ಗ್ರಾಮ ಪಂ. ಚುನಾವಣೆಯಲ್ಲಿ ‘ಈ ಪಕ್ಷಗಳ ಬೆಂಬಲಿತರ ಗೆಲುವು’ ಎಷ್ಟು ಗೊತ್ತೇ? ಡೀಟೇಲ್ಸ್

ಗ್ರಾಮೀಣ ಅಭಿವೃದ್ದಿಯ ಕನಸುಗಳೊಂದಿಗೆ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಪಕ್ಷಗಳಿಲ್ಲದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಮುಖ್ಯವಾಹಿನಿಯಲ್ಲಿರುವ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳು ಇಷ್ಟು ಸ್ಥಾನಗಳಲ್ಲಿ ಚುನಾಯಿತರಾಗಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂರು ಪಕ್ಷಗಳಲ್ಲದೆ ಇತರ ಪಕ್ಷಗಳು ಸಹ ತಳಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ಅದರ ವರದಿ ಇಲ್ಲಿದೆ.

ಸ್ವರಾಜ್‌ ಇಂಡಿಯಾ, ಎಸ್.ಡಿ.ಪಿ.ಐ, ಸಿಪಿಐ(ಎಂ), ಸಿಪಿಐ, ಬಹುಜನ ಸಮಾಜ ಪಕ್ಷ, ವೆಲ್ಫೇರ್‌ ಪಾರ್ಟಿ ಆಫ್ ಇಂಡಿಯಾ, ಆಮ್‌ ಆದ್ಮಿ ಪಕ್ಷ ಸೇರಿ ಹಲವು ಪಕ್ಷಗಳ ಬೆಂಬಲಿಗರು ಹಲವಾರು ಕಡೆ ಚುನಾಯಿತರಾಗಿದ್ದಾರೆ.

ಸ್ವರಾಜ್‌ ಇಂಡಿಯಾ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಗಳು ಸ್ವರಾಜ್ ಇಂಡಿಯಾ ರಾಜಕೀಯ ಪಕ್ಷವಾಗಿ ಒಗ್ಗೂಡಿ ಚುನಾವಣೆ ಎದುರಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ‌ರವರು ಮಾತನಾಡಿ “ನಾವು ಒಟ್ಟು 3000ಕ್ಕೂ ಹೆಚ್ಚು ಜನರನ್ನು ಬೆಂಬಲಿಸಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಣಕ್ಕಿಳಿಸಿದೆವು. 1800ಕ್ಕೂ ಅಧಿಕ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಜನ ಆಯ್ಕೆಯಾಗಿದ್ದಾರೆಂದು” ಮಾಹಿತಿ ನೀಡಿದ್ದಾರೆ. ಅಲ್ಲದೇ ಪಾಂಡವಪುರ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ನಮ್ಮ ಅಭ್ಯರ್ಥಿಗಳೆ ಅಧಿಕಾರ ಹಿಡಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಎಸ್.ಡಿ.ಪಿ.ಐ

2015ರ ಗ್ರಾಮ ಪಂಚಾಯತ್ ಚುನಾವಣೆಗೆ ಹೋಲಿಸಿದರೆ ಅದಕ್ಕಿಂತ ಈ ಬಾರಿ 300 ಪಟ್ಟು ಅಧಿಕ ಸ್ಥಾನಗಳಲ್ಲಿ SDPI ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ರಾಜ್ಯಧ್ಯಕ್ಷರಾದ ಇಲ್ಯಾಸ್‌ ತುಂಬೆಯವರು. ನಾನುಗೌರಿ ಜೊತೆ ಮಾತನಾಡಿದ ಅವರು, “ಒಟ್ಟು ರಾಜ್ಯದಾದ್ಯಂತ ನಮ್ಮ 221 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮೂರು ಗ್ರಾಮ ಪಂಚಾಯ್ತಿಗಳಲ್ಲಿ ನಾವು ಸ್ಪಷ್ಟ ಬಹುಮತ ಪಡೆದಿದ್ದೇವೆ. 10 ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷರು ಯಾರಾಗಬೇಕು ಎಂದು ನಿರ್ಧರಿಸುವ ಸ್ಥಾನದಲ್ಲಿ SDPI ಇದೆ” ಎಂದಿದ್ದಾರೆ.

ಒಟ್ಟು ಜಯಗಳಿಸಿದವರಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳೆಯರರಾಗಿದ್ದರೆ ಶೇ.20 ರಷ್ಟು ದಲಿತರು ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚಿನ ಗೆಲುವು ಸಾಧಿಸಿದ್ದೇವೆ. ಜಿಲ್ಲೆಯಲ್ಲಿ 485 ಕಡೆಗಳಲ್ಲಿ ಸ್ಪರ್ಧಿಸಿದ್ದು, 171 ಜನ ಜಯಶೀಲರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಳ್ಳೂರು, ಸಜೀಪ ನಡು ಮತ್ತು ಸಜೀಪ ಮುನ್ನೂರು ಗ್ರಾಮ ಪಂಚಾಯಿತಿಗಳು SDPI ತೆಕ್ಕೆಗೆ ಬಂದಿವೆ.

ಸಿಪಿಐ(ಎಂ)

ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪಕ್ಷವು ಈ ಚುನಾವಣೆಯಲ್ಲಿ ಗಮನಾರ್ಹ ಸಾಧನೆಗೈದಿದೆ. ಒಟ್ಟು 600ಕ್ಕೂ ಅಧಿಕ ಅಭ್ಯರ್ಥಿಗಳು ಸಿಪಿಐ(ಎಂ) ಪಕ್ಷ ಮತ್ತು DYFI, SFI ಬೆಂಬಲದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಈಗಾಗಲೇ 150 ಜನ ಜಯಗಳಿಸಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಬಸವರಾಜುರವರು ಮಾಹಿತಿ ನೀಡಿದ್ದಾರೆ.

ಸಿಪಿಐ

ಸಿಪಿಐ ಬೆಂಬಲಿತರು 350 ಸ್ಥಾನಗಳಿಗೆ ಸ್ಪರ್ಧಿಸಿದ್ದು, ಅದರಲ್ಲಿ 88 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಅಲ್ಲದೆ ತರಿಕೆರೆ ತಾಲೂಕಿನ ಸಂತೆಊರು ಗ್ರಾಮ ಪಂಚಾಯತ್‌‌ನಲ್ಲಿ 11 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಪಡೆದು ಗ್ರಾಮಪಂಚಾಯತ್‌‌ ತೆಕ್ಕೆಗೆ ಪಡೆದಿದ್ದಾರೆ. ಅಲ್ಲದೆ ಬಂಟ್ವಾಳದ ಅಮ್ಟಾಡಿ ಗ್ರಾಮ ಪಂಚಾಯತ್‌ನಲ್ಲಿ ಮೂರು ಸ್ಥಾನಗಳನ್ನು ಪಡೆದಿದ್ದು ಉಪಾಧಕ್ಷಸ್ಥಾನ ಒಳಿದು ಬರಲಿದೆ. ಇದಲ್ಲದೆ ತುಮಕೂರನ ಶಿರಾ ತಾಲೂಕಿನಲ್ಲಿ 17 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ನಮ್ಮ ಪಕ್ಷದ ಪ್ರಭಾವವಿರುವ ಚಿಕ್ಕಮಗಳೂರಿನ ಕೆಲವು ಗ್ರಾಮ ಪಂಚಾಯತ್‌ನಲ್ಲಿ ಚುನಾವಣೆ ನಡೆದಿಲ್ಲ, ಇಲ್ಲವೆಂದರೆ ಅಲ್ಲೂ ಒಂದಷ್ಟು ಸ್ಥಾನಗಳು ಪಡೆಯುತ್ತಿದ್ದೆವು ಎಂದು ಪಕ್ಷದ ಮುಖಂಡರಾದ ಶಿವರಾಜ್ ಬಿರದಾರ್‌ ತಿಳಿಸಿದ್ದಾರೆ.

ವೆಲ್ಫೇರ್‌ ಪಾರ್ಟಿ ಆಫ್ ಇಂಡಿಯಾ

ವೆಲ್ಫೇರ್‌ ಪಾರ್ಟಿ ಆಫ್ ಇಂಡಿಯಾವು ಕರ್ನಾಟಕದ 10 ಜಿಲ್ಲೆಗಳಲ್ಲಿ 125 ಗ್ರಾಮ ಪಂಚಾಯಿತಿ ಸ್ಥಾನಗಳ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿತ್ತು. ಅವರಲ್ಲಿ 43 ಜನ ಜಯಗಳಿಸಿದ್ದಾರೆ ಎಂದು ಮಾಹಿತಿ ದೊರಕಿದೆ.

ಆಮ್ ಆದ್ಮಿ ಪಕ್ಷ

ಆಮ್ ಆದ್ಮಿ ಪಕ್ಷದಿಂದ 600 ಅಭ್ಯರ್ಥಿಗಳನ್ನು ಬೆಂಬಲಿಸಿದ್ದು, ಅದರಲ್ಲಿ 286 ಜನ ಚುನಾಯಿತರಾಗಿದ್ದಾರೆ. ಆಮ್ ಆದ್ಮಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೈದರಾಬಾದ್ ಕರ್ನಾಟಕ ಭಾಗ ಬೀದರ್, ಕಲ್ಬುರ್ಗಿ, ಬಾಗಲಕೋಟೆ, ವಿಜಯಪುರ, ಕೋಲಾರ ಉತ್ತರ ಕನ್ನಡ ಭಾಗದಲ್ಲಿ ಹೆಚ್ಚು ಜಯಗಳಿಸಿದ್ದಾರೆ.

ಈ ದೇಶದ ಕಾನೂನಿಗೆ ಗೌರವ ಕೊಟ್ಟ ಆಮ್ ಆದ್ಮಿ ಪಕ್ಷ ಎಲ್ಲಿಯೂ ಸಹ ಪಕ್ಷದ ಅಭ್ಯರ್ಥಿಗಳ ಎಂದು ಪ್ರಚಾರ ಮಾಡಲಿಲ್ಲ, ಆದರೆ ಗೆದ್ದಿರುವ ಎಲ್ಲಾ ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷದ ಸಕ್ರಿಯ ಕಾರ್ಯಕರ್ತರು ಎಂಬುದು ನಮ್ಮ ಹೆಮ್ಮೆಯಾಗಿದೆ. ಗ್ರಾಮ ಮಟ್ಟದಲ್ಲಿ ಬದಲಾವಣೆ ತರುತ್ತಾರೆ ಎನ್ನುವ ಭರವಸೆ ಇದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ತಿಳಿಸಿದರು.

ಬಿಎಸ್‌ಪಿ

ಬಹುಜನನ ಸಮಾಜ ಪಕ್ಷವು ರಾಜ್ಯದ್ಯಂತ ಸುಮಾರು 525 ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿತ್ತು. ಅದರಲ್ಲಿ ಇದುವರೆಗೂ 236 ಜನ ಚುನಾಯಿತರಾಗಿದ್ದರೆಂದು ಬಿಎಸ್‌ಪಿ ಮುಖಂಡರಾದ ಕೃಷ್ಣಮೂರ್ತಿಯವರು ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights