ಅಬಕಾರಿ ಅಧಿಕಾರಿಗಳಿಗೆ ಸಿಕ್ತು ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮಾದಕ ವಸ್ತು…!

ಮದುವೆ ಆಮಂತ್ರಣ, ಉಡುಪುಗಳನ್ನೆಲ್ಲ ಯಾರು ಪರಿಶೀಲಿಸುತ್ತಾರೆ. ವಿಮಾನ ನಿಲ್ದಾಣದಲ್ಲಿ ಸುಲಭವಾಗಿ ಪಾಸ್ ಆಗಿಬಿಡಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿನ ತಪಾಸಣೆ ಬಿಗಿಯಾಗಿದ್ದು, ಮದುವೆ ಆಮಂತ್ರಣ, ಉಡುಪುಗಳನ್ನು ಕಳುಹಿಸಿದವರ ಲೆಕ್ಕಾಚಾರ ತಲೆಕೆಳಗಾಗಿತ್ತು.

ಹೌದು… ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗುತ್ತಿರುವ ಎರಡನೇ ಪ್ರಕರಣ ಇದಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಫೆ.18 ರಂದು ಇದೇ ರೀತಿ 5 ಕೆಜಿ ಎಫೆಡ್ರಿನ್ ಪುಡಿಯನ್ನು ಆಸ್ಟ್ರೇಲಿಯಾಗೆ ಕಳುಹಿಸುವ ಪ್ರಯತ್ನ ನಡೆದಿತ್ತು. ಆ ಸಂದರ್ಭದಲ್ಲೂ ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಾಣಿಕೆ ತಡೆದಿದ್ದರು. ಫೆ.18ರ ಘಟನೆ ನಂತರ ತೀವ್ರ ನಿಗಾ ವಹಿಸಿದ್ದ ಕಸ್ಟಮ್ಸ್ ಅಧಿಕಾರಿಗಳಿಗೆ ಕಳೆದ ನಾಲ್ಕು ದಿನಗಳಲ್ಲೇ ಮತ್ತೊಂದು ಪ್ರಕರಣ ಪತ್ತೆಯಾಗಿದೆ.

ಚೆನ್ನೈನಲ್ಲಿ ಮದುವೆಯೊಂದು ನಡೆಯುತ್ತಿದೆ ಎಂಬಂತೆ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸಲಾದ ಈ ಆಹ್ವಾನ ಪತ್ರಿಕೆ ಆಕರ್ಷಣೀಯವಾಗಿದ್ದು, ಎರಡೂ ಮಡಿಕೆಗಳನ್ನು ಹೊಂದಿದೆ. ಪ್ರತಿಯೊಂದು ಭಾಗದಲ್ಲೂ ತಲಾ 60 ಗ್ರಾಂ ಎಫೆಡ್ರಿನ್ ಪುಡಿಯನ್ನು ತೆಳ್ಳಗೆ ಪೇಪರ್ ಆಕೃತಿಯಲ್ಲೇ ಹರಡಿ ಅಡಗಿಸಿಡಲಾಗಿದೆ.

ಆಹ್ವಾನ ಪತ್ರಿಕೆಯ (ಮೇಲು ಹೊದಿಕೆ ಕಾರ್ಡ್)ಹೊರಭಾಗದ ಫೋಲ್ಡರ್ ದಪ್ಪವಾಗಿದ್ದು, ಅದನ್ನು ಕತ್ತರಿಸಿ ತೆಗೆದಾಗ ಅದರಲ್ಲಿ ತೆಳ್ಳಗೆ ಜೋಡಿಸಿದ್ದ ಎಫೆಡ್ರಿನ್ ಪುಡಿಯ ಲೇಯರ್ ಕಂಡು ಬಂದಿದೆ. ಈ ರೀತಿ ಒಟ್ಟು 43 ಆಹ್ವಾನ ಪತ್ರಿಕೆಗಳಿದ್ದು, ಪ್ರತಿಯೊಂದರಲ್ಲೂ ಎರಡು ಪದರಗಳಲ್ಲಿ ತಲಾ 60 ಗ್ರಾಂನಂತೆ 120 ಗ್ರಾಂ ಪುಡಿ ಅಡಗಿಸಿಟ್ಟು, ಒಟ್ಟು 86 ಪಾಲಿಥಿನ್ ಪೌಚ್‍ಗಳಲ್ಲಿ ಸರಿಸುಮಾರು 5 ಕೆಜಿ ಪುಡಿಯನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.

ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಎಫೆಡ್ರಿನ್ 5 ಲಕ್ಷ ರೂ. ಬೆಲೆ ಬಾಳಲಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಿಸುಮಾರು ಒಂದು ಕೋಟಿಗೂ ಹೆಚ್ಚು ದರವಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದಲ್ಲೇ ಎರಡು ಪ್ರಮುಖ ಪ್ರಕರಣಗಳು ಪತ್ತೆಯಾಗಿರುವುದರಿಂದ ಎಚ್ಚರಗೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಕೇಂದ್ರದ ಕಂದಾಯ ಇಲಾಖೆ, ಆರ್ಥಿಕ ಇಲಾಖೆ ಸಹಯೋಗದಲ್ಲಿ ತನಿಖೆ ಕೈಗೊಳ್ಳುತ್ತಿದ್ದಾರೆ. ತಮಿಳುನಾಡಿನ ಮಧುರೈನಿಂದ ಕೊರಿಯರ್ ಮೂಲಕ ಈ ಪಾರ್ಸೆಲ್‍ಗಳು ಬಂದಿವೆ.

ಮದುವೆಯ ಆಹ್ವಾನ ಪತ್ರಿಕೆಗಳನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಪತ್ತೆಯಾಗಿದೆ. ಅನುಮಾನ ಬರಬಾರದು ಎಂಬ ಕಾರಣಕ್ಕಾಗಿ ಆಹ್ವಾನ ಪತ್ರಿಕೆಗಳ ಜೊತೆ ಐದಾರು ಸೀರೆಗಳು, ಧೋತಿಗಳನ್ನಿಟ್ಟು ಉಡುಗೊರೆಯ ಪಾರ್ಸೆಲ್ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಆಸ್ಟ್ರೇಲಿಯಾದ ಸಿಡ್ನಿಗೆ ರವಾನೆಯಾಗುತ್ತಿದ್ದ ಈ ಮಾದಕ ದ್ರವ್ಯದ ಕಚ್ಚಾ ಸರಕಿನ ಪೂರೈಕೆ ಹಿಂದೆ ಭಾರೀ ಜಾಲವೊಂದು ಇರುವ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ಕೇಸು ದಾಖಲಿಸಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ತಮಿಳುನಾಡಿನ ಮಧುರೈನಿಂದ ಕೊರಿಯರ್ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಈ ಸರಕನ್ನು ಆಸ್ಟ್ರೇಲಿಯಾದ ಸಿಡ್ನಿಗೆ ರವಾನಿಸಲು ಬುಕ್ ಮಾಡಿರುವ ಮಾಹಿತಿ ಇದೆ. ಈ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ ಅಬಕಾರಿ ಸುಂಕದ ಜಂಟಿ ಆಯುಕ್ತ ಎಂ.ಜೆ.ಚೇತನ್ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights