FACT CHECK | ಹುಬ್ಬಳ್ಳಿಯ ಬಿಜೆಪಿ ಮುಖಂಡನ ಕಾರಿನಲ್ಲಿ EVM ಯಂತ್ರಗಳು ಸಿಕ್ಕಿದ್ದು ನಿಜವೇ?

ಹುಬ್ಬಳ್ಳಿ ಬಿಜೆಪಿಯವರ ಕಾರಿನಲ್ಲಿ EVM VVPAT ಸಿಕ್ಕಿದೆ. ಭ್ರಷ್ಟಾಚಾರಿ ಬಿಜೆಪಿ ಜನರ ಮತಕ್ಕೆ ಕನ್ನ ಹಾಕುತ್ತಿದೆ. ಅಬ್‌ ಕೀ ಬಾರ್ 400 ಪಾರ್ ಅಂದ್ರೆ ಇದೇನಾ? ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅದಕ್ಕೆ ಈಸಲ 400 ಅಂತ ಅಂದಿದ್ದು. ಈತರ ಕೆಲಸ ಮಾಡುದ್ರೆ ಯಾರ್ತಾನೆ ಗೆಲ್ಲೊಲ್ಲ ಹೇಳಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಕಾರನ್ನು ಸುತ್ತುವರೆದಿರುವ ಗ್ರಾಮದ ಜನರು EVM ಮತ್ತು VVPAT ಗಳನ್ನು ಧ್ವಂಸ ಮಾಡುತ್ತಿರುವುದನ್ನು ಕಾಣಬಹುದು. ಕಾರಿನಲ್ಲಿ ನಂಬರ್ ಪ್ಲೇಟ್‌ ಕಿತ್ತು, ಡಿಕ್ಕಿಯಲ್ಲಿದ್ದ ಯಂತ್ರೋಪಕರಣಗಳನ್ನು ಹೊರಗೆ ತೆಗೆದು ಹೊಡೆದುಹಾಕುವ ದೃಶ್ಯಗಳನ್ನು ನೋಡಬಹುದು. ಹಾಗಿದ್ದರೆ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಿಜೆಪಿಯವರು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಆರೋಪಿಸಿ ಹಂಚಿಕೊಂಡಿರುವ ಪೋಸ್ಟ್‌ನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನ ವಿಡಿಯೋವನ್ನು ಪರಿಶೀಲಿಸಿದಾಗ, 2024ರ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನ  ಮೇ 7ರಂದು ನಡೆಲಿದ್ದು ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ, ಹಾಗಾಗಿ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ 2024ರ ಲೋಕಸಭಾ ಚುನಾವಣೆ ಸಂದರ್ಭದ್ದಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಾಧ್ಯಮಗಳಲ್ಲಿ ಈ ಸಂಬಂಧ ಯಾವುದಾದರೂ ವರದಿಗಳು ಪ್ರಕಟವಾಗಿದೆಯೇ ಎಂದು ಪರಿಶೀಲಿಸಿದಾಗ, 10 ಮೇ 2023ರಲ್ಲಿ ಒನ್‌ ಇಂಡಿಯಾ.ಕಾಂ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ಒನ್‌ ಇಂಡಿಯಾ.ಕಾಂ ವರದಿಯ ಪ್ರಕಾರ, ಕಾಯ್ದಿರಿಸಿದ್ದ ಮತಯಂತ್ರಗಳನ್ನು ಗ್ರಾಮಸ್ಥರು ಪುಡಿಪುಡಿ ಮಾಡಿದ್ದು, ಮಸಬಿನಾಳ, ಡೋಣುರ ಗ್ರಾಮದಿಂದ ಮತಯಂತ್ರಗಳನ್ನು ಚುನಾವಣಾ ಸಿಬ್ಬಂದಿಯು ವಾಪಸ್‌ ತೆಗೆದುಕೊಂಡು ವಿಜಯಪುರಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ. ಇವಿಎಂ ಯಂತ್ರಗಳನ್ನು ಕಂಡು ರೊಚ್ಚಿಗೆದ್ದ ಜನರು ಅವುಗಳನ್ನು ರಸ್ತೆಯಲ್ಲೇ ಒಡೆದು ಪುಡಿ ಮಾಡಿದ್ದಾರೆ.

ಮತಯಂತ್ರಗಳ ಬಗ್ಗೆ ಸಿಬ್ಬಂದಿಯಿಂದ ಸರಿಯಾದ ಉತ್ತರ ಸಿಗದಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು, ತಪ್ಪು ಭಾವಿಸಿ ಯಂತ್ರಗಳನ್ನು ವಾಹನದಿಂದ ತೆಗೆದು ರಸ್ತೆಗೆ ಎತ್ತಿ ಹಾಕಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು, ಸಿಬ್ಬಂದಿಗೂ ಥಳಿಸಿರುವುದು ವರದಿಯಾಗಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ್ದಾರೆ. ಈ ಘಟನೆಗೆ ಸಬಂಧಿಸಿದಂತೆ 30 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಎಂದು ವರದಿಯಾಗಿದೆ.

11 ಮೇ 2023ರಂದು ಟಿವಿ9 ವರದಿ ಮಾಡಿದ್ದು “ಗ್ರಾಮಸ್ಥರು ಇವಿಎಂ, ವಿವಿಪ್ಯಾಟ್ ಒಡೆದು ಹಾಕಿದ್ದಾರೆ. ಇವಿಎಂ ಸಾಗಣೆ ಮಾಡುತ್ತಿದ್ದ ಕಾರನ್ನು ಜಖಂಗೊಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಅರ್ಧಕ್ಕೆ ಮತದಾನ ಸ್ಥಗಿತಗೊಳಿಸಿ ಮತಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಗಲಾಟೆ ಮಾಡಿದ್ದರು.

ಮತಯಂತ್ರ, ವಿವಿಪ್ಯಾಟ್ ಇದ್ದ ಕಾರಿನ ಮೇಲೆ ದಾಳಿ ಮಾಡಿ ಅದನ್ನು ಜಖಂಗೊಳಿಸಿದ್ದರು. ಅಲ್ಲದೇ ಸಿಬ್ಬಂದಿ ಮೇಲೆ ಸಹ ಹಲ್ಲೆ ಮಾಡಿದ್ದರು. ಇವಿಎಂ ಬದಲಾವಣೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಯಾರೇ ಕಾನೂನು ಕೈಗೆ ತೆಗೆದುಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಜಯ ಕರ್ನಾಟಕ ಸೇರಿದಂತೆ ಹಲವು ಮಾಧ್ಯಮಗಳು ಮಾಡಿರುವ ವರದಿಯನ್ನು ಇಲ್ಲಿ ನೋಡಬಹುದು.  ಚುನಾವಣಾ ಆಯೋಗವು ಈ ಘಟನೆ ಕುರಿತು ಟ್ವೀಟ್ ಮಾಡಿರುವುದನ್ನು ಇಲ್ಲಿ ನೋಡಬಹುದು.

2023ರಲ್ಲಿಯೂ ಇದೇ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಾಗ,  ವಿಜಯಪುರ ಜಿಲ್ಲಾಧಿಕಾರಿಗಳ ಟ್ವಿಟ್ಟರ್ ಹ್ಯಾಂಡಲ್ ಸಹ ವೈರಲ್ ವೀಡಿಯೋ ಬಗ್ಗೆ ಟ್ವೀಟ್ ಮಾಡಿದೆ. ಬಿಜೆಪಿ ನಾಯಕನ ವಾಹನದಲ್ಲಿ ಇವಿಎಂ ಇತ್ತು ಎಂಬ ಹೇಳಿಕೆಯನ್ನು ಅದು ನಿರಾಕರಿಸಿದೆ. ಟ್ವೀಟ್ ಪ್ರಕಾರ, “ಈ ಹೇಳಿಕೆಯು ದಾರಿತಪ್ಪಿಸುತ್ತದೆ. ವಾಸ್ತವವಾಗಿ, ಸೆಕ್ಟರ್ ಅಧಿಕಾರಿಯ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಮೀಸಲು ಇವಿಎಂ ಯಂತ್ರವನ್ನು ಗ್ರಾಮಸ್ಥರು ಹಾನಿಗೊಳಿಸಿದರು. ಪ್ರಕರಣ ದಾಖಲಾಗಿದ್ದು, 24 ಜನರನ್ನು ಬಂಧಿಸಲಾಗಿದೆ. ” ಎಂದು ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹುಬ್ಬಳ್ಳಿ ಬಿಜೆಪಿ ಮುಖಂಡರ ಕಾರಿನಲ್ಲಿ EVM VVPAT ಸಿಕ್ಕಿದೆ ಎಂಬ ಹೇಳಿಕೆ ತಪ್ಪಾಗಿದೆ. ವಾಸ್ತವವಾಗಿ ಈ ಘಟನೆ 2023ರಲ್ಲಿ ಮಸಬಿನಾಳ ಗ್ರಾಮದ ಜನರ ಯಡವಟ್ಟಿನಿಂದ ನಡೆದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸುಳ್ಳು : ಹುಬ್ಬಳ್ಳಿ ಬಿಜೆಪಿಯವರ ಕಾರಿನಲ್ಲಿ EVM VVPAT ಸಿಕ್ಕಿದೆ. ಭ್ರಷ್ಟಾಚಾರಿ ಬಿಜೆಪಿ ಜನರ ಮತಕ್ಕೆ ಕನ್ನ ಹಾಕುತ್ತಿದೆ ಎಂದು ಗ್ರಾಮಸ್ಥರು ಮತಯಂತ್ರಗಳನ್ನು ಧ್ವಂಸ ಮಾಡಿದ್ದಾರೆ.

ಸತ್ಯ : 10ಮೇ 2023 ರಂದು ವಿಧಾನಸಬೆ ಚುನಾವಣೆಯಲ್ಲಿ ವಿಜಯಪುರದ ಗ್ರಾಮವೊಂದರಲ್ಲಿ  ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿದ ಗ್ರಾಮಸ್ಥರು ಮತ ಯಂತ್ರ ಒಡೆದು ಹಾಕಿದ್ದಾರೆ. ಅದಲ್ಲದೇ ಅಧಿಕಾರಿಗಳ ಕಾರನ್ನು ಕೂಡ ಗ್ರಾಮಸ್ಥರು ಜಖಂಗೊಳಿಸಿದ್ದಾರೆ. ಜೊತೆಗೆ ಚುನಾವಣಾ ಸಿಬ್ಬಂದಿಗೂ ಗ್ರಾಮಸ್ಥರು ಥಳಿಸಿದ್ದಾರೆ.

ಫೋಸ್ಟ್‌: ಇನ್‌ಸ್ಟಾಗ್ರಾಮ್ ಪೋಸ್ಟ್‌

ಆಧಾರ : ಟಿವಿ 9, ವಿಜಯ ಕರ್ನಾಟಕ, ಸುವರ್ಣ ನ್ಯೂಸ್


ಇದನ್ನು ಓದಿರಿ : FACT CHECK | ಮತದಾನ ಮಾಡುವ ವೇಳೆ ಮಲ್ಲಿಕಾರ್ಜುನ ಖರ್ಗೆ, ಪತ್ನಿ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights