ಕೃಷಿ ಕಾಯ್ದೆಗೆ ವಿರೋಧಿಸಿ BJP ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹರಿಯಾಣ ಶಾಸಕರ ನಿವಾಸದ ಮೇಲೆ ಐಟಿ ದಾಳಿ!

ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದ ಹರಿಯಾಣದ ಸ್ವತಂತ್ರ ಶಾಸಕ ಬಲರಾಜ್ ಕುಂದು ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರೋಹ್ಟಕ್‌ ಜಿಲ್ಲೆಯ ಮೆಹಮ್‌ ಕ್ಷೇತ್ರದ ಶಾಸಕರಾಗಿರುವ ಬಲರಾಜ್‌ ಕುಂದು ಅವರು ದೆಹಲಿ ಗಡಿಯಲ್ಲಿ ರೈತ ಹೋರಾಟ ಆರಂಭವಾದ ಬಳಿಕ ಹರಿಯಾಣದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದರು. ಅಲ್ಲದೆ, ಕೃಷಿ ಕಾಯ್ದೆಗಳ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ವಿರೋಧಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ ಐ-ಟಿ (ಆದಾಯ ತೆರಿಗೆ) ಅಧಿಕಾರಿಗಳು ಹರಿಯಾಣದ ರೋಹ್ಟಕ್ ಮತ್ತು ಗುರುಗ್ರಾಮ್‌  ಹಾಗೂ ದೆಹಲಿಯ ಸೆಕ್ಟರ್ 14 ರಲ್ಲಿರುವ ಕುಂದು ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐ-ಟಿ ಅಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಅವರ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿಗಳ ಮೊಬೈಲ್ ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 100 ಅಧಿಕಾರಿಗಳ ತಂಡವು ರೋಹ್ಟಕ್‌ನಲ್ಲಿರುವ ಕುಂದು ಅವರ ಇಬ್ಬರು ಸಹೋದರರ ಮನೆಗಳು ಮತ್ತು ಹನ್ಸಿಯಲ್ಲಿರುವ ಅವರ ಅತ್ತೆಯ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸರ್ಕಾರ ಪತನ; ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights