ಅನರ್ಹರಿಗೆ ಅರ್ಹತೆ ಕೊಟ್ಟ ಮತದಾರರು : ಬಹುತೇಕ ಕ್ಷೇತ್ರಗಳಲ್ಲಿ ಅರಳಿದ ಕಮಲ

ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರಿ, ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರೆಂದು ಕರೆಸಿಕೊಂಡ ಬಹುತೇಕ ಮಾಜಿ ಶಾಸಕರೆಲ್ಲರಿಗೂ ಉಪಚುನಾವಣೆಯಲ್ಲಿ ಮತದಾರರು ಅರ್ಹತೆ ಪಟ್ಟ ಕೊಟ್ಟಿದ್ದಾರೆ.

ಹೌದು… ನಾವು ಯಾವ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಯಾರೂ ಕೂಡ ನಮ್ಮನ್ನ ಕರೆದಿಲ್ಲ, ಕರೆಸಿಕೊಂಡಿಲ್ಲಾ. ಯಾವುದೇ ಹಣದ ಆಮಿಷಕ್ಕೆ ನಾವುಗಳು ಒಳಗಾಗಿಲ್ಲ. ನಾವೂ ಯಾವ ಪಕ್ಷಕ್ಕೆ ಹೋಗಿಲ್ಲ. ಹೋಗುವುದು ಇಲ್ಲ. ನಾವು ಪಕ್ಷಕ್ಕೆ ನಿಷ್ಟರಾಗಿದ್ದೇವೆ. ನಮ್ಮ ನಮ್ಮ ಕ್ಷೇತ್ರಗಳು ಅಭಿವೃದ್ಧಿ ಕಾಣಲು ಹೆಚ್.ಡಿ ಕುಮಾರಸ್ವಾಮಿ ಅವರು ಬಿಡಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗಳಿಗೆ ದೋಸ್ತಿ ಸರ್ಕಾರ ಸ್ಪಂದಿಸಿಲ್ಲ. ದೋಸ್ತಿ ಸರ್ಕಾರದಿಂದ ನಮಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಅವರನ್ನು ನಾವು ಗೌರವಿಸುತ್ತೇವೆ. ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂತೆಲ್ಲಾ ಭಾಷಣ ಬಿಗಿದ ಅನರ್ಹ ಶಾಸಕರು ಇಂತೆಲ್ಲಾ ಕಾರಣಗಳನ್ನ ಒಡ್ಡಿ ಏಕಾಏಕಿ ರಾಜೀನಾಮೆ ನೀಡಿದರು.

ಹೀಗೆ ರಾಜೀನಾಮೆ ನೀಡಿದ ಬಳಿಕ ಎಲ್ಲಾ ಅನರ್ಹ ಶಾಸಕರು ಹೇಳಿದ್ದು ಒಂದೇ ಮಾತು ನಾವು ಪಕ್ಷೇತರರಾಗಿ ನಿಂತು ಗೆದ್ದು ತೋರಿಸುತ್ತೇವೆಂದು.

ಹೀಗೆ ಅನರ್ಹ ಶಾಸಕರು ರಾಜೀನಾಮೆ ಕೊಟ್ಟ ಬಳಿಕ ದೋಸ್ತಿ ಸರ್ಕಾರ ಬೀಳುವುದು ಮಾತ್ರವಲ್ಲ, ದೋಸ್ತಿಗಳಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪರಸ್ಪರ ಕಿತ್ತಾಟ ಮಾಡಿಕೊಂಡಿತು. ಆ ಕಿಡಿಗೆ ತುಪ್ಪ ಸುರಿದಂತೆ ಅನರ್ಹ ಶಾಸಕರು ಹಾಗೂ ಬಿಜೆಪಿ ನಾಯಕರು ಹೇಳಿಕೆಗಳನ್ನ ಕೊಡುತ್ತಾ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ಬಿರುಗಾಳಿಯನ್ನ ಸೃಷ್ಟಿ ಮಾಡಿಬಿಡ್ತು.

ಈ ಎಲ್ಲಾ ಬೆಳವಣಿಗಳನ್ನ ನಾವು ನೀವು ಮಾದ್ಯಮಗಳಲ್ಲಿ ಕಣ್ಣಾರೆ ನೋಡಿದ್ದೇವೆ. ಅನರ್ಹರ ಮಾತುಗಳನ್ನ ಕಿವಿಯಾರೇ ಕೇಳಿಸಿಕೊಂಡಿದ್ದೇವೆ. ಆದರೆ ಈಗೇನಾಯ್ತು…? ಪಕ್ಷಾಂತರಗೊಂಡ ಬಹುತೇಕ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯಾರ್ಥಿಗಳಾಗಿ ನಿಂತು ಬಹುಮತ ಪಡೆದುಕೊಂಡು ಅನರ್ಹತೆಯಿಂದ ಅರ್ಹತೆ ಪಡೆದುಕೊಳ್ಳುವಂತೆ ಜನ ಮಾಡಿದ್ದಾರೆ.

ಹಾಗಾದ್ರೆ ಬಿಜೆಪಿ ಆಪರೇಷನ್ ಕಮಲ ಮಾಡಿಲ್ವಾ..? ಹಾಗೊಂದು ವೇಳೆ ಮಾಡಿಲ್ಲಾ ಅಂತಾದರೆ ಅನರ್ಹ ಶಾಸಕರಿಗೆ ಪಕ್ಷ ನಿಷ್ಠೆ ಇದ್ದಿದ್ದೇ ಆಗಿದ್ದರೇ, ಕ್ಷೇತ್ರದ ಅಭಿವೃದ್ಧಿಗೆ ದೋಸ್ತಿ ಸರ್ಕಾರ ಸ್ಪಂದಿಸದ ಕಾರಣದಿಂದ ಅನರ್ಹ ಶಾಸಕರು ರಾಜೀನಾಮೆ ನೀಡಿದ್ದೇ ಆಗಿದ್ದರೆ, ಪಕ್ಷೇತರರಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು ಅಲ್ಲವೇ..? ಬಿಜೆಪಿ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು ಮನಸ್ಸು ಮಾಡಿದ್ದು ಯಾಕೆ..? ತಮಗೆ ಸಚಿವ ಸ್ಥಾನ ಸಿಗುವ ಆಸೆಯಿಂದಲೇ ಅಂತಾದರೆ ಸಚಿವ ಸ್ಥಾನಕ್ಕೆ ಆಸೆ ಪಟ್ಟರೆ ಕ್ಷೇತ್ರದ ಅಭಿವೃದ್ಧೀ ಮಾಡಿದಂತಾಗುತ್ತದೆಯೇ..? ಇದನ್ನ ಸ್ವಾರ್ಥ ರಾಜಕಾರಣ ಅನ್ನದೇ ಇನ್ನೇನು ಅನ್ನಲು ಸಾಧ್ಯ..?

ಅಲ್ಲದೇ ಕಳೆದ ತಿಂಗಳು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು ಆಪರೇಷನ್ ಕಮಲ ಹೇಗೆ ನಡೆಯಿತು ಎಂಬ ರಹಸ್ಯವನ್ನು ಬಹಿರಂಗಪಡಿಸಿದ್ದರು.
ಹೀಗಿರುವಾಗ ಬಿಜೆಪಿ ಆಪರೇಷನ್ ಕಮಲ ಮಾಡಿ ಹಣ ಹಾಗೂ ಅಧಿಕಾರದ ಆಸೆಯನ್ನು ಒಡ್ಡಿ ಶಾಸಕರನ್ನ ತನ್ನನ್ನ ಸೆಳೆದುಕೊಂಡು ದೋಸ್ತಿ ಸರ್ಕಾರವನ್ನು ಬೀಳಿಸಿದೆ ಅಂತಲೇ ತಾನೇ ಅರ್ಥ.

ನಮ್ಮ ಸಮಾಜದಲ್ಲಿ ಸಂಬಂಧಗಳು ನಿಂತುರುವುದು ನಂಬಿಕೆ ಮೇಲೆ. ಮಾತಿನ ಮೇಲೆ. ಕೊಟ್ಟ ಮಾತನ್ನ ಉಳಿಸಿಕೊಳ್ಳುವ ಭರವಸೆ ಮೇಲೆ. ಹೀಗಿರುವಾಗ ರಾಜಕೀಯದಲ್ಲಿ ರಾಜಕಾರಣಿಗಳು ಆಡುವ ಮಾತು, ಕೊಡುವ ಭರವಸೆ ನಂಬಿಕೆಗೆ ಅರ್ಹವಾಗಿವೆಯೇ..? ಇದನ್ನ ನಾವೆಲ್ಲರೂ ಯೋಚನೆ ಮಾಡಬೇಕು. ಈಗ ಆಡಿದ ಮಾತು ಕ್ಷಣ ಮಾತ್ರಕ್ಕೆ ಬದಲಾಯಿಸುವ ಜನ ಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿ ಮಾಡಲು ಎಷ್ಟರ ಮಟ್ಟಿಗೆ ಯೋಚಿಸಬಲ್ಲರು. ಹೀಗೆ ಆಪರೇಷನ್ ಕಮಲ ಮಾಡಿ, ಹಣ, ಅಧಿಕಾರದ ಆಸೆಯನ್ನ ಪಟ್ಟು ಪಕ್ಷದಿಂದ ಪಕ್ಷಕ್ಕೆ ಹಾರುವ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ..?

ನಮ್ಮ ರಾಜ್ಯದಲ್ಲಿ ಶಾಸಕರನ್ನ ಹಣ, ಅಧಿಕಾರದ ಆಸೆ ಒಡ್ಡಿ ಕೊಂಡುಕೊಳ್ಳುವಂತೆ ಬೇರೆ ಬೇರೆ ರಾಜ್ಯದಲ್ಲಿ ಶಾಸಕರನ್ನ ಹಣಕ್ಕೆ ಕೊಂಡುಕೊಂಡು ಹಣದಲ್ಲೇ ಸಾಮ್ರಾಜ್ಯವನ್ನ ಕಟ್ಟಿಕೊಳ್ಳುವಂತಾಧರೆ ನಮ್ಮ ದೇಶದ ಗತಿ ಏನು..? ನಮ್ಮ ದೇಶ ಸರ್ವೋನ್ನತ ಅಭಿವೃದ್ಧಿ ಕಾಣುವುದು ಯಾವಾಗ..? ಇದಕ್ಕೆ ಉತ್ತರ ದೇಶದ ಪ್ರತಿಯೊಬ್ಬ ಪ್ರಜೆಯೂ ಕಂಡುಕೊಳ್ಳಬೇಕು. ಹಣಕ್ಕೆ ಅಧಿಕಾರಕ್ಕೆ ಆಸೆ ಪಡುವ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಬೇಕು. ಆಗ ಮಾತ್ರ ನಾವು ಉತ್ತಮ ಪ್ರಜೆಯಾಗಲು ಸಾಧ್ಯ, ಜೊತೆಗೆ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸಾಧ್ಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights