ಯಡಿಯೂರಪ್ಪ ಜೈಲಿಗೆ ಹೋಗಿ ಬಂದ್ರೂ ಬುದ್ದಿ ಬಂದಿಲ್ಲ: ವಾಟಾಳ್‌ ನಾಗರಾಜ್‌

ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದು, ಅದಕ್ಕಾಗಿ 50 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಇದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಡಿ.05ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಬಗ್ಗೆ ಮಾತನಾಡಿರುವ ವಾಟಾಳ್‌ ನಾಗರಾಜ್‌, ಯಡಿಯೂರಪ್ಪ ಜೈಲಿಗೆ ಹೋಗಿ ಬಂದ್ರು ಬುದ್ದಿ ಮಾತ್ರ ಕಲಿತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

“ಯಡಿಯೂರಪ್ಪರವರೇ ನಾವು ಹೋರಾಟದ ಮೂಲಕ ಜೈಲಿಗೆ ಹೋಗುತ್ತಿದ್ದೇವೆ. ನಿಮ್ಮ ಹಾಗೆ ಲಂಚ ಪಡೆದು ಜೈಲುವಾಸ ಅನುಭವಿಸಿಲ್ಲ. ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪರಿಗೆ ಇನ್ನೂ ಬುದ್ದಿ ಬಂದಿಲ್ಲ” ಎಂದಿದ್ದಾರೆ.

ಈಗ ಮರಾಠಿ ಅಭಿವೃದ್ಧಿ ಪ್ರಾಧಿಕಾರದ ಅಗತ್ಯವಾದರೂ ಏನಿತ್ತು. ನಾಳೆ ಕೇರಳ ತಮಿಳುನಾಡಿನವರು ಪ್ರಾಧಿಕಾರ ಮಾಡಲು ಕೇಳಬಹುದು. ಎಲ್ಲರೂ ಪ್ರಾಧಿಕಾರ ಮಾಡಿ ಅಂತಾ ಹೇಳ್ತಾರೆ ಆಗ ಎಲ್ಲಾ ಭಾಷೆಗೂ ಪ್ರಾಧಿಕಾರ ಕೊಡ್ತೀರಾ? ನೆರೆಯ ಗೋವಾದಲ್ಲಿ ಶೇ.40 ರಷ್ಟು ಕನ್ನಡಿಗರಿದ್ದಾರೆ. ನಿಮ್ಮದೇ ಅವ್ರು ಹೀಗೆ ಕನ್ನಡಕ್ಕೆ ಅಲ್ಲಿ ಪ್ರಾಧಿಕಾರ ಕೊಟ್ಟಿದ್ದಾರ? ಮಹಾರಾಷ್ಟ್ರದಲ್ಲಿ ಕನ್ನಡ ಪ್ರಾಧಿಕಾರ ಇದೆಯಾ? ನೀವು ಈ ಪ್ರಾಧಿಕಾರ ಮಾಡಿರುವುದು ಅಕ್ಷಮ್ಯ ಅಪರಾಧ. ಹೀಗಾಗಿ ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಎಸ್‌ವೈ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸುರ್ಜೇವಾಲ್‌

ಇದೇ ಸಂದರ್ಭದಲ್ಲಿ ಕರ್ನಾಟಕ ಬಂದ್ ಅನ್ನು ಉಲ್ಲೇಖಿಸಿ ಯಡಿಯೂರಪ್ಪ ಅವರಿಗೆ ಸವಾಲ್ ಎಸೆದಿರುವ ವಾಟಾಳ್ ನಾಗರಾಜ್, “ಡಿಸೆಂಬರ್ 5 ರಂದು ಕನ್ನಡಿಗರು ಮತ್ತು ಯಡಿಯೂರಪ್ಪರ ನಡುವಿನ ಸವಾಲ್. ಡಿಸೆಂಬರ್ 5 ರಂದು ನೂರಕ್ಕೆ ನೂರು ಬಂದ್ ಆಗ್ಬೇಕು. ಕನ್ನಡಪರ ಸಂಘಟನೆಗಳು ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಹೋಟೆಲ್ ಮಾಲೀಕರು ಬೆಂಬಲ ಕೊಡಲೇಬೇಕು. ಬಸ್ ನಿಲ್ದಾಣಕ್ಕೆ ಜನ ಬರಬೇಡಿ, ಟ್ಯಾಕ್ಸಿ ಆಟೋ, ತರಕಾರಿ ಮತ್ತು ಫುಟ್ ಪಾತ್ ಅಂಗಡಿಯವರು ಬಂದ್ ಗೆ ಬೆಂಬಲ ನೀಡಿದ್ದಾರೆ.

ಇದು ಹಿಂದೆ ನಡೆದಂತಹ ಬಂದ್ ಗಳಲ್ಲೇ ಅತೀ ಪ್ರಮುಖವಾದ ಬಂದ್ ಆಗಿದೆ. ಚಿತ್ರದುರ್ಗ, ಸಿದ್ದಗಂಗಾ ಮಠ ಸೇರಿ ಎಲ್ಲಾ ಮಠಗಳೂ ಈ ಮರಾಠ ಪ್ರಾಧಿಕಾರ ಮಾಡದಂತೆ ಹೇಳಿದ್ದಾರೆ. ನ್ಯಾಯಾಲಯ ಮತ್ತು ವಕೀಲರು ಕನ್ನಡಿಗರ ಪರವಾಗಿ ನಿಂತಿದ್ದಾರೆ. ವಕೀಲರು ನಮ್ಮ ಶಕ್ತಿ ಅವರೆಲ್ಲರೂ ಬಂದ್ ಗೆ ಬೆಂಬಲ ನೀಡಿದ್ದಾರೆ. ಇನ್ನೂ ರೈಲು ಓಡಿಸಿದರೆ ಹಳಿಮೇಲೆ ಜನ ಕೂರ್ತಾರೆ ಹೀಗಾಗಿ ರೈಲು ಓಡಿಸಬೇಡಿ ಎಂದು ರೈಲು ಇಂಟಲಿಜೆನ್ಸ್ ನವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಜೈಲಿಗೆ ಹೋದರೂ ಚಿಂತೆಯಿಲ್ಲ ಆದರೆ, ಮರಾಠ ಪ್ರಾಧಿಕಾರವನ್ನು ಮಾತ್ರ ಜಾರಿಯಾಗಲು ಬಿಡುವುದಿಲ್ಲ” ಎಂದು ಗುಡುಗಿದ್ದಾರೆ.

ಸಾರಾ ಗೋವಿಂದು ಅವರು ಸಹ ಸರ್ಕಾರದ ಕ್ರಮವನ್ನು ಖಂಡಿಸಿದ್ದು, “ಕೇವಲ ಎರಡೇ ಸೀಟು ಎರಡು ಕ್ಷೇತ್ರ ಗೆಲ್ಲಲು ಕನ್ನಡಿಗರಿಗೆ ಅಪಮಾನ ಮಾಡಲಾಗುತ್ತಿದೆ. ಕಾವೇರಿ ಸಮಸ್ಯೆ ಎಷ್ಟಿದೆ, ಮೇಕೆದಾಟು, ಮಹಾದಾಯಿ ಸೇರಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಇವರಿಗೆ ಮರಾಠ ಪ್ರಾಧಿಕಾರವೇ ಮುಖ್ಯವಾಗಿದೆ. ಬಿಜೆಪಿ ನಾಯಕರೇ ಈ ಮರಾಠ ಪ್ರಾಧಿಕಾರ ಮಾಡಲು ವಿರೋಧಿಸಿದ್ದಾರೆ.

ಬಿಜೆಪಿಯ ಶೇ.99 ರಷ್ಟು ಮಂದಿ ಮರಾಠ ಪ್ರಾಧಿಕಾರ ವಿರೋಧಿಸಿದ್ದಾರೆ ಆದರೂ ಪ್ರಾಧಿಕಾರ ರಚನೆ ಮಾಡಿದ್ದೀರಿ. ಈ ಹಿಂದಿನ ಗೋಕಾಕ್ ಚಳುವಳಿಯನ್ನ ನೆನಪಿಸಿಕೊಳ್ಳಿ. 40 ವರ್ಷ ಅಧಿಕಾರ ಮಾಡಿದ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆದರು. ನೀವು ಅರ್ಥ ಮಾಡಿಕೊಳ್ಳಿ ನಾಳೆ ನಿಮಗೂ ಇದೇ ಪರಿಸ್ಥಿತಿ ಬರಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಭ್ರಷ್ಟಾಚಾರಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಿರಿ: ಶಂಕರ್ ಬಿದರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights