ರೈತರನ್ನು ಭಯೋತ್ಪಾದಕರೆಂದ ‘ಗೋದಿ ಮೀಡಿಯಾ’; ಮಾಧ್ಯಮಗಳ ವರ್ತನೆ ಹೀಗಿದೆ ನೋಡಿ!

ಮೋದಿ ಸರ್ಕಾರದ ಹೊಸ ಕೃಷಿ ನೀತಿಗಳ ವಿರುದ್ದ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ರೈತ ವಿರೋಧಿ ಕೃಷಿ ನೀತಿಗಳ ವಿರುದ್ಧದ ರೈತರ ಆಕ್ರೋಶ ರಾಷ್ಟ್ರೀಯ ಮಾಧ್ಯಮಗಳ ವಿರುದ್ಧವೂ ಹೊರಹೊಮ್ಮಿದೆ. ವಿಶೇಷವಾಗಿ ರಿಪಬ್ಲಿಕ್‌ ಟಿವಿ, ಜೀ ನ್ಯೂಸ್‌ ಮತ್ತು ಆಜ್‌ ತಕ್‌ ಚಾನೆಲ್‌ಗಳ ಮೇಲೆ ಕೋಪಗೊಂಡಿದ್ದಾರೆ. ಈ ಮಾಧ್ಯಮಗಳನ್ನು “ಗೋದಿ ಮೀಡಿಯಾ” ಎಂದು ಕರೆಯಲಾಗುತ್ತಿದೆ. ಅಲ್ಲದೆ, ಟೈಮ್ಸ್‌ ನೌ ನಂತಹ ಇತರ  ಕೆಲವು ಚಾನೆಲ್‌ಗಳನ್ನು ಮೋದಿ ಸರ್ಕಾರದ “ಲ್ಯಾಪ್‌ಡಾಗ್‌”ಗಳು ಎಂದು ಪರಿಗಣಿಸಲಾಗುತ್ತಿದೆ.

“ಜೀ ನ್ಯೂಸ್, ರಿಪಬ್ಲಿಕ್, ಆಜ್ ತಕ್, ನೀವು ನಕಲಿ ಸುದ್ದಿ ಪ್ರಸಾರಕರು, ನಮ್ಮನ್ನು ಒಳಗೊಳ್ಳಬೇಡಿ, ನಮ್ಮ ಸುದ್ದಿಗಳನ್ನು ಪ್ರಸಾರ ಮಾಡಬೇಡಿ. #GodiMedia” ಎಂದು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಘೋಷಿಸಿದ್ದಾರೆ. ಅಲ್ಲದೆ, ವರದಿ ಮಾಡಲು ಬಂದ ಅವರನ್ನು ಹಿಮ್ಮೆಟ್ಟಿಸಿ ಓಡಿಸಿದ್ದಾರೆ.

“ನಾವು ಮೂರ್ಖರಲ್ಲ….. ಅಂಜನಾ ಓಂ ಕಶ್ಯಪ್ ಮತ್ತು ಅರ್ನಾಬ್ ಗೋಸ್ವಾಮಿಯಂತಹ ನಿರೂಪಕರು ನಮ್ಮ ಬಗ್ಗೆ ಏನು ಹೇಳುತ್ತಾರೆಂದು ನಾವು ನೋಡುತ್ತಿದ್ದೇವೆ. ನಮಗೆ ಅವರ ಸಹಾಯದ ಅಗತ್ಯವಿಲ್ಲ” ಎಂದು ಸಿಂಗು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಇಂದ್ರಜೀತ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!

ರೈತರ ಆತಂಕ-ಆಕ್ರೋಶವನ್ನು ಗಮನದಲ್ಲಿಟ್ಟಿಕೊಂಡು ಸುದ್ದಿ ಪ್ರಸಾರ ಮಾಡಬೇಕಿದ್ದ ಮಾಧ್ಯಮಗಳು ಸರ್ಕಾರ ಬಾಲಂಗೋಚಿಗಳಾಗಿವೆ. ರೈತರ ಪ್ರತಿಭಟನೆಯನ್ನು ಛಿದ್ರಗೊಳಿಸಲು ಯತ್ನಿಸುತ್ತಿವೆ. ಅವರು ತಮ್ಮ ಪ್ರೈಮ್‌ಟೈಮ್‌ನಲ್ಲಿ ರೈತರ ಪ್ರತಿಭಟನೆಯನ್ನು ಹೇಗೆ ವಿವರಿಸಿವೆ ಎಂಬುದು ಇಲ್ಲಿದೆ.

ರಿಪಬ್ಲಿಕ್ ಟಿವಿ

“ರೈತರು ಮತ್ತು ಕೇಂದ್ರವು ಒಂದು ಉದ್ದೇಶದೊಂದಿಗೆ ಮುಂದೆ ಸಾಗುತ್ತಿರುವಾಗ, ದುರುದ್ದೇಶಪೂರಿತ ಪಕ್ಷಗಳು ಬಹಿರಂಗಗೊಳ್ಳುತ್ತವೆ” ಎಂದು ಅರ್ನಾಬ್ ಗೋಸ್ವಾಮಿ ತಮ್ಮ ಚರ್ಚೆಯಲ್ಲಿ ಘೋಷಿಸಿದರು.

“ಈ ಹಿಂದೆ ಪ್ರತಿ ಬಾಗ್‌ಗಳನ್ನು ಶಾಹೀನ್‌ ಬಾಗ್‌ ಮಾಡಿ ಎಂದು ಕರೆಕೊಟ್ಟಿದ್ದ ಚಂದ್ರಶೇಖರ್ ಆಜಾದ್ ಇದ್ದಕ್ಕಿದ್ದಂತೆ ರೈತರ ಪ್ರತಿಭಟನೆಯಲ್ಲಿ ಇಳಿಯುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ಶಾಹೀನ್‌ ಬಾಗ್‌ನಲ್ಲಿ ಸಿಎಎ ವಿರುದ್ಧ ಜನರನ್ನು ಸಜ್ಜುಗೊಳಿಸುತ್ತಿದ್ದ ಅದೇ ಯೋಗೇಂದ್ರ ಯಾದವ್ ರೈತ ಮಸೂದೆಗಳ ವಿರುದ್ದ ರೈತರಲ್ಲಿ ತಪ್ಪು ಮಾಹಿತಿ ಹರಡುವ ಅಭಿಯಾನ ನಡೆಸುತ್ತಿದ್ದಾರೆ. ರಿಪಬ್ಲಿಕ್‌ ಟಿವಿ ಹತ್ರಾಸ್‌ನಲ್ಲಿ ಬಹಿರಂಗ ಪಡಿಸಿದ ವಾದ್ರಾ ಕಾಂಗ್ರೆಸ್‌ನ ಅಜೆಂಡಾವನ್ನು ರೈತ ಪ್ರತಿಭಟನಾಕಾರರು ತಿರಸ್ಕರಿಸುತ್ತಿದ್ದಾರೆ” ಎಂದು ಗೋಸ್ವಾಮಿ ಹೇಳಿದ್ದರು.

ಇದನ್ನೂ ಓದಿ: ಶೇಮ್‌ ಆನ್ ಮೀಡಿಯಾ: ರೈತರು ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದೇಕೆ?

ರಿಪಬ್ಲಿಕ್‌ ಟಿವಿಯ ಪರದೆಯಲ್ಲಿ  #FarmersRejectPoliticss ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಮತ್ತು “ರೈತರು ರಾಜಕೀಯವನ್ನು ತಿರಸ್ಕರಿಸುತ್ತಾರೆ, ಮತ್ತೆ ಮಾತನಾಡುತ್ತಾರೆ”, “ರಾಜಕೀಕರಣದ ಪ್ರತಿಯೊಂದು ಪ್ರಯತ್ನವೂ ವಿಫಲಗೊಳ್ಳುತ್ತದೆ” ಎಂಬ ಟ್ಯಾಗ್‌ಲೈನ್‌ಗಳನ್ನು ಹರಿಬಿಟ್ಟಿತ್ತು.

ಗೋಸ್ವಾಮಿಯ ಡಿಬೆಟ್‌ನಲ್ಲಿದ್ದ ಜನತಾದಳದ ಪತ್ರಿನಿಧಿ ತನ್ವೀರ್‌ ಅಹ್ಮದ್, ರೈತರು ನರೇಂದ್ರ ಮೋದಿಯವರು ರಾಜಕೀಯವನ್ನು ಮತ್ತು ದುರಾಡಳಿತವನ್ನು ತಿರಸ್ಕರಿಸಿದ್ದಾರೆ” ಎಂದು ಹೇಳಿದಾಗ, ತಮ್ಮ ವಾಯ್ಸ್‌ ಏರಿಸಿದ ಗೋಸ್ವಾಮಿ, “ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ತನ್ವೀರ್, ರೈತರು ರಾಜಕೀಯ ಪರಾವಲಂಬಿಗಳನ್ನು ತಿರಸ್ಕರಿಸಿದ್ದಾರೆ. ರಾಜಕೀಯ ಪರಾವಲಂಬಿಗಳ ಬಗ್ಗೆ ನಾಚಿಕೆಪಡುತ್ತಾರೆ” ಎಂದು ಗೋಸ್ವಾಮಿ ಚರ್ಚೆ ನಡೆಸಿದ್ದರು.

ಜೀ ನ್ಯೂಸ್

ರೈತರ ಪ್ರತಿಭಟನೆಯಲ್ಲಿ ತಮ್ಮ ವರದಿಗಾರರನ್ನು ರೈತರು ಹೊರದೂಡುವುದನ್ನು ಕಂಡು ಕಂಗೆಟ್ಟಿದ್ದ ಜೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ, ತಮ್ಮ ಕಾರ್ಯಕ್ರಮದಲ್ಲಿ “ನಮ್ಮ ಚಾನೆಲ್ ಯಾವಾಗಲೂ “ಸತ್ಯ”ವನ್ನು ತೋರಿಸುತ್ತದೆ. ಅದಕ್ಕಾಗಿಯೇ “ರಾಷ್ಟ್ರ ವಿರೋಧಿ ಶಕ್ತಿಗಳು ಸಕ್ರಿಯಗೊಳ್ಳುವ” ಸ್ಥಳಗಳಲ್ಲಿ ನಮಗೆ ಪ್ರವೇಶವನ್ನು ನಿರಾಕರಿಸಲಾಗಿದೆ. “ಹಮರೆ ದೇಶ್ ಮೇ ಜಹಾನ್ ಜಹಾನ್ ಭೀ ದೇಶ್ ವಿರೋಧಿ ತಕಾಟೆನ್ ಸಕ್ರಿಯಾ ಹೋ ಜಾತಿ ಹೈ ವಹನ್ ವಹನ್ ಜೀ ನ್ಯೂಸ್ ಕಿ ಎಂಟ್ರಿ ಬ್ಯಾಂಡ್ ಹೋ ಜಾತಿ ಹೈ” ಎಂದು ಅವರು ಹೇಳಿಕೊಂಡಿದ್ದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇದು ಸಂಭವಿಸಿದೆ. ಈಗ ಸಿಂಗುವಿನಲ್ಲಿನ ಅದೇ ನಡೆಯುತ್ತಿದೆ. ಹೇಗಾದರೂ, “ಎಲ್ಲಾ ರೈತರು” ಜೀ ನ್ಯೂಸ್‌ಅನ್ನು ತಿರಸ್ಕರಿಸುತ್ತಿಲ್ಲ. ಅದರೆ, “ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಎತ್ತುವವರು” ನಮ್ಮನ್ನು ಹಿಂದೆ ದೂಡುತ್ತಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಆಜ್ ತಕ್

ಆಜ್‌ತಕ್‌ನ ಹಲ್ಲಾ ಬೋಲ್‌ನಲ್ಲಿ ಕಾರ್ಯಕ್ರಮದಲ್ಲಿ ಅಂಜನಾ ಓಂ ಕಶ್ಯಪ್‌ ಅವರು, ತಮ್ಮ 54 ನಿಮಿಷಗಳ ಪ್ರದರ್ಶನದಲ್ಲಿ 10 ನಿಮಿಷಗಳನ್ನು ಮಾತ್ರ ರೈತ ಪ್ರತಿಭಟನೆ ವರದಿಗೆ ಇಟ್ಟಿದ್ದರು. ಉಳಿದ ಸಮಯವನ್ನು ಶೆಹ್ಲಾ ರಶೀದ್‌ ಅವರ ಕುಟುಂಬ ಸಮಸ್ಯೆಗಳಿಗೆ ಸಂಬಂಧಿಸಿದ ‘ಬೇಟಿ ಕಾ ಪೂರಾ ಸಾಚ್’ ಪ್ರದರ್ಶನಕ್ಕಿಟ್ಟಿದ್ದರು. ಕಶ್ಯಪ್‌ ಪ್ರಕಾರ, ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರಿಗಿಂತ ರಶೀದ್‌ ಅವರ ವಿಚಾರವೇ ಮಹತ್ವದ್ದಾಗಿತ್ತು.

ಇದನ್ನೂ ಓದಿ: ಮಾಧ್ಯಮಗಳು ಸುದ್ದಿಯನ್ನು ಅವರೇ ಸೃಷ್ಟಿಸಿ ಪ್ರಸಾರ ಮಾಡುತ್ತಾರೆ: ಇವನ್ನೆಲ್ಲ ನಿರ್ಲಕ್ಷಿಸಿ: ವೈಎಸ್‌ವಿ ದತ್ತಾ

ಪ್ರದರ್ಶನದ ಕೊನೆಯಲ್ಲಿ ಅವರು ರೈತ ಪ್ರತಿಭಟನೆಗೆ ಮೀಸಲಿಟ್ಟ ಕೆಲವೇ ನಿಮಿಷಗಳಲ್ಲಿ, ರೈತರ ಬೇಡಿಕೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಸರ್ಕಾರದ ಪ್ರಸ್ತಾಪವನ್ನು ರೈತರು ಏಕೆ ತಿರಸ್ಕರಿಸಿದ್ದಾರೆ ಎಂದು ಆಜ್ ತಕ್ ವರದಿಗಾರ್ತಿ ಶ್ವೇತಾ ಸಿಂಗ್ ವಿವರಣೆಯೇ ತುಂಬಿತ್ತು.

ಟೈಮ್ಸ್ ನೌ

ತಮ್ಮ ಇಂಡಿಯಾ ಅಪ್‌ಫ್ರಂಟ್ ಡಿಬೇಟ್‌ನಲ್ಲಿ, ರಾಹುಲ್ ಶಿವಶಂಕರ್ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರೈತ ಪ್ರತಿಭಟನೆಯನ್ನು ಬೆಂಬಲಿಸಿದ ಮತ್ತು ಅದಕ್ಕೆ ಬಂದ ಟೀಕೆಗಳಿಗೆ ಸಾಕಷ್ಟು ಸಮಯವನ್ನು ವಿನಿಯೋಗಿಸಿದರು.

ದೇಶದ ಆಂತರಿಕ ವಿಷಯದಲ್ಲಿ ಜಸ್ಟಿನ್ ಟ್ರೂಡೊ ಹೇಳಿಕೆಯು ಲಾಬಿ ನಡೆಸುತ್ತಿದೆ. ಕಾಂಗ್ರೆಸ್‌ ಅದಕ್ಕೆ ಕುಮ್ಮಕ್ಕು ನೀಡಿದೆ ಎಂದು ಅವರು ವಾದಿಸಿದ್ದರು.

ಶಿವಶಂಕರ್ ಅವರ ಟೈಮ್ಸ್ ನೌ ಹ್ಯಾಶ್‌ಟ್ಯಾಗ್‌ಗಳು ಮತ್ತು ಟ್ಯಾಗ್‌ಲೈನ್‌ಗಳಾದ #ShaheenKisanConspiracy (ಶಾಹೀನ್ ಕಿಸಾನ್ ಕಾನ್‌ಸ್ಪಿರಸಿ), “ಶಾಹೀನ್ ಗ್ಯಾಂಗ್, ದಾದಿಸ್, ರಾವನ್, ಜೆಎನ್‌ಯು, ಕಾಂಗ್ ಮತ್ತು ಎಎಪಿ, ‘ಈಗ, ದೆಹಲಿಯನ್ನು ದಿಗ್ಬಂಧನ ಮಾಡಿವೆ’  ದಿಗ್ಬಂಧನವನ್ನು ಕೊಯ್ಲು ಮಾಡುತ್ತದೆ’, “ಬಿಜೆಪಿ ಹಳಿ ತಪ್ಪಿಸಲು ಮತ್ತು ಪ್ರಚೋದಿಸಲು, ‘1 ನೇ ಮುಸ್ಲಿಮರು, ಈಗ ಕಿಸಾನ್ ಪ್ರಾಪ್ಗಳಾಗಿದ್ದಾರೆ?” ಎಂದು ಅವರು ಪ್ರದರ್ಶಿಸಿದ್ದರು.

“ಮೋದಿ ಅಥವಾ ಅವರ ಸರ್ಕಾರವನ್ನು ಇಷ್ಟಪಡದ ಕೆಲವು ಅವಕಾಶವಾದಿ ಗುಂಪುಗಳು ರೈತರ ಬ್ಯಾಂಡ್‌ವ್ಯಾಗನ್ ಮೇಲೆ ಹಾರಲು ನಿರ್ಧರಿಸಿದ್ದಾರೆ” ಎಂದು ಶಿವಶಂಕರ್ ತೀರ್ಮಾನಿಸಿದ್ದರು

ದೆಹಲಿಯ ಕೊರೆವ ಚಳಿಯಲ್ಲಿ ಪ್ರತಿಭಟನೆ ನಡೆತ್ತಿರುವ ರೈತರ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಬೇಕಿದ್ದ ಮಾಧ್ಯಮಗಳು. ಹೀಗೆ, ಸರ್ಕಾರವನ್ನು ಸಮರ್ಥಿಸುತ್ತಾ ರೈತ ಪ್ರತಿಭಟನೆಯ ಹಾದಿ ತಪ್ಪಿಸುತ್ತಿವೆ. ಇದು ರೈತರ ಆಕ್ರೋಶವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಮೂಲ: ನ್ಯೂಸ್‌ ಲ್ಯಾಂಡ್ರಿ

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights