ದೆಹಲಿ ಹಿಂಸಾಚಾರಕ್ಕೆ ಪಾಕ್, ಚೀನಾ ಮತ್ತು ಕಾಂಗ್ರೆಸ್ನಿಂದ ಫಂಡಿಂಗ್ – ಯತ್ನಾಳ್ ಗಂಭೀರ ಆರೋಪ!
ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಚೀನಾ, ಪಾಕಿಸ್ತಾನ್ ಹಾಗೂ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ವಿಜಾಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರೈತರ ಅಭಿವೃದ್ಧಿಗಾಗಿ ಮಾಡಲಾದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುವಂತೆ ಪ್ರೋತ್ಸಾಹಿಸಲಾಗಿದೆ. ಮಾತ್ರವಲ್ಲದೇ ದೆಹಲಿಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಫಂಡಿಂಗ್ ಕೂಡ ಮಾಡಲಾಗಿದೆ. ಇದು ದೇಶದ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಕೆಡಿಸಲು ಮಾಡಿದ ಷಡ್ಯಂತ್ರವಾಗಿದೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ವಿರುದ್ಧ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಈ ಮಸೂದೆಗಳು ರೈತ ವಿರೋಧಿ ಅಲ್ಲ, ಬದಲಿಗೆ ಕಾಂಗ್ರೆಸ್, ಕಮ್ಯೂನಿಸ್ಟ್, ಆಮ್ ಆದ್ಮಿ ಪಕ್ಷಗಳ ವಿರುದ್ಧವಾಗಿವೆ ಎಮದು ಕಿಡಿ ಕಾರಿದ್ದಾರೆ.
ಮೋದಿ ಸರ್ಕಾರ ಮುಂದಿನ 20 ವರ್ಷಗಳ ಕಾಲ ಆಡಳಿತ ನಡೆಸಲಿದೆ ಎನ್ನುವ ಖಾತರೆ ಮೇರೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಹತಾಶಗೊಂಡು ಈ ರೀತಿ ಗಲಭೆಗಳನ್ನು ಸೃಷ್ಟಿಸುತ್ತಿವೆ. ಮಾತ್ರವಲ್ಲದೇ ಗಲಭೆಗೆ ಫಂಡಿಂಗ್ ಕೂಡ ಮಾಡುತ್ತಿವೆ. ದೇಶವಿರೋಧಿ ಶಕ್ತಿಗಳು, ಖಲಿಸ್ತಾನ, ಪಾಕಿಸ್ತಾನ ವನ್ನು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳಲಾಗಿದೆ. ಇಂತಹ ಶಕ್ತಿಗಳು ಇದರಲ್ಲಿ ಶಾಮಿಲಾಗಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿತ್ತು. ಅದಾಗ್ಯೂ ಪೊಲೀಸ್ ಇಲಾಖೆ ಟ್ಯ್ರಾಕ್ಟರ್ ರ್ಯಾಲಿಗೆ ಅನುಮತಿ ನೀಡಿರಲಿಲ್ಲ.ಆದರೆ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಪೊಲೀಸರು ಸುಮ್ಮನಾಗಬೇಕಾಯಿತು.
ಉಗ್ರಪ್ಪನಂಥವರಿಗೆ ದೇಶ ಬೇಕಾಗಿಲ್ಲ. ಕೇವಲ ಕುರ್ಚಿ ಬೇಕಾಗಿದೆ. ಈಗ ಖಲಿಸ್ತಾನ ಹೋರಾಟ ಮುಗಿದ ಅಧ್ಯಾಯ. ಈಗ ನಮ್ಮ ದೇಶದಲ್ಲಿ ಪಾಕಿಸ್ತಾನದ ಪರ ಘೋಷಣೆ ಹಾಕುವ ಹುಳುಗಳಿವೆ. ಅಂಥ ಹುಳಗಳು ಇಲ್ಲಿಯೂ ಇವೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಈವರೆಗೆ ಬೆಳೆಸಿದ ಎಲ್ಲ ದೇಶ ವಿರೋಧಿ ಸಂಘಟನೆಗಳು ನಿನ್ನೆ ಹೊರಗೆ ಬಂದಿವೆ ಎಂದಿದ್ದಾರೆ.