ಇಂದು ಸಂಜೆ 4 ಗಂಟೆಗೆ ಮತ್ತೆ ವಿತ್ತ ಸಚಿವೆ ಸುದ್ದಿಗೋಷ್ಠಿ
ದೇಶದ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ಗೆ ಸಂಬಂಧಪಟ್ಟಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೂಡ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ವಿತ್ತ ಸಚಿವೆ ಸುದ್ದಿಗೋಷ್ಠಿ ನಿಗದಿಪಡಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಅಧಿಕೃತ ಟ್ವಿಟ್ಟರ್ ಖಾತೆ ಪ್ರಕಟಿಸಿದೆ.
Finance Minister Smt. @nsitharaman will address a Press Conference today, 15th May 2020, at 4 PM in New Delhi.#EconomicPackage#AatmanirbharBharat #AatmaNirbharBharatPackage #IndiaFightsCorona pic.twitter.com/HGjU8NEZcB
— Ministry of Finance (@FinMinIndia) May 15, 2020
ಇಂದು ವಿಮಾನಯಾನ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವಿದೇಶಿ ಹೂಡಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೇನು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುತ್ತಾರೆ. ಅಲ್ಲದೆ ನಿನ್ನೆ ಪ್ರಸ್ತಾಪಿಸಿದ್ದ ಕೃಷಿ ಕ್ಷೇತ್ರಕ್ಕೆ ಇವತ್ತು ಮತ್ತೂ ಕೆಲವು ನೆರವುಗಳನ್ನು ಘೋಷಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಕಳೆದ 50 ದಿನಗಳಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಮೊದಲೇ ಸಂಕಷ್ಟ ಎದುರಿಸುತ್ತಿದ್ದ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವಾರು ವಿಮಾನಯಾನ ಕಂಪನಿಗಳು ನೌಕರರನ್ನು ತೆಗದುಹಾಕಿವೆ. ಕೆಲವು ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕಡಿತ ಮಾಡಿವೆ. ಆದುದರಿಂದ ವಿಮಾನಯಾನ ಸಂಸ್ಥೆಗಳಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಕೆಲವು ನೆರವುಗಳನ್ನು ನೀಡುವ ಘೋಷಣೆ ಮಾಡುವ ಸಾಧ್ಯತೆ ಇದೆ.
ಈಗಾಗಲೇ ನಿರ್ಮಲಾ ಸೀತಾರಾಮನ್ ಅವರು ಸತತ ಎರಡು ದಿನ ಸುದ್ದಿಗೋಷ್ಠಿ ನಡೆಸಿ, ಲಾಕ್ಡೌನ್ ಸಂದರ್ಭದಲ್ಲಿ ದೇಶದ ಅಭಿವೃದ್ದಿಗೆ ಪೂರಕವಾಗಿ ಸರ್ಕಾರ ಹೇಗೆ ಯೋಜನೆಗಳನ್ನು ರೂಪಿಸಿದೆ ಎಂದು ವಿವರಣೆ ನೀಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಮೇ 15 ರಂದು ಮತ್ತಷ್ಟು ವಿವರಣೆ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಭಾನುವಾರವರೆಗೂ ಪ್ರತಿದಿನವೂ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರಂತೆ.
20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿಗೆ ಹಂತಹಂತವಾಗಿ ನಿನ್ನೆ ಮತ್ತು ಮೊನ್ನೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರದು ಪ್ಯಾಕೇಜ್ ಬಗ್ಗೆ ಇಂದೇ ಕಡೆಯ ಸುದ್ದಿಗೋಷ್ಠಿ ಆಗುವ ಸಾಧ್ಯತೆ ಕೂಡ ಇದೆ.

