ದೆಹಲಿ ಗಲೆಭೆ ಪ್ರಕರಣ: ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌!

ಯುವ ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್, ದೇವಂಗಾನಾ ಕಾಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಹೈಕೋರ್ಟ್‌ ನೀಡಿರುವ ಜಾಮೀನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಆದೇಶದಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದು, ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದಿದೆ.

ಆದರೆ, ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್‌ ನೀಡಿರುವ 100 ಪುಟಗಳ ತೀರ್ಪಿನ ಕುರಿತು ಸುಪ್ರೀಂ ಆಶ್ಚರ್ಯ ವ್ಯಕ್ತಪಡಿಸಿದೆ. ದೆಹಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಒಂದು ನಿದರ್ಶನದಂತೆ ಪರಿಗಣಿಸಬಾರದು. ಅಲ್ಲದೆ, ಯಾವುದೇ ನ್ಯಾಯಾಲಯವು ಈ ತೀರ್ಪನ್ನು ಅವಲಂಬಿಸಬಾರದು. ದೆಹಲಿ ಹೈಕೋರ್ಟ್‌ ಯುಎಪಿಎಯನ್ನು ವ್ಯಾಖ್ಯಾನಿಸಿದ ರೀತಿಯ ಬಗ್ಗೆ ಬಹುಶಃ ಸುಪ್ರೀಂಕೋರ್ಟ್‌ ಪರಿಶೀಲಿಸುವ ಅಗತ್ಯವಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ನ್ಯಾಯಪೀಠವು ಹೇಳಿದ್ದಾರೆ.

ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿ ಹೋರಾಟಗಾರರಿಗೆ ಹೈಕೋರ್ಟ್ ಜಾಮೀನು ನೀಡಿದ ಒಂದು ದಿನದ ನಂತರ, ದೆಹಲಿ ಪೊಲೀಸರು ಜಾಮೀನಿಗೆ ತಡೆ ನೀಡಬೇಕು ಎಂದು ಅರ್ಜಿ ಹಾಕಿದ್ದರು.

ಇದನ್ನೂ ಓದಿ: ತಾಯಿಯ ಸಂದೇಶ: ನಾನು ಹೆಮ್ಮೆಪಡುತ್ತೇನೆ; ದೆಹಲಿ ಹೈಕೋರ್ಟ್‌ನ ತೀರ್ಪು ಭಾರತದಲ್ಲಿ ಪ್ರಜಾಪ್ರಭುತ್ವದ ವಿಜಯವಾಗಿದೆ!

ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ(UAPA)ಯಡಿ ಆರೋಪ ಹೊರಿಸಲ್ಪಟ್ಟ ಈ ಮೂವರು ಒಂದು ವರ್ಷದಿಂದ ಜೈಲಿನಲ್ಲಿದ್ದರು.

ಸುಪ್ರೀಂಕೋರ್ಟ್‌ ಅವರಿಗೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಜೈಲಿನಿಂದ ಬಿಡುಗಡೆಗೊಂಡ ವಿದ್ಯಾರ್ಥಿಗಳು, ‘‘ಜೈಲನ್ನು ತೋರಿಸಿ ನಮ್ಮನ್ನು ಹೆದರಿಸಬೇಡಿ. ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆ ನಿರಂತರ. ಇದು ಸರ್ಕಾರದ ಹತಾಶೆಯನ್ನು ತೋರಿಸುತ್ತದೆ. ನಾವು ಅವರಿಗೆ ಹೆದರದ ಮಹಿಳೆಯರು. ನಮ್ಮನ್ನು ಜೈಲಿನಲ್ಲಿರಿಸುವುದಾಗಿ ಬೆದರಿಕೆ ಹಾಕಿದರೆ, ಅದು ನಮ್ಮ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಬಲಪಡಿಸುತ್ತದೆ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2020 ದೆಹಲಿ ಗಲಭೆ ಪ್ರಕರಣ: ಮೂವರು ವಿದ್ಯಾರ್ಥಿ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಲು ಕೋರ್ಟ್‌ ಅದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights