Cricket : Stadium ಗಳಲ್ಲಿ ಮತ್ತೆ ಕ್ರಿಕೆಟ್ ಸದ್ದು – ಜೂನ್ ಮಾಸಾಂತ್ಯಕ್ಕೆ ಮೊದಲ ಟೆಸ್ಟ್…

ಕೊರೋನಾ ವೈರಸ್ ಹಾವಳಿಯಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್ ಪಂದ್ಯಗಳ ಮತ್ತೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ, ಈ ನಿಟ್ಟಿನಲ್ಲಿ ಇಂಗ್ಲೆಂಡ್ ತಂಡ ಮೊದಲ ಹೆಜ್ಜೆ ಇರಿಸಿದೆ. ಲಾಕ್‌ಡೌನ್ ಕಾರಣ ಸ್ಥಗಿತಗೊಂಡಿದ್ದ ಕ್ರಿಕೆಟ್ ಪಂದ್ಯಗಳನ್ನು ಮತ್ತೆ ಆರಂಭಿಸಲು ಬ್ರಿಟನ್ ಸರಕಾರ ಅನುಮತಿ ನೀಡಿದ್ದು, ಮುಂದಿನ ವಾರದಿಂದ ಚಟುವಟಿಕೆ ಆರಂಭವಾಗಲಿದೆ.

ಮೊದಲಿನಂತೆ ತುಂಬಿದ ಪ್ರೇಕ್ಷಕರ ಸಮ್ಮುಖ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲ. ಬದಲಾಗಿ ಟಿವಿ ನೋಡುಗರನ್ನೇ ಪ್ರಧಾನವಾಗಿ ಇಟ್ಟುಕೊಂಡು ಖಾಲಿ ಮೈದಾನಗಳಲ್ಲಿ ಪಂದ್ಯ ಆಡಿಸಲು ಬ್ರಿಟನ್ ಸರಕಾರ ಹಸಿರು ನಿಶಾನೆ ತೊರಿದೆ.

ಸರಕಾರದ ಅನುಮತಿಯ ಬೆನ್ನಲ್ಲಿಯೇ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಸದಸ್ಯರು ತರಬೇತಿಗೆ ಅಣಿಯಾಗುತ್ತಿದ್ದಾರೆ, ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಮೊದಲ ತಂಡವಾಗಲಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಪುನಾರಂಭವಾಗಲಿದೆ.

ವೆಸ್ಟ್ ಇಂಡೀಸ್ ತಂಡವು ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಅಂಕುರ ಹಾಕಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಇಂಗ್ಲೆಂಡಿನಲ್ಲಿ ಕ್ರಿಕೆಟ್ ಆಟಗಾರರು ತರಬೇತಿ ಆರಂಭಿಸುವ ಸ್ಪಷ್ಟ ಸಂಕೇತಗಳು ಗೋಚರವಾಗಿವೆ.

ಈಗಿರುವ ಮಾಹಿತಿಯಂತೆ ಇಂಗ್ಲೆಂಡಿನ ನಾನಾ ಮೈದಾನಗಳಲ್ಲಿ ಬೆರಳೆಣಿಕೆಯ ಕೋಚುಗಳ ಸಮ್ಮುಖದಲ್ಲಿ ಒಬ್ಬೊಬ್ಬರಾಗಿ ಇಂಗ್ಲೆಂಡ್ ಆಟಗಾರರು ತರಬೇತಿ ನಡೆಸಲಿದ್ದಾರೆ. ಮೊದಲಿಗೆ ಬೌಲರುಗಳು ಆಮೇಲೆ ದಾಂಡಿಗರು ಮತ್ತು ವಿಕೆಟ್ ಕೀಪರುಗಳು ವಿವಿಧ ಮೈದಾನಗಳಲ್ಲಿ ತರಬೇತಿಗೆ ಮರಳಲಿದ್ದಾರೆ ಎಂದು ಕ್ರಿಕ್‌ಇನ್ಫೋ ವರದಿ ಮಾಡಿದೆ.

ಕೊರೋನಾ ಹೊಡೆತಕ್ಕೆ ಸಿಕ್ಕಿ ನಲುಗಿರುವ ಇಂಗ್ಲೆಂಡಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಟಗಾರರು ಮತ್ತು ಕೆಲವೇ ಕೋಚುಗಳು ತರಬೇತಿ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.  ಮುಂದಿನ ಆರೇಳು ವಾರಗಳಲ್ಲಿ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯಲಿದ್ದು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಬಗ್ಗೆ ಎರಡೂ ಕ್ರಿಕೆಟ್ ಮಂಡಳಿಗಳು ಆಶಾಭಾವ ವ್ಯಕ್ತಪಡಿಸಿದ್ದು, ನೇರ ಪ್ರೇಕ್ಷಕರಿಲ್ಲದೇ ಟಿವಿ ನೋಡುಗರಿಗಾಗಿಯೇ ಮೈದಾನದಲ್ಲಿ ಸೆಣೆಸಲು ತಂಡಗಳು ಸಿದ್ಧತೆ ನಡೆಸಿವೆ. ಈ ಮಧ್ಯೆ ಲಾಕ್‌ಡೌನ್ ಕಾರಣ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿರುವ ಭಾರತದಲ್ಲಿಯೂ ಮತ್ತೆ ಕ್ರಿಕೆಟ್ ನಳನಳಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕೊರೋನಾ ಕಾಟದಿಂದಾಗಿ ಮುಂದೂಡಲಾಗಿರುವ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದ್ದು, ಇದಕ್ಕೆ ಬ್ರಿಟನ್ ಮಾದರಿ ಅನುಸರಿಸುವ ಸೂಚನೆಗಳು ಗೋಚರಿಸಿವೆ.

ಈ ಮಧ್ಯೆ ಕೊರೋನಾ ಹೊಡೆತದಿಂದ ಅಷ್ಟೇನೂ ಬಾಧೆಗೊಳಗಾಗದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಐಪಿಎಲ್‌ಗೆ ಆತಿಥ್ಯ ವಹಿಸಲು ಉತ್ಸುಕವಾಗಿವೆ ಎಂಬ ವರದಿಗಳೂ ಹರಿದಾಡುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights