FACT CHECK | ಘಟನೆ ಪಶ್ಚಿಮ ಬಂಗಾಳದ್ದು ಅಲ್ಲ, ವ್ಯಕ್ತಿ ಮುಸಲ್ಮಾನನು ಅಲ್ಲ! ಈ ಸ್ಟೋರಿ ಓದಿ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಕೆಲವು ದಿನಗಳ ಹಿಂದೆ ಭುಗಿಲೆದ್ದ ಹಿಂಸಾಚಾರದಿಂದ ಹಲವರ ಪ್ರಾಣವನ್ನು ಬಲಿ ತೆಗೆದುಕೊಂಡಿತು. ಅನೇಕ ಜನರು ಗಾಯಗೊಂಡು, ಸರ್ಕಾರಿ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲಿ ಈಗಷ್ಟೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಮಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪೋಟೊವೊಂದು ಪ್ರಸಾರವಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರತ  ಸಂಚಾರಿ ಪೊಲೀಸ್ ಅಧಿಕಾರಿಯ ಮೇಲೆ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿದ್ದಾನೆಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಶಶಿ ಎಂಬ ಎಕ್ಸ್‌ ಬಳಕೆದಾರರೊಬ್ಬರು ಫೋಟೊವನ್ನು ಹಂಚಿಕೊಂಡಿದ್ದು, “ಬಂಗಾಳ ಪೊಲೀಸ್ ಅಧಿಕಾರಿಯ ದವಡೆಯನ್ನ ಬಾಂಗ್ಲಾದೇಶದ ದಂತ ವೈದ್ಯ ಪರೀಕ್ಷೆ ಮಾಡ್ತಿದ್ದಾನೆ. ಈ ಫೋಟೋದಲ್ಲಿ ನಿಮಗೆ ಬೇರೆ ಏನಾದ್ರೂ ಕಾಣಿಸಿದ್ರೆ, ನೀವು ಫ್ಯಾಸಿಸ್ಟ್ ಅಂತ ನಂಬಿ,” ಅಂತ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪತ್ರಿಕೆಯಲ್ಲಿ ಪ್ರಕಟವಾಗಿರುವ  ಲೇಖನದ ಜೊತೆ ಫೋಟೋವನ್ನು ಸುಮಾರು ಎರಡು ವರ್ಷಗಳಿಂದ ಅಂದರೆ 2020 ರಿಂದ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ  ಮಾಹಿತಿ ಲಭ್ಯವಾಗಿದೆ. ವೃತ್ತಪತ್ರಿಕೆ ಕ್ಲಿಪ್ಪಿಂಗ್ ಪ್ರಕಾರ, ರಾಜಸ್ಥಾನದ ಜೋಧ್‌ಪುರದ ಘಂಟಾಘರ್‌ನ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ (ಅನುಮತಿ ಇಲ್ಲದೆ) ಗಾಡಿ ನಿಲ್ಲಿಸಿಕೊಂಡು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಕೈಗಾಡಿಗಳನ್ನು ತೆರೆವುಗೊಳಿಸುವ ಸಂದರ್ಭದಲ್ಲಿ  ಬೀದಿ ಬದಿಯ ವ್ಯಾಪಾರಿಯೊಬ್ಬರ ಗಾಡಿಯನ್ನು ವಶಪಡಿಸಿಕೊಳ್ಳಲು ಮುಂದಾದಾಗ ವ್ಯಾಪಾರಿಯೂ ಕೋಪಗೊಂಡು ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ ಮಾಡಿದ್ದಾನೆ.

ಮತ್ತಷ್ಟು ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳೊಂದಿಗೆ  Google ಸರ್ಚ್ ಮಾಡಿದಾಗ, 2016 ರಲ್ಲಿ ಪ್ರಕಟವಾದ ಕೆಲವು ಸುದ್ದಿಗಳು (ಇಲ್ಲಿ ಮತ್ತು ಇಲ್ಲಿ) ಕಂಡುಬಂದಿವೆ. ದೈನಿಕ್ ಭಾಸ್ಕರ್ ಲೇಖನದ ಪ್ರಕಾರ, ಹೆಡ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ತಳ್ಳು ಗಾಡಿಯ ವ್ಯಾಪಾರಿ ನಾಗೋರಿಯಾ ಬೇರಾ ನಿವಾಸಿ ಪ್ರೇಮಚಂದ್ ಮಾಲಿ ಎಂದು ತಿಳಿದು ಬಂದಿದೆ. ಮತ್ತವನ ತಂದೆಯ ಹೆಸರು ಧರ್ಮೇಂದ್ರ ಎಂದು ತಿಳಿದು ಬಂದಿದೆ. ಟ್ರಾಫಿಕ್ ಹೆಡ್ ಕಾನ್ ಸ್ಟೇಬಲ್ ಹೆಸರು ಶೋಭರಾಮ್ ಎನ್ನಲಾಗಿದೆ.

ಮರು ದಿನ ಶನಿವಾರ ಗಂಟಾಘರ್ ಏರಿಯಾದಲ್ಲಿ ಟ್ರಾಫಿಕ್ ಪೊಲೀಸರು ಅತಿಕ್ರಮಣದ ವಿರುದ್ಧ ಕ್ರಮ ಕೈಗೊಂಡಿದ್ದಲ್ಲದೆ, ಹೆಡ್ ಕಾನ್‌ಸ್ಟೆಬಲ್ ಕೊಟ್ಟ ರಿಪೋರ್ಟ್ ಮೇಲೆ ಧಮೇಂದ್ರನ ವಿರುದ್ಧ ಕೇಸ್ ದಾಖಲಿಸಿದ್ದರು. ನಾಗೌರಿಯಾ ಬೇರಾದಲ್ಲಿ ವಾಸವಾಗಿದ್ದ ಧಮೇಂದ್ರನ ಮೇಲೆ, ಪೊಲೀಸರಿಗೆ ಹಲ್ಲೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲಿಸಿಕೊಂಡಿದ್ದರು. ಆದರೆ ಆತ ತಲೆ ಮರೆಸಿಕೊಂಡಿದ್ದ ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚಿತ್ರದಲ್ಲಿ ಕಾಣುವ ವ್ಯಕ್ತಿ ಮುಸ್ಲಿಂ ಅಲ್ಲ ಅಥವಾ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿಲ್ಲ. ಚಿತ್ರದಲ್ಲಿ ಕಾಣುವ ಪೊಲೀಸ್ ಸಿಬ್ಬಂದಿ ಶೋಭರಾಮ್, ಆರೋಪಿಯ ಹೆಸರು ಧರ್ಮೇಂದ್ರ ಎಂದು ಅವರು ಆಲ್ಟ್ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಈ ಘಟನೆ 2016 ರಲ್ಲಿ ರಾಜಸ್ಥಾನದ ಗಂಟಾಘರ್ ಏರಿಯಾದಲ್ಲಿ ನಡೆದಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫ್ಯಾಕ್ಟ್‌ಚೆಕ್: ಮುಸ್ಲಿಂ ವ್ಯಕ್ತಿಯಿಂದ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ! ವಾಸ್ತವವೇನು?

ಇದೇ ಫೋಟೊವನ್ನು ಈ ಹಿಂದೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಪೊಲೀಸ್‌ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಮುಸ್ಲಿಂ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಆಗ ಏನ್‌ಸುದ್ದಿ.ಕಾಂ ತನಿಖೆ ನಡೆಸಿ ವಾಸ್ತವಾಂಶ ಏನೆಂದು ವರದಿ ಮಾಡಿತ್ತು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ‘ಎಸಿಪಿ ಕಾರಿನಲ್ಲೇ ಪ್ರತಿಭಟನಾಕಾರರ ಡ್ರಾಪ್‌’ ಎಂದು ಸುಳ್ಳು ವರದಿ ಮಾಡಿದ ಪಬ್ಲಿಕ್ ಟಿವಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights