ಶೇಮ್‌ ಆನ್ ಮೀಡಿಯಾ: ರೈತರು ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದೇಕೆ?

ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ಧ ರೈತರ ಹೋರಾಟ 09ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಜೊತೆಗೆ ನಡೆದಿರುವ ಮೂರು ಸಭೆಗಳು ಮುರಿದು ಬಿದ್ದಿವೆ. ನಾಲ್ಕನೇ ಸಭೆ ನಾಳೆಯೂ ಮುಂದುವರೆಯಲಿದೆ. ರೈತರು ದೆಹಲಿ ಗಡಿಯಲ್ಲಿ ತಮ್ಮ ಆಕ್ರೋಶದ ಘೋಷಣೆ ಮೊಳಗಿಸುತ್ತಿದ್ದಾರೆ. ಅವರ ಆಕ್ರೋಶ ಮಾಧ್ಯಮಗಳ ಮೇಲೂ ಇದೆ. ಮಾಧ್ಯಮಗಳನ್ನು ಅವರು ಗೋದಿ ಮೀಡಿಯಾ ಮುರ್ದಾಬಾದ್‌ ಎಂದು ತಿರಸ್ಕರಿಸುತ್ತಿದ್ದಾರೆ. ಮಾಧ್ಯಮಗಳ ಮೇಲಿನ ರೈತರ ಆಕ್ರೋಶಕ್ಕೆ ಮಾಧ್ಯಮಗಳ ದುರ್ನಡೆಯೇ ಮುಖ್ಯ ಕಾರಣವಾಗಿದೆ.

ನವೆಂಬರ್‌ 26ರಂದು ದೇಶದ ವಿವಿಧ ರಾಜ್ಯಗಳಿಂದ ರೈತರು ದೆಹಲಿಯತ್ತ ಪ್ರತಿಭಟನಾ ಜಾಥಾ ಹೊರಟರು. ಅವರು ದೆಹಲಿ ಗಡಿ ತಲುಪುವ ವೇಳೆಗೆ ಸಾಕಷ್ಟು ಪೊಲೀಸರ ಅಡೆತಡೆಗಳನ್ನು ಎದುರಿಸಬೇಕಾಯಿತು. ಇಂದೂ ದೆಹಲಿ ಗಡಿಯಲ್ಲಿ ಅಂತದ್ದೇ ತಡೆಯನ್ನು ರೈತರು ಎದುರಿಸುತ್ತಿದ್ದಾರೆ. ರೈತರು ಪಂಜಾಬ್‌ ಮತ್ತು ಹರಿಯಾಣ ಗಡಿಯಲ್ಲಿರುವ ಶಂಭು ರಸ್ತೆಯಲ್ಲಿ ಬಂದಾಗ ಬಿಜೆಪಿ ಅಧಿಕಾರದಲ್ಲಿರುವ ಹರಿಯಾಣದ ಪೊಲೀಸರು ಅವರನ್ನು ತಡೆದರು. 150ಕ್ಕೂ ಹೆಚ್ಚು ಚಾಲಕರಿಲ್ಲದ ಟ್ರಕ್‌ಗಳನ್ನು ಹೆದ್ದಾರಿಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದರು. ಪಾಣಿಪತ್ ಮತ್ತು ಸೋನಿಪತ್‌ನಲ್ಲಿ ಹೆದ್ದಾರಿಗೆ ಅಡ್ಡಲಾಗಿ ಎಂಟು ಅಡಿ ಆಳದ ಕಂದಕಗಳನ್ನು ಅಗೆದು ಹಾಕಲಾಗಿತ್ತು. ಇದು ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿಯೂ ನಡೆಯುತ್ತಿತ್ತು.

ಇದೆಲ್ಲವನ್ನೂ ದಾಟಿ ಹರಿಯಾಣ ಪ್ರವೇಶಿಸಿದ ರೈತರ ಮೇಲೆ ಲಾಠಿ ಚಾರ್ಜ್‌, ಟಿಯರ್‌ ಗ್ಯಾಸ್‌ ಮತ್ತು ಜಲಪಿರಂಗಿಗಳನ್ನು ಬಳಸಲಾಯಿತು. ಜಲಪಿರಂಗಿಯ ನೀರಿಗೆ ಎದೆಯೊಡ್ಡಿದ ರೈತರು ಪ್ರತಿಭಟನಾ ಜಾಥವನ್ನು ನಡೆಸಿ ಮುನ್ನುಗ್ಗಿದ್ದರು. ಪೊಲೀಸರೊಂದಿಗಿನ ನಿರಂತರ ವಾಗ್ವಾದದಿಂದಾಗಿ ದೆಹಲಿಯ ಗಡಿ ತಲುಪಿರುವ ರೈತರು ಕಳೆದ ಐದು ದಿನಗಳಿಂದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಮ್ಮ ಊಟ ನಾವೇ ತಂದಿದ್ದೇವೆ: ಸರ್ಕಾರದ ಊಟ ತಿರಸ್ಕರಿಸಿ ಸ್ವಾಭಿಮಾನ ಮೆರೆದ ರೈತರು!

ನಾವು ಮೊದಲು ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಅವರ ಅಹಂಕಾರವನ್ನು ಮುರಿದಿದ್ದೇವೆ. ಈಗ ಪ್ರಧಾನಿ ಮೋದಿಯವರ ಅಹಂಕಾರವನ್ನು ಮುರಿಯಲು ಹೊರಟಿದ್ದೇವೆ. ಮಾಧ್ಯಮಗಳು ನಮ್ಮೊಂದಿಗಿರಿ. ನೀವು ನಮಗೆ ಧ್ವನಿ ನೀಡದಿದ್ದರೆ, ಮೋದಿಯವರಿಗೆ ನಮ್ಮ ಧ್ವನಿ ಹೇಗೆ ತಿಳಿಯುತ್ತದೆ ಎಂದು ರೈತರು ಮಾಧ್ಯಮಗಳಿಗೆ ಹೇಳಿದ್ದದರು. ಆದರೆ, ಮಾಧ್ಯಮಗಳು ಕೋಟಿಗೂ ಮೀರಿರುವ ರೈತರ ಹೋರಾಟವನ್ನು ಭಯೋತ್ಪಾದಕರು, ಪ್ರತ್ಯೇಕವಾದಿಗಳು ಎಂದು ಬಿಂಬಿಸುತ್ತಿವೆ.

ಹರಿಯಾಣದ ಮುಖ್ಯಮಂತ್ರಿ ಕಟ್ಟರ್‌ ಅವರು ರೈತ ಪ್ರತಿಭಟನೆಯಲ್ಲಿ “ಖಲಿಸ್ತಾನಿ”ಗಳು ಭಾಗಿಯಾಗಿದ್ದಾರೆ. ಅವರೆಲ್ಲರೂ ಪ್ರತ್ಯೇಕ ಸಿಖ್‌ ತಾಯ್ನಾಡನ್ನು ಬಯಸುವ ಪ್ರತ್ಯೇಕವಾದಿಗಳು ಎಂದು ಹೇಳಿದ್ದರು. ಯಾವುದೇ ಪುರಾವೆ ಇಲ್ಲದ ಅವರ ಹೇಳಿಕೆಯನ್ನು ಅನೇಕ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದವು. ವಿಶೇಷ ಸ್ಟೋರಿ ಮಾಡಿ ಹರಿಬಿಟ್ಟವು. ಇದು ರೈತ ಹೋರಾಟಗಾರರಿಗೆ ಗಾಸಿಯನ್ನುಂಟು ಮಾಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ನಾವು ಎರಡು ತಿಂಗಳಿಂದ ಶಾಂತಿಯುತವಾಗಿ ಕುಳಿತಿದ್ದೇವೆ. ಶಾಂತಿಯುತವಾಗಿ ಪ್ರಶ್ನಿಸುತ್ತಿದ್ದೇವೆ, ಪ್ರತಿಭಟಿಸುತ್ತಿದ್ದೇವೆ. ಆದರೆ, ಮೋದಿ ಮಾಧ್ಯಮಗಳು ನಮ್ಮನ್ನು ಖಲಿಸ್ತಾನಿಗಳು, ಭಯೋತ್ಪಾದಕರು ಎಂದು ಕರೆದು ಬಿಂಬಿಸುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮ ರೈತ ಹೋರಾಟದ ಜೊತೆಗಿಲ್ಲ:

ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನಪ್ರಿಯಗೊಳಿಸಿದ “ಜೈ ಜವಾನ್‌! ಜೈ ಕಿಸಾನ್‌!” ಘೋಷಣೆಯಲ್ಲಿ ಬಿಜೆಪಿಯು ಜವಾನ್‌ (ಸೈನಿಕ)ರನ್ನು ತನ್ನ ರಾಜಕೀಯದ ಭಾವನಾತ್ಮಕ ದಾಳವಾಗಿ ಬಳಸಿಕೊಳ್ಳುತ್ತಿದೆ. ಅದರೆ, ರೈತರನ್ನು ಹೊರ ದೂಡುತ್ತಿದೆ. ಅದನ್ನು ಮಾಧ್ಯಮಗಳೂ ಖಾತ್ರಿಪಡಿಸುತ್ತಿವೆ.

ರೈತ ಹೋರಾಟದ ಮಧ್ಯೆ ಹಲವು ಪ್ರತಿಭಟನಾಕಾರರು ಮಾಧ್ಯಮಗಳನ್ನು ವಿರೋಧಿಸಿ ಫಲಕಗಳನ್ನು ಹಿಡಿದರು. ಮಾಧ್ಯಮಗಳು ತಮ್ಮನ್ನು ಭಯೋತ್ಪಾದಕರು ಎಂದು ಕರೆದಿದ್ದನ್ನು ಅವರು ವಿರೋಧಿಸಿದ್ದರು.

ಇದನ್ನೂ ಓದಿ: ರೈತರಲ್ಲದವರು ರೈತರನ್ನು ಬೆಂಬಲಿಸುವ ಕಾಲ ಬಂದಿದೆ: ಪಿ ಸಾಯಿನಾಥ್‌

“ನಮ್ಮಲ್ಲಿ ಯಾವ ಶಸ್ತ್ರಾಸ್ತ್ರಗಳಿವೆ? ನಿಮಗೆ ನಾವು ಯಾವ ರೀತಿಯಲ್ಲಿ ಭಯೋತ್ಪಾದಕರಂತೆ ಕಾಣುತ್ತಿದ್ದೇವೆ. ನಾವು ಭಯೋತ್ಪಾದಕರು ಎಂದು ಎಂದು ಯಾರಿಗಾಗಿ ಹೇಳುತ್ತಿದ್ದೀರಿ? ನಾವು ರೈತರು, ವಿದ್ಯಾವಂತ ರೈತರು” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಷ್ಟ್ರೀಯ ಮಾಧ್ಯಮ ನಮ್ಮೊಂದಿಗಿಲ್ಲ… ಆಜ್ ತಕ್, ಝೀ ನ್ಯೂಸ್, ಎಬಿಪಿಗಳಂತ ಮಾಧ್ಯಮಗಳು ಸರ್ಕಾರವನ್ನು ಸಮರ್ಥಿಸಲು ರೈತರನ್ನು ಪ್ರತ್ಯೇಕವಾದಿಗಳು, ಭಯೋತ್ಪಾದಕರು ಎಂದು ಬೊಗಳೆ ಬಿಡುತ್ತಿವೆ. ಇವು ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಸರ್ಕಾರವು ಧಾನ್ಯಗಳ ಸಂಗ್ರಹ ಮಿತಿಯನ್ನು ಹೆಚ್ಚಿಸಲು ಹೊರಟಿದೆ. “ಅಗತ್ಯ ದಾಸ್ತಾನುಗಳ ಸಂಗ್ರಹ ಮಿತಿ ಮೀರಿದ ದಿನ, ಸಾಮಾನ್ಯ ಜನರು ಸಾಯುತ್ತಾರೆ.” ಇದು ಜನರಿಗೆ ತಿಳಿದಿಲ್ಲ. ಮಾಧ್ಯಮಗಳಿಗೆ ಇದರ ಪರಿಣಾಮ ಅರ್ಥವಾಗುತ್ತಿಲ್ಲ. ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ತುಟಿಬಿಚ್ಚುವುದಿಲ್ಲ ಎಂದು ರೈತರು ಹೇಳಿದ್ದಾರೆ.

ಕೇಂದ್ರದ ನೀತಿಗಳು ರೈತರಿಗೆ ಸರಿಯಾಗಿ ಅರ್ಥವಾಗಿಲ್ಲ ಎಂದು ಮಾಧ್ಯಮಗಳು ಹೇಳುತ್ತಿವೆ. ನಾನೊಬ್ಬ ಅನಕ್ಷರಸ್ಥ ರೈತ, ಆದರೆ, ಈ ನೀತಿಗಳು ಹೇಗೆ ರೈತರಿಗೆ ಪ್ರಯೋಜಕಾರಿಯಾಗಿವೆ ಎಂದು ಯಾರಾದರು ನನ್ನನ್ನು ಒಪ್ಪಿಸಲಿ ಎಂದು ರೈತರೊಬ್ಬರು ಸವಾಲು ಹಾಕಿದ್ದಾರೆ.

ಸರ್ಕಾರ, ಬಿಜೆಪಿಗರು ಮತ್ತು ಮಾಧ್ಯಮಗಳು ನಮ್ಮನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯುತ್ತಿವೆ. ಅವರು “ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ನಡೆದಾಗಲು ಪ್ರತಿಭಟನಾಕಾರರನ್ನು ರಾಷ್ಟ್ರವಿರೋಧಿಗಳು ಎಂದು ಕರೆದಿದ್ದರು. ಸರ್ಕಾರವನ್ನು ಪ್ರಶ್ನಿಸುವವರೆಲ್ಲರೂ ರಾಷ್ಟ್ರ ವಿರೋಧಿಗಳಾದರೆ, ದೇಶದ ಪ್ರಜೆ ಯಾರು? ದೇಶದ ನಾಗರಿಕರು ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಯಾವಾಗಲೂ ಸರ್ಕಾರವೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಆದರೆ, ಸರ್ಕಾರ ಕೈಗೊಂಬೆಯಾಗಿರುವ ಮಾಧ್ಯಮಗಳು ಪ್ರಶ್ನೆ ಮಾಡುವ ನಾಗರಿಕರನ್ನು ಅಪರಾಧಿಗಳೆಂದು ಬಿಂಬಿಸುತ್ತಿವೆ. ಈ ಮಾಧ್ಯಮಗಳು ಎಂದಿಗೂ ನಮ್ಮೊಂದಿಗೆ ಇರಲಾರವು ಎಂದು ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: ಕೃಷಿ ನೀತಿಗಳು ರದ್ದಾಗದಿದ್ದರೆ ಅಗತ್ಯ ಸರಕುಗಳ ಸಾಗಾಣಿಕೆ ಬಂದ್‌: ಸಾಗಾಣಿದಾರರ ಒಕ್ಕೂಟ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights