FACT CHECK: ಸುಪ್ರಿಯಾ ಸುಳೆ ಮಗಳ ವಿವಾಹ ಆರತಕ್ಷತೆಯಲ್ಲಿ ಖರ್ಗೆ-ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ
ನವದೆಹಲಿಯಲ್ಲಿ ನಡೆದ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ 12 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

“ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಅವರ ವಿವಾಹ ಆರತಕ್ಷತೆಯಲ್ಲಿ ನರೇಂದ್ರ ಮೋದಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆರೋಗ್ಯ ವಿಚಾರಿಸುತ್ತಾ ‘ಹೇಗಿದ್ದೀರಿ?’ ಎಂದು ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ ‘ನಾನು ಚೆನ್ನಾಗಿದ್ದೇನೆ ಸರ್, ನೀವು ಹೇಗಿದ್ದೀರಿ?’ ಎಂದು ಉತ್ತರಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಪ್ರಮುಖ ಕೀಫ್ರೇಮ್ಗಳನ್ನು ತೆಗೆದು ಗೂಗಲ್ ಲೆನ್ಸ್ (Google Lens) ಮೂಲಕ ಸರ್ಚ್ಮಾಡಿದಾಗ, ವೈರಲ್ ಆಗುತ್ತಿರುವ ದೃಶ್ಯಗಳು ಹಳೆಯ ದೃಶ್ಯಗಳು ಎಂಬುದು ಸ್ಪಷ್ಟವಾಗಿದೆ.
ಈ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ ಮಾರ್ಚ್ 19, 2025 ರಂದೇ ಇದೇ ವಿಡಿಯೋದ ದೃಶ್ಯಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಅದು ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರನ ವಿವಾಹ ಆರತಕ್ಷತೆ ಸಮಾರಂಭದ ದೃಶ್ಯಗಳಾಗಿದ್ದವು.
2025ರ ಮಾರ್ಚ್ 19ರಂದು ‘ದೈನಿಕ ಭಾಸ್ಕರ್‘ ಪ್ರಕಟಿಸಿದ ವರದಿಯಲ್ಲಿ, ಶಿವರಾಜ್ ಸಿಂಗ್ ಚೌಹಾಣ್ ಅವರ ಮಕ್ಕಳ ಆರತಕ್ಷತೆಯ ಆಶೀರ್ವಾದ ಸಮಾರಂಭದಲ್ಲಿ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಭಾಗವಹಿಸಿದ್ದ ಫೋಟೋಗಳಿವೆ. ವೈರಲ್ ವಿಡಿಯೋದಲ್ಲಿ ನಾಯಕರು ಧರಿಸಿರುವ ಉಡುಪುಗಳೇ ಈ ವರದಿಯ ಫೋಟೋಗಳಲ್ಲೂ ಇವೆ.

ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ ಅವರ ಮದುವೆ ರಿಸೆಪ್ಷನ್ನಲ್ಲಿ ಪ್ರಧಾನಿ ಮೋದಿ ಧರಿಸಿದ್ದ ಸೂಟ್ನ ಬಣ್ಣಕ್ಕೂ, ಈ ವೈರಲ್ ವಿಡಿಯೋದಲ್ಲಿ ಪ್ರಧಾನಿ ಧರಿಸಿರುವ ಬಣ್ಣಕ್ಕೂ ವ್ಯತ್ಯಾಸವಿದೆ. ಹಾಗಾಗಿ ಈ ಎರಡೂ ವಿಡಿಯೋಗಳು ಬೇರೆ ಬೇರೆ ಎಂಬುದು ಸ್ಪಷ್ಟವಾಗುತ್ತದೆ. ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಪ್ಪು ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಾತನಾಡುತ್ತಿರುವ ವೈರಲ್ ವಿಡಿಯೋ ಮಾರ್ಚ್ 2025 ರಲ್ಲಿ ನಡೆದ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರನ ವಿವಾಹ ರಿಸೆಪ್ಷನ್ನದ್ದಾಗಿದೆ. ಇದನ್ನು ಸುಪ್ರಿಯಾ ಸುಳೆ ಅವರ ಪುತ್ರಿಯ ಮದುವೆ ರಿಸೆಪ್ಷನ್ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

