ಸ್ವಾತಂತ್ರ್ಯ ಸಂಗ್ರಾಮದ ಚಿಲುಮೆ ಬಿರ್ಸಾಮುಂಡಾ: ಇತಿಹಾಸದಲ್ಲಿ ಕಾಣದ ಸ್ಪೂರ್ತಿಯ ಯಶೋಗಾಥೆ!

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 1830 ರಿಂದ1925 ರವರೆಗೆ ನಡೆದ ಆದಿವಾಸಿ ದಂಗೆಗಳು ಹಾಗೂ ಹೋರಾಟಗಳು ಇಂದಿಗೂ ಸ್ಫೂರ್ತಿದಾಯಕವಾಗಿದೆ. ಜಾರ್ಖಂಡ್ ಹಾಗೂ ಛತ್ತಿಸ್ಗಢ ರಾಜ್ಯದ ಛೋಟಾ ನಾಗಪುರ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಆದಿವಾಸಿಗಳ ಮೇಲೆ ನಡೆಯುತ್ತಿದ್ದ ನಿರಂತರ ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಹಾಗೂ ಜಮೀನ್ದಾರರಲ್ಲಿ ನಡುಕ ಉಂಟುಮಾಡಿದ ಹಾಗೂ ಈ ಭಾಗದ ಜನರಿಗೆ ಹಾಗೂ ಅರಣ್ಯವಾಸಿಗಳಿಗೆ ಇಂದಿಗೂ ಹೋರಾಡಲು ಸ್ಪೂರ್ತಿ ನೀಡಿದ ಆ ಯುವಕನೇ ಬಿರ್ಸಾಮುಂಡಾ.

ಇಂದು (ನವೆಂಬರ್ 15) ಬಿರ್ಸಾಮುಂಡಾ ಅವರ ಜನ್ಮದಿನ. ಆದಿವಾಸಿಗಳ ಕೆಲವು ಬುಡಕಟ್ಟುಗಳ ಕಾಡಿನ ಭಾಗವೊಂದನ್ನು ಕಡಿದು ಕೃಷಿಭೂಮಿಯಾಗಿ ಪರಿವರ್ತಿಸಿದ್ದರು‌. ಅದರಿಂದ ಬಂದ ಬೆಳೆಯನ್ನು ಎಲ್ಲರೂ ಹಂಚಿ ತಿನ್ನುವ ಸಮೂಹ ಒಡೆತನದ ಸಂಸ್ಕೃತಿ ಅವರದ್ದಾಗಿತ್ತು. ಕಾಡುಮೇಡಿನಿಂದ ಸಂಗ್ರಹಿಸಿದ್ದ ಗೆಡ್ಡೆ,ಗೆಣಸು, ನೈಸರ್ಗಿಕ ಉತ್ಪನ್ನಗಳಿಂದ ತಮ್ಮ ಜೀವನ ನಡೆಸುತ್ತಿದ್ದರು. ಅವರಿಗೆ ಕಾಡೇ ಸರ್ವಸ್ವವಾಗಿತ್ತು. ಬ್ರಿಟಿಷರ ಆಗಮನದ ಬಳಿಕ ಅವರ ಜೀವನ ಹಾಗೆಯೇ ಮುಂದುವರಿಯಲಿಲ್ಲ. ಲಾಭಮಾಡುವ ಉದ್ದೇಶದಿಂದಲೇ ಭಾರತಕ್ಕೆ ಆಗಮಿಸಿದ್ದ ಬ್ರಿಟಿಷರು, ಕೆಲವು ಆಸ್ಥಾನಗಳನ್ನು ಯುದ್ಧ ಮಾಡಿ ಗೆದ್ದುಕೊಂಡರೆ, ಇನ್ನು ಕೆಲವು ಆಸ್ಥಾನಗಳು ಶರಣಾಗತರಾಗಿ ಕಪ್ಪಕಾಣಿಕೆ ನೀಡಲಾರಂಭಿಸಿದರು. ಬ್ರಿಟಿಷರ ಪಾದಸೇವೆ ಮಾಡುವ ಜಮೀನ್ದಾರರು, ಪಾಳೇಗಾರರು,ಲೇವಾದೇವಿಗಾರರನ್ನು ಒಳಗೊಂಡ ಮಧ್ಯವರ್ತಿಗಳ ಮೂಲಕ ಬ್ರಿಟಿಷರು ಆದಿವಾಸಿಗಳ ನಡುವೆ ಸಂಪರ್ಕ ಬೆಳೆಸಿಕೊಂಡರು. ಎಲ್ಲಾ ಅವಕಾಶಗಳಿಂದಲೂ ಲಾಭ ಮಾಡುವ ದುರಾಸೆ ಹೊಂದಿದ್ದ ಬ್ರಿಟಿಷರು ಮಧ್ಯವರ್ತಿಗಳ ಮೂಲಕ ಆದಿವಾಸಿಗಳಿಗೆ ತೆರಿಗೆಯನ್ನು ಕಟ್ಟುವಂತೆ ಒತ್ತಾಯಿಸಿದರು. ಈ ಮೂಲಕ ಹೆಚ್ಚು, ಹೆಚ್ಚು ತೆರಿಗೆ ಸಂಗ್ರಹಿಸುವ ಯೋಜನೆ ಅವರದಾಗಿತ್ತು. ಮಧ್ಯವರ್ತಿಗಳು ಆದಿವಾಸಿಗಳ ಶೋಷಣೆಗೆ ಇಳಿದರು. ಆದಿವಾಸಿಗಳಿಗೆ ಭೂಮಿಯ ಹಕ್ಕುಗಳ ಕುರಿತು ಏನೂ ತಿಳಿದಿರಲಿಲ್ಲ. ಅವರ ಪ್ರಕಾರ ಅವರು ಹುಟ್ಟಿ ಬೆಳೆದ ಭೂಭಾಗ ಕಾಡುಮೇಡು ಅಲ್ಲಿಂದ ಸಂಗ್ರಹಿಸಿದ ಉತ್ಪನ್ನಗಳು ಗೆಡ್ಡೆ ಗೆಣಸು, ಹಣ್ಣುಗಳೆಲ್ಲವೂ ಅವರ ಸಮಾಜವಾಗಿತ್ತು .ಹಕ್ಕುಗಳು,ತೆರಿಗೆಗಳ ಕುರಿತು ಅವರಿಗೆ ಗಂಧಗಾಳಿಯೂ ಇರಲಿಲ್ಲ. ಅವರ ಪೂರ್ವಜರು ಬದುಕಿ ಬಾಳಿದ ಕಾಡು, ಮೇಡೆಲ್ಲವೂ ಅವರ ಬುಡಕಟ್ಟಿನ ಆಸ್ತಿಯಾಗಿತ್ತು.ಅವರ ಸಂಸ್ಕೃತಿಯೇ ಸಮೂಹ ಒಡೆತನ ಅವರು ಜೀವಿಸುತ್ತಿದ್ದ ಬುಡಕಟ್ಟಿನ ಮೇಲ್ವಿಚಾರಣೆಯಲ್ಲಿರುತ್ತಿತ್ತು. ವೈಯಕ್ತಿಕ ಹಕ್ಕಿನ ಕಾನೂನು ಜಾರಿಯಾದಾಗ, ಕೆಲವು ಜಮೀನ್ದಾರರು ಮದ್ಯಪಾನ ಹಾಗೂ ಬೇರೆಬೇರೆ ಆಮಿಷಗಳನ್ನು ಒಡ್ಡಿ ಆದಿವಾಸಿಗಳ ಹಕ್ಕುಗಳನ್ನು ಆಕ್ರಮಿಸಿಕೊಂಡರು. ಮಧ್ಯವರ್ತಿಗಳು ಬ್ರಿಟಿಷರಿಗೆ ಆದಿವಾಸಿಗಳ ಕುರಿತು ಅನಾಗರಿಕರು,ಅಂಜುಕುಳಿಗಳು ಎಂದು ಬಣ್ಣಿಸಿದ್ದರು. ಬ್ರಿಟಿಷರು ಆದಿವಾಸಿಗಳಿಗೆ ಕಾಡಿನ ಒಳಗೆ ಹೋಗಲೂ ಬಿಡಲಿಲ್ಲ.ಹೀಗಾಗಿ ತಲತಲಾಂತರಗಳಿಂದ ಅನ್ಯೋನ್ಯವಾಗಿ ನಡೆದುಕೊಂಡು ಬಂದಿದ್ದ ಆದಿವಾಸಿಗಳ ಜೀವನಕ್ರಮದಲ್ಲಿ ಬ್ರಿಟಿಷರ ದುರಾಸೆಯು ಪರೋಕ್ಷವಾಗಿ ಮಧ್ಯವರ್ತಿಗಳ ಮೂಲಕ ದಾಳಿ ಎಬ್ಬಿಸಿತ್ತು.

ಇಂದು 'ಬುಡಕಟ್ಟು ನಾಯಕ ಬಿರ್ಸಾ ಮುಂಡಾ' ಜನ್ಮದಿನ - #BirsaMunda ಟ್ವಿಟರ್‌ನಲ್ಲಿ ಟ್ರೆಂಡಿಂಗ್!

ಮಧ್ಯವರ್ತಿಗಳು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಏಜೆಂಟರಾದರು.ಅವರು ಜಮೀನ್ದಾರರಾಗಿ ಭೂಮಿಯನ್ನು ಕಿತ್ತುಕೊಂಡರೆ. ಅವರ ಮೇಲಿನ ತೆರಿಗೆಗಳನ್ನು ಸಾಲದ ಅಡಮಾನದ ಹೆಸರಿನಲ್ಲಿ ಫಲವತ್ತಾಗಿದ್ದ ಜಮೀನುಗಳನ್ನು ವ್ಯಾಪಾರಿಗಳು, ಲೇವಾದೇವಿಗಾರರು ಜಪ್ತಿ ಮಾಡಿಕೊಂಡರು. ಆದಿವಾಸಿ ಸಮಾಜವು ಮಹಿಳೆಯರನ್ನು ಗೌರವವಾಗಿ ಪರಿಗಣಿಸುತ್ತಿದ್ದರು. ಮಧ್ಯವರ್ತಿಗಳು ಆದಿವಾಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಹಂತಕ್ಕೂ ಹೋದರು. ಆದಿವಾಸಿಗಳ ಮೇಲೆ ಮಧ್ಯವರ್ತಿಗಳ ದೌರ್ಜನ್ಯ ಎಲ್ಲೆ ಮೀರಿತ್ತು. ಇದು ಆದಿವಾಸಿಗಳ ತಾಳ್ಮೆಗೆಡಿಸಿತ್ತು. ಮಧ್ಯವರ್ತಿಗಳ ವಿರುದ್ಧ ದಂಗೆಗೆ ಪ್ರೇರೇಪಿಸಿತು.ಆದಿವಾಸಿಗಳ ಸಮೂಹ ಒಡೆತನದ ಆಸ್ತಿಯ ಹಕ್ಕುಗಳ ಆದಿವಾಸಿಗಳ ಸಮೂಹ ಒಡೆತನದ ಆಸ್ತಿ ಹಕ್ಕುಗಳ ಮೇಲಿನ ದಾಳಿ,ಕ್ರಿಶ್ಚಿಯನ್ ಮಿಷನರಿಗಳ ಪ್ರಭಾವದಿಂದಾಗಿ ಪ್ರಾರಂಭವಾದ ಪ್ರತಿರೋಧದ ಇತಿಹಾಸವೇ ಬಿರ್ಸಾಮುಂಡಾ ಚಳುವಳಿಗೆ ಕಾರಣವಾಯಿತು.

ಇದನ್ನೂ ಓದಿ: ಬಿಹಾರ: NDAಯಿಂದ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಆಯ್ಕೆ!

ಈ ಸಾಮಾಜಿಕ ಪರಿಸ್ಥಿತಿಯ ಕಾಲಘಟ್ಟದಲ್ಲಿ 1872 ರಲ್ಲಿ ನವೆಂಬರ್ 15ರಂದು ಬಿರ್ಸಾನ ಜನನವಾಯಿತು. ಚಿಕ್ಕನಿಂದಲೂ ಎಲ್ಲಾ ಮಕ್ಕಳಂತೆಯೇ ಇಡೀ ಕಾಡು ಮೇಡು ಅಲೆಯುವುದು ಬಿರ್ಸಾ ಮುಂಡಾನ ಹವ್ಯಾಸವಾಗಿತ್ತು.ಮನೆಯಲ್ಲಿದ್ದ ಬಡತನದ ಕಾರಣದಿಂದಾಗಿ ಕೆಲವು ವರ್ಷ ಅವರ ಅಣ್ಣನ ಮನೆಯಲ್ಲಿ ಸಂಬಂಧಿಕರ ಮನೆಯಲ್ಲಿ ಅವರ ಬಾಲ್ಯದ ಜೀವನವನ್ನು ಕಳೆದರು.ಹಾಗಾಗಿ ವಿವಿಧ ಭಾಗಗಳ ಆದಿವಾಸಿಗಳ ಹಾಗೂ ಕ್ರೈಸ್ತ ಮಿಷನರಿಗಳ ಆಚಾರ-ವಿಚಾರಗಳಿಗೆ ಗಮನಿಸುತ್ತ ಬೆಳೆದನು. ಸರ್ದಾರರ ಚಳುವಳಿಯ ಪ್ರಭಾವವೂ ವ್ಯಾಪಕವಾಗಿತ್ತು.

ಬಿರ್ಸಾಮುಂಡಾನಿಗೆ ಶಿಕ್ಷಣ ನೀಡಿದರೆ ತಮ್ಮನ್ನೆಲ್ಲ ತೊರೆದು ಬ್ರಿಟಿಷರ ಸೇವಕನಾಗಬಹುದೆಂಬ ಆತಂಕದಿಂದ ಶಾಲೆಗೆ ಸೇರಿಸಲು ಆತನ ಪಾಲಕರು ಒಪ್ಪಿರಲಿಲ್ಲ. ಆದರೆ ಬಿರ್ಸಾಮುಂಡಾ ನಮ್ಮ ಹಕ್ಕುಗಳನ್ನು ಮರಳಿ ಪಡೆಯುವ ಉದ್ದೇಶಕ್ಕಾಗಿ ಓದುತ್ತೇನೆ ಎಂದು ಪಟ್ಟು ಹಿಡಿದು ಪಾಲಕರನ್ನು ಒಪ್ಪಿಸಿದ. ಸರ್ದಾರರ ಚಟುವಟಿಕೆಗಳ ಕೇಂದ್ರ ಸ್ಥಾನಕ್ಕೆ ಹತ್ತಿರದಲ್ಲಿದ್ದ ಒಂದು ಕ್ರೈಸ್ತ ಮಿಷನರಿಗಳ ಶಾಲೆಗೆ ಸೇರಿಸಿದರು. ಅಲ್ಲಿ ದೇವರನ್ನು ಆರಾಧಿಸುವ ಪದ್ಧತಿ ಕ್ರೈಸ್ತ ಮಿಷನರಿಗಳ ಆಚರಣೆಗಳು ಪ್ರವಚನಗಳನ್ನು ಕೂಲಂಕುಷವಾಗಿ ಗಮನಿಸುತ್ತಾ ಬೆಳೆದನು. ಚಿಕ್ಕಂದಿನಿಂದಲೇ ತಮ್ಮ ಹಕ್ಕುಗಳನ್ನು ಮರಳಿ ಪಡೆಯುವ ತುಡಿತದಲ್ಲಿದ್ದ ಬಿರ್ಸಾಮುಂಡಾಗೆ, ಕ್ರೈಸ್ತ ಧರ್ಮ ಪಾಲಿಸಿದರೆ ಕಳೆದುಕೊಂಡಿರುವ ಆದಿವಾಸಿಗಳ ಹಕ್ಕುಗಳು ಮರಳಿ ದೊರೆಯುತ್ತವೆ ಎಂಬ ಪ್ರಚಾರವನ್ನು ಮನಸಾರೆ ನಂಬಿದ್ದ ಸರ್ದಾರರ ಚಳುವಳಿಯು ಸುದ್ದಿ ಮಾಡಿದ್ದ ಸಮಯದಲ್ಲಿ,ಮಿಷನರಿಗಳು ಸರದಾರರನ್ನು ಮೋಸಗಾರರು ಎಂದಾಗ ಬಿರ್ಸಾಗೆ ಬಹಳ ಆಘಾತವಾಯಿತು. ಆತ ಅದನ್ನು ವಿರೋಧಿಸಿದ. ಸರ್ಕಾರದ ಆದೇಶದ ಆಧಾರದ ಮೇಲೆ ಆದಿವಾಸಿಗಳ ಮೂಲ ಹಕ್ಕಿರುವ ಭೂಭಾಗವನ್ನು ಅವರಿಗೆ ಬಿಟ್ಟುಕೊಡಬೇಕೆಂದು ಚರ್ಚಿನ ಮಿಷನರಿಗಳೊಂದಿಗೆ ವಾಗ್ವಾದಕ್ಕಿಳಿದ. ಆದ್ದರಿಂದ ಅವನನ್ನು ಶಾಲೆಯಿಂದ ಹೊರ ಹಾಕಿದರು. ಇಲ್ಲಿಗೆ ಆತನ ಅಧಿಕೃತ ಶಿಕ್ಷಣ ಕೊನೆಯಾಯಿತು. ಈ ಕಾರಣಕ್ಕಾಗಿ 40 ಜನರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದು ಆತನ ಜೀವನದ ಪ್ರಮುಖ ತಿರುವಾಗಿತ್ತು. ಎಲ್ಲಾ ಬ್ರಿಟಿಷರು ಮತ್ತು ಮಿಷನರಿಗಳು ಒಂದೇ ಟೋಪಿಯನ್ನು ಹಾಕುತ್ತಾರೆ ಎಂದು ಉದ್ಗರಿಸಿದ. ಸರದಾರರ ಚಳುವಳಿಯ ವಿರುದ್ಧವಾಗಿದ್ದ ಕಾರಣದಿಂದಾಗಿ, 1890ರಲ್ಲಿ ಬಿರ್ಸಾ ಮತ್ತು ಆತನ ಕುಟುಂಬವು ಜರ್ಮನ್‌‌ ಮಿಷನ್ನಿನ ಸದಸ್ಯತ್ವವನ್ನು ರದ್ದುಗೊಳಿಸಿದರು.

Image

ಈ ಮಧ್ಯದಲ್ಲಿ ಬ್ರಿಟಿಷರು ಆದಿವಾಸಿಗಳಿಗೆ ಅರಣ್ಯದೊಳಗೆ ಪ್ರವೇಶಕ್ಕೂ ನಿರ್ಬಂಧ ಹೇರಿದ್ದು ಅವರಿಗೆ ಬರಸಿಡಿಲಿನಂತಾಯಿತು. 1882ರ ಭಾರತದ ಅರಣ್ಯಗಳ ಕಾಯ್ದೆ 7 ರ ಅಡಿಯಲ್ಲಿ ಹಲವಾರು ರಕ್ಷಿತಾರಣ್ಯಗಳನ್ನು ಮಾಡಲಾಯಿತು.ಆದಿವಾಸಿಗಳಿಗೆ ಅರಣ್ಯದ ಒಳಗೆ ಹೋಗಲು ಅವಕಾಶ ನೀಡಲಿಲ್ಲ‌. ಆಗ ಬಡಗಾವ್ ನಲ್ಲಿದ್ದ ಬಿರ್ಸಾ 20 ಕಿಲೋಮೀಟರ್ ದೂರದಲ್ಲಿದ್ದ ಪುರಾಹತ್ ನಲ್ಲಿ ನಡೆಯುತ್ತಿದ್ದ ಆದಿವಾಸಿಗಳ ಹೋರಾಟದಲ್ಲಿ ಭಾಗವಹಿಸಿದ ಹಲವಾರು ಚಳುವಳಿಗಳಲ್ಲಿ ನಾಯಕತ್ವ ನೀಡಿದ. ಉದ್ಯೋಗ ಅರಸುತ್ತಾ ಹಲವಾರು ಭಾಗಗಳಿಗೆ ಅಲೆದಾಡಿದಾಗ ಕೃಷಿ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಸಮಸ್ಯೆಯ ಭೀಕರತೆಯನ್ನು ಅರಿತ.

ಇದನ್ನೂ ಓದಿ: BJPಯ ಫ್ಯಾಸಿಸ್ಟ್‌ ಧೋರಣೆಯನ್ನು ಹಿಮ್ಮೆಟ್ಟಲ್ಲು ಸಿದ್ದರಾಗಿ: ಸಿಪಿಐ(ಎಂಎಲ್) ಕರೆ

ತಮ್ಮ ಮನೆಯೆದುರು ಪ್ರಾರಂಭ ಮಾಡಿದ ಬಿರ್ಸಾಮುಂಡಾನ ಪ್ರಚಾರ ಕಾರ್ಯ ಕ್ರಮೇಣವಾಗಿ ಸಹಸ್ರಾರು ಜನ ಸೇರಿದರು. ಇದರಿಂದಾಗಿ ಕೃಷಿ ಕೂಲಿ ಮಾಡುತ್ತಿದ್ದ ಆದಿವಾಸಿಗಳು ಸಹ ಬಿರ್ಸಾಮುಂಡಾನ ವಿಚಾರವನ್ನು ತಿಳಿಯಲು ತಂಡೋಪತಂಡವಾಗಿ ಬರಲು ಪ್ರಾರಂಭಿಸಿದರು. ಇನ್ನು ಮುಂದೆ ಬರುವುದು ಬಿರಸಾ ರಾಜ್ಯ ಅಲ್ಲಿ ಯಾವುದೇ ತೆರಿಗೆಗಳಿರುವುದಿಲ್ಲ. ಆದ್ದರಿಂದ ಯಾವುದೇ ಸರ್ಕಾರಕ್ಕೂ ತಲೆ ಬಾಗಬೇಕಾಗಿಲ್ಲ ಎಂದು ಪ್ರಚಾರ ಪ್ರಾರಂಭವಾಯಿತು.ಸರ್ಕಾರದ ಅಧಿಕಾರವು ಮುಗಿದಿದೆ ಎಂಬ ಪ್ರಚಾರವು ಸರ್ಕಾರದ ಕಿವಿ ಮುಟ್ಟಿತ್ತು. ಬಿರ್ಸಾನನ್ನು ಭೇಟಿ ಮಾಡಲು ಬರುವ ಜನರ ಸಂಖ್ಯೆ ಹೆಚ್ಚಾದಂತೆ ಅವರಿಗೆ ಉಳಿಯಲು 50 ರಿಂದ 60 ಚಿಕ್ಕ ಚಿಕ್ಕ ಮನೆಗಳ ವ್ಯವಸ್ಥೆಯು ಅಲ್ಲಿತ್ತು.ಇತ್ತಕಡೆ ಬಿರ್ಸಾಮುಂಡಾ ಹೊಸ ರಾಜನ ಆಗಮನವಾಗುತ್ತಿದೆ ಸರ್ಕಾರದ ಯಾವುದೇ ನೋಟೀಸುಗಳು ಇಲ್ಲಿ ನಡೆಯುವುದಿಲ್ಲ ಎಂದು ,1895 ಆಗಸ್ಟ್ 24 ರ ರಾತ್ರಿ ಒಂದು ಬೃಹತ್ ಧಂಗೆಗೆ ಕರೆ ನೀಡಿದರು. ಬರ ಬರುತ್ತಾ ಸರ್ಕಾರದ ರಾಜ್ಯಭಾರ ಮುಗಿದಿದೆ ಅವರ ಸೇವಕರನ್ನು ಸಾಯಿಸಿ ಅವರ ಅಧಿಕಾರವನ್ನು ನದಿಯಲ್ಲಿ ಮುಳುಗಿಸಿ ಎಂಬ ಉದ್ಘೋಷದೊಂದಿಗೆ ಅವರನ್ನು ಬಂಧಿಸಲು ಬಂದಿದ್ದ ಪೊಲೀಸ್ ಅಧಿಕಾರಿಗಳನ್ನು ಬೆದರಿಸಿದ್ದ ಕಾಲ್ಕೀಳುವಂತೆ ಮಾಡಿದರು.

ಕಾನೂನಿನ ವಿರುದ್ಧವಾಗಿ ಜನಸಾಮಾನ್ಯರನ್ನು ಸೇರಿ ಸುತ್ತಿರುವ ಆರೋಪದ ಮೇಲೆ ಬಿರ್ಸಾಮುಂಡಾನನ್ನು ಬಂಧಿಸುವ ಆದೇಶದ ಆಧಾರದ ಮೇಲೆ 1895 ನವೆಂಬರ್ 19ರಂದು ರಾತ್ರೋರಾತ್ರಿ ಮಲಗಿದ್ದ ಬಿರ್ಸಾನನ್ನು ಬಂಧಿಸಲು ಅನಿರೀಕ್ಷಿತವಾಗಿ ದಾಳಿಮಾಡಿ ಬಂಧಿಸಿದರು.ಆಗ ಬಿರ್ಸಾಗೆ 22 ವಯಸ್ಸು. ವಿಚಾರಣೆ ನಡೆಸಿ ಎರಡು ವರ್ಷಗಳ ಕಾಲ ಕಠಿಣ ಸಜೆಯನ್ನು ಘೋಷಿಸಿದರು.

ಬಿರ್ಸಾ ಮುಂಡನ ಬಿಡುಗಡೆಯ ನಂತರ ಆತನ ಅನುಯಾಯಿಗಳು ಸಂತೋಷಪಟ್ಟು ವಿಜ್ರಂಬನೆಯಿಂದ ಆತನನ್ನು ಸ್ವಾಗತಿಸಿದರು. ಕಳೆದು ಹೋದ ತಮ್ಮ ಹಕ್ಕುಗಳನ್ನು ಮತ್ತು ಅವರ ಶತ್ರುಗಳನ್ನು ತೊಡೆದುಹಾಕಲು ಸಂಘಟನೆಯನ್ನು ಬಲಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಬಿರ್ಸಾ ಜೈಲಿನಲ್ಲಿದ್ದ ಸಂದರ್ಭದಲ್ಲಿ ರಾಂಚಿ ಜಿಲ್ಲೆಯಲ್ಲಿ ಬರದಿಂದಾಗಿ ಬಹಳಷ್ಟು ಮುಂಡ ಬುಡಕಟ್ಟಿನ ಜನರು ವಲಸೆ ಹೋಗಿದ್ದರು. ಜೈಲಿನಿಂದ ಹೊರಬಂದ ನಂತರ ಬರಗಾಲ ಮತ್ತು ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿ ಹೋಗಿದ್ದ ಜನರಿಗೆ ಆತ ಕಲಿತ ಆಧುನಿಕ ಶಿಕ್ಷಣದ ಆಧಾರದ ಮೇಲೆ ಸ್ವಚ್ಛವಾಗಿರುವಂತೆ ಜನರಿಗೆ ತಿಳಿಸಿದ. ರೋಗಿಗಳನ್ನು ಆರೋಗ್ಯವಂತ ರಿಂದ ಬೇರ್ಪಡಿಸಿ ಶುಭ್ರವಾಗಿಸಿ ಉಪಚರಿಸಿದ. ಹಾಗಾಗಿ ಬಹುಬೇಗ ಈ ರೋಗಗಳಿಂದ ಗುಣಮುಖರಾದ ಜನರು ಬಿರ್ಸಾಮುಂಡಾನಲ್ಲಿ ತಮ್ಮ ದೇವರನ್ನು ಕಾಣಲು ಪ್ರಾರಂಭಿಸಿದರು. ಅದು ಅವನಿಗೆ ಚಮತ್ಕಾರವೆನಿಸಿತು. ಬಿರ್ಸಾಮುಂಡ ಬೇರೆ ಬೇರೆ ಊರುಗಳಿಗೆ ಹೋಗಿ ಅವರಿಗೆ ಉಪಚರಿಸಿದ ಜೊತೆಗೆ ವಿಷಯಗಳನ್ನು ಹೇಳಲು ಪ್ರಾರಂಭಿಸಿದ. ನಮಗೀಗ ಸತ್ಯಯುಗ ಬಂದಿದೆ ನಮ್ಮ ಪೂರ್ವಜರು ಹಕ್ಕುಗಳನ್ನು ಮರಳಿ ಪಡೆಯುವ ಕಾಲ ಬಂದಿದೆ. ರಾಜರು ಮತ್ತು ಜಮೀನ್ದಾರರು ನಮ್ಮನ್ನು ಶೋಷಿಸಿ ಬಲವಂತದಿಂದ ಬಿಟ್ಟಿ ಕೂಲಿ ಆಳುಗಳನ್ನಾಗಿಸಿದ್ದಾರೆ ಎಂದು ಪ್ರಚಾರ ಮಾಡಿದನು. ಆತ ಹಾಗೂ ಆತನ ಅನುಯಾಯಿಗಳ ತಂಡ ಬುಡಕಟ್ಟುಗಳನ್ನು ಸಂಪರ್ಕಿಸಿ ಅಲ್ಲಲ್ಲಿ ಚಿಕ್ಕ ಚಿಕ್ಕ ಸಭೆಗಳನ್ನು ಮಾಡುತ್ತಾ ಜನರನ್ನು ಎಚ್ಚರಿಸಲು ಪ್ರಾರಂಭಿಸಿದರು. ಉಲ್ಗುಲಾಲ್ ದಂಗೆಯ ಕುದಿಯುತ್ತಿದ್ದ ಶಾಖಕ್ಕೆ ಆದಿವಾಸಿಗಳನ್ನು ಶೋಷಿಸಿದ ಎಲ್ಲಾ ಶೋಷಕರು, ಮಧ್ಯವರ್ತಿಗಳು, ಜಮೀನ್ದಾರರು ಮತ್ತು ಸರಕಾರದ ಅಧಿಕಾರಿಗಳು ಎಲ್ಲರೂ ಅವರ ವಿರೋಧಿಗಳ ಪಟ್ಟಿಯಲ್ಲಿ ದಾಖಲಾಗಿದ್ದರು. ‘ಕಾಟ್ ಮಾರ್ ಮಾರ್ ಕೆ ರಹೆಂಗೆ ‘(ಕತ್ತರಿಸಿ ಹೊಡೆದೆ ತೀರುತ್ತೇವೆ)ಎಂಬ ಉದ್ಘೋಷದೊಂದಿಗೆ ಮುಂಡಾನ ಅನುಯಾಯಿಗಳು ದಂಗೆ ತಯಾರಾದರು. ಬ್ರಿಟಿಷರ ಪ್ರತಿಕೃತಿಗೆ ಬಾಣಬಿಟ್ಟು ಬ್ರಿಟಿಷರ ಆಳ್ವಿಕೆ ಕೊನೆಯಾಯಿತು ಎಂದು ಸೂಚಿಸುವಂತೆ ಅದರ ಸುತ್ತಾ ಕುಣಿದು ಅದಕ್ಕೆ ಬೆಂಕಿ ಹಚ್ಚಿ ತಮ್ಮನ್ನು ಅಣಿಗೊಳಿಸಿದರು. ದಂಗೆಗೆ ಬೇಕಾಗುವ ಕೊಡಲಿಗಳು, ಬಿಲ್ಲುಬಾಣ, ಖಡ್ಗಕತ್ತಿ ಮುಂತಾದ ಆಯುಧಗಳನ್ನು ತಯಾರಿ ಮಾಡಿಕೊಂಡರು. ಇನ್ನೊಂದೆಡೆ ಸರ್ಕಾರವು ಈ ದಂಗೆಯನ್ನು ಶಮನಗೊಳಿಸಲು ಸಜ್ಜಾಗುತ್ತಿತ್ತು. ಆದಿವಾಸಿಗಳ ಮೂಲ ಸಂಸ್ಕೃತಿ ಹಾಗೂ ಹಕ್ಕುಗಳಿಗಾಗಿ ಜೀವ ಕೊಡಲು ಹೆದರದ ತಂಡ ಬೆಳೆಯುತ್ತಾ ಹೋಯಿತು. ಆದಿವಾಸಿಗಳ ದಂಗೆಯ ಸುದ್ದಿ ಎಲ್ಲೆಡೆಗೆ ವ್ಯಾಪಿಸಲು ಪ್ರಾರಂಭಿಸಿತು.

Image

ಒಂದು ಕಡೆ ದಶಕಗಳ ದಮನ ದಿಂದಾಗಿ ಸಿಡಿದೆದ್ದಿದ್ದ ಬಿರಸಾ ಮುಂಡಾ ನೇತೃತ್ವದ ಆದಿವಾಸಿಗಳು ಇನ್ನೊಂದೆಡೆ ಬ್ರಿಟಿಷರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಆದಿವಾಸಿಗಳಿಗೆ ನೀಡುತ್ತಿದ್ದ ಅತೀವವಾದ ಶೋಷಣೆಯಿಂದಾಗಿ ಸಿಡಿದೆದ್ದಿದ್ದರು ಬ್ರಿಟಿಷರ ಗುಂಡುಗಳ ಮುಂದೆ ಅವರ ಕೊಡಲಿ ಬಿಲ್ಲುಗಳು ಸಮನಾಗಿರಲಿಲ್ಲ ಆದರೆ ಅನ್ಯಾಯದ ವಿರುದ್ಧ ಹಿಡಿದು ನಿಂತ ಆದಿವಾಸಿಗಳಿಗೆ ಇದಾವುದು ಲೆಕ್ಕಕ್ಕಿಲ್ಲ ದಂಗೆಗೆ ಜಾಗವನ್ನು ಅವರು ನಾಲ್ಕು ಭಾಗಗಳಲ್ಲಿ ಗುಡ್ಡಗಳಿಂದ ಆವೃತವಾದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು ಹೋರಾಟದ ವಿಶೇಷವೆಂದರೆ ಬ್ರಿಟಿಷ್‌ ಸೈನ್ಯವನ್ನು ಎದುರಿಸಲು ಹೆಣ್ಣುಮಕ್ಕಳು ಸಣ್ಣದಾಗಿದ್ದರೂ. ತಮ್ಮ ಮೇಲಾದ ಸತತವಾದ ದಾಳಿಗಳು ನಿರ್ನಾಮವಾದ ಜೀವನಪದ್ಧತಿಯನ್ನು ಉಳಿಸಲು ಸಾವು-ಬದುಕಿನ ಹೋರಾಟಕ್ಕೆ ಕೆಚ್ಚೆದೆಯ ನಿಂತಿದ್ದರು. ಜಮೀನ್ದಾರರು, ಮಧ್ಯವರ್ತಿಗಳು ಕೊಂದರು. ಇತ್ತಕಡೆ ಸರ್ಕಾರ ಒಂದು ಕುತಂತ್ರವನ್ನು ಹೂಡಿತು. ಬಿರ್ಸಾಮುಂಡನನ್ನು ಹಿಡಿದು ಕೊಟ್ಟರೆ ಐನೂರು ರೂಪಾಯಿಗಳ ಬಹುಮಾನ ಹಾಗೂ ಆತನ 4 ಜನ ಸಹಚರರನ್ನು ಹಿಡಿದುಕೊಟ್ಟರು ನೂರು ರೂಪಾಯಿಗಳ ಬಹುಮಾನವನ್ನು ಆದಿವಾಸಿಗಳ ಭಾಗದಲ್ಲಿ ಪ್ರಚಾರ ಮಾಡಿತ್ತು. ಬಿರ್ಸಾ ಮುಂಡಾನ ನೂರಾರು ಅನುಯಾಯಿಗಳನ್ನು ಹಳ್ಳಿಹಳ್ಳಿಗಳಿಗೆ ಹೋಗಿ ಬಂಧಿಸಲಾಯಿತು.

ಬಹುಮಾನದ ಆಸೆಗೆ ಬಿದ್ದು ಜಮೀನ್ದಾರನೊಬ್ಬನ ಸೂಚನೆಯ ಮೇರೆಗೆ ಬಿರ್ಸಾಮುಂಡಾ ಮಲಗಿದ್ದ ಮನೆಯನ್ನು ಪೊಲೀಸರು ಸುತ್ತುವರಿದರು. ಬಿರ್ಸಾಮುಂಡನನ್ನು ಬಂಧಿಸಲು ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಿರ್ಸಾಮುಂಡನನ್ನು ರಕ್ಷಿಸಲು ಪೊಲೀಸರ ವಿರುದ್ಧ ಸೆಣಸಾಟಕ್ಕೆ ನಿಂತವರಲ್ಲಿ ಮೂರು ಜನ ಹೆಣ್ಣುಮಕ್ಕಳಿದ್ದರು. ಬಿರ್ಸಾಮುಂಡ ಮಾಡಿದ ಪ್ರೇರೇಪಣೆ ಗಂಡು ಹೆಣ್ಣೆನ್ನದೆ ಪ್ರತಿಯೊಬ್ಬರೂ ತಮ್ಮ ಬದುಕಿನ ಮೇಲಾದ ದಾಳಿಯ ವಿರುದ್ಧ ಶಾಶ್ವತ ಪರಿಹಾರಕ್ಕಾಗಿ ಜೀವ ಕೊಡಲು ಹೇಸದೆ ಕೆಚ್ಚೆದೆಯಿಂದ ಹೋರಾಡಿದ್ದರು. ಬಿರ್ಸಾ ಚಳುವಳಿಯ ಇನ್ನೊಂದು ಬಹುಮುಖ್ಯ ವಿಶೇಷವೇನೆಂದರೆ ಲಿಂಡಾ ಓರನ್ ಹಾಗೂ ಮಾಯಾ ಓರನ್ ಎಂಬ ಇಬ್ಬರು ನಾಯಕಿಯರು ಬೇರೆ ಬೇರೆ ಕಾಲಘಟ್ಟದಲ್ಲಿ ಈ ಚಳುವಳಿಗೆ ನಾಯಕತ್ವ ನೀಡಿದರು. ಮಲಗಿದ್ದ ಬಿರ್ಸಾಮುಂಡಾನನ್ನು ಕ್ಷಣಾರ್ಧದಲ್ಲಿ ಸೆರೆಹಿಡಿದಿದ್ದರು. ಆತನಿಗೆ ಕೋಳಗಳನ್ನು ತೋರಿಸಿದರು. ಆತನ ಅನುಯಾಯಿಗಳಿಗೆ ವಿಷಯ ಮುಟ್ಟುವಷ್ಟರಲ್ಲಿ ಬ್ರಿಟಿಷರ ದೊಡ್ಡ ಸೈನ್ಯವು ಅವನನ್ನು ಸುತ್ತುವರೆದಿತ್ತು. ಹತ್ತಿರದಲ್ಲೇ ಇದ್ದರೆ ಬಿರ್ಸಾಮುಂಡನ ಅನುಯಾಯಿಗಳ ದಾಳಿ ಮಾಡಬಹುದೆಂದು ಬ್ರಿಟಿಷರು, ಆತನನ್ನು ಬಂಧಿಸಿದ ಕೂಡಲೇ ಹತ್ತಿರದ ಚಾಯಬಾಸಾದ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುವ ಬದಲಿಗೆ ತುಂಬಾ ದೂರದಲ್ಲಿದ್ದರುವ ರಾಂಚಿಗೆ ಕರೆದೊಯ್ದಿದ್ದರು. ಬ್ರಿಟಿಷರ ವಿರುದ್ಧ ಸಂಘಟಿತ ಹೋರಾಟ ಗಳಲ್ಲಿ ಪ್ರಮುಖ ಇತಿಹಾಸ ಬರೆದಿದ್ದು ಬಿರ್ಸಾಮುಂಡ ದಂಗೆ. ಪೊಲೀಸರು 300 ಚದರ ಮೈಲಿಯಷ್ಟು ವಿಸ್ತಾರದ ಭಾಗದಲ್ಲಿ ತುಕಡಿಗಳನ್ನು ಕಳುಹಿಸಿದ್ದರು.

ರಾಜರು,ಜಮೀನ್ದಾರರು ಆದಿಯಾಗಿ ದೊಡ್ಡ ದೊಡ್ಡ ಅಧಿಕಾರಿಗಳು ಬ್ರಿಟಿಷರನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿರಲಿಲ್ಲ. 482 ಜನರನ್ನು ಬಂಧಿಸಿದ್ದ ಬ್ರಿಟಿಷ್ ಸರಕಾರವು ಬಿರ್ಸಾಮುಂಡಾರನ್ನು ಪ್ರತ್ಯೇಕ ಸೆಲ್ ನಲ್ಲಿಇರಿಸಿತು. ಆದರೆ ಸಂಶಯಾಸ್ಪದವಾಗಿ ಬ್ರಿಟಿಷ್ ಸರ್ಕಾರದ ವರದಿಯ ಪ್ರಕಾರ ಕಾಲಾರಾದಿಂದ ಬಿರ್ಸಾ ಮುಂಡಾ ಅಸುನೀಗಿದ್ದಾರೆಂದು ಸುದ್ದಿ ನೀಡಿತು. ಪ್ರತ್ಯೇಕ ಸೆಲ್ ನಲ್ಲಿ ಇದ್ದಾಗ ಊಟದ ವ್ಯವಸ್ಥೆಯೂ ಸಹ ಪ್ರತ್ಯೇಕವಾಗಿ ಅವರಿಗೆ ಎಲ್ಲಿಗೆ ನೀಡಲಾಗುತ್ತಿತ್ತು. ಬಿರ್ಸಾಮುಂಡಾರವರ ಜೊತೆಗೆ ಬಂಧಿತರಾಗಿದ್ದ ಸುಮಾರು 80ಕ್ಕೂ ಹೆಚ್ಚು ಆದಿವಾಸಿಗಳಿಗೆ ಆರೋಗ್ಯದ ಸಮಸ್ಯೆ ಆಗದಿದ್ದಾಗ, ಬಿರ್ಸಾಮುಂಡರು ಮಾತ್ರ ಅನಾರೋಗ್ಯದಿಂದ ಸಾವಿಗೀಡಾದ್ದು ಕುತಂತ್ರವೆಂದು ಬಿರ್ಸಾಮುಂಡಾ ಅನುಯಾಯಿಗಳು ನಂಬಿದ್ದರು.ಅಂತಿಮವಾಗಿ ಈ ವ್ಯಾಪಕವಾದ ಹೋರಾಟದ ಪರಿಣಾಮವಾಗಿ, #1900ರಲ್ಲಿ #ತೆನನ್ಸಿ #ಆಕ್ಟ್ #ಜಾರಿಯಾಯಿತು. ಅದರ ಪ್ರಕಾರ ಆದಿವಾಸಿಗಳ ಭೂಮಿಯನ್ನು ಆದಿವಾಸಿ ಗಳಲ್ಲದೆ ಉಳಿದವರು ಖರೀದಿಸುವಂತಿಲ್ಲ ಎಂಬ ನಿಯಮ ಜಾರಿಗೆ ಬಂತು.‌ ಆದಿವಾಸಿಗಳಿಗೆ ಹಕ್ಕುಗಳನ್ನು ಮತ್ತು ಅರಣ್ಯದೊಳಗೆ ಹೋಗಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಲ್ಲಿ ನಿಯಮಗಳನ್ನು ರೂಪಿಸಿದರು. ಆದಿವಾಸಿಗಳನ್ನು ಮನುಷ್ಯರೆಂದೇ ಪರಿಗಣಿಸದೆ ಯಾವ ಹಕ್ಕುಗಳನ್ನು ನೀಡಿದೆ ಉಚಿತವಾಗಿ ದುಡಿಸಿಕೊಂಡು ಶೋಷಿಸುತ್ತಿದ್ದ ವರಿಗೆ ಹೊಸ ನೀತಿಗಳು ಮುಳುವಾದವು. ಈ ಹೋರಾಟದ ಮೂಲಕ ಆದಿವಾಸಿಗಳ ನಡುವೆ ಆತ್ಮಸ್ಥೈರ್ಯ ಹಬ್ಬಿಸಿ ಒಗ್ಗಟ್ಟಾಗಿ ಸರ್ಕಾರವನ್ನು ಬಡಿದೆಬ್ಬಿಸಿ ಚುರುಕು ಮುಟ್ಟಿಸಿತು.ಬಿರ್ಸಾ ಮುಂಡಾ ಅಂದುಕೊಂಡಂತೆ ಗೆಲ್ಲಲು ಸಾಧ್ಯವಾಗದಿದ್ದರೂ ಆದಿವಾಸಿಗಳಿಗೆ ಅವರದೇ ಆದ ಒಂದು ಸ್ಥಾನಮಾನ ಕೊಡಿಸುವಲ್ಲಿ ಚಳುವಳಿ ಯಶಸ್ವಿಯಾಯಿತು.

ಕೃಪೆ: ಯೂತ್‌ ಕಾರ್ಡ್


ಇದನ್ನೂ ಓದಿ: ‌ ಬಿಹಾರ: ಕೇವಲ 43 ಸ್ಥಾನಗಳನ್ನು ಗೆದ್ದಿರುವವರು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ಆರ್‌ಜೆಡಿ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights