ಪ್ರತಿಷ್ಟೆಯ ಅಮಲು : ಪ್ರತಿಷ್ಟೆ ಎನ್ನುವುದು ಬೇಕೋ…? ಬೇಡವೋ….?

ಒಬ್ಬ ವ್ಯಕ್ತಿಯ ಅಹಂಕಾರದ ಆಹಾರವೇ ಪ್ರತಿಷ್ಟೆ. ಒಬ್ಬನ ಅಹಂಕಾರದ ಗಾಢವಾದ ಭಾವವೇ ಪ್ರತಿಷ್ಟೆ. ನಾನು ಶ್ರೀಮಂತ, ವಿದ್ಯಾವಂತ, ಬುದ್ಧಿವಂತ, ಉತ್ತಮ ಕುಲದವನು, ಉಚ್ಛವರ್ಣದವನು, ತನಗೆ ಸಮಾಜದಲ್ಲಿ ಮಾನ್ಯತೆ ಇದೆ; ಇತ್ಯಾದಿಗಳ ಗಾಢವಾದ ಭಾವವನ್ನು ನನ್ನತನಕ್ಕೆ ಲೇಪಿಸಿಕೊಳ್ಳುವುದಕ್ಕೆ ಪ್ರತಿಷ್ಟೆ ಎಂದು ಸ್ಪಷ್ಟವಾಗಿ ಕರೆಯುವುದು.

ಅದೆಲ್ಲಾ ಸರಿ, ಈ ಪ್ರತಿಷ್ಟೆ ಎನ್ನುವುದು ಬೇಕೋ ಬೇಡವೋ? ಅದು ಒಬ್ಬನ ವ್ಯಕ್ತಿತ್ವಕ್ಕೆ ಮತ್ತು ಸ್ವಭಾವಕ್ಕೆ ಅಗತ್ಯವಿದೆಯೋ ಇಲ್ಲವೋ?

ನಾನು ಯಾವುದೋ ಒಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇನೆ. ಯಾವುದೋ ಒಂದು ದೇಶದವನಾಗಿದ್ದೇನೆ, ಆ ದೇಶವನ್ನು ಪ್ರತಿನಿಧಿಸುತ್ತೇನೆ. ಯಾವುದೋ ಒಂದು ಭಾಷೆಯನ್ನು ಆಡುತ್ತೇನೆ. ಆ ಭಾಷೆಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇನೆ. ಯಾವುದೋ ಒಂದು ಸಮುದಾಯಕ್ಕೋ ಅಥವಾ ವಂಶಕ್ಕೋ ಸೇರಿದವನಾಗಿದ್ದು ಸಹಜವಾಗಿಯೇ ಪ್ರತಿನಿಧಿಸುತ್ತೇನೆ. ಹಾಗೆ ಪ್ರತಿನಿಧಿಸುವಾಗ ಅದರ ಮೌಲ್ಯವನ್ನು ಎತ್ತಿ ಹಿಡಿಯುವಂತಹ ವರ್ತನೆಗಳನ್ನು ನಾನು ತೋರಬೇಕಾಗುತ್ತದೆ. ನಾನು ನನ್ನ ಕಳಪೆ ವರ್ತನೆಗಳಿಂದಲೋ, ಕ್ಷುಲ್ಲಕ ಮಾತುಗಳಿಂದಲೋ, ಹಗುರವಾದ ಹೇಳಿಕೆಗಳಿಂದಲೋ ನನ್ನ ಸಂಸ್ಕೃತಿಯನ್ನು, ಭಾಷೆಯನ್ನು, ದೇಶವನ್ನು, ಸಮುದಾಯವನ್ನು, ಕುಟುಂಬವನ್ನೋ ಅಪಮಾನಿಸಲಾಗದು. ಅವುಗಳ ಮೌಲ್ಯವನ್ನು ಎತ್ತಿಹಿಡಿಯುವುದೇ ಅವುಗಳ ಮಾನವನ್ನು ಕಾಪಾಡುವುದೆಂದರ್ಥ.

ನಾವು ಯಾವುದನ್ನು ಪ್ರತಿನಿಧಿಸುತ್ತೇವೆಯೋ ಅದರ ಮೌಲ್ಯವನ್ನು ಎತ್ತಿಹಿಡಿಯುವುದರ ಮೂಲಕ ಅದರ ಮಾನವನ್ನು ಕಾಪಾಡುತ್ತೇವೆ. ಅದಕ್ಕೆ ತಕ್ಕನಾಗಿ ನಾನು ನಡೆದುಕೊಳ್ಳಬೇಕು, ಮಾತಾಡಬೇಕು, ಕೆಲಸಗಳನ್ನು ಮಾಡಬೇಕು. ಆಗಲೇ ಪ್ರತಿನಿಧಿಸುವಂತಹ ವ್ಯಕ್ತಿಗೂ ಮತ್ತು ಆ ವ್ಯಕ್ತಿ ಯಾವುದನ್ನು ಪ್ರತಿನಿಧಿಸುತ್ತಾರೆಯೋ ಅದಕ್ಕೆ ಗೌರವ. ಈ ಗೌರವವನ್ನು ಕಾಪಾಡುಕೊಳ್ಳುವಂತೆ ನಮ್ಮನ್ನು ನಾವು ಕಾಯ್ದುಕೊಳ್ದುವುದು ಪ್ರತಿಷ್ಟೆಯೇ? ಖಂಡಿತ ಅಲ್ಲ. ಇದು ಘನತೆ. ನಾವು ಘನತೆಗೂ ಮತ್ತು ಪ್ರತಿಷ್ಟೆಗೂ ಸ್ಪಷ್ಟವಾದ ಅರ್ಥವನ್ನು ಕಂಡುಕೊಳ್ಳಬೇಕು.

ಘನತೆ ವರ್ಸಸ್ ಪ್ರತಿಷ್ಟೆ
ಘನತೆ ಎಂಬುದು ಸಾಮುದಾಯಿಕವಾಗಿಯೂ, ಸಮಗ್ರವಾಗಿಯೂ ಮತ್ತು ವಿಶಾಲಾರ್ಥದಲ್ಲಿ ವ್ಯಾಪ್ತಿಯನ್ನು ಪಡೆಯುತ್ತದೆ. ಅದರ ಅರ್ಥ ವಿಸ್ತಾರವಾಗಿರುತ್ತದೆ. ಆದರೆ ಪ್ರತಿಷ್ಟೆ ಎಂಬುದು ಒಬ್ಬನು ತನ್ನ ಬಗ್ಗೆ ತಾನು ತಳೆಯುವಂತಹ ಅಥವಾ ತಳೆದಿರುವಂತಹ ಚಿತ್ರಣವಷ್ಟೇ ಆಗಿರುತ್ತದೆ. ಚಿತ್ರಣ ಎಂದರೆ ಇಂಗ್ಲೀಷಲ್ಲಿ ಇಮೇಜ್ ಎನ್ನುತ್ತೇವಲ್ಲಾ, ಅದು. ಈ ಚಿತ್ರಣವು ಬಹು ಮಟ್ಟಿಗೆ ಅಹಂಕಾರದ ಗಾಢವಾದ ಭಾವವೇ ಆಗಿರುತ್ತದೆ. ಯಾವುದರದ್ದೇ ಒಂದರ ಘನತೆಯನ್ನು ಎತ್ತಿ ಹಿಡಿದರೆ ಆತ್ಮಸಂತೋಷ ದೊರಕಿದರೆ, ಪ್ರತಿಷ್ಟೆಯಿಂದ ಅಹಂಕಾರಕ್ಕೆ ತೃಪ್ತಿ ಸಿಗುತ್ತದೆ. ಘನತೆಯು ಸಾಮುದಾಯಕವಾಗಿ, ಸಾಮಾಜಿಕವಾಗಿ ವಿಶಾಲಾರ್ಥವನ್ನು ಹೊಂದಿದ್ದರೆ, ಪ್ರತಿಷ್ಟೆಯು ವ್ಯಕ್ತಿಗತವಾಗಿ, ಅಹಂಪ್ರೇರಿತವಾಗಿ ಸಂಕುಚಿತಾರ್ಥವನ್ನು ಪಡೆದಿರುತ್ತದೆ. ಹೀಗಾಗಿ ಘನತೆಯನ್ನೂ ಮತ್ತು ಪ್ರತಿಷ್ಟೆಯನ್ನೂ ಸ್ಪಷ್ಟವಾಗಿ ತಿಳಿದುಕೊಂಡರೆ ನಾವು ಹಾತೊರೆಯುತ್ತಿರುವುದು ಯಾವುದಕ್ಕೆ ಎಂಬುದರ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಬಹುದು. ಆತ್ಮಾವಲೋಕನ ಮಾಡಿಕೊಳ್ಳಬಹುದು.

ಪ್ರತಿಷ್ಟೆಯು ರೋಗವಾದಾಗ
ಪ್ರತಿಷ್ಟೆಯೇ ಒಂದು ಸಂಕುಚಿತವಾದ ಭಾವವಾಗಿರುವಾಗ, ಅಹಂಕಾರದ ಗಾಢ ಮುಖವಾಗಿರುವಾಗ ಇನ್ನು ಹುಸಿಪ್ರತಿಷ್ಟೆ ಎಂದರೇ? ಅದೊಂದು ಮನೋರೋಗ. ಇಂಗ್ಲೀಷಲ್ಲಿ ಫಾಲ್ಸ್ ಪ್ರೆಸ್ಟೀಜ್ ಎನ್ನುತ್ತೇವಲ್ಲಾ, ಅದು. ನಮ್ಮ ದೇಶದ ಒಂದು ಸಾಮಾನ್ಯ ಮತ್ತು ದೊಡ್ಡ ಸಮಸ್ಯೆ ಎಂದರೆ, ಮನೋರೋಗವನ್ನು, ಭಾವನೆಗಳ, ವರ್ತನೆಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆಯೇ ಇರುವುದು.

ಇಡೀ ಭಾರತೀಯ ಆಧ್ಯಾತ್ಮಿಕ ಪರಂಪರೆಯೇ ಆತ್ಮಸಾಕ್ಷಾತ್ಕಾರವನ್ನು ಎತ್ತಿ ಹಿಡಿಯುವಂತಹ, ಗಂಭೀರ ವಿಷಯವನ್ನಾಗಿ ಪರಿಗಣಿಸಿರುವಾಗ, ಧರ್ಮ ಮತ್ತು ಆಧ್ಯಾತ್ಮವನ್ನು ದಿನನಿತ್ಯವೂ ಅನುಸರಿಸುವಂತಹ ಜನರು ಈ ಆತ್ಮಾವಲೋಕನವನ್ನೇ ಮಾಡಿಕೊಳ್ಳದಿರುವುದು. ಇದೊಂದು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜನರ ವ್ಯಂಗ್ಯ. ತನ್ನ ನಡವಳಿಕೆಯನ್ನು, ತನ್ನ ಗುಣ ಅವಗುಣಗಳನ್ನು, ನನ್ನ ಮಾತುಕತೆಯನ್ನು, ತನ್ನ ವರ್ತನೆಯನ್ನು, ತಾನು ವರ್ತನೆಯ ಮಾದರಿಗಳನ್ನು, ತನ್ನ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ ಇತ್ಯಾದಿಗಳ ಜೊತೆಗೆ ತನ್ನ ಅಹಂಕಾರ ಎಷ್ಟರಮಟ್ಟಿಗೆ ತನಗೆ ಆಹಾರವನ್ನು ಒದಗಿಸಿಕೊಳ್ಳುತ್ತಿದೆ ಎಂಬುದನ್ನು ನೋಡಿಕೊಳ್ಳದೇ ಇರುವುದು ಒಂದು ಕುಚೋದ್ಯ. ತನ್ನನ್ನು ತಾನು ಗಮನಿಸಿಕೊಳ್ಳುವುದು, ವಿಮರ್ಶಿಸಿಕೊಳ್ಳುವುದು ಮತ್ತು ಆತ್ಮಾವಲೋಕನ ಮಾಡಿಕೊಳ್ಳುವುದು ಆತ್ಮಸಾಕ್ಷಾತ್ಕಾರದ ಪ್ರಾಥಮಿಕ ಹಂತ. ಆದರೆ, ಧಾರ್ಮಿಕತೆ, ಆಧ್ಯಾತ್ಮಿಕತೆ ಇತ್ಯಾದಿಗಳನ್ನೆಲ್ಲಾ ಮಾತಾಡಿಕೊಂಡು ತಮ್ಮ ಪ್ರತಿಷ್ಟೆ ಏನು? ತಾವು ಪ್ರತಿನಿಧಿಸಬೇಕಾಗಿರುವ ಮೌಲ್ಯದ ಘನತೆ ಏನು ತಿಳಿದುಕೊಳ್ಳದೇ ಇರುವುದು ಎಂತಹ ವಿಪರ್ಯಾಸ!

ವ್ಯಕ್ತಿಗತವಾಗಿ ತನ್ನ ಮನೋರೋಗವನ್ನು ಗುರುತಿಸಿಕೊಳ್ಳುವುದು ಮತ್ತು ಅದರ ನಿವಾರಣೆಗಾಗಿ ಕ್ರಮಗಳನ್ನು ಕೈಗೊಳ್ಳುವುದು ನಿಜಕ್ಕೂ ಆಧ್ಯಾತ್ಮಿಕ ಚಿಂತನೆಯೇ ಆಗಿರುತ್ತದೆ. ಆಧ್ಯಾತ್ಮಿಕ ಚಿಂತನೆ ಎಂದರೆ ಎಲ್ಲೋ ಕಾಣದ ಲೋಕದ ಎತ್ತರದ ಬಗ್ಗೆ, ಇಳಿಯಲಾಗದ ಆಳದ ಗೂಢತೆಯ ಬಗ್ಗೆ ದೊಡ್ಡ ದೊಡ್ಡ ಶಬ್ಧಗಳಲ್ಲಿ ಮಾತಾಡುವುದಲ್ಲ. ಇಲ್ಲಿಂದ, ತನ್ನೊಳಗಿಂದ ತನ್ನನ್ನು ಪ್ರಶ್ನಿಸಿಕೊಳ್ಳುತ್ತಾ ತನ್ನ ವರ್ತನೆ, ಚಿಂತನೆ, ಕ್ರಿಯೆ ಹಾಗೂ ಪ್ರತಿಕ್ರಿಯೆ ಮತ್ತು ಸ್ಪಂದನಗಳನ್ನು ಗಮನಿಸಿಕೊಳ್ಳುತ್ತಾ, ಗುರುತಿಸಿಕೊಳ್ಳುತ್ತಾ ಹೋಗುವುದೇ ಅಧ್ಯಾತ್ಮದ ಮೊದಲಹೆಜ್ಜೆ ಮತ್ತು ಬಹಳ ಪ್ರಮುಖವಾದ ಹೆಜ್ಜೆ.

ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿನ ನಮ್ಮ ವರ್ತನೆಗಳನ್ನು, ಚಿಂತನೆಗಳನ್ನು, ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ನಾವು ಪರಾಮರ್ಶೆಗೆ ಅಥವಾ ವಿಮರ್ಶೆಗೆ ಒಳಪಡಿಸದೇ ಹೋದಲ್ಲಿ ಅದು ಮಾನವತೆಯ, ಸಾಮಾಜಿಕ ಚಿಂತನೆಯ, ವ್ಯಕ್ತಿಯ ಮಾನಸಿಕ ಆರೋಗ್ಯದ, ಆಧ್ಯಾತ್ಮದ, ಸಂಸ್ಕೃತಿಯ ಪ್ರಾತಿನಿಧ್ಯದ; ಯಾವುದಾದರೂ ಅದು ಸಂಪೂರ್ಣ ವಿಫಲ. ಅದು ಎಂದಿಗೂ ಪ್ರಾಮಾಣಿಕವಾಗಿರುವುದಿಲ್ಲ. ವಿಮರ್ಶೆಗೆ ತೆರೆದುಕೊಳ್ಳುವುದು ಪ್ರಾಮಾಣಿಕತೆಯ ಮತ್ತು ವಿನಯತೆಯ ಬಹುದೊಡ್ಡ ಸಂಕೇತ. ತಮ್ಮ ಅಹಂಕಾರವನ್ನು ತಾವೇ ಮೆಟ್ಟುವ ಮೊದಲ ಸೂತ್ರ. ಇನ್ನು ಬೇರೆ ಹೇಳಬೇಕಿಲ್ಲ, ಹುಸಿಪ್ರತಿಷ್ಟೆಯ ವ್ಯಕ್ತಿಯು ಧಾರ್ಮಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ, ಆಧ್ಯಾತ್ಮಿಕವಾಗಿಯಾಗಲಿ ಎಂದೂ ಪ್ರಾಮಾಣಿಕನಾಗಿರಲಾರ ಮತ್ತು ಯಶಸ್ಸನ್ನು ಕಾಣಲಾರ ಎಂದು.

ಹುಸಿಪ್ರತಿಷ್ಟೆಯ ರೋಗ ಲಕ್ಷಣಗಳು
ಪ್ರತಿಷ್ಟೆಯ ಗೀಳು ಅತಿಯಾದಾಗ ಅದು ವಾಸ್ತವವನ್ನು ಮೀರುತ್ತದೆ. ಅದು ಹುಸಿಪ್ರತಿಷ್ಟೆ ಎನಿಸುತ್ತದೆ. ಹುಸಿಪ್ರತಿಷ್ಟೆಯ ರೋಗದವರಿಗೆ ತಮ್ಮ ಒಣಜಂಭವು ಅಥವಾ ಧಿಮಾಕು ಎಷ್ಟರಮಟ್ಟಿಗೆ ಮುಖ್ಯವಾಗುತ್ತದೆ ಎಂದರೆ ಜೀವ ಮತ್ತು ಜೀವದ ಕ್ರಿಯಾಭಿವ್ಯಕ್ತಿಯಾದ ಜೀವನವೂ ಕೂಡಾ ಮುಖ್ಯವಾಗುವುದಿಲ್ಲ. ತಮ್ಮ ಪ್ರತಿಷ್ಟೆಗಾಗಿ ತಮ್ಮ ಜೀವವನ್ನು ತೆಗೆದವರೂ ಇದ್ದಾರೆ, ಇತರರ ಜೀವಗಳನ್ನು ತೆಗೆದವರೂ ಇದ್ದಾರೆ. ನೋಡುವವರ ದೃಷ್ಟಿಯಲ್ಲಿ ತಾವು ಕಡಿಮೆಯಾದೆವು ಎಂದೋ, ಅಪಮಾನವಾಯಿತೆಂದೋ, ತಮಗಿನ್ನು ಮಾನ್ಯತೆ ಸಿಗಲಾರದೆಂದೋ, ಮೊದಲಿನ ಹಾಗೆ ಗೌರವಿಸಲಾರರೆಂದೋ ಸಾಯುವ ಮತ್ತು ಸಾಯಿಸುವ ಅನೇಕ ಉದಾಹರಣೆಗಳನ್ನು ಸಮಾಜದಲ್ಲಿ ನೋಡಿದ್ದೇವೆ, ನೋಡುತ್ತಿದ್ದೇವೆ. ಮಾನವಿಲ್ಲ ಪ್ರಾಣ ಇದ್ದರೇನು ಹೋದರೇನು ಎನ್ನುವುದು ಈ ಹುಸಿಪ್ರತಿಷ್ಟೆಯ ಬಹು ಗಂಭೀರವಾದ ರೋಗ ಲಕ್ಷಣವೇ. ಪ್ರತಿಷ್ಟೆಯ ಗೀಳು ಹತ್ತಿರುವವರು ಬದುಕುವುದೂ ಪ್ರತಿಷ್ಟೆಗಾಗಿಯೇ ಮತ್ತು ಸಾಯುವುದೂ ಪ್ರತಿಷ್ಟೆಗಾಗಿಯೇ.
ಇನ್ನುಹುಸಿಪ್ರತಿಷ್ಟೆಯ ರೋಗ ಹತ್ತಿರುವವರು ಯಾರ ಸಲಹೆಗಳನ್ನೂ, ಸೂಚನೆಗಳನ್ನೂ ಸ್ವೀಕರಿಸುವುದಿಲ್ಲ.

ತಾವು ತಮ್ಮ ಪ್ರತಿಷ್ಟೆಗೆ ಕುಂದು ಬರುವಂತಹ ಯಾವುದೇ ಸತ್ಯದ ವಿಚಾರಗಳನ್ನಾಗಲಿ, ನೈಜ ವಿಷಯವನ್ನಾಗಲಿ, ವಾಸ್ತವದ ಸಂಗತಿಗಳನ್ನಾಗಲಿ ಒಪ್ಪುವುದಿಲ್ಲ. ಅವರೊಂದು ಮಿಥ್ಯೆಯ ತಳಹದಿಯ ಮೇಲಿದ್ದು, ಅದನ್ನು ಸದಾ ಸಮರ್ಥಿಸಿಕೊಳ್ಳುತ್ತಲೇ ಇರುತ್ತಾರೆ. ಅವರ ದೊಡ್ಡ ಸಮಸ್ಯೆ ಎಂದರೆ, ತಾವು ನಂಬಿರುವ ವಿಷಯವು ಎಲ್ಲಿ ತಪ್ಪು ಎಂದು ಸಾಬೀತಾಗಿಬಿಡುವುದೋ ಎಂದು ಯಾರನ್ನೂ ಅದರ ಕುರಿತಾಗಿ ಮಾತಾಡಲು ಬಿಡುವುದೇ ಇಲ್ಲ. ಯಾರೊಬ್ಬರು ಅದರ ವಿರುದ್ಧವಾಗಿ ಮಾತಾಡುತ್ತಿದ್ದಾರೆ ಎಂದರೆ ಕೇಳುವುದಿರಲಿ, ವಾಕ್ಯಗಳನ್ನು ಪೂರ್ಣ ಮಾಡಲು ಬಿಡದೇ ತಾವೇ ಅವರ ಮೇಲೆ ಆಕ್ರಮಣಕಾರಿಯಾಗಿ ಮಾತಾಡುತ್ತಿರುತ್ತಾರೆ.

 

ಧಾರ್ಮಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ, ರಾಜಕೀಯವಾಗಿಯಾಗಲಿ ಅಥವಾ ವೈಯಕ್ತಿಕವಾಗಿಯಾಗಲಿ ಯಾರೇ ಹುಸಿಪ್ರತಿಷ್ಟೆಯನ್ನು ಹೊಂದಿದ್ದರೆ ಅವರಿಗೆ ವಿಷಯಗಳನ್ನು ಮನವರಿಕೆ ಮಾಡಿಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ಅವರು ಮೊದಲಾಗಿ ಕೇಳುವುದಕ್ಕೇ ತಯಾರಿರುವುದಿಲ್ಲ. ಕೇಳಿಸಿಕೊಂಡರೆ, ತಾವು ಕೇಳಿದ್ದು ಸತ್ಯವಾಗಿದ್ದರೆ ಒಪ್ಪಿಬಿಡಬೇಕಾಗಬಹುದು ಎಂಬ ಅಂಜಿಕೆಯಿಂದ ತರ್ಕಕ್ಕೆ ಮೀರಿದ ವಾದಗಳಿಗೆ ಇಳಿಯುತ್ತಾರೆ. ಅವರಿಗೆ ತಾವು ಮತ್ತು ತಮ್ಮ ಪ್ರತಿಷ್ಟೆ ಗೆಲ್ಲಬೇಕು. ಇತರರು ಸೋಲಲೇ ಬೇಕು. ಇತರರ ಸೋಲಿನಲ್ಲಿ, ಇತರರನ್ನು ಬಗ್ಗಿಸುವುದರಲ್ಲಿಯೇ ತಮ್ಮ ಪ್ರತಿಷ್ಟೆಯ ವಿಜಯವಿರುವುದು ಎಂದು ಭಾವಿಸುವುದೂ ಕೂಡಾ ಹುಸಿಪ್ರತಿಷ್ಟೆಯ ಬಹುದೊಡ್ಡ ಲಕ್ಷಣ.
ಹುಸಿಪ್ರತಿಷ್ಟೆಯ ವ್ಯಕ್ತಿಗಳು ವೈಚಾರಿಕವಾಗಿರದೇ ಅಂಧರಾಗಿರುತ್ತಾರೆ. ಅವರೆಂದಿಗೂ ತಾರ್ಕಿಕವಾಗಿ ವಿಚಾರವನ್ನು ಮಂಡಿಸಲಾರರು. ಕುತರ್ಕವನ್ನೇ ಸರಿಯಾದ ತರ್ಕವೆಂದು ಭಾವಿಸಿರುತ್ತಾರೆ.

ಇತರರನ್ನು ಕಡೆಗಣಿಸುವುದರಲ್ಲಿಯೇ ತಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುವುದು ಅವರ ಇನ್ನೊಂದು ಲಕ್ಷಣ. ಹೊಗಳಿದಾಗ ಸಂಭ್ರಮಿಸುವುದು, ಉಬ್ಬುವುದು ಅವರ ಸಾಮಾನ್ಯ ಲಕ್ಷಣ. ಅಂತವರನ್ನು ಹೊಗಳುತ್ತಾ ಹಿಂದೆ ಮುಂದೆ ಓಡಾಡಿಕೊಂಡಿದ್ದರೆ ಅವರ ಕೃಪಾಕಟಾಕ್ಷವು ಹೊಗಳುವವರ ಮೇಲೆ ಸದಾ ಇರುತ್ತದೆ. ಅಂದರೆ ಹುಸಿಪ್ರತಿಷ್ಟೆಯ ಮಂದಿ ತಮ್ಮ ಹಿಂದೆ ಸದಾ ಬಕ್ಕೆಟ್ಟುಗಳ ಸಾಲುಸಾಲುಗಳು ಇರಬೇಕೆಂದು ಬಯಸುತ್ತಾರೆ. ವಿಮರ್ಶಾತ್ಮಕವಾಗಿ ಯಾರಾದರೂ ಮಾತಾಡಿದರೆ ಒಂದೋ ಅವರ ಸಹವಾಸವನ್ನು ಮೊಟಕು ಮಾಡುತ್ತಾರೆ ಅಥವಾ ಅವರನ್ನು ಅಲ್ಲಿಂದ ನಿವಾರಿಸಲು ಯತ್ನಿಸುತ್ತಾರೆ.

ತಮ್ಮ ಹುಸಿಪ್ರತಿಷ್ಟೆಯನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮ ಆಪ್ತರನ್ನು, ತಮ್ಮವರನ್ನು ಕಳೆದುಕೊಳ್ಳಲೂ ಅವರು ಹಿಂಜರಿಯುವುದಿಲ್ಲ. ಅಹಂಕಾರದ ಪರಮಾವಧಿಯ ಸಂಕೇತವೇ ಹುಸಿಪ್ರತಿಷ್ಟೆ.
ಇತರರು ಅವರನ್ನು ಎಂದಿಗೂ ಬದಲಾಯಿಸಲು ಸಾಧ್ಯವೇ ಇಲ್ಲ. ಆದರೆ ಬದಲಾವಣೆ ಸಾಧ್ಯವಿದೆ. ಅದು ಯಾವಾಗೆಂದರೆ, ಯಾರಿಗೆ ಹುಸಿಪ್ರತಿಷ್ಟೆಯ ಗೀಳು ಇರುತ್ತದೆಯೋ, ಅವರಿಗೆ ತಮಗೆ ಈ ರೋಗವಿದೆಯೆಂದು ಅರಿವಾಗಿ, ಅವರೇ ಅದರಿಂದ ಹೊರಗೆ ಬರಬೇಕೆಂದು ಪ್ರಯತ್ನಿಸಿದರೆ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಅವರು ಒಳ್ಳೆಯದು ಕೆಟ್ಟದ್ದು, ಬೇಕಾದ್ದು, ಬೇಡದ್ದು; ಈ ಎಲ್ಲವನ್ನೂ ಮೀರಿ ಎಲ್ಲಾ ವಿಷಯಗಳೂ ತಮ್ಮ ನಿಯಂತ್ರಣದಲ್ಲೇ ಇರಬೇಕೆಂದು ಬಯಸುತ್ತಾರೆ. ಜೊತೆಗೆ ತಮಗೆ ಅದರಲ್ಲಿ ಪ್ರಾವಿಣ್ಯತೆ ಅಥವಾ ಸಾಮರ್ಥ್ಯ ಇದೆಯೋ ಇಲ್ಲವೋ ಎಂದೂ ಕೂಡಾ ನೋಡಿಕೊಳ್ಳುವುದಿಲ್ಲ.

ಅಂತವರ ಮನೆಯ ಇತರ ಸದಸ್ಯರು, ಅವರ ಕೈ ಕೆಳಗೆ ಕೆಲಸ ಮಾಡುವವರು, ಅವರ ಸಹವರ್ತಿಗಳು ಇಂತಹ ವ್ಯಕ್ತಿಗಳಿಂದ ನರಳುತ್ತಾರೆ. ಕೆಲವೊಮ್ಮೆ ಆಡಲಾರರು, ಅನುಭವಿಸಲಾರರು. ಇನ್ನೂ ಕೆಲವೊಮ್ಮೆ ಹೊರಗಿನ ಸಮಾಜದ ಕಣ್ಣಿಗೆ ಈ ಪ್ರತಿಷ್ಟೆಯ ಸಂಗತಿ ತಪ್ಪಾಗಿಯೂ ಕೂಡಾ ಕಾಣಿಸದೇ ಹೋಗುತ್ತದೆ. ಈ ಪ್ರತಿಷ್ಟೆಯು ಪ್ರತಿಷ್ಟಾಪನೆಗೊಳ್ಳುವುದು ಸಾಮಾನ್ಯವಾಗಿ ಹಣ, ಅಧಿಕಾರ, ಖ್ಯಾತಿ, ಅಂತಸ್ತು ಇತ್ಯಾದಿಗಳನ್ನು ಅನುಭವಿಸಿರುವವರಲ್ಲಿ ಅಥವಾ ಅನುಭವಿಸುತ್ತಿರುವವರಲ್ಲಿ.
ಎಷ್ಟೋ ಬಾರಿ ತಮ್ಮ ತಪ್ಪು ಅವರಿಗೆ ಅರಿವಾದರೂ ಅದರನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಾರರು. ಅದಕ್ಕೆ ಅವರಿಗೆ ಅವರ ಪ್ರತಿಷ್ಟೆಯೇ ಅಡ್ಡಿ ಬರುತ್ತದೆ. ಕೆಲವೊಮ್ಮೆ ಅವರಿಗೆ ಅರಿವಿಗೆ ಬರುವಷ್ಟರಲ್ಲಿ ಪರಿಸ್ಥಿತಿಗಳು ಕೈ ಮೀರಿರುತ್ತವೆ. ಆಗ ಒಪ್ಪಿಕೊಂಡರೂ ಒಂದೇ ಒಪ್ಪಿಕೊಳ್ಳದಿದ್ದರೂ ಒಂದೇ ಎನ್ನುವಂತಹ ಪರಿಸ್ಥಿತಿಗಳಲ್ಲಿ ಅಂತರ್ಮುಖಿಗಳಾಗಿ ಸುಮ್ಮನಾಗಿಬಿಡುತ್ತಾರೆ.
ಒಂದು ಮಾತಂತೂ ನಿಜ. ಪ್ರತಿಷ್ಟೆಯ ಗೀಳಿರುವ ವ್ಯಕ್ತಿಗಳಿಗೆ ಇತರರ ಆತ್ಮಗೌರವ ಮತ್ತು ಜೀವನ ಮೌಲ್ಯಗಳು ಎಂದಿಗೂ ಮುಖ್ಯವಾಗಿರುವುದಿಲ್ಲ.

ಮರ್ಯಾದೆ ಹತ್ಯೆಗಳು
ಹುಸಿಪ್ರತಿಷ್ಟೆಗೆ ಹಲವಾರು ಮುಖಗಳಿವೆ. ಕಾಣುವ, ಕಾಣದಿರುವ, ನೇರವಾಗಿರುವ, ಪರೋಕ್ಷವಾಗಿರುವ ಬಹಳಷ್ಟು ಆಯಾಮಗಳಿವೆ.
ತಮ್ಮ ಕುಟುಂಬದ ಅಥವಾ ಜಾತಿಯ ಹೆಣ್ಣು ಅಥವಾ ಗಂಡು, ತಾವು ಗೌರವಿಸದ ಅಥವಾ ಪರಿಗಣಿಸದವರನ್ನು ಮದುವೆಯಾಗುವುದು ಮರ್ಯಾದೆಗೇಡಿತನವೆಂದು, ಮರ್ಯಾದೆ ಹತ್ಯೆಗಳು ನಡೆದಿರುವ ಅನೇಕಾನೇಕ ಸಂಗತಿಗಳನ್ನು ನಮ್ಮ ದೇಶದುದ್ದಗಲಕ್ಕೂ ನೋಡಿದ್ದೇವೆ. ಇದು ಕೂಡಾ ಹುಸಿಪ್ರತಿಷ್ಟೆಯ ಒಂದು ಮುಖವೇ. ವಂಶದ, ಕುಲದ, ಕುಟುಂಬದ ಪ್ರತಿಷ್ಟೆಗೆ ಧಕ್ಕೆ ಬಂತು ಎಂದು ಭಾವಿಸುವುದು ಮತ್ತು ಅದಕ್ಕೆ ಪ್ರತಿಕಾರವಾಗಿ ವರ್ತಿಸುವುದು ಕೂಡಾ ಸಾಮುದಾಯಿಕ ಮನೋರೋಗವೇ. ಇದೆಷ್ಟು ಅಪಾಯಕಾರಿಯೆಂದರೆ, ತಮ್ಮದೇ ಮನೆಯವರನ್ನೂ, ತಾವೇ ಜನ್ಮ ನೀಡಿರುವ ಮಕ್ಕಳನ್ನು, ಸಹೋದರ ಸಹೋದರಿಯರನ್ನೂ ಬಿಡದಂತಹ ಬಹು ದೊಡ್ಡ ಮನೋರೋಗ. ಪ್ರತಿಷ್ಟೆಯ ಉನ್ಮತ್ತತೆ. ಅದು ಜೀವಿಯನ್ನೂ, ಜೀವನವನ್ನೂ ನಾಶ ಮಾಡುವಂತಹ ಬಹುದೊಡ್ಡ ಮಾನಸಿಕ ರೋಗ ಅಥವಾ ಅಮಲು.

ಮರ್ಯಾದೆ ಕಾರಣದ ಆತ್ಮಹತ್ಯೆಯೂ ಇಂತಹ ವಿಷಯಗಳಲ್ಲಿ ಒಂದಾದರೆ, ಕೆಲವು ಸಮುದಾಯಗಳ ಪ್ರತಿಷ್ಟೆಯ ಸಂಕೇತವಾಗಿರುವ ಸತಿ ಹೋಗುವ ಪದ್ಧತಿಯೂ ಕೂಡಾ ಇಂತಹ ಹುಸಿಪ್ರತಿಷ್ಟೆಯ ಅಮಲೇ ಆಗಿರುತ್ತದೆ.
ಆತ್ಮಕೇಂದ್ರಿತ ವ್ಯಕ್ತಿತ್ವ ಮನುಷ್ಯ ಸ್ವಭಾವವು ಸಾಮಾನ್ಯವಾಗಿ ಆತ್ಮಕೇಂದ್ರಿತವೇ ಆಗಿರುತ್ತದೆ. ನಾನತ್ವ ಎಂಬ ಅಹಂಕಾರವಿಲ್ಲದೇ ಯಾವುದೇ ಮನುಷ್ಯನಿಗೆ ನಿತ್ಯ ಜೀವನದ ವ್ಯವಹಾರವೂ ಸಾಧ್ಯವಿಲ್ಲ. ಹಾಗೆ ಬದುಕುತ್ತೇನೆ ಎಂಬುದು ಒಂದು ರೀತಿಯಲ್ಲಿ ಅವಾಸ್ತವವೇ ಆಗಿರುತ್ತದೆ. ಆದರೆ ಆ ನಾನತ್ವವು ಒಂದು ವ್ಯಾವಹಾರಿಕ ಉಪಕರಣದ ಬದಲಾಗಿ ಗೀಳಾಗಿ ಪರಿಣಮಿಸಿದರೆ ಅಲ್ಲಿ ಅಪಾಯ ಕಟ್ಟಿಟ್ಟದ್ದು. ಜೊತೆಗೆ ಅದು ಯಾವಾಗ ತನ್ನ ಮತ್ತು ಇತರರ ಜೀವ ಮತ್ತು ಜೀವನವನ್ನೂ ಕಡೆಗಣಿಸುವಂತಾಗುತ್ತದೆಯೋ ಅದು ಮನೋರೋಗದ ಲಕ್ಷಣ. ವ್ಯಕ್ತಿಗಳ ನಡುವಿನ ಅಹಂಕಾರದ ನಡುವಿನ ತಾಕಲಾಟವೇ ಅನೇಕಾನೇಕ ಸಮಸ್ಯೆಗಳಿಗೆ ಕಾರಣ. ಮನೆಯಲ್ಲಿನ ಕೌಟುಂಬಿಕ ನೆಮ್ಮದಿ ಕೆಡಲು ಅಥವಾ ಸಂಸ್ಥೆಗಳಲ್ಲಿನ ಸಾಮಾನ್ಯ ಧ್ಯೇಯೋದ್ದೇಶಗಳು ನಾಶವಾಗಲು ಅಥವಾ ಈಡೇರದಿರಲು ನಾನತ್ವಗಳ ಸಂಘರ್ಷವೇ ಬಹುಪಾಲು ಕಾರಣವಾಗಿರುತ್ತದೆ.

ಇಷ್ಟು ಅರ್ಥ ಮಾಡಿಕೊಳ್ಳೋಣ. ಆತ್ಮಾಭಿಮಾನಕ್ಕೂ ಅಹಂಕಾರಕ್ಕೂ ವ್ಯತ್ಯಾಸವಿದೆ. ಹೆಮ್ಮೆಗೂ ಜಂಭಕ್ಕೂ ವ್ಯತ್ಯಾಸವಿದೆ. ಘನತೆಗೂ ಮತ್ತು ಪ್ರತಿಷ್ಟೆಗೂ ನಡುವೆ ವ್ಯತ್ಯಾಸವಿದೆ. ನಮಗೆ ಆತ್ಮಾಭಿಮಾನವಿರಲಿ, ಹೆಮ್ಮೆ ಇರಲಿ, ಘನತೆ ಇರಲಿ. ಆದರೆ, ಅಹಂಕಾರ, ಜಂಭ, ಪ್ರತಿಷ್ಟೆಗಳು ಬೇಡ. ಅವು ಆತ್ಮಘಾತಕವಾದದು ಮಾತ್ರವಲ್ಲ. ಸಮಾಜಘಾತಕವಾದದ್ದು. ಮನೆಗಳನ್ನು ಒಡೆಯುತ್ತವೆ. ಸಾಮಾಜಿಕ ಸಂಸ್ಥೆಗಳ ಪತನಕ್ಕೆ ಕಾರಣವಾಗುತ್ತದೆ. ಉನ್ನತ ಧ್ಯೇಯೋದ್ದೇಶಗಳನ್ನು ಮಣ್ಣುಪಾಲಾಗಿಸುತ್ತದೆ.

ವ್ಯಕ್ತಿ ತನ್ನ ಪ್ರಾಮುಖ್ಯತೆಯನ್ನು ಋಜುವಾತುಪಡಿಸಲು, ಇತರರನ್ನು ನಿಯಂತ್ರಿಸುವುದು ಮಾತ್ರವಲ್ಲದೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತಡಗಳನ್ನು ಹೇರುತ್ತಿರುತ್ತಾರೆ. ಅವರು ತಮ್ಮ ಅಭಿಪ್ರಾಯಗಳನ್ನು ಗೌರವಿಸಲೇಬೇಕು ಎಂದು ನಿರೀಕ್ಷಿಸುವುದಲ್ಲದೇ ತನ್ನ ಎಲ್ಲಾ ಆಜ್ಞೆಗಳನ್ನು ಮನ್ನಿಸಲೇಬೇಕೆಂದು ಎದುರುನೋಡುತ್ತಾರೆ.

ಎಷ್ಟೋ ಜನರು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಇಂತಹ ಸ್ಥಾನವನ್ನು ಪಡೆಯಲು ಹಾತೊರೆಯುವುದಲ್ಲದೇ, ಇದಕ್ಕಾಗಿಯೇ ಹಗಲಿರುಳೂ ಶ್ರಮಿಸಿ ಯಶಸ್ವಿಯೂ ಆಗುತ್ತಾರೆ. ಇದರಲ್ಲಿ ಅವರಿಗೆ ಆತ್ಮಾನಂದ ಸಿಗುವುದಲ್ಲದೇ ಅವರ ಅಹಂಕಾರವು ಸದೃಢವಾಗುತ್ತದೆ. ಹಾಗಾಗಿಯೇ ಯಾರದೇ ಹೊಗಳಿಕೆ ಅವರನ್ನು ಉಬ್ಬಿಸುವುದು ಮಾತ್ರವಲ್ಲದೇ, ಹಾಗೆ ಉಬ್ಬಿಸುವವರ ಹುಸಿ ಹೊಗಳಿಕೆಗಳ ವ್ಯಸನಿಗಳಾಗಿದ್ದು ಅವರು ಹೇಳುವುದನ್ನೆಲ್ಲಾ ನಿಜವೆಂದು ಒಪ್ಪುವ, ಅವರ ಅಭಿಪ್ರಾಯಗಳನ್ನು ಮಾತ್ರ ಗೌರವಿಸುವಂತಹ ರೂಢಿಗೊಳಗಾಗುತ್ತಾರೆ. ಹಾಗೆಯೇ ಅವರನ್ನು ವಿಮರ್ಶೆ ಮಾಡುವ, ಅವರ ಅಭಿಪ್ರಾಯವನ್ನು ಒಪ್ಪದವರ ಬಗ್ಗೆ ಕೋಪಗೊಳ್ಳುತ್ತಾರೆ. ನೇರವಾಗಿ ಅಥವಾ ಪರೋಕ್ಷವಾಗಿ ಅವರನ್ನು ಸಂಪರ್ಕವನ್ನುಕಡಿದುಕೊಳ್ಳಲು ಯತ್ನಿಸುತ್ತಿರುತ್ತಾರೆ. ಯಾವುದೇ ವಿಮರ್ಶೆ ಅಥವಾ ಅಭಿಪ್ರಾಯ ಬೇಧಗಳು ಅವರಲ್ಲಿ ಅಪಮಾನ ಎಂಬ ಭಾವನೆಯನ್ನು ಉಂಟುಮಾಡುವುದಲ್ಲದೇ, ಅವರು ತನ್ನ ವಿರುದ್ಧ ಏನೋ ಮಾಡುತ್ತಿದ್ದಾರೆ ಎಂಬಂತಹ ಅನುಮಾನವನ್ನೂ ಕೂಡಾ ಹುಟ್ಟಿಹಾಕುವುದು ಈ ಮನೋರೋಗದ ಲಕ್ಷಣಗಳಲ್ಲಿ ಒಂದು.

ಯಾವ ಖ್ಯಾತಿ, ಹಣ, ಅಧಿಕಾರ, ಅಂತಸ್ತು, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಾನಮಾನಗಳು ವ್ಯಕ್ತಿಯಲ್ಲಿ ವಿನಯತೆಯನ್ನೂ, ಪ್ರೇಮವನ್ನೂ, ಎಲ್ಲರನ್ನೂ ಒಳಗೊಳ್ಳುವಿಕೆಯನ್ನು, ವಿಮರ್ಶೆಗಳಲ್ಲಿ ಮುಕ್ತಭಾವವನ್ನೂ ಉಂಟುಮಾಡಬೇಕೋ ಅದು ತದ್ವಿರುದ್ಧವಾದ ನಡೆಗಳನ್ನು ಉಂಟುಮಾಡತೊಡಗಿದೆ ಎಂದರೆ ಅಲ್ಲಿ ಸಮಸ್ಯೆ ಇದೆ ಎಂದೇ ಅರ್ಥ.

ಇಂತವು ಬರೀ ವ್ಯಕ್ತಿಗಳಲ್ಲಿ ಮಾತ್ರವಲ್ಲ ಸಮಗ್ರವಾಗಿ ಸಮಾಜಗಳಲ್ಲಿ, ಧಾರ್ಮಿಕ ಸಂಸ್ಥೆಗಳಲ್ಲಿ, ದೇಶಗಳಲ್ಲಿ, ಪ್ರತ್ಯೇಕ ಗುರುತುಗಳನ್ನು ಹೊಂದಿರುವಂತಹ ವರ್ಗಗಳಲ್ಲಿ ಇಂತಹವೆಲ್ಲಾ ಕಂಡು ಬಂದರೆ, ಸಾಮಾಜಿಕ ಸಂಘರ್ಷಗಳು, ಧಾರ್ಮಿಕ ಸಂಘರ್ಷಗಳು, ಸಾಂಸ್ಕೃತಿಕ ಸಂಘರ್ಷಗಳು ಮಾತ್ರವಲ್ಲ ಯುದ್ಧಗಳೇ ಆಗುತ್ತವೆ, ಈಗಾಗಲೇ ಸಾಕಷ್ಟು ಆಗಿವೆ.

ಯೋಗೇಶ್ ಮಾಸ್ಟರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights