FACT CHECK | ‘ಎಸಿಪಿ ಕಾರಿನಲ್ಲೇ ಪ್ರತಿಭಟನಾಕಾರರ ಡ್ರಾಪ್’ ಎಂದು ಸುಳ್ಳು ವರದಿ ಮಾಡಿದ ಪಬ್ಲಿಕ್ ಟಿವಿ
ವಕ್ಫ್ ತಿದ್ದುಪಡಿ ಕಾಯ್ದೆ 2025 ಅನ್ನು ವಿರೋಧಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಈ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ನಡೆದ ಅತಿದೊಡ್ಡ ಪ್ರತಿಭಟನೆ ಇದಾಗಿದ್ದು, ಮಂಗಳೂರಿನ ಉಲೇಮಾ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮತ್ತು ಇತರ ಹಲವಾರು ಮುಸ್ಲಿಂ ಸಂಘಟನೆಗಳು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ವಿಡಿಯೋ ವರದಿಯೊಂದನ್ನು ಪ್ರಕಟಿಸಿದ್ದು ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್ ಎಂಬ ಶೀರ್ಷಿಕೆಯೊಂದಿಗೆ ಪ್ರಸಾರ ಮಾಡಿದೆ.
ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್ https://t.co/08eyhPlXNq#Mangaluru #WaqfAct #WaqfBoard #Muslims #MuslimsProtest
— PublicTV (@publictvnews) April 19, 2025
ಟಿವಿ ವರದಿ ಪ್ರಕಟಿಸುತ್ತಿದ್ದಂತೆ ಇನ್ನೂ ಹಲವು ಮಾಧ್ಯಮಗಳು ವಕ್ಫ್ ವಿರುದ್ಧದ ಪ್ರತಿಭಟನಾಕಾರರಿಗೆ ಎಸಿಪಿ ಕಾರ್ನಲ್ಲಿ ಡ್ರಾಪ್ ಮಾಡಲಾಗಿದೆ ಎಂದೇ ವರದಿಯನ್ನು ಮಾಡಿವೆ. ಹೀಗಾಗಿ ಈ ಸುದ್ದಿ ವ್ಯಾಪಕವಾಗಿ ವೈರಲ್ ಆಗಿದೆ. ಆದರೆ ಈಗ ಕೆಲವೊಂದು ಮಾಧ್ಯಮಗಳು ಈ ಸುದ್ದಿಯನ್ನು ಡಿಲೀಟ್ ಮಾಡಿದ್ದರೆ, ಪಬ್ಲಿಕ್ ಟಿವಿ ಮಾತ್ರ ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್ ಆರೋಪಎಂದು ತನ್ನ ಸುದ್ದಿಯನ್ನು ಅಪ್ಡೇಟ್ ಮಾಡಿಕೊಂಡಿದೆ. ಹಾಗಿದ್ದರೆ ಈ ಸುದ್ದಿಯಲ್ಲಿ ಪ್ರಕಟಿಸಿದ ವರದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಪಬ್ಲಿಕ್ ಟಿವಿಯ ವೈರಲ್ ಸುದ್ದಿಯ ಕುರಿತು ಪರಿಶೀಲನೆ ನಡೆಸಲು ವೈರಲ್ ವರದಿಗೆ ಸಂಬಂಧ ಪಟ್ಟಂತೆ ಯಾವುದಾದರೂ ಅಧಿಕೃತ ಪ್ರಕಟಣೆಗಳನ್ನು ಮಂಗಳೂರಿನ ಪೊಲೀಸರು ಹೊರಡಿಸಿದ್ದಾರೆಯೇ ಎಂದು ಪರಿಶೀಲನೆ ನಡೆಸಿದೆವು. ಈ ವೇಳೆ Mangaluru City Police ಅವರ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಇಂದು (19 ಏಪ್ರಿಲ್ 2025 ರಂದು ) ಹಂಚಿಕೊಳ್ಳಲಾದ ಪತ್ರಿಕಾ ಪ್ರಕಟಣೆಯೊಂದು ಕಂಡು ಬಂದಿದೆ.

ಈ ಪ್ರಕಟಣೆಯಲ್ಲಿ ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ಮಾಧ್ಯಮಗಳು ಪ್ರಕಟಿಸಿದ ವರದಿ ಸುಳ್ಳು ಎಂದು ಸಾಭೀತಾಗಿದೆ. ಈ ವರದಿಯಲ್ಲಿ “ದಿನಾಂಕ: 18-04-2025 ರಂದು ಮಂಗಳೂರು ನಗರದ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶದ ಸಮಯದಲ್ಲಿ ಪೊಲೀಸ್ ಅಧಿಕಾರಿಯವರ ಸರ್ಕಾರಿ ಕಾರನ್ನು ಪ್ರತಿಭಟನಕಾರರು ಬಳಸಿರುವ ಕುರಿತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿರುತ್ತದೆ.” ಎಂದು ಉಲ್ಲೇಖಿಸಲಾಗಿದೆ.

ಮುಂದುವರೆದು “ಈ ಕುರಿತು ಸ್ಪಷ್ಟಿಕರಿಸುವುದೇನೆಂದರೆ, ದಿನಾಂಕ 18-04-2025 ರಂದು ಸಂಚಾರ ಬಂದೋಬಸ್ತು ಕರ್ತವ್ಯದಲ್ಲಿದ್ದ ಎ.ಸಿ.ಪಿ ಸಂಚಾರ ಉಪ ವಿಭಾಗರವರು, ಪಡೀಲ್ ಕಡೆಯಿಂದ ಕಾರ್ಯಕ್ರಮದ ಸ್ಥಳದ ಕಡೆಗೆ ತಮ್ಮ ಇಲಾಖಾ ವಾಹನ ಮೂಲಕ ಬಂದು ಇಳಿದು ಅಲ್ಲಿ ಮುಖ್ಯ ದ್ವಾರದ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿ. ನಂತರ ಕಾರ್ಯಕ್ರಮ ಮುಗಿದ ಬಳಿಕ ಎಸಿಪಿ ರವರು ಮಂಗಳೂರು ನಗರ ಕಡೆಗೆ ಸಂಚಾರ ನಿಯಂತ್ರಿಸುವ ಕರ್ತವ್ಯಕ್ಕೆ ಬರಲು ಹೆದ್ದಾರಿಯ ರಸ್ತೆ ವಿಭಜಕ ದಾಟಿ ಅವರ ಚಾಲಕರಿಗೆ ಮುಂದೆ ಅಡ್ಯಾರು ಕಟ್ಟೆ ಬಳಿ ಯು ಟರ್ನ್ ಮಾಡಿ ವಾಪಾಸ್ಸು ಬರಲು ಸೂಚಿಸಿರುತ್ತಾರೆ. ವಾಹನ ಚಾಲಕರಾದ ಶ್ರೀ ಬೈರೇಗೌಡರವರು ಅಡ್ಯಾರು ಕಟ್ಟೆ ಬಳಿ ಬ್ಯಾರಿಕೇಡ್ ಹಾಕಿದ್ದ ಕಾರಣ ಸಹ್ಯಾದ್ರಿ ಕಡೆ ಹೋಗುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ಅಡ್ಯಾರ್ ಗಾರ್ಡನ್ ಬಳಿ ಸುಮಾರು 19.30 ಗಂಟೆಗೆ ಟೆಂಪೋ ವಾಹನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ(16 ವರ್ಷ) ಡಿಕ್ಕಿ ಹೊಡೆದು ಬಲಕಾಲಿನ ಪಾದದ ಮೇಲೆ ಚಕ್ರ ಹಾದುಹೋದ ಪರಿಣಾಮ ಗಾಯಗೊಂಡು ಸುಮಾರು ಜನ ಸೇರಿದ್ದರು. ಅಲ್ಲೇ ಪಕ್ಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಮತ್ತು ಗಾಯಾಳುವಿನ ಕಡೆಯವರು ಎಸಿಪಿ ರವರ ವಾಹನವನ್ನು ನಿಲ್ಲಿಸಿ, ಗಾಯಾಳುವನ್ನು ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿರುತ್ತಾರೆ. ನಂತರ ಸದರಿ ಗಾಯಾಳುವನ್ನು ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗಿರುತ್ತದೆ.” ಎಂದು ಪ್ರಕರಣದ ಕುರಿತು ಮಾಹಿತಿಯನ್ನು ಕೂಡ ನೀಡಲಾಗಿದೆ.

ಇನ್ನು ಅಪಘಾತಕ್ಕೆ ಸಂಬಂಧ ಪಟ್ಟ ಮಾಹಿತಿಯಲ್ಲಿ “ಅಪಘಾತ ಮಾಡಿರುವ ಟೆಂಪೋ ಸಂಖ್ಯೆ: ಕೆ.ಎ. 70 9888 ಮತ್ತು ಅದರ ಚಾಲಕನನ್ನು ಸಿಬ್ಬಂದಿ ಆನಂದ ಎಂಬವರ ಮೂಲಕ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದು, ಇದರ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಅಪಘಾತ ನಡೆಯುವ ಸಮಯದಲ್ಲಿ ಕಾರ್ಯಕ್ರಮ ಪ್ರಯುಕ್ತ ಸದರಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಅಪಘಾತಕ್ಕೀಡಾದ ಗಾಯಾಳುವನ್ನು ಚಿಕಿತ್ಸೆ ಕೊಡಿಸುವ ಸಲುವಾಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿಯವರು ಅದೇ ಸಮಯಕ್ಕೆ ಬರುತ್ತಿದ್ದ ಎಸಿಪಿರವರ ವಾಹನದ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿರುವುದಾಗಿದೆ. ಅಪಘಾತದಲ್ಲಿ ಗಾಯವಾದಾಗ ಪ್ರಥಮ ಚಿಕಿತ್ಸೆ (ಗೋಲ್ಡನ್ ಹವರ್) ಕೊಡಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಪೊಲೀಸರು ಘಟನೆಯನ್ನು ನೋಡಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆಗೆ ಪೊಲೀಸ್ ಜೀಪಿನ ಚಾಲಕನೊಂದಿಗೆ ಕಳುಹಿಸಿ ಸದರಿ ಮಹಿಳಾ ಸಿಬ್ಬಂದಿಯವರು ಕರ್ತವ್ಯ ಮುಂದುವರಿಸಿರುತ್ತಾರೆ.” ಎಂದು ವಾಹನದ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಸದ್ಯಕ್ಕೆ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದು, ಪಬ್ಲಿಕ್ ಟಿವಿ ಸುಳ್ಳು ವರದಿ ಪ್ರಕಟಿಸಿದ್ದಕ್ಕಾಗಿ ಸಾರ್ವಜನಿಕರ ಬಳಿ ಕ್ಷಮೆ ಕೂಡ ಕೇಳದೆ, ಶೀರ್ಷಿಕೆ ಮತ್ತು ಸುದ್ದಿಯನ್ನು ಬದಲಾಯಿಸಿ ಅಪ್ಡೇಟ್ ಮಾಡಿದೆ. ಇದು ಪಬ್ಲಿಕ್ ಟಿವಿಯ ಹೀನ ಪ್ರತಿಕೋದ್ಯಮದ ಮತ್ತೊಂದು ಮುಖವನ್ನು ಅನಾವರಣ ಮಾಡಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ಕೂಡ ಪಬ್ಲಿಕ್ ಟಿವಿಯ ಸುದ್ದಿಗಳ ಬಗ್ಗೆ ಈ ಅನುಮಾನ ಮೂಡುವಂತೆ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಬ್ಲಿಕ್ ಟಿವಿ ಪ್ರಕಟಿಸಿದ “ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್” ಎಂಬ ಸುದ್ದಿ ಸುಳ್ಳು ನಿರೂಪನೆಯಿಂದ ಕೂಡಿದೆ. ಇದು ಸ್ವತಃ ಪಬ್ಲಿಕ್ ಟಿವಿ ಸಂಸ್ಥೆಗೆ ಅರಿವಾಗಿ ಸುದ್ದಿಯನ್ನು ಅಪ್ಡೇಟ್ ಮಾಡಿದ್ದಾರೆ. ಜೊತೆಗೆ ಸುಳ್ಳು ಸುದ್ದಿಯ ವಿರುದ್ಧ ಮಂಗಳೂರು ಸಿಟಿ ಪೊಲೀಸರು ಕೂಡ ಸ್ಪಷ್ಟನೆಯನ್ನು ನೀಡಿದ್ದಾರೆ.
ಕೃಪೆ : ಕನ್ನಡ ಫ್ಯಾಕ್ಟ್ಚೆಕ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಧ್ಯಪ್ರದೇಶದ ವಿಡಿಯೋವನ್ನು ಪಶ್ಚಿಮ ಬಂಗಾಳದ್ದು ಎಂದು ತಪ್ಪಾಗಿ ಹಂಚಿಕೆ

