FACT CHECK | ಇರಾನ್ ಮೇಲೆ ಇಸ್ರೇಲ್ನ ಬೃಹತ್ ದಾಳಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಶುಕ್ರವಾರ ಇರಾನ್ ಮೇಲೆ ಇಸ್ರೇಲ್ ಭಾರೀ ವೈಮಾನಿಕ ದಾಳಿ ನಡೆಸಿತ್ತು. ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ವಿವಿಧ ರೀತಿಯ ವಿಡಿಯೋಗಳು ಸಾಮಾಜಿಕ ಮಾಧ್ಯದಮದಲ್ಲಿ ಪ್ರಸಾರವಾಗುತ್ತಿವೆ.
![]()
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ಒಂದರಲ್ಲಿ “ಇರಾನ್ನ 8 ನಗರಗಳ ಮೇಲೆ ಇಸ್ರೇಲ್ನ ಬೃಹತ್ ದಾಳಿ. ಇರಾನ್ನ ನೂರಾರು ಕ್ಷಿಪಣಿಗಳು ನಾಶವಾದವು, ಪರಮಾಣು ಸ್ಥಾಪನೆಗಳ ಮೇಲೂ ದಾಳಿ ಮಾಡಲಾಗಿದೆ,” ಎಂದಿದೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವಿವಿಧ ಫಲಿತಾಂಶಗಳು ಲಭ್ಯವಾಗಿದ್ದು, ಅದರಲ್ಲಿ ಮೆಕ್ಸಿಕೋದ ವೀಡಿಯೋ ಎಂದು ತಿಳಿದುಬಂದಿದೆ.
ಮೇ 22, 2025ರಂದು ಶಾರ್ಕ್ ಟೆಲಿವಿಷನ್ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಪ್ರಕಟಿಸಿದ್ದು, ಇದು ಮೆಕ್ಸಿಕೋದ ನ್ಯೂವೊ ಲಿಯೊನ್ ನ ಕ್ಯಾಡೆರೈಟಾದ ಡೀಸೆಲ್ ಪ್ಲಾಂಟ್ ನಲ್ಲಿ ಸಂಭವಿಸಿದ ಸ್ಫೋಟ ಎಂದು ಹೇಳಿದೆ.
Massive EXPLOSION at diesel plant in Cadereyta Jiménez, Mexico pic.twitter.com/wdd3dPtpLm
— Indian News Network (@INNChannelNews) May 22, 2025
ಮೇ 22, 2025ರಂದು ಇಂಡಿನ್ ನ್ಯೂಸ್ ನೆಟ್ ವರ್ಕ್ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲೂ ವೈರಲ್ ವಿಡಿಯೋ ಹೋಲುವ ಕ್ಲಿಪ್ ಇದ್ದು, ಮೆಕ್ಸಿಕೋದ ಕ್ಯಾಡೆರೈಟಾದ ಡೀಸೆಲ್ ಪ್ಲಾಂಟ್ ನಲ್ಲಿ ಸಂಭವಿಸಿದ ಸ್ಫೋಟ ಎಂದಿದೆ.
![]()
ಈ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ, ಮಾಧ್ಯಮ ವರದಿಗಳು ಲಭ್ಯವಾಗಿವೆ. ಬಿಎನ್ಒ ನ್ಯೂಸ್ ಮೇ 21, 2025ರಂದು ಪ್ರಕಟಿಸಿದ ವರದಿಯಲ್ಲಿ, ಉತ್ತರ ಮೆಕ್ಸಿಕೋದಲ್ಲಿರುವ ಡೀಸೆಲ್ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ ಒಬ್ಬರು ಗಾಯಗೊಂಡಿದ್ದಾರೆ.
ನ್ಯೂವೊ ಲಿಯಾನ್ನ ಕ್ಯಾಡೆರೈಟಾದಲ್ಲಿರುವ ಮಾರ್ವಿಕ್ ಕಂಪನಿಯಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಮಾಂಟೆರ್ರಿಯಿಂದ ಸುಮಾರು 25 ಮೈಲುಗಳಷ್ಟು ಪೂರ್ವಕ್ಕೆ ಇರುವ ಈ ಸೌಲಭ್ಯವು ಡೀಸೆಲ್ ಬಟ್ಟಿ ಇಳಿಸುವಿಕೆ ಕೆಲಸ ಮಾಡುತ್ತದೆ ಎಂದಿದೆ. ಇದೇ ವರದಿಯಲ್ಲಿ, ನ್ಯೂವೋ ಲಿಯಾನ್ನ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಬೆಂಕಿಯು ಕನಿಷ್ಠ 13 ದಾಸ್ತಾನು ವ್ಯವಸ್ಥೆಯನ್ನು ಸುಟ್ಟುಹಾಕಿದೆ, ಪ್ರತಿಯೊಂದೂ 10,000 ಲೀಟರ್ಗಳಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿತ್ತು ಎಂದಿದೆ.
![]()
ಮೇ 22, 2025ರಂದು ಕ್ಯಾಲಿಬರ್ ಪ್ರಕಟಿಸಿದ ವರದಿಯಲ್ಲಿ, ಉತ್ತರ ಮೆಕ್ಸಿಕೋದ ಡೀಸೆಲ್ ಸಂಸ್ಕರಣಾ ಘಟಕದಲ್ಲಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನದ ವೇಳೆ ಬೆಂಕಿ ಹೊತ್ತಿಕೊಂಡು, ಸ್ಥಳದಲ್ಲಿ ಸಂಗ್ರಹಿಸಲಾದ ಹೆಚ್ಚು ಸುಡುವ ವಸ್ತುಗಳಿಂದ ಬೆಂಕಿ ಬೇಗನೆ ಉಲ್ಬಣಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ದೃಶ್ಯಗಳು ಎಂದು ಹಂಚಿಕೊಂಡಿರುವ ದೃಶ್ಯಗಳು ನಿಜವಲ್ಲ, ಇದು ಮೆಕ್ಸಿಕೋದ ಡೀಸೆಲ್ ಪ್ಲಾಂಟ್ ಒಂದರಲ್ಲಿ ಸಂಭವಿಸಿದ ಅವಘಡ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಹಮದಾಬಾದ್ನ ವಿಮಾನ ಅಪಘಾತ ಎಂದು AI ಚಿತ್ರ ಹಂಚಿಕೆ

