ಕಾಂಗ್ರೆಸ್‌ ಮೌನ ಪ್ರತಿಭಟನೆ: ಯುಪಿಸಿಸಿ ಅಧ್ಯಕ್ಷ ಮತ್ತು ಮುಖಂಡರ ಬಂಧನ!

ರಾಹುಲ್ ಗಾಂಧಿಯವರ ಗೌಪ್ಯ ವಿಚಾರಗಳನ್ನು ಕದಿಯಲು ಯತ್ನಿಸಿದ್ದರ ವಿರುದ್ಧ ಮೌನ ಮೆರವಣಿಗೆಗೆ ಮುಂಚಿತವಾಗಿ ಯುಪಿ ಕಾಂಗ್ರೆಸ್ ಮುಖ್ಯಸ್ಥ, ಪಕ್ಷದ ಮುಖಂಡರನ್ನು ಬಂಧಿಸಲಾಗಿದೆ.

ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಗೌಪ್ಯ ವಿಚಾರಗಳನ್ನು ಕದಿಯಲು ಯತ್ನಿಸಲಾಗಿದೆ ಎಂದು ಹೇಳಲಾಗಿದ್ದು, ಇಂತಹ ಕೃತ್ಯದ ವಿರುದ್ಧ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಪಕ್ಷದ ಇತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಖನೌನ ಸ್ವಾಸ್ಥ್ಯ ಭವನದಿಂದ ರಾಜ್ ಭವನಕ್ಕೆ ಮೌನ ಮೆರವಣಿಗೆ ನಡೆಸಿ ರಾಹುಲ್‌ ಗಾಂಧಿಯ ಮೇಲೆ ಮಾಡಲಾಗಿರುವ ಆರೋಪದ ವಿರುದ್ಧ ಮನವಿ ಪತ್ರ ಸಲ್ಲಿಸಲು ಲಲ್ಲು ಕರೆ ನೀಡಿದ್ದರು.

ಪ್ರತಿಭಟನೆ ಮಾಡುವುದಕ್ಕೂ ಮುನ್ನವೇ, ಯುಪಿಸಿಸಿ ಮುಖ್ಯಸ್ಥ ಲಲ್ಲು ಮತ್ತು ಪಕ್ಷದ ಇತರ ಹಿರಿಯ ಮುಖಂಡರನ್ನು ಬುಧವಾರ ರಾತ್ರಿ ಗೃಹಬಂಧನದಲ್ಲಿ ಬಂಧಿಸಲಾಗಿದೆ ಎಂದು ಪಕ್ಷದ ವಕ್ತಾರ ಅಶೋಕ್ ಸಿಂಗ್ ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ, ಲಲ್ಲು ಅವರು ತಮ್ಮ ಮನೆಯಿಂದ ಹೊರಟು ಸ್ವಾಸ್ಥ್ಯ ಭವನಕ್ಕೆ ತೆರಳಲು ಮುಂದಾಗಿದ್ದರು. ಈ ವೇಳೆ ಪೊಲೀಸರು, ಮೆರವಣಿಗೆ ನಡೆಸಲು ಅನುಮತಿ ಇಲ್ಲ ಎಂದು ಹೇಳಿ ಅವರನ್ನು ತಡೆದರು ಎಂದು ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ಸಿಗರು ಘೋಷಣೆಗಳನ್ನು ಕೂಗುತ್ತಾ ಮುಂದೆ ಸಾಗಲು ಯತ್ನಿಸಿದರು. ಈ ವೇಳೆ ಯುಪಿಸಿಸಿ ಅಧ್ಯಕ್ಷ ಮತ್ತು ಪಕ್ಷದ ಇತರ ಮುಖಂಡರನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಆರಾಧನಾ ಮಿಶ್ರಾ ಮೋನಾ, ಹಿರಿಯ ನಾಯಕರಾದ ನಸೀಮುದ್ದೀನ್ ಸಿದ್ದಿಕಿ ಮತ್ತು ದೀಪಕ್ ಮಿಶ್ರಾ ಅವರನ್ನು ಬುಧವಾರ ರಾತ್ರಿಯಿಂದ ಗೃಹಬಂಧನದಲ್ಲಿರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಈ ಸರ್ಕಾರವು ಗೌಪ್ಯತೆಯ ಹಕ್ಕನ್ನು ಗೌರವಿಸುವುದಿಲ್ಲ ಮತ್ತು ವ್ಯಕ್ತಿಗಳ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುತ್ತಿದೆ. ಇದನ್ನು ಸಹಿಸಲಾಗುವುದಿಲ್ಲ ಎಂದು ಲಲ್ಲು ಹೇಳಿದರು.

ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯ ವಿರುದ್ಧ ಹೋರಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಯುಪಿಸಿಸಿ ವಕ್ತಾರರು ಹೇಳಿದ್ದಾರೆ.

ಐದು ಗುಂಪುಗಳಾಗಿ ಮೆರವಣಿಗೆಯನ್ನು ಪ್ರಾರಂಭಿಸಲು ಸ್ವಾಸ್ಥ್ಯ ಭವನವನ್ನು ತಲುಪುವ ಯೋಜನೆಯನ್ನು ನಾವು ಹೊಂದಿದ್ದೇವು. ಆದರೆ, ಪೊಲೀಸರು ಇದನ್ನು ತಡೆದರು. ನಂತರ, ಪಕ್ಷದ ಸದಸ್ಯರು ನಗರದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಅವರನ್ನು ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದರು.

ಬಂಧಿತ ಎಲ್ಲ ಕಾಂಗ್ರೆಸ್ಸಿಗರನ್ನು ಪರಿಸರ ಉದ್ಯಾನಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಬದಲಾವಣೆ ಖಚಿತ?; ಕೆ.ಎಸ್.ಈಶ್ವರಪ್ಪಗೆ ಮುಖ್ಯಮಂತ್ರಿ ಪಟ್ಟ?

Spread the love

Leave a Reply

Your email address will not be published. Required fields are marked *