ಸರ್ಕಾರಿ ಭೂಮಿ ರಕ್ಷಿಸಲು ಮುಂದಾಗಿದ್ದಕ್ಕೆ ಜೀವ ಬೆದರಿಕೆ; ಟವರ್ ಏರಿದ ದಂಪತಿಗಳು ಆತ್ಮಹತ್ಯೆಗೆ ಯತ್ನ!

ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ರಕ್ಷಿಸಲು ಮುಂದಾಗಿದ್ದ ನಮಗೆ ಕೆಲವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದಂಪಿತಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ ಘಟನೆ ಬೇಲೂರಿನಲ್ಲಿ ನಡೆದಿದೆ.

ಬೇಲೂರು ತಾಲ್ಲೂಕಿನ ದೇವರಾಜಪುರ ಗ್ರಾಮದವರಾದ ಮೋಹನ್‌ರಾಜ್ ಮತ್ತು ಚಂದನ ದಂಪತಿಗಳು ತಮಗೆ ಜೀವ ಬೆದರಿಕೆ ಎಂದು ಆರೋಪಿಸಿ ಟವರ್‌ ಏರಿದ್ದು, ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಆತಂಕ ಸೃಷ್ಟಿಸಿದ್ದರು.

‘ಗ್ರಾಮದ ಸರ್ವೇ ನಂಬರ್‌ 101ರಲ್ಲಿ ಮೂರು ಎಕರೆ ಭೂಮಿಯಿದೆ. ಇದರಲ್ಲಿ 1.70 ಎಕರೆ ಒತ್ತುವರಿಯಾಗಿದೆ. ಉಳಿದ 1.30 ಎಕರೆ ಭೂಮಿಯಲ್ಲಿ ಸ್ಮಶಾನ, ಸಮುದಾಯ ಭವನ, ದೇಗುಲ, ಅಂಗನವಾಡಿ ನಿರ್ಮಾಣಕ್ಕೆ ಗ್ರಾಮದ ಪ್ರತಿಯೊಂದು ಕುಟುಂಬದಿಂದ ₹500 ರಿಂದ ₹2 ಸಾವಿರದವರಗೆ ಹಣ ಸಂಗ್ರಹಿಸಿದ್ದೆವು. ಆದರೆ, ಕೆಲವರು ನಮಗೆ ತಿಳಿಯದಂತೆ ಮೋಸ ಮಾಡಿ ತಮ್ಮ ಹೆಸರಿಗೆ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದು ಮೋಹನ್‌ರಾಜ್ ಆರೋಪಿಸಿದರು.

‘ಸ್ಥಳದಲ್ಲಿ ಮನೆಯನ್ನೂ ಅಕ್ರಮವಾಗಿ ಕಟ್ಟಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರಿಂದ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳು ಆ ಮನೆ ಕೆಡವಿಸಿದರು. ಇದರಿಂದ ಸಿಟ್ಟಾಗಿ ಅವರು ನಮ್ಮ ಮೇಲೆ ಪ್ರತಿ ದೂರು ದಾಖಲಿಸಿದ್ದಾರೆ. ನಮಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ತಹಶಿಲ್ದಾರ್ ಎನ್.ವಿ.ನಟೇಶ್, ಟವರ್‌ ಮೇಲಿದ್ದ ಮೋಹನ್‌ರಾಜ್‌ಗೆ ದೂರವಾಣಿ ಕರೆ ಮಾಡಿ ಮಾತನಾಡಿ, ‘ಸರ್ಕಾರಿ ಭೂಮಿಯನ್ನು ಗ್ರಾಮದ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಭರವಸೆ ನೀಡಿ, ಮನವೊಲಿಸಿದ ನಂತರ ದಂಪತಿ ಟವರ್ ಮೇಲಿಂದ ಕೆಳಗೆ ಇಳಿದು ಬಂದಿದ್ದಾರೆ.


ಇದನ್ನೂ ಓದಿ: ರಾಹುಲ್‌ಗಾಂಧಿ ‘ಶಿಕ್ಷಕರನ್ನು ಮೆಚ್ಚಿಸಲು ಚಡಪಡಿಸುವ ವಿದ್ಯಾರ್ಥಿಯಂತೆ, ಆದರೆ ಸಾಮರ್ಥ್ಯವಿಲ್ಲ’: ಬರಾಕ್ ಒಬಾಮ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights