ಬಿಹಾರ: NDAಯಿಂದ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಆಯ್ಕೆ!
ಬಿಹಾರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಗತ್ಯ ಬಹುಮತ ಪಡೆದು ಜಯಗಳಿಸಿದ್ದು, ಎನ್‌ಡಿಎ ಮೈತ್ರಿಕೂಟದಿಂದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಆಯ್ಕೆಯಾಗಿದೆ.
ಇಂದು ನಡೆದ ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಆಯ್ಕೆಯ ಸಭೆಯಲ್ಲಿ, ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ನಿರ್ಧರಿಸಲಾಗಿದೆ.
ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಚುನಾವಣೆಗು ಮುನ್ನವೇ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುತ್ತಿದ್ದು, ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನಿತೀಶ್ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ, ಚುನಾವಣೆಯಲ್ಲಿ ಬಿಜೆಪಿಗಿಂತಲೂ ಜೆಡಿಯು ಕಡಿಮೆ ಕ್ಷೇತ್ರಗಳನ್ನು ಗೆದಿದ್ದು, ಆ ಕಾರಣದಿಂದಾಗಿ ಸಿಎಂ ಯಾರು ಎಂಬ ಚರ್ಚೆ ಶುರುವಾಗಿತ್ತು.
ಇದನ್ನೂ ಓದಿ: ಬಿಹಾರ ವಿಧಾನಸಭೆಯಲ್ಲಿ 25% ಶಾಸಕರು ಮೇಲ್ವರ್ಗದವರು; ಬಿಜೆಪಿ ಶಾಸಕರೇ ಹೆಚ್ಚು!
ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 108 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 43 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ, ಬಿಜೆಪಿಗೆ ಹೆಚ್ಚಿನ ಮನ್ನಣೆ ನೀಡಬೇಕೆಂದು ಮೈತ್ರಿಯೊಳಗಿನ ಚರ್ಚೆಗೆ ಕಾರಣವಾಗಿತ್ತು.
ಬಿಜೆಪಿ ನಾಯಕರು, ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿದ್ದ ಕಾರಣಕ್ಕೆ ಅನಿವಾರ್ಯವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರು. ಆನಂತರದಲ್ಲಿ ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಬರಬೇಕೆಂದೇ ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈಗ ತಮ್ಮದೇ ದೊಡ್ಡ ಪಕ್ಷ ಹಾಗಾಗಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಫಲಿತಾಂಶದ ಜೊತೆಗೆ ಈ ಬೆಳವಣಿಗೆಗಳಿಂದ ಬೇಸತ್ತಿರುವ ನಿತೀಶ್ ಕುಮಾರ್ ‘ಮುಖ್ಯಮಂತ್ರಿ ಆಗಲು ಮನಸ್ಸು ಒಪ್ಪುತ್ತಿಲ್ಲ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ, ಇಂದು ನಡೆದ ಸಭೆಯಲ್ಲಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ನಿರ್ಧರಿಸಲಾಗಿದೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: BJPಯ ಫ್ಯಾಸಿಸ್ಟ್ ಧೋರಣೆಯನ್ನು ಹಿಮ್ಮೆಟ್ಟಲ್ಲು ಸಿದ್ದರಾಗಿ: ಸಿಪಿಐ(ಎಂಎಲ್) ಕರೆ