2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ; ಅದೇ ನಮ್ಮ ಗುರಿ: ನಿಖಿಲ್ ಕುಮಾರಸ್ವಾಮಿ

ಉಪ ಚುನಾವಣೆಯಲ್ಲಿ ಶಿರಾ ಕ್ಷೇತ್ರವನ್ನು ಕಳೆದುಕೊಂಡಿದ್ದು ನೋವು ತಂದಿದೆ. ಆದರೆ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಆಶ್ರಯ ನೀಡಿರುವ ರಾಮನಗರ ಜಿಲ್ಲೆಯಿಂದಲೇ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಗುರಿ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು, ಯುವ ಕಾರ್ಯಕರ್ತರನ್ನು ಸಂಘಟಿಸುತ್ತೇನೆ. ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಜನ್ಮ ನೀಡಿದ ರಾಮನಗರದಿಂದಲೇ ಈ ಕೆಲಸ ಆರಂಭಿಸುತ್ತೇನೆ ರಾಮನಗರ ಜಿಲ್ಲೆ ನಂತರ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವ ವಿವರವನ್ನು ಶೀಘ್ರದಲ್ಲಿ ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ.

ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ಇಲ್ಲ. ಆದರೆ ಈಗಲೇ ಈ ಬಗ್ಗೆ ಏನನ್ನೂ ಹೇಳಲಾರೆ. ರಾಮನಗರ ಕ್ಷೇತ್ರದ ಪ್ರವಾಸದ ವೇಳೆಯಲ್ಲಿ ಜನರ ಅಹವಾಲು ಆಲಿಸಿ, ಕ್ಷೇತ್ರದ ಸಮಸ್ಯೆಗಳನ್ನು ಇಲ್ಲಿನ ಶಾಸಕರಾದ ಅನಿತಾ ಕುಮಾರಸ್ವಾಮಿ ಗಮನಕ್ಕೆ ತರುತ್ತೇನೆ’ ಎಂದರು.

ಕೋವಿಡ್‌ ಕಾರಣಕ್ಕೆ ನನ್ನ ಪೋಷಕರು ತಮ್ಮ ಕ್ಷೇತ್ರಗಳಿಗೆ ಹೆಚ್ಚು ಭೇಟಿ ಕೊಡಲು ಆಗಿಲ್ಲ. ಆದರೆ ಅಧಿಕಾರಿಗಳ ಬಳಿ ಇಬ್ಬರೂ ಶಾಸಕರು ನಿರಂತರ ಚರ್ಚೆ ಮಾಡುತ್ತಿದ್ದಾರೆ. ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.

ಶಿರಾ ಕ್ಷೇತ್ರ ಕಳೆದುಕೊಂಡಿದ್ದು ಮನಸ್ಸಿಗೆ ತುಂಬಾ ನೋವಾಗಿದೆ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ರೈತರ ಸಾಲಮನ್ನಾವಾಗಲಿ ಅಥವಾ ಅಭಿವೃದ್ಧಿ ಕಾರ್ಯಗಳನ್ನಾಗಲಿ ಜನರು ಪರಿಗಣಿಸಲಿಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: ಬೆಂಗಳೂರು ಉಪನಗರ ರೈಲು ಯೋಜನೆ: 7438 ಕೋಟಿ ರೂ. ಸಾಲ ಪಡೆಯಲು ಸರ್ಕಾರ ನಿರ್ಧಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights