ಸಂಸತ್‌ ಅಧಿವೇಶನ: ಕೃಷಿ ಕಾಯ್ದೆಗಳ ವಿರುದ್ದ ಜಂತರ್ ಮಂತರ್‌ನಲ್ಲಿ ರೈತರ ಪ್ರತಿಭಟನೆ; ವಿಪಕ್ಷಗಳ ಬೆಂಬಲ!

ಕಳೆದ ನಾಲ್ಕು ದಿನಗಳಿಂದ ಸಂಸತ್ತಿನ ಮಾನ್ಸೂನ್‌ ಅಧಿವೇಶನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ 200 ರೈತರು ದೆಹಲಿಯ ಜಂತರ್‌ ಮಂತರ್‌ಗೆ ತೆರಳಿದ್ದು, ಅಸಲಿ ಅಧಿವೇಶನ ಮತ್ತು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದೇ ವೇಳೆ, ರೈತರನ್ನು ಬೆಂಬಲಿಸಿ ಕಾಂಗ್ರೆಸ್, ಟಿಎಂಸಿ, ಸಿಪಿಐ, ಸಿಪಿಐ, ಡಿಎಂಕೆ, ಅಕಾಲಿ ದಳ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

“ಅವರು ಅಸತ್ಯ, ಅನ್ಯಾಯ, ದುರಹಂಕಾರ ತೋರಿಸುತ್ತಿದ್ದಾರೆ. ನಾವು ಸತ್ಯಾಗ್ರಹಿಗಳು, ನಿರ್ಭೀತರು, ಇಲ್ಲಿ ಒಂದಾಗಿ ನಿಂತಿದ್ದೇವೆ. ಜೈ ಕಿಸಾನ್” ಎಂದು ರಾಹುಲ್ ಗಾಂಧಿ ಪ್ರತಿಭಟನೆಯ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.

ಶಿರೋಮಣಿ ಅಕಾಲಿ ದಳದ ಸಂಸದರು ಸಂಸತ್ತಿನ ಮುಂದೆ ಕೃಷಿ ಕಾಯ್ದೆಗಳ ವಿರುದ್ಧ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಮುಂದೆ ಭಿತ್ತಿಪತ್ರಗಳನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಡಪಕ್ಷಗಳು, ಆರ್‌ಜೆಡಿ, ಡಿಎಂಕೆ ಸೇರಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಕೃಷಿ ಕಾಯ್ದೆಗೆ ವಿರೋಧಿಸಿ BJP ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹರಿಯಾಣ ಶಾಸಕರ ನಿವಾಸದ ಮೇಲೆ ಐಟಿ ದಾಳಿ!

ಇನ್ನೊಂದೆಡೆ ರೈತರು ಜಂತರ್ ಮಂತರ್‌ನಲ್ಲಿ ‘ಕಿಸಾನ್ ಪಾರ್ಲಿಮೆಂಟ್’ ನಡೆಸುವ ಮೂಲಕ ಹೊರಗಿನಿಂದ ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ. 200 ಕ್ಕೂ ಹೆಚ್ಚು ರೈತರು ಸಿಂಘು ಗಡಿಯಿಂದ ಪಾದಯಾತ್ರೆ ನಡೆಸಿ ಜಂತರ್ ಮಂತರ್ ತಲುಪಿದ್ದಾರೆ. ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್, ಬಿಕೆಯುವಿನ ರಾಕೇಶ್ ಟಿಕಾಯತ್ ಸೇರಿದಂತೆ ಪ್ರಮುಖರ ಹೋರಾಟದ ನೇತೃತ್ವ ವಹಿಸಿದ್ದಾರೆ.

ಕೃಷಿ ಕಾಯ್ದೆಗಳಿಗೆ ಚಿಕಿತ್ಸೆ ಸಂಸತ್ತಿನಲ್ಲಿ ನೀಡಬೇಕು. ಸಂಸತ್ತಿನಲ್ಲಿ ಕುಳಿತಿರುವವರಿಗೆ ನಾವು ಚಿಕಿತ್ಸೆ ನೀಡುತ್ತೇವೆ. ‘ಎಂಟು ತಿಂಗಳ ಹಿಂದೆ ಸರ್ಕಾರ ನಮ್ಮನ್ನು ರೈತರೆಂದು ಪರಿಗಣಿಸಲು ಸಿದ್ದರಿರಲಿಲ್ಲ. ಈಗ ಪರಿಗಣಿಸುತ್ತಿದ್ದಾರೆ. ಅವರು ಷರತ್ತಬದ್ದ ಮಾತುಕತೆಯನ್ನು ಮಾತ್ರ ಬಯಸುತ್ತಿದ್ದಾರೆ. ಅದಕ್ಕೆ ನಮ್ಮ ಒಪ್ಪಿಗೆಯಿಲ್ಲ’ ಎಂದು ರಾಕೇಶ್ ಟಿಕಾಯತ್ ಹೇಳಿದರೆ “ಸಂಸತ್ತನ್ನು ಹೇಗೆ ನಡೆಸಬೇಕು ಎಂಬುದನ್ನು ನಾವು ಒಕ್ಕೂಟ ಸರ್ಕಾರಕ್ಕೆ ತೋರಿಸುತ್ತೇವೆ” ಎಂದು ರೈತ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಆಗಸ್ಟ್ 09ರವರೆಗೂ ಪ್ರತಿದಿನ ನಮ್ಮ ಕಿಸಾನ್ ಪಾರ್ಲಿಮೆಂಟ್ ನಡೆಯಲಿದೆ. ನಾವು ಶಾಂತಿ ಮತ್ತು ಉತ್ಸಾಹದಿಂದ ಅಧಿವೇಶನ ನಡೆಸುತ್ತೇವೆ ಎಂದು ರೈತರು ಘೋಷಿಸಿದ್ದಾರೆ. ರೈತ ಹೋರಾಟವನ್ನು ವರದಿ ಮಾಡಲು ಪತ್ರಕರ್ತರಿಗೆ ಅವಕಾಶ ನೀಡುತ್ತಿಲ್ಲ, ಜಂತರ್ ಮಂತರ್ ಮೈದಾನ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಪತ್ರಕರ್ತರು ಆರೋಪಿಸಿ ಧರಣಿ ನಡೆಸಿದ್ದಾರೆ.

ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ದದ ಪ್ರತಿಭಟನೆಯಲ್ಲಿ 500 ರೈತರ ಸಾವು; ಕುಗ್ಗದ ರೈತರು: ರಾಹುಲ್‌ಗಾಂಧಿ

Spread the love

Leave a Reply

Your email address will not be published. Required fields are marked *