ಸರ್ಕಾರ ಅಲ್ಪಸಂಖ್ಯಾತರ ಫೆಲೋಶಿಪ್‌ ಕಡಿತಗೊಳಿಸಿ ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡುತ್ತಿದೆ: SDPI

ಪಿಎಚ್‌ಡಿ ಮತ್ತು ಎಂ.ಫಿಲ್‌ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯಸರ್ಕಾರವು ವರ್ಷಕ್ಕೆ ರೂ. 3 ಲಕ್ಷ ಫೆಲೋಶಿಪ್ ನೀಡುತ್ತಿತ್ತು. ಈಗ ಕೋವಿಡ್‌ ಕಾರಣ ನೀಡಿ ಈ ಮೊತ್ತವನ್ನು ರೂ. 1 ಲಕ್ಷಕ್ಕೆ ಇಳಿಸಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್‌ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿರುವುದು‌ ಒಂದು ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಉದ್ದೇಶದಿಂದ ಹಾಗೂ ಇದು ತಾರತಮ್ಯದ ಪರಮಾವಧಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಚ್‌ಡಿ ಮಾಡುವವರಿಗೆ 3 ವರ್ಷ, ಎಂ.ಫಿಲ್‌ ಮಾಡುವವರಿಗೆ ಎರಡು ವರ್ಷ, ತಿಂಗಳಿಗೆ 25 ಸಾವಿರದಂತೆ‌ ಈ ಫೆಲೋಶಿಪ್ ಹಣವನ್ನು ಸರ್ಕಾರ ನೀಡುತ್ತಿತ್ತು. ಆದರೆ ಕಳೆದ ಹತ್ತು ತಿಂಗಳಿನಿಂದ ಈ ಮೊತ್ತವನ್ನೂ ಸಹ ಪಾವತಿಸಿಲ್ಲ. ಈಗ ಇದ್ದಕ್ಕಿದ್ದಂತೆ ಮೊತ್ತ ಕಡಿತಗೊಳಿಸುವುದಾಗಿ ಆದೇಶ ಮಾಡಿರುವುದು ಖೇದಕರ. ಬಿಜೆಪಿ ಸರ್ಕಾರ ಪ್ರಾರಂಭದಿಂದಲೂ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕಡಿತಗೊಳಿಸಿ ಕೊಂಡು ಬರುತ್ತಿದೆ. 2020–21ನೇ ಸಾಲಿನಲ್ಲಿಯೇ ಶೇ. 44 ರಷ್ಟು ಅನುದಾನ ಕಡಿತಗೊಳಿಸಿದೆ. ಮುಂದುವರಿದ ಭಾಗವಾಗಿ ಈಗ ಉನ್ನತ ಶಿಕ್ಷಣಕ್ಕೆ ನೀಡುವ ನೆರವನ್ನು ಕಡಿತ ಮಾಡಲಾಗಿದೆ.

ಕೋವಿಡ್ ಸಮಯದಲ್ಲಿ ಸರ್ಕಾರ ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ ಕಾರಣ ಖಜಾನೆ ಖಾಲಿಯಾಗಿದೆ. ಇದನ್ನು ಭರಿಸಲು ವಿದ್ಯಾರ್ಥಿಗಳ‌ ಭವಿಷ್ಯದ ಜೊತೆ ಚೆಲ್ಲಾಟ ಮಾಡಿ ಖಜಾನೆ ತುಂಬಿಸಲು ಹೊರಟಿರುವ ಸರ್ಕಾರದ ಈ‌ ನಡೆ ಒಪ್ಪುವಂತದಲ್ಲ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಯೋಜನೆಗಳಲ್ಲಿ ತಾರತಮ್ಯವೆಸಗುವುದನ್ನು ಎಸ್.ಡಿ.ಪಿ.ಐ ಪಕ್ಷವು ಸಹಿಸುವುದಿಲ್ಲ. ಸರ್ಕಾರ ಈ ಕೊಡಲೇ ಎಚ್ಚೆತ್ತು ಕೊಂಡು ಬಾಕಿ ಉಳಿದಿರುವ ಫೆಲೋಶಿಪ್ ಹಣ ನೀಡುವುದರ ಜೊತೆ ಎಂದಿನಂತೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರ್ಥಿಕ ಸಹಾಯ ಮುಂದುವರಿಸ ಬೇಕು ಎಂದು ಹನ್ನಾನ್ ರವರು ಆಗ್ರಹಿಸಿದ್ದಾರೆ.


ಇದನ್ನೂ ಓದಿ: 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ; ಅದೇ ನಮ್ಮ ಗುರಿ: ನಿಖಿಲ್ ಕುಮಾರಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights