ಶಾಲಾ-ಕಾಲೇಜು ಶುಲ್ಕ ಕಡಿತಕ್ಕೆ ಒತ್ತಾಯ : ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ..!

ಕೊರೊನಾದಿಂದಾಗಿ ಬಂದ್ ಮಾಡಲಾಗಿದ್ದ ಶಾಲಾ-ಕಾಲೇಜುಗಳನ್ನು ಸದ್ಯ ತೆರೆಯಲಾಗಿದ್ದು ಪೋಷಕರಿಗೆ ಶುಲ್ಕದ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ 50% ರಷ್ಟು ಶುಲ್ಕ ಕಡಿತಕ್ಕೆ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮಾತ್ರವಲ್ಲದೇ ಸಂಜೆ ವೇಳೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಜನವರಿ 31 ರಂದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಕೊರನಾದಿಂದ ಪೂರ್ಣ ಪ್ರಮಾಣದ ಸಂಬಳ ಪಡೆಯಲು ಸಾಧ್ಯವಾಗದ ಪೋಷಕರು ಪೂರ್ಣಪ್ರಮಾಣದ ಶುಲ್ಕವನ್ನು ಹಂತ ಹಂತವಾಗಿಯೂ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ಶಾಲಾ ಆಡಳಿತ ಮಂಡಳಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಆನ್ ಲೈನ್ ಶಿಕ್ಷಣದಿಂದ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಕಲಿಕೆಗೆ ಸಾಧ್ಯವಾಗಿಲ್ಲ. ಹೀಗಾಗಿ ಶಾಲಾ ಕಾಲೇಜು ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

“ಪ್ರತೀ ವರ್ಷ ನಾವು 60 ಸಾವಿರದಿಂದ 75 ಸಾವಿರ ಶುಲ್ಕ ಪಾವತಿಸಬೇಕು. ಇದರಲ್ಲಿ ಅಲ್ಪ ಪ್ರಮಾಣದ ಶುಲ್ಕ ಭರಿಸಿದ್ದೇವೆ. ಹೀಗಾಗಿ ಆನ್ ಲೈನ್ ಶಿಕ್ಷಣ ನೀಡಲಾಗಿದೆ. ಆದರೆ ಆನ್ ಲೈನ್ ಶಿಕ್ಷಣದಲ್ಲಿ ಮಕ್ಕಳ ಕಲಿಕೆ ಪೂರ್ಣವಾಗಿಲ್ಲ. ಮಾತ್ರವಲ್ಲದೇ ಶಾಲೆಯಲ್ಲಿ ಕಲಿಸುವಂತೆ ಎಲ್ಲಾ ಉಪನ್ಯಾಸಕರಿಂದ ಕಲಿಕೆ ಸಾಧ್ಯವಾಗಿಲ್ಲ. ಶಾಲೆಯಲ್ಲಿ ಉಪನ್ಯಾಸಕರು ಹೇಳಿಕೊಟ್ಟಿದ್ದನ್ನು ನಾವು ಮನೆಯಲ್ಲಿ ಮಕ್ಕಳಿಗೆ ಕಲಿಸಿದ್ದೇವೆ. ಶಿಕ್ಷಕರಿಗಿಂತ ನಮಗೆ ಮನೆಯಲ್ಲಿ ಮಕ್ಕಳಿಗೆ ಹೇಳಿಕೊಡುವುದು ಹೊರೆಯಾಗಿತ್ತು. ಇಷ್ಟಾದರೂ ಪೂರ್ಣ ಪ್ರಮಾಣದ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಇಬ್ಬರು ಮಕ್ಕಳಿವೆ. ಇಬ್ಬರ ಶುಲ್ಕ ಭರಿಸಲು ಕಷ್ಟವಾಗುತ್ತಿದೆ” ಎಂದು ಪೋಷಕರೊಬ್ಬರು ಹೇಳಿದ್ದಾರೆ.

“ಕೊರೊನಾದಿಂದಾಗಿ ಎಲ್ಲದರ ಬೆಲೆ ಜಾಸ್ತಿ ಆಗಿದೆ. ಆದರೆ ನಮ್ಮ ಸಂಬಳಗಳು ಮಾತ್ರ ಇರುವುದರಲ್ಲಿ ಕಡಿತವಾಗಿವೆ. ಹೀಗಾದರೆ ನಾವು ಜೀವನ ಮಾಡುವುದು ಹೇಗೆ? ಮಕ್ಕಳ ಫೀಸೂ ಅಷ್ಟೇ ಪ್ರಮಾಣದಲ್ಲಿ ಕಟ್ಟ ಬೇಕು ಅಂದರೆ ಹೇಗಾಗುತ್ತೆ..? ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕು. ಮಧ್ಯ ಪ್ರವೇಶ ಮಾಡಿ. ಶುಲ್ಕ ಕಡಿಮೆ ಮಾಡಬೇಕು” ಎಂದು ಮತ್ತೋರ್ವ ಪೋಷಕರು ಆಗ್ರಹಿಸಿದ್ದಾರೆ.

ಈಗಾಗಲೇ ಪೋಷಕರು ಎರಡು ಬಾರಿ ಪ್ರತಿಭಟನೆ ಮಾಡಿ, ಮೂರನೇ ಬಾರಿ ಸಿಎಂ ಮನೆ ಮುಂದೆ ಕಸ ಗುಡಿಸಿ ಸರ್ಕಾರದ ಗಮನ ಸೆಳೆಲು ಮುಂದಾಗಿದ್ದರು. ಆದರೆ ಪ್ರಯೋಜನವಾಗಿಲ್ಲ. ಶಾಲಾ-ಕಾಲೇಜುಗಳಿಗೆ ಶುಲ್ಕ ನಿಗಧಿ ಮಾಡಬೇಕಾಗಿದೆ. ಶಾಲಾ ಕಾಲೇಜುಗಳು ಎಷ್ಟು ಶುಲ್ಕ ಪಡೆಯಬೇಕು ಎನ್ನುವ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು. ಇಂದು ಸಂಜೆ ಒಳಗೆ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಭಾನುವಾರ ಉಗ್ರ ಹೋರಾಟ ಮಾಡುವುದಾಗಿ ಪೋಷಕರು ಎಚ್ಚರಿಕೆ ಕೊಟ್ಟಿದ್ದಾರೆ.

ಇದರ ಬೆನ್ನಲ್ಲೇ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಇಂದು ಸಂಜೆ ಸಿಎಂ ಯಡಿಯೂರಪ್ಪ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ. ಸಭೆ ಬಳಿಕ ಯಾವ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights