FACT CHECK | ಲಾರೆನ್ಸ್ ಬಿಷ್ಣೋಯ್‌ಗೆ ಎಚ್ಚರಿಕೆ ನೀಡಿದ್ರಾ ಸಲ್ಮಾನ್ ಖಾನ್ ?

ಕಳೆದ ವಾರ ಅಕ್ಟೋಬರ್ 12 ರಂದು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಮುಂಬೈನಲ್ಲಿರುವ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಬಾಬಾ ಸಿದ್ದಿಕಿ ಮತ್ತು ಸಲ್ಮಾನ್ ಖಾನ್ ನಡುವಿನ ಸ್ನೇಹವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.

ಇದರ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್‌ಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಫೇಸ್‌ಬುಕ್ ಬಳಕೆದಾರ ಸೈಯದ್ ಕದಿರ್ ಎಂಬವರು ಈ ವಿಡಿಯೋವನ್ನು ಅಕ್ಟೋಬರ್ 17 ರಂದು ಹಂಚಿಕೊಂಡಿದ್ದಾರೆ. “ಲಾರೆನ್ಸ್ ಬಿಷ್ಣೋಯ್ ಅವರನ್ನು ನಾಯಿಯಾಗಿ ಮಾಡದಿದ್ದರೆ, ನನ್ನ ಹೆಸರು ಸಲ್ಮಾನ್ ಖಾನ್ ಅಲ್ಲ” ಎಂದು ಬರೆಯಲಾಗಿದೆ, “ವಿಷ್ಣೋಯ್‌ಗೆ ಸಲ್ಮಾನ್ ಖಾನ್ ಓಪನ್ ಚಾಲೆಂಜ್ ನೀಡಿದರು…” ಎಂದು ಬರೆದುಕೊಂಡಿದ್ದಾರೆ.

ವೀಡಿಯೊದಲ್ಲಿ, ಸಲ್ಮಾನ್ ಖಾನ್, “ಲಾರೆನ್ಸ್ ಬಿಷ್ಣೋಯ್, ನೀವು ಮಗನನ್ನು ಅವರ ತಂದೆಯಿಂದ ಬೇರ್ಪಡಿಸುವ ಮೂಲಕ ದೊಡ್ಡ ತಪ್ಪು ಮಾಡಿದ್ದೀರಿ. ಬಿಷ್ಣೋಯ್ ಮಗನೇ, ಇದು ಶೀಘ್ರದಲ್ಲೇ ಇತ್ಯರ್ಥವಾಗಲಿದೆ. ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ನಾನು ನಿನ್ನನ್ನು ನಾಯಿಯನ್ನಾಗಿ ಮಾಡದಿದ್ದರೆ ನನ್ನ ಹೆಸರು ಸಲ್ಮಾನ್ ಖಾನ್ ಅಲ್ಲ.’’ ಎಂದು ವಿಡಿಯೋದಲ್ಲಿ ಹೇಳಿರುವುದನ್ನು ಕೇಳಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪದನೆ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸಲ್ಮಾನ್ ಖಾನ್ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಡಿಯೋ ಮತ್ತು ಆಡಿಯೋಗಳು ಲಿಪ್ಸಿಂಕ್ ಹೊಂದದೆ, ಕೃತಕವಾಗಿ ಕಾಣುತ್ತದೆ. ಈ ವಿಡಿಯೋದ ಆಡಿಯೋವನ್ನು ಎಡಿಟ್ ಮಾಡಲಾಗಿದೆ ಎಂಬ ಸಂದೇಹ ಮೂಡುತ್ತದೆ.

ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು AI ಧ್ವನಿ ಪತ್ತೆ ಸಾಫ್ಟ್​ಫೇರ್ ಬಳಸಿಕೊಂಡು ಆಡಿಯೋ ಪರೀಕ್ಷಿಸಿದಾಗ, AI ರಚಿತದ ಆಡಿಯೋ ಎಂಬುದು ತಿಳಿದಿದೆ. ಅಲ್ಲದೆ ಮೂಲ ವಿಡಿಯೋ ಲಭ್ಯವಾಗಿದ್ದು. ಗೂಗಲ್ ಲೆನ್ಸ್‌ನಲ್ಲಿ ಈ ವಿಡಿಯೋದ ಪ್ರಮುಖ ಫ್ರೇಮ್‌ಗಳನ್ನು ಸರ್ಚ್ ಮಾಡಿದಾಗ, ಜುಲೈ 21, 2021 ರಂದು ಯೂಟ್ಯೂಬ್ ಚಾನೆಲ್ Qu Play ನಲ್ಲಿ ಅಪ್‌ಲೋಡ್‌ ಮಾಡಿದ ಪೋರ್ಣ ವಿಡಿಯೋ ಲಭ್ಯವಾಗಿದೆ.

“ಅರ್ಬಾಜ್ ಖಾನ್ ಅವರಿಂದ ಕ್ವಿಕ್ ಹೀಲ್ ಪಿಂಚ್” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಅಪ್ಲೋಡ್ ಆಗಿದೆ. ನಾವು ಈ ಸಂಪೂರ್ಣ 23 ನಿಮಿಷಗಳ ವೀಡಿಯೊವನ್ನು ಎಚ್ಚರಿಕೆಯಿಂದ ವೀಕ್ಷಿಸಿದ್ದೇವೆ. ವಿಡಿಯೋದಲ್ಲಿ ಎಲ್ಲಿಯೂ ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್ ಅವರ ಉಲ್ಲೇಖಿಸಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಲ್ಮಾನ್ ಖಾನ್ ಅವರ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದ ಆಡಿಯೋವನ್ನು ಬದಲಾಯಿಸಲಾಗಿದೆ. ಮೂಲ ವೀಡಿಯೊ 2021 ರದ್ದು. ಸಲ್ಮಾನ್ ಖಾನ್ ತನ್ನ ಸಹೋದರ ಅರ್ಬಾಜ್ ಖಾನ್ ಅವರೊಂದಿಗೆ ಸಂದರ್ಶನವನ್ನು ಮಾಡಿದ ವಿಡಿಯೋ ಇದಾಗಿದೆ. ಈ ಸಂಪೂರ್ಣ ಸಂಭಾಷಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ.ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಯೋಗಿ ವಿರುದ್ದ ತಿರುಗಿಬಿದ್ರಾ ಯತಿ ನರಸಿಂಹಾನಂದ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights