ಅಸ್ಸಾಂ ಚುನಾವಣೆಯಲ್ಲಿ ಬಾರ್ಖೋಲಾ ಕ್ಷೇತ್ರಕ್ಕಿದೆ ವಿಶೇಷತೆ; ಯಾಕೆ ಗೊತ್ತೇ?
ಚುನಾವಣೆಗಳಲ್ಲಿ ಪಕ್ಷಗಳ ಅಥವಾ ಪಕ್ಷದ ಪ್ರಮುಖ ನಾಯಕರ ಕಾರಣಕ್ಕಾಗಿ ಕೆಲವು ಕ್ಷೇತ್ರಗಳು ವಿಶೇಷತೆಯನ್ನು ಪಡೆದುಕೊಂಡಿರುತ್ತವೆ. ಆದರೆ, ಅಸ್ಸಾಂನ ಬಾರ್ಖೋಲಾ ವಿಧಾನಸಭಾ ಕ್ಷೇತ್ರವು ಸ್ವತಂತ್ರ ಅಭ್ಯರ್ಥಿ ಮತ್ತು ಗೆದ್ದವರು ಹಾಗೂ ಸೋತವರ ನಡುವಿನ ಅಂತರಕ್ಕಾಗಿ ವಿಶೇಷತೆಯನ್ನು ಪಡೆದುಕೊಂಡಿದೆ.
ಬಾರ್ಖೋಲಾ ಕ್ಷೇತ್ರವು ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿದೆ. ಇದು ಸಿಲ್ಚಾರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಈ ವಿಧಾನಸಭಾ ಕ್ಷೇತ್ರದಲ್ಲಿ 2016ರ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಒಟ್ಟು 1,30,082 ನೋಂದಾಯಿತ ಮತದಾರರಿದ್ದರು. ಈ ಪೈಕಿ ಶೇ 80.36 ರಷ್ಟು ಮತದಾನವಾಗಿತ್ತು.
2016ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬಿಜೆಪಿ ಅಭ್ಯರ್ಥಿಯಾದ, ಕಿಶೋರ್ ನಾಥ್ ಅವರು ಕೇವಲ 42 ಮತಗಳ ಅಂತರದಿಂದ ಸ್ವತಂತ್ರ ಅಭ್ಯರ್ಥಿ ಮಿಸ್ಬಾಹುಲ್ ಇಸ್ಲಾಂ ಲಸ್ಕರ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು.
ಬಿಜೆಪಿಯ ಕಿಶೋರ್ ನಾಥ್ 36,482 ಮತಗಳನ್ನು ಪಡೆದು ಕೇವಲ 42 ಮತಗಳ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸಿದರು.
2011 ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿತ್ತು. ಆಗ 44,824 ಮತಗಳನ್ನು ಗಳಿಸಿದ ಕಾಂಗ್ರೆಸ್ ನ ರೂಮಿ ನಾಥ್ ಅವರು ಅಂದೂ ಸ್ವತಂತ್ರ ಅಭ್ಯರ್ಥಿಯಾಗಿದ್ದ ಲಸ್ಕರ್ ಅವರನ್ನು ಸೋಲಿಸಿದ್ದರು. ಆ ಚುನಾವಣೆಯಲ್ಲಿ ಲಸ್ಕರ್ ಅವರು 34,189 ಮತಗಳನ್ನು ಪಡೆದುಕೊಂಡಿದ್ದರು.
2011ರ ಚುನಾವಣೆಯಲ್ಲಿ 34,189 ಮತಗಳನ್ನು ಪಡೆದಿದ್ದ ಲಸ್ಕರ್ ಅವರು, 2016ರ ಚುನಾವಣೆಯಲ್ಲಿ 36,440 ಮತಗಳನ್ನು ಪಡೆದಿದ್ದಾರೆ. ಅವರು ಪಡೆದ ಮತಗಳ ಪ್ರಮಾಣ ಕೊಂಚವೇ ಏರಿಕೆಯಾಗಿದೆ. ಆದರೆ, ಕಾಂಗ್ರೆಸ್‌ನ ಓಟುಗಳೆಲ್ಲವೂ 2016ರಲ್ಲಿ ಬಿಜೆಪಿಯ ಪಾಲಾಗಿವೆ.
ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರಗಳ ಮತದಾರರು ಯಾರ ಕಡೆಗೆ ಒಲಿಯುತ್ತಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಲಸ್ಕರ್ ಅವರು ಈ ಬಾರಿಯೂ ಚುನಾವಣೆಗೆ ಇಳಿಯುತ್ತಾರೆಯೇ? ಅವರು ಚುನಾವಣಾ ಕಣಕ್ಕಿಳಿದರೆ ಅವರಿಗೆ ಮತದಾರರು ಮತ ನೀಡುವರೇ ಎಂಬುದು ಕುತೂಹಲ ಮೂಢಿಸಿದೆ.
ಅಸ್ಸಾಂನ ಒಟ್ಟು 126 ಕ್ಷೇತ್ರಗಳ ವಿಧಾನಸಭಾ ಚುನಾವಣೆ ಏಪ್ರಿಲ್ ಅಥವಾ ಮೇನಲ್ಲಿ ನಡೆಯಲಿದೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ತಿರಸ್ಕರಿಸುತ್ತೇವೆ – ಪಂಜಾಬ್ ಬಿಜೆಪಿ