FACT CHECK | ಶ್ರೀರಾಮನ ಫ್ಲೆಕ್ಸ್‌ ಹರಿದು ಪ್ರತಿಭಟಿಸಿದ್ದು ಕಾಂಗ್ರೆಸ್‌ ಕಾರ್ಯಕರ್ತರಲ್ಲ! ಮತ್ತ್ಯಾರು?

ರಾಮ, ಹನುಮ ಸೇರಿದಂತೆ ಹಲವು ಹಿಂದೂ ದೇವತೆಗಳ ಪೋಸ್ಟರ್, ಬ್ಯಾನರ್ ಹರಿದು ಹಾಕುತ್ತಿರುವ, ಅವುಗಳನ್ನು ತುಳಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ದೇವತೆಗಳ ಫೋಟೋ ಹರಿದು ಸನಾತನಾ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕಾಂಗ್ರೆಸ್‌ ಪಕ್ಷವು ರಾಮಮಂದಿರ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದದ್ದು ಯಾಕೆ ಎಂದು ಈಗ ಅರ್ಥವಾಯಿತೆ ಎಂದು ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 3 ಮೇ 2024ರಂದು ಪ್ರಕಟವಾದ ಹಲವು ಪತ್ರಿಕಾ ವರದಿಗಳು ದೊರಕಿವೆ. ವರದಿಗಳ ಪ್ರಕಾರ ಈ ಘಟನೆಯು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿಯವರ ಮನೆ ಎದುರು ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ನಡೆಸಿದ ಪ್ರತಿಭಟನೆ ಎಂದು ತಿಳಿಸಲಾಗಿದೆ. ಜಿತು ಪಟ್ವಾರಿಯವರು ಮಾಜಿ ಸಚಿವ ಇಮಾರ್ತಿ ದೇವಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆದಿದೆ.

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪೋಸ್ಟರ್ ಹರಿದು ಪ್ರತಿಭಟನೆ ಮಾಡುತ್ತಿರುವ ಕಾರ್ಯಕರ್ತರು ಬಿಜೆಪಿ ಶಾಲುಗಳನ್ನು ಧರಿಸಿರುವುದನ್ನು ಕಾಣಬಹುದು. ಅವರು ಹಾಕಿರುವ ಬಿಜೆಪಿ ಶಾಲುಗಳಿಂದಲೇ ಇದು ಬಿಜೆಪಿಗೆ ಸಂಬಂಧಿಸಿದ ಪ್ರತಿಭಟನೆ ಎಂದು ತಿಳಿಯುತ್ತದೆ.

ಪ್ರತಿಭಟನೆಯ ವೇಳೆ ಜಿತು ಪಟ್ವಾರಿಯವರ ಬ್ಯಾನರ್‌ ಹರಿದು ಕಾಲಿನಿಂದ ತುಳಿಯಲಾಗಿದೆ. ಅದೇ ಬ್ಯಾನರ್‌ನಲ್ಲಿ ರಾಮ, ಹನುಮ ಸೇರಿದಂತೆ ಹಲವು ಹಿಂದೂ ದೇವತೆಗಳ ಫೋಟೊ ಮುದ್ರಿಸಲಾಗಿತ್ತು. ಈ ವಿಡಿಯೋ ವೈರಲ್ ಆದಾಗ ಬಿಜೆಪಿಯು ದೇವರುಗಳನ್ನು ಸಹ ಗೌರವಿಸುವುದಿಲ್ಲ ಎಂದು ಆರೋಪಿಸಿದೆ. ಅದೇ ಸಮಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಬನ್ಸಾಲ್ ನ್ಯೂಸ್‌ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಿತು ಪಟ್ವಾರಿಯವರು ಮಾಜಿ ಸಚಿವ ಇಮಾರ್ತಿ ದೇವಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯರ್ಕರು ರಾಮ, ಹನುಮರ ಪೋಸ್ಟರ್ ಹರಿದು, ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಶ್ರೀರಾಮನ ಪೊಸ್ಟ್‌ರ್ ಹರಿದಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳ ಎಂದು ದೋಷಯುಕ್ತ ವರದಿಯನ್ನು ಬಿತ್ತರಿಸಿದ ಮಾಧ್ಯಮಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights