Categories
Breaking News Political

ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೇ ಯಡಿಯೂರಪ್ಪ: ಸಿ.ಎಂ ಆರೋಪ

ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೇ ಯಡಿಯೂರಪ್ಪ ಅವರು. ಮುಖ್ಯಮಂತ್ರಿಯಾಗಿದ್ದಾಗ ಆಪರೇಷನ್ ಕಮಲದ ಮೂಲಕ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವಂತೆ ಅವರು ಮಾಡಿದರು. ಅಷ್ಟೇ ಅಲ್ಲ, ಚುನಾವಣೆ ಗೆಲ್ಲಲು ಪ್ರತಿ ಕ್ಷೇತ್ರಕ್ಕೆ 25 ಕೋಟಿ ರೂ. ಖರ್ಚು ಮಾಡಿದರು. ಈಗ ಅವರು ಚುನಾವಣಾ ಅಕ್ರಮದ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿದರೆ ಭೂತದ ಬಾಯಲ್ಲಿ ಭಗವದ್ದೀತೆ ಕೇಳಿದಂತೆ ಆಗುತ್ತದೆ. ಇದು ನಾಚಿಕೆಗೇಡು.
ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಂತ್ರದಂಡ ಕರ್ನಾಟದಲ್ಲಿ ಕೆಲಸ ಮಾಡುವುದಿಲ್ಲ. ಉತ್ತರ ಪ್ರದೇಶದಲ್ಲಿ ಬೀಸಿದ ಬಿಜೆಪಿ ಗಾಳಿ ಇಲ್ಲಿಗೆ ತಲುಪುವುದೂ ಇಲ್ಲ. ಅದು ಅಲ್ಲಿಯೇ ನಿಂತಿದೆ. ಎಂದು ಕಿಡಿ ಕಾರಿದರು ಸಿದ್ದರಾಮಯ್ಯ.

 

ಅದು ಯಡಿಯೂರಪ್ಪ ಮನೆಯ ದುಡ್ಡಲ್ಲ: ಆರೂವರೆ ಕೋಟಿ ಜನರ ಹಣ
ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪಕ್ಷ ಉಪ ಚುನಾವಣೆ ನಡೆಸುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಅದು ಯಾರಪ್ಪನ ದುಡ್ಡು ಎಂದು ಕೇಳಿದ್ದಾರೆ. ಯಾರಪ್ಪನ ಮನೆಯ ಹಣವೂ ಅದಲ್ಲ. ರಾಜ್ಯದ ಆರೂವರೆ ಕೋಟಿ ಜನರ ದುಡ್ಡು ಅದಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಹೇಗೆ ಖರ್ಚು ಮಾಡಬೇಕು ಎಂಬುದು ನಮಗೂ ತಿಳಿದಿದೆ. ಆ ಬಗ್ಗೆ ಬಿಜೆಪಿಯವರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರೇ ಜನಪ್ರತಿನಿಧಿಗಳ ಮಾಲೀಕರು. ಈ ತಿಳಿವಳಿಕೆ ಯಡಿಯೂರಪ್ಪ ಅವರಿಗೆ ಇದ್ದರೆ ಸಾಕು ಎಂದು ಮುಖ್ಯಮಂತ್ರಿಯವರು ಹೇಳಿದರು.

ಜನಶಕ್ತಿಯ ಮೇಲೆ ನಂಬಿಕೆ ಇದೆ :
ಜನಶಕ್ತಿಯನ್ನು ನಂಬಿ ರಾಜಕೀಯ ಮಾಡುವವರು ನಾವು. ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲಿದೆ. ನಮ್ಮೊಂದಿಗೆ ಲಕ್ಷಾಂತರ ಕಾರ್ಯಕರ್ತರ ಪಡೆ ಇದೆ. ಹೀಗಾಗಿ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಯಡಿಯೂರಪ್ಪ ಅವರು ಇತ್ತೀಚೆಗೆ ನನ್ನನ್ನು ಬೈಯ್ಯುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ನಾವು ಬಿಜೆಪಿ ಅಭ್ಯರ್ಥಿಗಳು, ಆ ಪಕ್ಷದ ನಾಯಕರನ್ನು ಬೈಯ್ಯುವುದಿಲ್ಲ. ಏಕೆಂದರೆ ನಮ್ಮ ರಾಜಕೀಯ ಸಂಸ್ಕøತಿಯೇ ಬೇರೆ.

ಕಳೆದ 30 ವರ್ಷಗಳಿಂದ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ಯಡಿಯೂರಪ್ಪ ಅವರು ಹೋದ ಕಡೆ ಹೇಳುತ್ತಾರೆ. ಅವರ ಹೋರಾಟ ಎಂಥದ್ದು ಎಂಬುದನ್ನು ನಾನು ನೋಡಿದ್ದೇನೆ. ಸುಳ್ಳು ಹೇಳುವುದನ್ನು ಹೊರತುಪಡಿಸಿದರೆ ಯಾವ ಹೋರಾಟವನ್ನೂ ಅವರು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೇವಡಿ ಮಾಡಿದ್ರು.

Comments are closed.