FACT CHECK: ಪಾಸ್‌ಪೋರ್ಟ್ ರದ್ದು, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳಿದ್ರಾ ಅಭಿಜಿತ್ ದಿಪ್ಕೆ, ವೈರಲ್ ವೀಡಿಯೊದ ಅಸಲಿ ಸತ್ಯ ಇಲ್ಲಿದೆ

NTA ಮತ್ತು NEET ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಾರಥ್ಯ ವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತದೆ.

ದೆಹಲಿ ಪೊಲೀಸ್ ಆಯುಕ್ತರು ಗಲಭೆಕೋರರ ಪಾಸ್‌ಪೋರ್ಟ್ ರದ್ದುಗೊಳಿಸಿ, ಒಂದು ವರ್ಷ ತಿಹಾರ್ ಜೈಲಿಗೆ ಅಟ್ಟಲು ಆದೇಶಿಸಿದಾಗ ದಿಪ್ಕೆ ಅವರು ಜೈಲು ಶಿಕ್ಷೆಯಿಂದ ಬಚಾವಾಗಲು ಪೊಲೀಸರ ಮುಂದೆ ಮಂಡಿಯೂರಿ ಕ್ಷಮಾದಾನಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್ ಸೇರಿದಂತೆ ಹಲವು ಡಿಜಿಟಲ್ ವೇದಿಕೆಗಳಲ್ಲಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಅವರು ದೆಹಲಿ ಪೊಲೀಸರ ಮುಂದೆ ಮಂಡಿಯೂರಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ವೀಡಿಯೊವೊಂದು ಇತ್ತೀಚೆಗೆ ಫೇಸ್‌ಬುಕ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿತ್ತು. ದೆಹಲಿ ಪೊಲೀಸ್ ಆಯುಕ್ತರು ಗಲಭೆಕೋರರ ಪಾಸ್‌ಪೋರ್ಟ್ ರದ್ದುಗೊಳಿಸಿ, 1 ವರ್ಷ ತಿಹಾರ್ ಜೈಲಿಗೆ ಕಳುಹಿಸಲು ಆದೇಶಿಸಿದಾಗ, ಭೀತಿಗೊಂಡ ದಿಪ್ಕೆ ಅಕ್ಷರಶಃ ಕ್ಷಮಾದಾನಕ್ಕಾಗಿ ಪೊಲೀಸರ ಬಳಿ ಬೇಡಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಪೋಸ್ಟ್ ಹಂಚಿಕೊಂಡಿದ್ದರು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ತಮ್ಮ ಪಾಸ್‌ಪೋರ್ಟ್ಅನ್ನು ರದ್ದುಗೊಳಿಸದಂತೆ ಕೋರಿ ದೆಹಲಿ ಪೊಲೀಸರ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳುತ್ತಿದ್ದಾರೆ  ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಕುರಿತು ABP News ಪ್ರಕಟಿಸಿರುವ ವರದಿಲಭ್ಯವಾಯಿತು. ಅದರ ಪ್ರಕಾರ, ವಿದ್ಯಾರ್ಥಿಗಳು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕಾಗಿ ಮಳೆಯಿಂದ ಆಶ್ರಯ ಪಡೆಯಲು ಟೆಂಟ್ ಹಾಕಲು ಅನುಮತಿ ನೀಡುವಂತೆ ಅಭಿಜಿತ್ ದಿಪ್ಕೆ ಅವರು ದೆಹಲಿ ಪೊಲೀಸರ ಮುಂದೆ ಮಂಡಿಯೂರಿ ಮನವಿ ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಕುರಿತು ‘ನ್ಯೂಸ್‌ಮೀಟರ್’ ನಡೆಸಿದ ಫ್ಯಾಕ್ಟ್‌ಚೆಕ್ ತನಿಖೆಯಲ್ಲಿ ಇದು ಸಂಪೂರ್ಣ ಸುಳ್ಳು ಮತ್ತು ದಾರಿ ತಪ್ಪಿಸುವ ಪೋಸ್ಟ್ ಎಂಬುದು ಸಾಬೀತಾಗಿದೆ. ವಾಸ್ತವವಾಗಿ ಈ ವೀಡಿಯೊ ಜುಲೈ 9 ರಂದು ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ಅಂದು ದೆಹಲಿಯಲ್ಲಿ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಆಶ್ರಯ ನೀಡಲು ನೆರವಾಗುವಂತೆ ಟೆಂಟ್ ಹಾಕಿಕೊಳ್ಳಲು ಅನುಮತಿ ನೀಡಬೇಕೆಂದು ದಿಪ್ಕೆ ಪೊಲೀಸರಲ್ಲಿ ಕೈಜೋಡಿಸಿ ವಿನಂತಿಸುತ್ತಿದ್ದರು. ಈ ಕುರಿತು ‘ಎಬಿಪಿ ನ್ಯೂಸ್’, ‘ದಿ ಹಿಂದೂ’ ಸೇರಿದಂತೆ ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದು, ಸ್ವತಃ ದಿಪ್ಕೆ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡು ಮಳೆಯಿಂದ ರಕ್ಷಿಸಿಕೊಳ್ಳಲು ಟೆಂಟ್ ಹಾಕಲು ಪೊಲೀಸರನ್ನು ಕೋರುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜೊತೆಗೆ, ಪ್ರತಿಭಟನಾಕಾರರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ಹರಿದಾಡುತ್ತಿರುವ ವದಂತಿಗಳನ್ನು ದೆಹಲಿ ಎಸಿಪಿ ಅವರ ಅಧಿಕೃತ ಎಕ್ಸ್ ಖಾತೆ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಮತ್ತು ನಾಗರಿಕರು ಪರಿಶೀಲಿಸದ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದೆ.

ಒಟ್ಟಾರೆಯಾಗಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಸುರಿಯುತ್ತಿದ್ದ ಮಳೆಯಿಂದ ಆಶ್ರಯ ಪಡೆಯಲು ಟೆಂಟ್ ಹಾಕಲು ಪೊಲೀಸರಲ್ಲಿ ಮನವಿ ಮಾಡುತ್ತಿದ್ದ ವೀಡಿಯೊವನ್ನು ತಿರುಚಿ, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಘಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights