ರೈತ ಮುಖಂಡರ ವಿರುದ್ಧ ಲುಕ್‌ಔಟ್‌ ಸುತ್ತೋಲೆ ಹೊರಡಿಸಲು ಅಮಿತ್‌ ಶಾ ಆದೇಶ!

ಗಣರಾಜ್ಯೋತ್ಸವದಂದು ಟ್ರಾಕ್ಟರ್ ಪೆರೇಡ್ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗಿರುವ ಕೃಷಿ ಮುಖಂಡರ ವಿರುದ್ಧ ಲುಕ್ಔಟ್‌ ಸುತ್ತೋಲೆಗಳನ್ನು (ಎಲ್‌ಒಸಿ) ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ, ಷಾ ನೀಡಿದ ನಿರ್ದೇಶನದ ಆಧಾರ ಮೇಲೆ ರೈತ ಮುಖಂಡರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳುವ (ಸ್ಥಗಿತಗೊಳಿಸುವ) ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ನಡೆದ ಕಾನೂನು ಸುವ್ಯವಸ್ಥೆ ಪರಿಶೀಲನಾ ಸಭೆಯಲ್ಲಿ ರೈತ ಮುಖಂಡರ ವಿರುದ್ಧ ಎಲ್‌ಒಸಿ ನೀಡುವಂತೆ ಅಮಿತ್‌ ಶಾ ಸೂಚಿಸಿದ್ದಾರೆ. ಇದರ ಆಧಾರದ ಮೇಲೆ ರೈತ ಮುಖಂಡರ ವಿರುದ್ಧ ಅವರ ಪ್ರಯಾಣ ಮತ್ತು ಹಲವು ಚಟುವಟಿಕೆಗಳ ಮೇಲೆ  ನಿಯಂತ್ರಣಗಳನ್ನು ಹೇರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ದೇಶದಿಂದ ಹೊರಹೋಗದಂತೆ ತಡೆಯಲು ಲುಕ್‌ಔಟ್ ಸುತ್ತೋಲೆಗಳನ್ನು ಬಳಲಾಗುತ್ತಿದೆ. ಅಲ್ಲದೆ, ಅಂತರರಾಷ್ಟ್ರೀಯ ಗಡಿಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು, ಕಡಲ ಪ್ರದೇಶಗಳು ಮತ್ತು ಬಂದರುಗಳು ಇತ್ಯಾದಿ ಸ್ಥಳಗಳಲ್ಲಿ ಆರೋಪಿತರನ್ನು ಬಂಧಿಸಲು ಈ ನೋಟಿಸ್‌ ಬಳಕೆಯಾಗುತ್ತವೆ.

ಪಾಸ್‌ಪೋರ್ಟ್‌ಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯು ಒಂದು ಪ್ರಮುಖ ನಿರ್ಧಾರವಾಗಿದೆ. ಎಫ್‌ಐಆರ್‌ಗಳಲ್ಲಿ ದೆಹಲಿ ಪೊಲೀಸರು ಹೆಸರಿಸಿರುವ ಎಲ್ಲ ರೈತ ಮುಖಂಡರು ಈ ಪ್ರಕರಣ ಮುಗಿಯುವವರೆಗೂ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಬಳಸಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯನ್ನು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಪಾಸ್‌ಪೋರ್ಟ್ ಕಾಯ್ದೆಯಡಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ: 22 FIR; 200 ರೈತರ ಬಂಧನ: ಸಿಖ್‌ ಧ್ವಜ ಹಾರಿಸಿದ ದೀಪ್ ಸಿಧು ಹೆಸರು ಕೈಬಿಟ್ಟ ಪೊಲೀಸರು!

ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ  ದರ್ಶನ್ ಪಾಲ್, ರಾಕೇಶ್ ಟಿಕೈಟ್, ದರ್ಶನ್ ಪಾಲ್ ಮತ್ತು ಗುರ್ನಮ್ ಸಿಂಗ್ ಚಾದುನಿ ಸೇರಿದಂತೆ 37 ರೈತ ಮುಖಂಡರನ್ನು ಹೆಸರಿಸಿದ್ದಾರೆ.

ಎಫ್‌ಐಆರ್ನಲ್ಲಿ ಐಪಿಸಿ ಸೆಕ್ಷನ್‌ 307 (ಕೊಲೆ ಯತ್ನ), 147 (ಗಲಭೆಗೆ ಶಿಕ್ಷೆ) ಮತ್ತು 353 (ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ / ಕ್ರಿಮಿನಲ್ ಫೋರ್ಸ್) ಮತ್ತು 120 ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಸೇರಿದಂತೆ ಅನೇಕ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.

ಅಲ್ಲದೆ, ಘಟನೆ ಸಂಬಂಧ 22 ಎಫ್‌ಐಆರ್ ದಾಖಲಿಸಿದ್ದು,  ಒಟ್ಟು 200 ಜನರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ದೆಹಲಿ ಘಟನೆಗೆ ಸರ್ಕಾರವೇ ಹೊಣೆ; ಜ.30ರ ಗಾಂಧಿ ಹುತಾತ್ಮ ದಿನ ಉಪವಾಸ ಸತ್ಯಾಗ್ರಹಕ್ಕೆ ರೈತರ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights