22 FIR; 200 ರೈತರ ಬಂಧನ: ಸಿಖ್‌ ಧ್ವಜ ಹಾರಿಸಿದ ದೀಪ್ ಸಿಧು ಹೆಸರು ಕೈಬಿಟ್ಟ ಪೊಲೀಸರು!

ಮಂಗಳವಾರ ದೆಹಲಿಯ ರೈತ ಗಣರಾಜ್ಯೋತ್ಸವದಲ್ಲಿ ನಡೆದ ಗದ್ದಲದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಈವರೆಗೆ 22 ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಸುಮಾರು 200 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಸರಿಯಾದ ಪರಿಶೀಲನೆ ನಡೆಸಿದ ನಂತರ ಪ್ರತಿಭಟನಾಕಾರರನ್ನು ಬಂಧಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈತ ಹೋರಾಟದ ಮುಂಚೂಣಿಯಲ್ಲಿರುವ ದರ್ಶನ್ ಪಾಲ್, ರಾಜೀಂದರ್‌ ಸಿಂಗ್, ಬಲ್‌‌ಬೀರ್‌ ಸಿಂಗ್ ರಾಜೇವಾಲ್, ಬೂಟಾ ಸಿಂಗ್ ಬುರ್ಜ್‌ಗಿಲ್, ಜೋಗೀಂದರ್‌ ಸಿಂಗ್‌, ರಾಕೇಶ್ ಟಿಕಾಯತ್‌, ಯೋಗೇಂದ್ರ ಯಾದವ್ ಸೇರಿದಂತೆ ಒಂಬತ್ತು ರೈತ ಮುಖಂಡರ ಹೆಸರನ್ನು ನಮೂದಿಸಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಕೆಂಪು ಕೋಟೆಗೆ ರೈತರನ್ನು ಪ್ರಚೋದಿಸಿ ಕರೆದೊಯ್ದ ಮತ್ತು ಧ್ವಜ ಹಾರಿಸುವಾಗ ಅಲ್ಲೇ ಇದ್ದ ದೀಪ್ ಸಿಧು ಅವರ ಮೇಲೆ ಯಾವುದೆ ಎಫ್‌ಐಆರ್‌ ದಾಖಲಾಗಿಲ್ಲ.

ಘಟನೆಯಲ್ಲಿ 300 ಪೊಲೀಸರು ಗಾಯಗೊಂಡಿದ್ದಾರೆ, ಸಂಘರ್ಷದಲ್ಲಿ ಭಾಗಿಯಾಗಿರುವ ರೈತರನ್ನು ಗುರುತಿಸಲು ಅನೇಕ ವೀಡಿಯೊಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ:  ಆಘಾತಕಾರಿ ಸುದ್ದಿ: ಕೆಂಪುಕೋಟೆಯಲ್ಲಿ ಸಿಖ್‌ ‍ಧ್ವಜ ಹಾರಿಸಿದ್ದು BJP ಕಾ‍ರ್ಯಕರ್ತ ದೀಪ್‌ ಸಿಧು

ಟ್ರಾಕ್ಟರ್‌‌ ರ್‍ಯಾಲಿಯಲ್ಲಿ ಭಾಗವಹಿಸಿದ ರೈತ ಗುಂಪೊಂದು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದು, ಬ್ಯಾರಿಕೇಡ್‌ಗಳನ್ನು ಮುರಿದು ಕೆಂಪು ಕೋಟೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದರು. ಪೊಲೀಸರು ಕೂಡಾ ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ಮಾಡಿದ್ದರು.

ಘಟನೆಯ ಬಗ್ಗೆ ವಿಚಾರಣೆ ನಡೆಸಲು, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕೋರಿ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಕೆಯಾಗಿದೆ. ಹಿಂಸಾಚಾರಕ್ಕೆ ಕಾರಣವಾದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ಮಾಡುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.

ಕೇಂದ್ರದ ಕಾನೂನಿನ ವಿರುದ್ದ ದೆಹಲಿಯ ಗಡಿಗಳಲ್ಲಿ ಎರಡು ತಿಂಗಳಿನಿಂದ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರು. ಕೇಂದ್ರ ಸರ್ಕಾರ ರೈತರೊಂದಿಗೆ ಇರುವರೆಗೂ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ ಇವೆಲ್ಲವೂ ಮುರಿದು ಬಿದ್ದಿದೆ.

ಇದನ್ನೂ ಓದಿ: ರೈತರ ವಿರುದ್ದ ಸರ್ಕಾರಗಳು ಗೆದ್ದಿರುವ ಇತಿಹಾಸವಿಲ್ಲ; ಗೆಲ್ಲುವುದೂ ಇಲ್ಲ: ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights