೇಗೆ ಬೆರಳು ಮಾಡಿ ತೋರಿಸಲಿ?

 

ನಿಧಾನವಾಗಿ ಆಟದ ಮೈದಾನಗಳಲ್ಲಿ ಮಕ್ಕಳು

ಹಿಂದೂ, ಮುಸ್ಲೀಂ ಎಂದು ಟೀಂ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿದಿನ  ಮಗ ಬಂದು

ನನ್ನ ತೊಡೆ ಮೇಲೆ ಹಣೆಯಿಟ್ಟು

ಬಿಕ್ಕಿ ಬಿಕ್ಕಿ ಅಳುತ್ತಾನೆ.

ದಿನದಿಂದ ದಿನಕ್ಕೆ ಕುಸಿಯುತ್ತಿದ್ದೇನೆ

ದಿನದಿಂದ ದಿನಕ್ಕೆ ಸಾಯುತ್ತಿದ್ದೇನೆ

ದಿನದಿಂದ ದಿನಕ್ಕೆ ಚೂರು ಚೂರಾಗುತ್ತಿದ್ದೇನೆ,

ಎಲ್ಲಿ ಈ ದ್ವೇಷದ ವಿಷವನ್ನೂ ನುಂಗಿಬಿಡುತ್ತಾನೋ

ನನ್ನ ಮಗ

ತನ್ನ ಕಣ್ಣೀರಿನೊಂದಿಗೆ.

 

ಇಷ್ಟೇ ಪ್ರಾರ್ಥನೆ ನನ್ನದು.

ನಾಳೆ ಗಲಭೆಕೋರರು ನನ್ನ ಮಗನನ್ನು ಸುತ್ತುವರೆದು

ಕತ್ತರಿಸಲು ಮುಂದಾದಾಗ,

ಆ ಕ್ರೂರ ಗುಂಪಿನ ನಡುವೆ

ಸುಮ್ಮನೇ ನಿಂತ ಹುಡುಗನ ಚೆಹರೆ,

ನಿನ್ನ ಮಗನದಾಗಿರದೇ ಇರಲಿ.

 

ಗೆಳೆಯಾ, ನೀನು ಕಾವ್ಯ ಪ್ರೇಮಿ

ಇಂಥ ಹಸಿ ಹಸಿ ಪದ್ಯ ನಿನಗೆ ಇಷ್ಟವಾಗುವುದಿಲ್ಲ.

ಆದರೇನು ಮಾಡಲಿ

ಅವರು ತಬ್ರೇಝ್ ನ ಕಂಬಕ್ಕೆ ಕಟ್ಟಿ ಹಾಕಿ

ಹೊಡೆದು ಕೊಂದಿದ್ದಾರೆ.

ನನ್ನ ಪದ್ಯ ಮತ್ತೆ ಅವನ ರಕ್ತದಲ್ಲಿ ಒದ್ದೆಯಾಗಿದೆ.

 

ಸರಯೂ ನದಿಯಲ್ಲಿ  ಹರಿಯುತ್ತಿರುವ

ರಕ್ತದ ಪ್ರವಾಹ ಕಂಡು ರಾಮ ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದಾನೆ.

 

ಧಾರಾವಾಹಿಗಳಿಗೆ ಬರೆಯುವ ಜಮಾ ಹಬೀಬ್ ಮುಂಬೈ ನಿವಾಸಿ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುವ ಚಿದಂಬರ ನರೇಂದ್ರ ಕವಿ  ಮತ್ತು ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಮತ್ತು ‘ಹೂಬಾಣ’ ಅವರ ಅನುವಾದಿತ ಕವನ ಸಂಕಲನಗಳು. ಇತ್ತೀಚೆಗಷ್ಟೇ ಅವರ ‘ಗಾಳಿಕೆನಿ’ ಕವನಸಂಕಲನ ಸಂಕಥನ ಪ್ರಕಟಣೆಯಿಂದ ಮೂಡಿಬಂದಿದೆ.