ಟೋಟೋನ ಸಾಹಸಗಳು – ರಸ್ಕಿನ್ ಬಾಂಡ್ ಕಥೆ ಓದಿ

[ಭಾರತದ ವಿಶಿಷ್ಟ ಕಥೆಗಾರ ರಸ್ಕಿನ್ ಬಾಂಡ್. ಅವರ ಜನ್ಮ ದಿನ ಇಂದು. ಆ ಸಂಭ್ರಮಕ್ಕೆ ಡಿ ಜಿ ಮಲ್ಲಿಕಾರ್ಜುನ್ ಕನ್ನಡಕ್ಕೆ ತಂದಿರುವ ಈ ನವಿರಾದ ಕಥೆ ಓದಿ ಆನಂದಿಸಿ]

ನನ್ನ ತಾತ, ಟಾಂಗಾ ಚಾಲಕನಿಗೆ ಐದು ರೂಪಾಯಿಗಳನ್ನು ಕೊಟ್ಟು ಟೋಟೋನನ್ನು ಕೊಂಡು ತಂದರು. ಪುಟ್ಟ ಕೆಂಪು ಕೋತಿಯನ್ನು ಆ ಟಾಂಗಾ ಚಾಲಕ ಕುದುರೆಯ ಮೇವಿನ ಚೀಲಕ್ಕೆ ಬಿಗಿದಿರುತ್ತಿದ್ದ. ಅದು ಅಸಹಜ ಸ್ಥಿತಿಯಲ್ಲಿ ಇರುವುದನ್ನು ಕಂಡ ತಾತ ತನ್ನ ಮನೆಯ ಮೃಗಾಲಯಕ್ಕೆ ಅದನ್ನು ಸೇರಿಸಿಕೊಳ್ಳಲು ತೀರ್ಮಾನಿಸಿದರು.

ಟೋಟೋ ಸುಂದರವಾದ ಕೋತಿ. ತೀಡಿದ ಉಬ್ಬಿನ ಕೆಳಗೆ ತುಂಟತನದಿಂದ ಕೂಡಿದ ಹೊಳಪು ಕಂಗಳು ಅದರದ್ದು. ಹಲ್ಲುಗಳು ಅಚ್ಚ ಬಿಳುಪಾಗಿದ್ದು, ನಗುವಿನೊಂದಿಗೆ ಪ್ರದರ್ಶನಗೊಂಡು ಆಂಗ್ಲೋ ಇಂಡಿಯನ್ ಮಹಿಳೆಯರ ಹೃದಯ ಬಾಯಿಗೆ ಬರುವಂತೆ ಮಾಡುತ್ತಿತ್ತು. ಹಲವಾರು ವರ್ಷಗಳು ಬಿಸಿಲಿನಲ್ಲಿ ಒಣಗಿಸಿದಂತೆ ಅದರ ಅಂಗೈಗಳು ಒಣಗಿದ ಹಪ್ಪಳದಂತಿದ್ದರೆ, ಅದರ ಬೆರಳುಗಳು ಸುಕ್ಕುಸುಕ್ಕಾಗಿದ್ದರೂ ಚುರುಕಾಗಿದ್ದವು. ಬಾಲ ಅದರ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು (ಬಾಲ ಯಾವುದೇ ಪ್ರಾಣಿಗಿರಲಿ, ಅದರಿಂದ ಅದರ ಸೌಂದರ್ಯ ಹೆಚ್ಚುತ್ತದೆ ಎಂಬುದು ತಾತನ ನಂಬಿಕೆ). ಅಷ್ಟೇ ಅಲ್ಲ, ಬಾಲ ಅದರ ಮೂರನೇ ಕೈಯಂತೆ ಬಳಕೆಯಾಗುತ್ತಿತ್ತು. ರೆಂಬೆ ಕೊಂಬೆಗಳಿಂದ ನೇತಾಡಲು ಅದು ತನ್ನ ಬಾಲವನ್ನು ಬಳಕೆ ಮಾಡಿಕೊಂಡು, ಕೈಗೆಟಕದ ವಸ್ತುಗಳನ್ನು ಎಟುಕಿಸಿಕೊಳ್ಳುತ್ತಿತ್ತು.

ತಾತ ಮನೆಗೆ ಈ ರೀತಿ ಹಕ್ಕಿಯನ್ನೋ ಅಥವಾ ಪ್ರಾಣಿಯನ್ನೋ ಮನೆ ತಂದಾಗ ಅಜ್ಜಿಯ ಗೊಣಗಾಟ ಶುರುವಾಗುತ್ತದೆ. ಹಾಗಾಗಿ ಆಕೆಯ ಮನಸ್ಥಿತಿ ತಿಳಿಯಾಗಿರುವವರೆಗೂ ಟೋಟೋ ಸಂಗತಿ ಆಕೆಗೆ ತಿಳಿಯುವುದು ಬೇಡ ಎಂದು ನಿರ್ಧರಿಸಲಾಯಿತು. ನನ್ನ ಮಲಗುವ ಕೋಣೆಯಲ್ಲಿನ ಗೋಡೆ ಬೀರುವಿನಲ್ಲಿ ಅದನ್ನು ಇರಿಸಲಾಯಿತು. ಗೋಡೆಗೆ ಹೊಡೆದಿದ್ದ ಮೊಳೆಗೆ ಭದ್ರವಾಗಿ ಕಟ್ಟಿದ್ದೆವು – ಅಥವಾ ನಾವು ಹಾಗೆಂದು ಭಾವಿಸಿದ್ದೆವು.

ಕೆಲವು ಗಂಟೆಗಳ ನಂತರ ಟೋಟೋನನ್ನು ಹೊರಗೆ ಬಿಡೋಣ ಎಂದು ನಾನು ಮತ್ತು ತಾತ ಬಂದು ನೋಡಿದರೆ, ಏನಿದೆ ಅಲ್ಲಿ. ಗೋಡೆಯ ಅಂದಕ್ಕಾಗಿ ತಾತ ಅಂಟಿಸಿದ್ದ ಚಿತ್ತಾರದ ಪೇಪರು ಕಿತ್ತುಹೋಗಿ ಇಟ್ಟಿಗೆ ಸಿಮೆಂಟಿನ ಗೋಡೆ ನಗ್ನವಾಗಿ ಕಾಣುತ್ತಿದೆ. ಗೋಡೆಗೆ ಹೊಡೆದಿದ್ದ ಮೊಳೆ ಮಾಯವಾಗಿದೆ. ಅಲ್ಲೇ ನೇತುಹಾಕಿದ್ದ ನನ್ನ ಶಾಲೆಯ ಸಮವಸ್ತ್ರದ ಕೋಟು ಚೂರುಚೂರಾಗಿದೆ. ಇನ್ನು ಅಜ್ಜಿ ಏನೆನ್ನಬಹುದೆಂದು ಗಾಬರಿಯಾಯ್ತು. ಆದರೆ, ತಾತನಿಗೆ ಇದ್ಯಾವುದರ ಚಿಂತೆಯೇ ಇಲ್ಲ. ಟೋಟೋ ಕಾರ್ಯಕ್ಷಮತೆಯ ಬಗ್ಗೆ ಆತ ಬಹಳ ಸಂತುಷ್ಟನಿರುವಂತೆ ಕಾಣುತ್ತಿದ್ದ.

“ಬಲೇ ಬುದ್ದಿವಂತ ಕೋತಿ ಕಣೋ, ಸ್ವಲ್ಪ ಸಮಯ ಕೊಟ್ಟಿದ್ದರೆ, ಹರಿದಿರುವ ನಿನ್ನ ಕೋಟಿನ ಚೂರುಗಳಲ್ಲಿ ಹಗ್ಗವನ್ನು ಹೆಣೆದು ಕಿಟಕಿಯಿಂದ ಹೊರಹೋಗಿಬಿಡುತ್ತಿತ್ತೇನೋ ಅಲ್ವಾ!” ಎಂದು ತಾತ ಖುಷಿ ಬೆರೆತ ದನಿಯಲ್ಲಿ ಕೇಳಿದರು.

ಅದು ಮನೆಯಲ್ಲಿರುವ ಸಂಗತಿ ಇನ್ನೂ ಗೌಪ್ಯವಾಗಿಯೇ ಇದೆ. ಕಾಂಪೌಡಿನಲ್ಲಿ ಕೆಲಸಗಾರರು ಇರುವ ಮನೆಯ ಬಳಿ ದೊಡ್ಡ ಪಂಜರದಲ್ಲಿ ಟೋಟೋನನ್ನು ಇರಿಸಿದೆವು. ಅಲ್ಲಿ ತಾತನ ಇತರೆ ಸಾಕು ಪ್ರಾಣಿಗಳು ಹೊಂದಾಣಿಕೆಯಿಂದಿವೆ. ಆಮೆ, ಜೋಡಿ ಮೊಲಗಳು, ಸಾಕಿದ ಅಳಿಲು ಮತ್ತು ನನ್ನ ನೆಚ್ಚಿನ ಆಡು ಎಲ್ಲವೂ ಇವೆ. ಆದರೆ, ಈ ಕೋತಿ ಅವ್ಯಾವನ್ನೂ ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಲು ಬಿಡಲಿಲ್ಲ. ಹಾಗಾಗಿ, ಮರುದಿನ ತನ್ನ ಪಿಂಚಣಿ ಹಣಕ್ಕಾಗಿ ಡೆಹ್ರಾಡೂನ್ ನಿಂದ ಸಹರನ್ ಪುರಕ್ಕೆ ಹೊರಟಿದ್ದ ತಾತ ಇದನ್ನೂ ತನ್ನೊಂದಿಗೆ ಕೊಂಡೊಯ್ಯಲು ತೀರ್ಮಾನಿಸಿದರು.

ದುರದೃಷ್ಟವಶಾತ್ ನಾನು ತಾತನ ಜೊತೆ ಹೋಗಲು ಆಗಲಿಲ್ಲ. ಆದರೆ, ಅಲ್ಲಿ ನಡೆದ ಘಟನೆಗಳನ್ನು ತಾತ ನಂತರ ವಿವರಿಸಿದರು. ದೊಡ್ಡ ಕರಿಯ ಕ್ಯಾನ್ವಾಸಿನ ಬ್ಯಾಗನ್ನು ಟೋಟೋನನ್ನು ಕರೆದೊಯ್ಯಲು ತೆಗೆದುಕೊಳ್ಳಲಾಯಿತು. ಅಡಿಯಲ್ಲಿ ಒಣಹುಲ್ಲನ್ನು ಹಾಸಿ ಅದಕ್ಕೆ ಹೊಸ ವಾಸಸ್ಥಾನ ಮಾಡಿದೆವು. ಬ್ಯಾಗಿನ ಮೇಲೆ ತಂತಿಗಳಿಂದ ಬಿಗಿದಿದ್ದರಿಂದ ಅದು ತಪ್ಪಿಸಿಕೊಳ್ಳುವಂತಿರಲಿಲ್ಲ. ಟೋಟೋ ತನ್ನ ಕೈಯನ್ನು ಸಹ ತೂರಿಸಲು ಆಗದಂತೆ ತಂತಿ ಬಿಗಿಯಲಾಗಿತ್ತು. ಅದು ಕಚ್ಚಿ ತೂತು ಮಾಡಲಾಗದಷ್ಟು ಕ್ಯಾನ್ವಾಸ್ ದಪ್ಪನಾಗಿತ್ತು. ತಪ್ಪಿಸಿಕೊಳ್ಳಲು ಅದು ತೀವ್ರವಾಗಿ ಪ್ರಯತ್ನಿಸಿದರೆ, ಚೀಲ ಉರುಳುವುದೂ, ಗಾಳಿಯಲ್ಲಿ ಮೇಲೆ ಏರಿ ಬೀಳುವುದೂ ಆಗುತ್ತಿತ್ತಷ್ಟೆ. ಹೀಗೆ ಆದಾಗ, ಡೆಹ್ರಾಡೂನ್ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಮೇಲೆ ನಿಂತಿದ್ದ ಸಹಪ್ರಯಾಣಿಕರು ಕುತೂಹಲ ಕಣ್ಣುಗಳಿಂದ ನೋಡಿದರಂತೆ.

ಸಹರನ್ ಪುರಕ್ಕೆ ಹೋಗುವವರೆಗೂ ಟೋಟೋ ಚೀಲದಲ್ಲಿಯೇ ಸುಮ್ಮನಿತ್ತು. ಆದರೆ, ಅಲ್ಲಿ ತಾತ ಪ್ಲಾಟ್ ಫಾರಂ ನಲ್ಲಿಳಿದು ತನ್ನ ಟಿಕೇಟನ್ನು ತೋರಿಸುತ್ತಿದ್ದಾಗ ಟೋಟೋ ಇದ್ದಕ್ಕಿದ್ದಂತೆ ಚೀಲದಿಂದ ತನ್ನ ತಲೆಯನ್ನು ಹೊರಹಾಕಿ ಟಿಕೇಟ್ ಕಲೆಕ್ಟರನಿಗೆ ತನ್ನ ಬಿಳಿ ಹಲ್ಲುಗಳನ್ನು ತೋರಿಸಿತು.

ಆ ಬಡಪಾಯಿ ಗಾಬರಿಪಟ್ಟುಕೊಂಡ. ಆದರೆ, ತೋರಿಸಿಕೊಳ್ಳದೆ, ಸಮಯಸ್ಫೂರ್ತಿಯಿಂದ ತಾತನಿಗೆ ಕಿರಿಕಿರಿ ಆಗುವಂತೆ, “ಸರ್, ನಿಮ್ಮ ಬಳಿ ನಾಯಿ ಇದೆ. ಅದಕ್ಕೂ ನೀವು ಹಣ ತೆರಬೇಕು” ಎಂದ.

ವಿಧಿಯಿಲ್ಲದೆ ತಾತ ಟೋಟೋನನ್ನು ಬ್ಯಾಗಿನಿಂದ ಹೊರತೆಗೆದು, ಅದು ನಾಯಿಯಲ್ಲ, ಕೋತಿ ಎಂದು ತೋರಿಸಿ, ಇದು ಚತುಷ್ಪಾದಿ ಪ್ರಾಣಿಯಲ್ಲ ಎಂದು ವಿವರಿಸಿದರು. ಟಿಕೇಟ್ ಕಲೆಕ್ಟರ್ ಅದನ್ನು ಈಗಾಗಲೇ ನಾಯಿಯೆಂದು ವರ್ಗೀಕರಿಸಿ ಆಗಿತ್ತು. ತಾತ ಅದರ ಪ್ರಯಾಣದ ದರ ಮೂರು ರೂಪಾಯಿಗಳನ್ನು ತೆರಬೇಕಾಯ್ತು.

ಬೇಸರಗೊಂಡ ತಾತ ತನ್ನ ಜೇಬಿನಲ್ಲಿದ್ದ ಪುಟ್ಟ ಸಾಕು ಆಮೆಯನ್ನು ಹೊರತೆಗೆದು, “ಇದಕ್ಕೆ ಎಷ್ಟು ತೆರಬೇಕು ಹೇಳಿ, ಏಕೆಂದರೆ, ನೀವು ಪ್ರಾಣಿಗಳಿಗೆಲ್ಲಾ ಶುಲ್ಕ ವಿಧಿಸುತ್ತೀರಲ್ಲಾ?” ಎಂದು ಕೇಳಿದರು.

ಟಿಕೇಟ್ ಕಲೆಕ್ಟರ್ ಆ ಆಮೆಯನ್ನು ಹತ್ತಿರದಿಂದ ಪರೀಕ್ಷಿಸಿ, ತನ್ನ ತೋರು ಬೆರಳಿನಿಂದ ಅದನ್ನು ಸವರಿ, ತಾತನ ಕಡೆಗೆ ವಿಜಯದ ನಗೆಯನ್ನು ಬೀರಿ, “ಶುಲ್ಕವಿಲ್ಲ, ಇದು ನಾಯಿಯಲ್ಲ” ಎಂದು ಹೇಳಿದ.

ಕಡೆಗೂ ಅಜ್ಜಿ ಟೋಟೋನನ್ನು ಮನೆ ಸದಸ್ಯನನ್ನಾಗಿ ಅಂಗೀಕರಿಸಿರು. ಗ್ವಾದಲಿಯಲ್ಲಿ ಅದಕ್ಕೆ ಇರಲು ವ್ಯವಸ್ಥೆ ಮಾಡಿದರು. ಮನೆಯವರು ಸಾಕಿದ್ದ ಕತ್ತೆ ನಾನಾ ಅದಕ್ಕೆ ಜೊತೆಗಾರಳಾಯಿತು. ಗ್ವಾದಲಿಯಲ್ಲಿನ ಮೊದಲ ರಾತ್ರಿ, ಟೋಟೋ ಆರಾಮಾಗಿದೆಯಾ ಎಂದು ನೋಡಲು ತಾತ ಅಲ್ಲಿಗೆ ಭೇಟಿ ಕೊಟ್ಟರು. ಅಚ್ಚರಿಯಾಗುವಂತೆ ಟೋಟೋ ಮಲಗಿದ್ದ ಸ್ಥಳದಿಂದ ನಾನ, ದೂರದೂರ ಸರಿಯುತ್ತಿತ್ತು. ತನ್ನನ್ನು ಕಟ್ಟಿದ್ದ ಹಗ್ಗವನ್ನು ಜಗ್ಗುತ್ತಿತ್ತು.

ನಾನಾ ಬೆನ್ನಿನ ಮೇಲೆ ತಾತ ಒಂದು ಸಣ್ಣ ಪೆಟ್ಟುಕೊಟ್ಟರು. ಅದು ಇನ್ನಷ್ಟು ಜಗ್ಗಿತು. ಅದರ ಜೊತೆ ಟೋಟೋ ಕೂಡ ಹೋಗುತ್ತಿತ್ತು, ಏಕೆಂದರೆ ಅದರ ಕಿವಿಯನ್ನು ಟೋಟೋ ತನ್ನ ಹಲ್ಲುಗಳಿಂದ ಕಚ್ಚಿ ಹಿಡಿದಿತ್ತು.

ಟೋಟೋ ಮತ್ತು ನಾನಾ ಎಂದಿಗೂ ಗೆಳೆಯರಾಗಲೇ ಇಲ್ಲ.

ಚಳಿಗಾಲದ ಸಂಜೆಗಳಲ್ಲಿ ಅಜ್ಜಿ ಬಿಸಿ ನೀರಿನ ದೊಡ್ಡ ಪಾತ್ರೆಯನ್ನು ಟೋಟೋ ಸ್ನಾನ ಮಾಡಲೆಂದು ಇಡುತ್ತಿದ್ದರು. ಅದು ಟೋಟೋಗೆ ಅತ್ಯಂತ ಸುಖದ ಸಮಯ. ಮಹಾ ಕಂತ್ರಿಯಂತೆ ಅದು ಮೊದಲು ತನ್ನ ಬೆರಳನ್ನು ನೀರಲ್ಲಿ ಅದ್ದಿ, ಬೆಚ್ಚಗಿರುವುದನ್ನು ಖಾತ್ರಿ ಮಾಡಿಕೊಂಡು ನಂತರ ನೀರಿನಲ್ಲಿ ಇಳಿಯುತ್ತಿತ್ತು. ಮೊದಲು ಒಂದು ಕಾಲನ್ನು ಇಡುತ್ತಿತ್ತು, ನಂತರ ಇನ್ನೊಂದನ್ನು (ನಾನು ಸ್ನಾನ ಮಾಡುವುದನ್ನು ಅದು ಗಮನಿಸಿತ್ತು ಅನ್ಸುತ್ತೆ), ತನ್ನ ಕುತ್ತಿಗೆ ನೀರಲ್ಲಿ ಮುಳುಗುವಷ್ಟು ಪಾತ್ರೆಯಲ್ಲಿ ಅದು ಕುಳಿತುಕೊಳ್ಳುತ್ತಿತ್ತು. ಆರಾಮ ಅನಿಸಿದ ಮೇಲೆ ಸೋಪನ್ನು ತೆಗೆದುಕೊಂಡು ಮೈಯೆಲ್ಲಾ ಉಜ್ಜಿಕೊಳ್ಳುತ್ತಿತ್ತು. ನೀರು ತಣ್ಣಗಾಗುತ್ತಿದ್ದಂತೆ, ಪಾತ್ರೆಯಿಂದ ಹೊರಗೆ ಬಂದು ಮೈಯನ್ನು ಒಣಗಿಸಿಕೊಳ್ಳಲು ಬೇಗಬೇಗ ಅಡುಗೆ ಮನೆ ಕಡೆ ಓಡುತ್ತಿತ್ತು. ಈ ಸಂದರ್ಭದಲ್ಲಿ ಯಾರಾದರೂ ಅದನ್ನು ನೋಡಿ ನಕ್ಕಿದ್ದೇ ಆದರೆ, ಸ್ನಾನ ಮಾಡಲು ಹಿಂದೇಟು ಹಾಕುತ್ತಿತ್ತು.

ಒಂದು ದಿನ ಟೋಟೋ ತನ್ನನ್ನು ತಾನೇ ಕುದಿ ನೀರಿನಲ್ಲಿ ಸುಟ್ಟುಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿತ್ತು.

ಅಡುಗೆ ಮನೆಯಲ್ಲಿ ದೊಡ್ಡ ಟೀ ಕೆಟಲಿನಲ್ಲಿ ನೀರನ್ನು ಇಟ್ಟು ಒಲೆ ಹಚ್ಚಿದ್ದರು. ಬೇರೇನೂ ಕೆಲಸವಿಲ್ಲದ ಟೋಟೋ, ಆ ಕೆಟಲಿನ ಮುಚ್ಚಳವನ್ನು ತೆರೆಯಿತು. ನೀರಿನಲ್ಲಿ ಬೆರಳಿಟ್ಟು ನೋಡಿದ ಅದು, ಸ್ನಾನ ಮಾಡುವಷ್ಟು ನೀರು ಬೆಚ್ಚಗಿರುವುದನ್ನು ಕಂಡು ಅದರೊಳಗೆ ಇಳಿಯಿತು. ತಲೆಯನ್ನು ಹೊರಗೆ ಇರಿಸಿಕೊಂಡು ಕುಳಿತಿತು. ಸ್ವಲ್ಪ ಹೊತ್ತು ಚೆನ್ನಾಗಿತ್ತು, ನಂತರ ನೀರು ಕುದಿಯಲು ಪ್ರಾರಂಭವಾಯಿತು. ಟೋಟೋ ಸ್ವಲ್ಪ ಮೇಲೆ ಎದ್ದಿತು. ಹೊರಗೆ ಚಳಿ ಅನಿಸಿದರಿಂದ ಮತ್ತೆ ಕುಳಿತುಕೊಂಡಿತು. ಹೀಗೇ ಮೇಲೇಳುವುದು, ಕುಳಿತುಕೊಳ್ಳುವುದನ್ನು ಪುನರಾವರ್ತಿಸಿತು. ಸಮಯಕ್ಕೆ ಸರಿಯಾಗಿ ಅಜ್ಜಿ ಅಡುಗೆಮನೆಗೆ ಬಂದು ಅರ್ಧ ಬೆಂದಿದ್ದ ಅದನ್ನು ರಕ್ಷಿಸಿದರು.

ತುಂಟತನಕ್ಕೇ ಮೀಸಲಾದ ಭಾಗವೊಂದು ಮಿದುಳಿನಲ್ಲಿ ಏನಾದರೂ ಇದ್ದರೆ, ಅದು ಟೋಟೋವಿನಲ್ಲಿ ಹೆಚ್ಚಾಗಿ ಬೆಳೆದಿದೆ. ವಸ್ತುಗಳನ್ನು ತುಂಡು ತುಂಡು ಮಾಡುವುದರಲ್ಲಿ ಅದಕ್ಕೆ ವಿಶೇಷ ಆಸಕ್ತಿ. ನನ್ನ ಚಿಕ್ಕಮ್ಮ, ದೊಡ್ಡಮ್ಮ ಯಾರಾದರೂ ಅದರ ಹತ್ತಿರ ಸುಳಿದಾಗಲೆಲ್ಲಾ ಅವರ ಉಡುಪನ್ನು ಹರಿಯುವುದೋ ಅಥವಾ ಅದರಲ್ಲಿ ರಂಧ್ರ ಮಾಡುವುದೋ ಮಾಡುತ್ತಿತ್ತು.

ಒಂದು ದಿನ, ಊಟದ ಸಮಯದಲ್ಲಿ ಊಟದ ಟೇಬಲಿನ ಮೇಲೆ ಪಿಂಗಾಣಿ ಪಾತ್ರೆಯಲ್ಲಿ ಪಲಾವನ್ನು ಮಾಡಿ ಇರಿಸಿದ್ದರು. ನಾವು ಆ ಕೋಣೆಯನ್ನು ಪ್ರವೇಶಿಸಿದಾಗ ಟೋಟೋ ಅನ್ನವನ್ನು ತನ್ನ ಬಾಯಲ್ಲಿ ತುರುಕಿಕೊಳ್ಳುತ್ತಿತ್ತು. ನನ್ನ ಅಜ್ಜಿ ಕೋಪದಿಂದ ಕಿರುಚಿದರು. ಟೋಟೋ ಅಜ್ಜಿಯೆಡೆಗೆ ಪ್ಲೇಟೊಂದನ್ನು ಬಿಸುಟಿತು. ಮುಂದೆ ನುಗ್ಗಿದ ನನ್ನ ಚಿಕ್ಕಮ್ಮನ ಮುಖದ ಮೇಲೆ ನೀರಿನ ಗ್ಲಾಸು ಬಂದು ಬಿತ್ತು. ತಾತ ರಣರಂಗದೊಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಪಲಾವ್ ಪಾತ್ರೆಯನ್ನು ಹಿಡಿದು ಟೋಟೋ ಕಿಟಕಿಯ ಮೂಲಕ ಹೊರಕ್ಕೆ ಹೋಯಿತು. ಅದನ್ನು ನಾವು ಹಲಸಿನ ಮರದ ರೆಂಬೆಯ ಮೇಲೆ ಕಂಡೆವು. ಪಾತ್ರೆ ಇನ್ನೂ ಅದರ ಕೈಯಲ್ಲೇ ಇತ್ತು. ಸಂಜೆವರೆಗೂ ಅದು ಅಲ್ಲೇ ನಿಧಾನವಾಗಿ ತಿನ್ನುತ್ತಾ ಕುಳಿತಿತ್ತು. ಒಂದು ಅಗುಳನ್ನೂ ಅದು ಉಳಿಸುವಂತೆ ಕಾಣಲಿಲ್ಲ. ತನ್ನ ಮೇಲೆ ಕೂಗಾಡಿದ್ದ ಅಜ್ಜಿಯ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಖಾಲಿ ಪಾತ್ರೆಯನ್ನು ಮರದ ಮೇಲಿಂದ ಬಿಸಾಡಿತು. ಅದು ಚೂರುಚೂರುಗಳಾಗುವುದನ್ನು ಕಂಡು ಆನಂದಿಸಿತು.

ಟೋಟೋ, ನಾವು ಮನೆಯಲ್ಲಿ ಸಾಕಿಕೊಳ್ಳುವ ಸಾಕುಪ್ರಾಣಿಯಲ್ಲ ಎಂಬುದು ನಮಗೆ ಸ್ಪಷ್ಟವಾಯಿತು. ತಾತ ಕೂಡ ಇದನ್ನು ಅರ್ಥಮಾಡಿಕೊಂಡರು. ನಾವೇನೂ ಶ್ರೀಮಂತರಲ್ಲವಲ್ಲ, ಹಾಳಾಗುತ್ತಿದ್ದ ಪಾತ್ರೆಗಳು, ಬಟ್ಟೆಗಳು, ಕರ್ಟನ್ ಮತ್ತು ಗೋಡೆಗೆ ಹಚ್ಚಿದ ಪೇಪರುಗಳನ್ನು ಸದಾ ಹೊಸತು ತಂದಿರಿಸಲು ಆಗಬೇಕಲ್ಲ. ಹಾಗಾಗಿ ತಾತ ಆ ಟಾಂಗಾ ಚಾಲಕನನ್ನು ಹುಡುಕಿ, ಟೋಟೋವನ್ನು ಕೇವಲ ಮೂರು ರೂಪಾಯಿಗೆ ಮಾರಿಬಿಟ್ಟರು.

 

ರಸ್ಕಿನ್ ಬಾಂಡ್‌ರ ಮಾತೃ ಮೂಲ ಇಂಗ್ಲೆಂಡ್. ಆದರೂ ಬದುಕಿನ ನೆಲ ಭಾರತವೇ ಆಗಿದೆ. ಈ ನಾಡನ್ನು ಬಿಟ್ಟು ಬದುಕಿರಲಾರೆ ಎಂಬಷ್ಟು ಸಾವಯವ ಅವಿನಾಭಾವ ಬಂಧವನ್ನು, ಸಂಬಂಧವನ್ನು ಹೊಂದಿದ್ದಾರೆ. ಜೀವನ ನಿರ್ವಹಣೆಗಾಗಿ ಬರವಣಿಗೆಯನ್ನೇ ಆಶ್ರಯಿಸಿದ ನಮ್ಮ ದೇಶದ ವಿರಳ ಲೇಖಕರಲ್ಲಿ ರಸ್ಕಿನ್‌ರೂ ಒಬ್ಬರು.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ 1934 ರ ಮೇ 19 ರಂದು ಜನಿಸಿದ ರಸ್ಕಿನ್ ಬಾಂಡ್ ನೂರಾರು ಕಥೆಗಳು, ಪ್ರಬಂಧಗಳು, ಕಾದಂಬರಿಗಳು ಹಾಗೂ ಪ್ರವಾಸಕಥನಗಳನ್ನು ಬರೆದಿದ್ದಾರೆ. ಭಾರತದ ಮಸ್ಸೂರಿಯ ಲ್ಯಾಂಡೋರ್ನ್ ನಲ್ಲಿ ಅವರು ತಾವು ದತ್ತು ಪಡೆದ ಕುಟುಂಬದೊಂದಿಗೆ ವಾಸಿಸುತ್ತಾರೆ. ಭಾರತದಲ್ಲಿ ಮಕ್ಕಳ ಶಿಕ್ಷಣಕ್ಕೆ ರಸ್ಕಿನ್ ಬಾಂಡ್ ಅವರು ನೀಡಿರುವ ಸಾಹಿತ್ಯಕ ಕೊಡುಗೆಯನ್ನು ಪರಿಗಣಿಸಿ ಭಾರತದ ಕೇಂದ್ರ ಸಾಹಿತ್ಯ ಅಕಾಡೆಮಿಯು ಅವರನ್ನು 1992 ರಲ್ಲಿ ಗೌರವಿಸಿದೆ. 1999 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2014 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ.

-(ಅನುವಾದ) ಡಿ ಜಿ ಮಲ್ಲಿಕಾರ್ಜುನ್ ಶಿಡ್ಲಘಟ್ಟದವರು. ಮೆಡಿಕಲ್ ಶಾಪ್ ನಡೆಸುವ ಮಲ್ಲಿಕಾರ್ಜುನ್ ಅವರ ಆಸಕ್ತಿಗಳು ಮತ್ತು ಪ್ರವೃತ್ತಿಗಳು ಹಲವು. ಅತ್ಯುತ್ತಮ ಫೋಟೋಗ್ರಾಫರ್ ಆಗಿ ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ಪ್ರವಾಸದ ಹುಚ್ಚು ಕೂಡ. ಅವರ ಅನುವಾದದ ‘ರಸ್ಕಿನ್ ಬಾಂಡ್ ಕಥೆಗಳು’ ಪುಸ್ತಕ ಕನ್ನಡ ಓದುಗ ವಲಯದಲ್ಲಿ ಬಹಳ ಗಮನ ಸೆಳೆಯಿತು. ಮಲ್ಲಿಕಾರ್ಜುನ್ ಅವರ ಇತರ ಪುಸ್ತಕಗಳು ಅರೆಕ್ಷಣದ ಅದೃಷ್ಟ (ನಿಸರ್ಗಕ್ಕೆ ಸಂಬಂಧಿಸಿದ ಚಿತ್ರ ಲೇಖನಗಳ ಸಂಗ್ರಹ), ಕ್ಲಿಕ್ (ಚಿತ್ರ ಲೇಖನಗಳ ಸಂಗ್ರಹ), ಚಿಟ್ಟೆಗಳು (ಚಿಟ್ಟೆಗಳ ಕುರಿತಂತೆ ಚಿತ್ರಗಳು ಮತ್ತು ಮಾಹಿತಿ), ಭೂತಾನ್ – ನಳನಳಿಸುವ ಪ್ರಶಾಂತತೆಯ ನಾಡಿನಲ್ಲಿ  (ಪ್ರವಾಸ ಕಥನ), ನಮ್ಮ ಶಿಡ್ಲಘಟ್ಟ (ಶಿಡ್ಲಘಟ್ಟ ತಾಲ್ಲೂಕಿನ ಸಮಗ್ರ ಪರಿಚಯ – ಚಿತ್ರ ಸಹಿತ), ಯೋರ‍್ದಾನ್ ಪಿರೆಮಸ್ (ಜೋರ‍್ಡಾನ್ – ಈಜಿಪ್ಟ್ ಪ್ರವಾಸಕಥನ)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights