ಇದು ಭಾರತೀಯ ಸಂಸ್ಕೃತಿಯೇ? ಎಂದ ಜಾವ್ಡೇಕರ್‌ಗೆ ನೆಟ್ಟಿಗರಿಂದ ತರಾಟೆ!

ಗರ್ಭಿಣಿಯಾಗಿದ್ದ ಕಾಡಾನೆಯೊಂದು ಪಟಾಕಿ ತುಂಬಿದ ಪೈನಾಪಲ್ ತಿಂದ ಕಾರಣ ಸಾವನ್ನಪ್ಪಿದ್ದ ಘಟನೆ ಕೇರಳದಲ್ಲಿ ನಡೆದಿದ್ದು, ಅದು ಈಗ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣವನ್ನು ಕೇರಳ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದೆ.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಮನುಷ್ಯನ ಕ್ರೌರ್ಯಕ್ಕೆ ವಿಷಾಧ, ಆಕ್ರೋಷ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಮಾಡಿರುವ ಆ ಒಂದು ಟ್ವೀಟ್‌ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಟ್ವೀಟ್‌ ಮಾಡಿದ್ದ ಸಚಿವ ಪ್ರಕಾಶ್ ಜಾವಡೇಕರ್‌, “‌ಕೇರಳದಲ್ಲಿ ಆನೆ ಮೃತಪಟ್ಟಿರುವ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಗಂಭೀರ ತನಿಖೆಗಳು ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಏಕೆಂದರೆ ಇದು “ಇದು ಭಾರತೀಯ ಸಂಸ್ಕೃತಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ಅವರ ಟ್ವೀಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆಗೆ ಒಳಗಾಗಿದೆ.

ಜಾವಡೇಕರ್‌ ಟ್ವೀಟ್‌ಗೆ ಕಿಡಿಕಾರಿರುವ ಎಎಪಿ ನಾಯಕ ಬಿಸ್ಮಯ ಮಹಾಪಾತ್ರ, “ಭಾರತೀಯ ಸಂಸ್ಕೃತಿಯ ಬಗ್ಗೆ ಸಚಿವರಿಂದ ಭಾರೀ ದೊಡ್ಡ ಮಾತು, ಅಂದಹಾಗೆ ಇದು ಯಾವ ಸಂಸ್ಕೃತಿ?” ಎಂದು ದೆಹಲಿ ಗಲಭೆಯಲ್ಲಿ ನಡೆದ ಹಿಂಸಾಚಾರದ ಚಿತ್ರವನ್ನು ಪೋಸ್ಟ್‌ ಮಾಡುವ ಮೂಲಕ ಸಚಿವರನ್ನು ಪ್ರಶ್ನೆ ಮಾಡಿದ್ದಾರೆ.

ಮತ್ತೋರ್ವ ವ್ಯಕ್ತಿ, “ಲಾಕ್‌ಡೌನ್‌ನಿಂದಾಗಿ ಹೆದ್ದಾರಿಯಲ್ಲಿ ಕಷ್ಟಪಟ್ಟು ನಡೆದ ಗರ್ಭಿಣಿ ಮಹಿಳೆಯರಿಗೂ ಇದೇ ಅನುಕಂಪ ತೋರಿಸಿ. ಅವರ ಬಗ್ಗೆ ನಿಮ್ಮ ಸಹಾನುಭೂತಿಯನ್ನು ಉಳಿಸಿ. ಇದು ಭಾರತೀಯ ಸಂಸ್ಕೃತಿಯೇ ? ಇದಕ್ಕೆ ಯಾರು ಜವಾಬ್ದಾರರು, ಅವರನ್ನು ಶಿಕ್ಷಿಸಿ ಎಂದು ಕಿಡಿಕಾರಿದ್ದಾರೆ.

ಡ್ಯಾರಿಲ್ ಎಂಬವರು “ಆತ್ಮೀಯ ಪ್ರಕಾಶ್ ಜಿ, ಇದು ತುಂಬಾ ಚೆನ್ನಾಗಿದೆ. ಹಾಗೆಯೇ ಕೇಂದ್ರ ಸರ್ಕಾರ ಇದೇ ಉತ್ಸಾಹವನ್ನು ಶ್ರಮಿಕ ರೈಲುಗಳಲ್ಲಿ ಸತ್ತ ಮನುಷ್ಯ ಜೀವಗಳ ಮೇಲೆಯೂ ತೋರಿಸಲಿ” ಎಂದು ಕಿವಿಮಾತು ಹೇಳಿದ್ದಾರೆ.

ಅಲ್ಲದೆ, ಸಚಿವ ಪ್ರಕಾಶ್‌ ಜಾವಡೇಕರ್‌ ಅವರ ದ್ವಂದ್ವ ನೀತಿಯ ವಿರುದ್ಧ ಕಿಡಿಕಾರಿದ್ದ ಆಲ್ಟ್ ನ್ಯೂಸ್ ವರದಿಗಾರ ಮೊಹಮ್ಮದ್ ಝುಬೈರ್‌ ಹಳೆಯ ಪ್ರಕರಣವನ್ನು ನೆನಪಿಸಿಕೊಂಡು, “ಬಿಹಾರದಲ್ಲಿ 200 ಕ್ಕೂ ಹೆಚ್ಚಿನ ನೀಲ್ಗಾಯ್‌ಗಳನ್ನು ಕೇಂದ್ರದ ಪರಿಸರ ಸಚಿವಾಲಯದ ಅನುಮತಿಯೊಂದಿಗೆ ಗುಂಡಿಟ್ಟು ಕೊಲ್ಲಲಾಗಿತ್ತು. 2016ರಲ್ಲಿ ಪರಿಸರ ಸಚಿವರಾಗಿದ್ದ ಜಾವಡೇಕರ್‌  ಅದನ್ನು ಸಮರ್ಥಿಸಿಕೊಂಡಿದ್ದರು” ಎಂದು ಪ್ರಶ್ನೆ ಮಾಡುವ ಮೂಲಕ ಸಚಿವರ ದ್ವಂದ್ವವನ್ನು ಅನಾವರಣ ಮಾಡಿದ್ದಾರೆ.

ಆದರೆ, ಜಾವಡೇಕರ್‌ ಟ್ವೀಟ್‌ಗೆ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದಿರುವ ಈ ಎಲ್ಲಾ ಆಕ್ರೋಶಕ್ಕೆ-ಆರೋಪಕ್ಕೆ ಸಚಿವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights