ನಮ್ಮ ಊಟ ನಾವೇ ತಂದಿದ್ದೇವೆ: ಸರ್ಕಾರ ವ್ಯವಸ್ಥೆ ಮಾಡಿದ್ದ ಊಟ ನಿರಾಕರಿಸಿದ ರೈತರು!

ಇಂದು (ಗುರುವಾರ) ಸರ್ಕಾರದ ಜೊತೆಗೆ ರೈತರ ನಾಲ್ಕನೇ ಸುತ್ತಿನ ಸಭೆ ನಡೆಯುತ್ತಿದೆ. ಸಭೆ ನಡೆಯುತ್ತಿದ್ದ ವೇಳೆ ಮಧ್ಯಾಹ್ನದ ಊಟದ ಬಿಡುವಿನ ವೇಳೆ ರೈತರಿಗೆ ಸರ್ಕಾರದಿಂದ ಊಟದ ವ್ಯವಸ್ತೆ ಮಾಡಲಾಗಿತ್ತು. ನಮ್ಮ ಊಟವನ್ನು ನಾವೇ ತಂದಿದ್ದೇವೆ ಎಂದು ಹೇಳಿ ಸರ್ಕಾರದ ಊಟ ತಿರಸ್ಕರಿಸುವ ಮೂಲಕ ರೈತರು ಸ್ವಾಭಿಮಾನ ಮೆರೆದಿದ್ದಾರೆ.

ಸಭೆಯ ನಡುವೆ ಊಟದ ಅವಧಿಯಲ್ಲಿ ರೈತರು ತಾವೇ ತಂದಿದ್ದ ಊಟವನ್ನು ನೆಲದಲ್ಲಿ ಕೂತು ತಿನ್ನುವ ಮೂಲಕ ಸರ್ಕಾರದ ಹಂಗು ನಮಗೆ ಬೇಡ. ಸರ್ಕಾರದ ವತಿಯಿಂದ ಒದಗಿಸಲಾದ ಟೀ ಅಥವಾ ಊಟವನ್ನು ನಾವು ನಿರಾಕರಿಸಿ, ನಾವೇ ತಂದಿದ್ದ ಊಟ ಮಾಡಿದ್ದೇವೆ” ಎಂದು ರೈತ ಪ್ರತಿನಿಧಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 8 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸಚಿವರು ಇಂದು ನಾಲ್ಕನೆ ಬಾರಿಗೆ ರೈತರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಉಳಿಸಿಕೊಂಡು ಕನಿಷ್ಟ ಬೆಂಬಲ ನೀಡುವುದಾಗಿ ರೈತರಿಗೆ ಲಿಖಿತ ಭರವಸೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ರೈತ ಸಂಘಟನೆಗಳ ಮುಖಂಡರು 3 ಕೃಷಿ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು, ಅದಕ್ಕಾಗಿ ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ತಾಕೀತು ಮಾಡಿದ್ದಾರೆ. ಡಿಸೆಂಬರ್ 03 ರ ಅಂತಿಮ ಅವಕಾಶವಾಗಿದ್ದು ಸರ್ಕಾರ ರೈತರ ಬೇಡಿಕೆಗೆ ಒಪ್ಪದಿದ್ದಲ್ಲಿ ದೆಹಲಿಗೆ ಬರುವ ಎಲ್ಲಾ ರಸ್ತೆಗಳನ್ನು ಮುಚ್ಚುವ ಮೂಲಕ ಹೋರಾಟ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಪರವಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕ್ಯಾಬಿನೆಟ್ ಸಚಿವ ಪಿಯೂಶ್ ಗೋಯಲ್ ಮತ್ತು ಸೋಮ್‌ ಪ್ರಕಾಶ್ ಸಭೆಯಲ್ಲಿ ಭಾಗವಹಿಸಿದ್ದಾರೆ. 30 ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಮಾತುಕತೆಯಲ್ಲಿ ತೊಡಗಿದ್ದಾರೆ.


ಇದನ್ನೂ ಓದಿ: ನಕಲಿ ಖಾತೆಗೆ 55 ಕೋಟಿ ವರ್ಗಾವಣೆ: ಕಪ್ಪುಪಟ್ಟಿಗಿಲ್ಲ ಐಓಬಿ ಬ್ಯಾಂಕ್‌: ಈಶ್ವರಪ್ಪ ಮೌನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights