2020 ದೆಹಲಿ ಗಲಭೆ ಪ್ರಕರಣ: ಮೂವರು ವಿದ್ಯಾರ್ಥಿ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಲು ಕೋರ್ಟ್ ಅದೇಶ!
2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಜಾಮೀನು ನೀಡಿ ಎರಡು ದಿನಗಳು ಕಳೆದರೂ ಪೊಲೀಸರು ವಿದ್ಯಾರ್ಥಿ ಕಾರ್ಯಕರ್ತರಾದ ನತಾಶಾ ನರ್ವಾಲ್, ದೇವಂಗನಾ ಕಾಳಿತ ಮತ್ತು ಆಸಿಫ್ ಇಕ್ಬಾಲ್ ಅವರನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ, ಕೂಡಲೇ ಮೂವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಅವರನ್ನು ಬಿಡುಗಡೆ ಮಾಡದೇ ಇರುವುದಕ್ಕೆ ಪೊಲೀಸರು ಪರಿಶೀಲನಾ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವುದು ಒಂದು ಕಾರಣವಲ್ಲ ಎಂದು ಕೋರ್ಟ್ ಹೇಳಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಈ ಮೂವರನ್ನು ಕಳೆದ ವರ್ಷ ಮೇ ತಿಂಗಳಿನಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು. ಎರಡು ದಿನಗಳ ಹಿಂದೆ ಮೂವರಿಗೂ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಇನ್ನೂ ವಿದ್ಯಾರ್ಥಿಗಳನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.
ವಿಳಾಸಗಳು ಮತ್ತು ಜಾಮೀನುಗಳ ಪರಿಶೀಲನೆಯಲ್ಲಿ ವಿಳಂಬವಾಗಿದ್ದಕ್ಕಾಗಿ ಅವರನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಪೊಲೀಸರು ಕೋರ್ಟ್ಗೆ ತಿಳಿಸಿದ್ದಾರೆ. ಇದು ಆರೋಪಿಗಳನ್ನು ಜೈಲಿನಲ್ಲಿಡಲು ಒಂದು ಸಮರ್ಥ ಕಾರಣವಲ್ಲ ಎಂದು ನಾನು ಹೇಳುತ್ತೇನೆ” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಿವಿಂದರ್ ಬೇಡಿ ಹೇಳಿದ್ದಾರೆ.
ತಮ್ಮ ಕ್ಲೈಂಟ್ ರಾಷ್ಟ್ರ ರಾಜಧಾನಿಯ ವ್ಯಾಪ್ತಿಯನ್ನು ದಾಟಿ ಹೊರ ಹೋಗುವುದಿಲ್ಲ ಎಂದು ಆರೋಪಿಗಳ ವಕೀಲರು ನೀಡಿದ ಜವಾಬ್ದಾರಿಯನ್ನು ಗಮನಿಸಿರುವ ನ್ಯಾಯಾಲಯ, ತಕ್ಷಣ ವಿದ್ಯಾರ್ಥಿ ಸಾಮಾಜಿಕ ಕಾರ್ಯಕರ್ತರ ಬಿಡುಗಡೆಗಾಗಿ ವಾರಂಟ್ ಅನ್ನು ತಿಹಾರ್ ಜೈಲಿನ ಅಧೀಕ್ಷಕರಿಗೆ ಕಳುಹಿಸಿದೆ.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್: ಹೆಚ್ಚಿದ ಬಾಲ್ಯವಿವಾಹ; ಒಂದೇ ಜಿಲ್ಲೆಯಲ್ಲಿ 253 ಬಾಲ್ಯವಿವಾಹಕ್ಕೆ ತಡೆ!
ಜೂನ್ 16 ರಂದು ದೆಹಲಿ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ಅವರ ವಿಳಾಸಗಳು, ಜಾಮೀನುಗಳು ಮತ್ತು ಆಧಾರ್ ಕಾರ್ಡ್ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನ್ಯಾಯಾಲಯದಿಂದ ಹೆಚ್ಚಿನ ಸಮಯವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.
ಪೊಲೀಸ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶರು ದೆಹಲಿಯ ಆರೋಪಿಗಳ ವಿಳಾಸಗಳನ್ನು ಪರಿಶೀಲಿಸಲು ಮತ್ತು ಗುರುವಾರ ಸಂಜೆ 5 ಗಂಟೆಯೊಳಗೆ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದರು.
ಇತರ ರಾಜ್ಯಗಳಲ್ಲಿ ಅವರ ಶಾಶ್ವತ ವಿಳಾಸದ ಪರಿಶೀಲನೆಯ ವರದಿಯನ್ನು ಜೂನ್ 23 ರಂದು ಸಲ್ಲಿಸಬೇಕು ಎಂದು ನ್ಯಾಯಾಲಯವು ಹೇಳಿದೆ.
ಇದಲ್ಲದೆ, ಒಮ್ಮೆ ಜೈಲುವಾಸ ಅನುಭವಿಸಿದವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿ, ಜಾಮೀನು ಬಾಂಡ್ ಅನ್ನು ಜಾಮೀನುಗಳೊಂದಿಗೆ ಒದಗಿಸಿದ ನಂತರ, ಅವರು “ಒಂದು ನಿಮಿಷವೂ” ಕಂಬಿಗಳ ಹಿಂದೆ ಇರಬಾರದು ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಮೋದಿ ಮತ್ತು BJP ಇಲ್ಲದೆಯೂ RSS ಭಾರತದ ಆಡಳಿತವನ್ನು ನಿಯಂತ್ರಿಸಬಹುದೇ?
ಜಾಮೀನು ಪಡೆದ ನಂತರ, ಕಾರ್ಯಕರ್ತರು ಜೈಲಿನಿಂದ ತಕ್ಷಣ ಬಿಡುಗಡೆ ಮಾಡಬೇಕೆಂದು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಮೂವರು ವಿದ್ಯಾರ್ಥಿ ಕಾರ್ಯಕರ್ತರನ್ನು ಮೇ 2020 ರಲ್ಲಿ ಬಂಧಿಸಲಾಗಿತ್ತು. ಇವರನ್ನು ಫೆಬ್ರವರಿ 2020 ರ ಹಿಂಸಾಚಾರದ ‘ಮಾಸ್ಟರ್ ಮೈಂಡ್ಸ್’ ಎಂದು ಆರೋಪಿಸಲಾಗಿತ್ತು. ಈ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಜೂನ್ 15 ರಂದು ಅವರಿಗೆ ಕೋರ್ಟ್ ಜಾಮೀನು ನೀಡಿತ್ತು. ಅಲ್ಲದೆ, “ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಆತುರದಲ್ಲಿ ಪ್ರತಿಭಟನೆಯನ್ನು, ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳಬಾರದು ಮತ್ತು ಪ್ರತಿಭಟನೆಯನ್ನು ಭಯೋತ್ಪಾದನೆ ಎಂದು ಕರೆಯಬಾರದು. ಪ್ರತಿಭಟನೆ ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ರೇಖೆಯನ್ನು ಸರ್ಕಾರ ಅಸ್ಪಷ್ಟಗೊಳಿಸಿದೆ. ಅಂತಹ ಮನಸ್ಥಿತಿಯನ್ನು ಭಿತ್ತದ್ದೇ ಆದರೆ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುಃಖದ ದಿನ” ಎಂದು ಕೋರ್ಟ್ ಹೇಳಿತ್ತು.
ಏತನ್ಮಧ್ಯೆ, ಈ ಪ್ರಕರಣದಲ್ಲಿ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ತಾಯಿಯ ಸಂದೇಶ: ನಾನು ಹೆಮ್ಮೆಪಡುತ್ತೇನೆ; ದೆಹಲಿ ಹೈಕೋರ್ಟ್ನ ತೀರ್ಪು ಭಾರತದಲ್ಲಿ ಪ್ರಜಾಪ್ರಭುತ್ವದ ವಿಜಯವಾಗಿದೆ!

