FACT CHECK | ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ಗೆ ಚಪ್ಪಲಿ ತೂರಿದ್ದು ನಿಜವೇ?

2024ರ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಇಂಡಿಯಾದ ಮಿತ್ರಪಕ್ಷವಾದ ಸಮಾಜವಾದಿ ಪಕ್ಷದ  ನಾಯಕ ಅಖಿಲೇಶ್ ಯಾದವ್ ಉತ್ತರ ಪ್ರದೇಶದಲ್ಲಿ 2024ರ ಲೋಕಸಭಾ ಚುನಾವಣೆಯ ಪ್ರಚಾರ ಮಾಡುವಾಗ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ ಹಾಕುತ್ತೇವೆ ಎಂದು ಹೇಳಿದಾಗ ಜನರು ಚಪ್ಪಲ್ಲಿ ಏಟು ಹಾಕಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಅಧಿಕಾರಕ್ಕೆ ಬಂದರೆ ರಾಮನ ದೇವಾಲಯಕ್ಕೆ ಬೀಗ ಹಾಕುವುದುದಾಗಿ ಹೇಳಿದ ಅಖಿಲೇಶ್ ಯಾದವ್ ಚಪ್ಪಲಿ ಪೂಜೆ ಮಾಡಿದ ಜನ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 ಅಖಿಲೇಶ್ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಸ್ವಕ್ಷೇತ್ರದಲ್ಲಿಯೇ ಈ ರೀತಿಯ ಸ್ವಾಗತ ಎದುರಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಅವರನ್ನು ಟೀಕಿಸಲಾಗುತ್ತಿದೆ.

ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆ ತಿಳಿಸುವಂತೆ ಹಲವರು ಏನ್‌ಸುದ್ದಿ.ಕಾಂಗೆ ವಿನಂತಿಸಿದ್ದಾರೆ. ಹಾಗಿದ್ದರೆ ರಾಮ ಮಂದಿರಕ್ಕೆ ಬೀಗ ಹಾಕುತ್ತೇವೆ ಎಂಬ ಹೇಳಿಕೆಯನ್ನು ಸಮಾಜವಾದಿ ಪಕ್ಷದ  ನಾಯಕ ಅಖಿಲೇಶ್ ಯಾದವ್ ನೀಡಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಖಿಲೇಶ್ ಯಾದವ್ ಅವರ 2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಜನರು ಇತ್ತೀಚೆಗೆ ಶೂ ಮತ್ತು ಚಪ್ಪಲಿಗಳನ್ನು ಎಸೆದ ಘಟನೆಯ ಕುರಿತು ಯಾವುದೇ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಇಂತಹ ಘಟನೆ ನಡೆದಿದ್ದರೆ ಅದನ್ನು ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿರುತ್ತಿದ್ದವು. ಆದರೆ ಇಂತಹ ಯಾವುದೇ ವರದಿ ಲಭ್ಯವಾಗಿಲ್ಲ.

ವೈರಲ್ ವೀಡಿಯೊವನ್ನು ಎಚ್ಚರಿಕೆಯಿಂದ ಗಮನಿಸಿದ ನಂತರ, ನಾವು Instagram ಖಾತೆಯಿಂದ ‘@vikashyadavauraiyawale’  ವಾಟರ್‌ಮಾರ್ಕ್ ಅನ್ನು ಗಮನಿಸಿ, ಅವರ Instagram ಖಾತೆಯನ್ನು ಸರ್ಚ್ ಮಾಡಿದಾಗ, ಅವರು 02 ಮೇ 2024 ರಂದು ಅದೇ ವೈರಲ್ ವಿಡಿಯೋವನ್ನು (ಆರ್ಕೈವ್ ಲಿಂಕ್) ಅವರ ಪುಟದಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋ ಲಭ್ಯವಾಗಿದೆ. ವೀಡಿಯೊದೊಂದಿಗೆ ‘ಲೈವ್ ಫ್ರಮ್ ಕನ್ನೌಜ್’ ಎಂಬ ಶೀರ್ಷಿಕೆ ಇದೆ.

ವೈರಲ್ ವಿಡಿಯೋವನ್ನು ಎಚ್ಚರಿಕೆಯಿಂದ ನಿಧಾನವಾಗಿ ಪ್ಲೇ ಮಾಡಿದಾಗ, ಅಖಿಲೇಶ್ ಯಾದವ್ ಕಡೆಗೆ ಶೂಗಳು ಮತ್ತು ಚಪ್ಪಲಿಗಳ ಬದಲಿಗೆ ಹೂವುಗಳು ಮತ್ತು ಹೂಮಾಲೆಗಳನ್ನು ಎಸೆಯಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇಡೀ ವಿಡಿಯೋದಲ್ಲಿ ಎಲ್ಲಿಯೂ ಶೂ ಮತ್ತು ಚಪ್ಪಲಿ ಕಾಣಿಸುವುದಿಲ್ಲ.

ನಂತರ ನಾವು ಸಮಾಜವಾದಿ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ 27 ಏಪ್ರಿಲ್ 2024 ರ  ವೀಡಿಯೊವನ್ನು ಪತ್ತೆಹಚ್ಚಿದ್ದೇವೆ. ಈ  ವೈರಲ್ ವಿಡಿಯೋದಲ್ಲಿ (ರ್ಯಾಲಿಯಲ್ಲಿ) ಅಖಿಲೇಶ್ ಯಾದವ್ ಅವರ ಪಕ್ಕದಲ್ಲಿ ಕಾಣಿಸಿಕೊಂಡಿರುವ ಮಹಿಳೆಯನ್ನು ಈ ಕೆಳಗಿನ ಚಿತ್ರದಲ್ಲಿಯೂ ನೀವು ಕಾಣಬಹುದು. ವೀಡಿಯೊ ವಿವರಣೆಯ ಪ್ರಕಾರ, ಅಖಿಲೇಶ್ ಯಾದವ್ ಅವರು ಕನೌಜ್ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ರಸುಲಾಬಾದ್‌ನಲ್ಲಿ ರೋಡ್‌ಶೋ ನಡೆಸಿದರು. ಆದ್ದರಿಂದ, ವೈರಲ್ ವೀಡಿಯೊ 27 ಏಪ್ರಿಲ್ 2024 ರಂದು ಕನೌಜ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಸೂಲಾಬಾದ್‌ನಲ್ಲಿ ನಡೆದ ಅವರ ಚುನಾವಣಾ ಪ್ರಚಾರ ರ್ಯಾಲಿಯದ್ದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಧಿಕಾರಕ್ಕೆ ಬಂದರೆ ರಾಮನ ದೇವಾಲಯಕ್ಕೆ ಬೀಗ ಹಾಕುವುದುದಾಗಿ ಹೇಳಿದ ಅಖಿಲೇಶ್ ಯಾದವ್ ಹೇಳಿದಾಗ ಚಪ್ಪಲಿ ಹಾರ ಹಾಕಲಾಗಿದೆ ಎಂಬ ಹೇಳಿಕೆ ಸುಳ್ಳು, ಅಖಿಲೇಶ್ ಯಾದವ್ ಅವರು ಕನೌಜ್ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ರಸುಲಾಬಾದ್‌ನಲ್ಲಿ ರೋಡ್‌ಶೋ ನಡೆಸಿದಾಗ ಹೂಮಾಲೆಗಳನ್ನು ಎಸೆಯಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶ್ರೀನಗರದಲ್ಲಿ ಉಗ್ರನನ್ನು ಹಿಡಿದ ಸೈನಿಕರು ಎಂದು ಬ್ರೆಜಿಲ್‌ನ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights