ಮೋದಿ ಮತ್ತು BJP ಇಲ್ಲದೆಯೂ RSS ಭಾರತದ ಆಡಳಿತವನ್ನು ನಿಯಂತ್ರಿಸಬಹುದೇ?

ವಿಮರ್ಶಕ, ಚಿಂತಕ ಮತ್ತು ಕಾರ್ಯಕರ್ತ ನೋಮ್ ಚೋಮ್ಸ್ಕಿ ಅಮೆರಿಕವನ್ನು “ಕಾರ್ಪೊರೇಟ್ ಪ್ರಜಾಪ್ರಭುತ್ವ” ಎಂದು ಕರೆಯುತ್ತಾರೆ. ಅಲ್ಲಿ ಯಾವ ಪಕ್ಷವು ಅಧಿಕಾರಕ್ಕೆ ಬಂದರೂ, ಅವಗಳ ನೀತಿಗಳು ಯಾವಾಗಲೂ ಕಾರ್ಪೊರೇಟ್ ವಲಯದಿಂದ ನಿರ್ದೇಶಿಸಲ್ಪಡುತ್ತವೆ. ಹೀಗಾಗಿಯೇ, ಯುನೈಟೆಡ್ ಸ್ಟೇಟ್ಸ್‌ನ ಅಧಿಕಾರ ರಿಪಬ್ಲಿಕನ್‌ಗಳಿಂದ ಡೆಮಾಕ್ರಾಟ್‌ಗಳಿಗೆ ಬದಲಾದರೂ ಅಮೆರಿಕಾದ ನೀತಿಗಳಲ್ಲಿ ಅಂತಹ ಯಾವುದೇ ವ್ಯತ್ಯಾಸವನ್ನುಂಟುಮಾಡಲಿಲ್ಲ ಎಂದು ನಾವು ನೋಡಿದ್ದೇವೆ.

ಯುರೋಪಿನಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ನೇರವಾಗಿ ದುರ್ಬಲಗೊಳಿಸಲಾಗುತ್ತಿದೆ ಎಂದು ಚೋಮ್ಸ್ಕಿ ಹೇಳುತ್ತಾರೆ: ಚುನಾವಣೆಯ ಮೂಲಕ ಆಯ್ಕೆಯಾಗದ ಯುರೋಪಿಯನ್ ಆಯೋಗ, ಐಎಂಎಫ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.” ಜನರಿಂದ ಆಯ್ಕೆಯಾಗದ ಈ ಮೂರು ಸಂಸ್ಥೆಗಳು ನೀತಿ-ನಿರ್ಧಾರಗಳನ್ನು ರೂಪಿಸುತ್ತಿವೆ.

ಆದ್ದರಿಂದ, ಸಾಂಸ್ಥಿಕ ಮಾದರಿ ಬೆಳವಣಿಗೆ ಮತ್ತು ಆಡಳಿತವು ರಾಜಕೀಯ ವಿಭಜನೆಯನ್ನು ನಿಯಂತ್ರಿಸುತ್ತಿದೆ. ಇದು ಶೀತಲ ಸಮರದ ಸಮಯದಲ್ಲಿ ಮತ್ತು ನಂತರದಲ್ಲಿ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಏನಾಯಿತು ಎಂಬುದಕ್ಕೆ ಹೋಲುತ್ತದೆ: ಬಂಡವಾಳಶಾಹಿ ಯುನೈಟೆಡ್ ಸ್ಟೇಟ್ಸ್ ಮತ್ತು ಕಮ್ಯುನಿಸ್ಟ್ ರಷ್ಯಾ ತಮ್ಮ ದೊಡ್ಡ ಸೈದ್ಧಾಂತಿಕ ವಿಭಜನೆಯನ್ನು ಮೀರಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿವೆ.

ರಾಜಕೀಯ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವಿಭಜನೆಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ದುರ್ಬಲಗೊಳಿಸಿದಾಗ ನಮ್ಮಲ್ಲಿ ಇನ್ನೂ “ಮುಕ್ತ ಮತ್ತು ನ್ಯಾಯಯುತ” ಚುನಾವಣೆಗಳ ಹೋಲಿಕೆ ಇದ್ದರೂ ಸಹ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ಕಷ್ಟಕರವಾಗುತ್ತದೆ.

ಇದನ್ನೂ ಓದಿ: ವಿಶೇಷ ಲೇಖನ: 1984ರ ಸಿಖ್ ನರಮೇಧದಲ್ಲಿ RSSನ ಕರಾಳ ಹಸ್ತ ಮತ್ತು ಕ್ಷೇಪ

ಭಾರತದಲ್ಲಿ ಇದೇ ರೀತಿಯ ಘಟನೆ ನಡೆಯುತ್ತಿದೆ. ಯಾವುದೇ ವಿರೋಧ ಮತ್ತು ಚುನಾವಣೆಗಳನ್ನು ಅನುಮತಿಸದ ಜರ್ಮನಿಯ ಫ್ಯಾಸಿಸಂ ನಿರಂಕುಶ ಪ್ರಭುತ್ವದ ಮಾದರಿಯನ್ನು ಇಲ್ಲಿ ಅಳವಡಿಸಿಕೊಳ್ಳದಿರಬಹುದು. ಆದರೆ, ಸಂವಿಧಾನ, ವಿರೋಧ ಪಕ್ಷಗಳು ಮತ್ತು ನಿಯಮಿತ ಚುನಾವಣೆಗಳ ನಡುವೆಯೂ ಭಾರತದಲ್ಲಿ ನಿರಂಕುಶ ಪ್ರಭುತ್ವವು ಅಸ್ತಿತ್ವಕ್ಕೆ ಬರಬಹುದು.

ಇದರ ಆರಂಭಿಕ ಸುಳಿವನ್ನು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದರು. ಮಧ್ಯಪ್ರದೇಶದಲ್ಲಿ ತಮ್ಮ ಪಕ್ಷದ ಹಿರಿಯ ನಾಯಕ ಕಮಲ್‌ನಾಥ್‌ ಅವರು ಮುಖ್ಯಮಂತ್ರಿಯಾಗಿದ್ದಾಗಲೂ, ಅಲ್ಲಿನ ಐಎಎಸ್ ಅಧಿಕಾರಿಗಳು ಅವರ ಮಾತನ್ನು ಕೇಳುವುದಿಲ್ಲ ಎಂಬ ಆಘಾತಕಾರಿ ವಿವರವನ್ನು ಅವರು ಹಂಚಿಕೊಂಡಿದ್ದರು. ಇದನ್ನೇ, ‘ಆಡಳಿತ ಸಂಸ್ಥೆಗಳು ಆರ್‌ಎಸ್‌ಎಸ್‌ ಸ್ವಾಧೀನದಲ್ಲಿವೆ. ಇಂತಹ ಸಂದರ್ಭದಲ್ಲಿ ಒಬ್ಬರು ಹೇಗೆ ಹೋರಾಡಲು ಸಾಧ್ಯ’ ಎಂದು ರಾಹುಲ್‌ಗಾಂಧಿ ಹೇಳಿದ್ದರು.

ಭಾರತೀಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆರ್‌ಎಸ್‌ಎಸ್‌ನ ಸಾಮಾಜಿಕ ಮತ್ತು ಸಾಂಸ್ಥಿಕ ಪ್ರಾಬಲ್ಯವು ಬಿಜೆಪಿಯ ಪ್ರಭಾವಕ್ಕಿಂತ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತದೆ. ವಾಸ್ತವವಾಗಿ, ಬಿಜೆಪಿ ಅಪಖ್ಯಾತಿಗೆ ಪಾತ್ರವಾಗಿದ್ದರೂ ಮತ್ತು ಆ ಮೂಲಕ 2024 ರಲ್ಲಿ ನಡೆಯುವ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ಸೋತರೂ ಸಹ ಆರ್‌ಎಸ್‌ಎಸ್ ವ್ಯವಹಾರಗಳು ಮತ್ತು ಆಡಳಿತದ ಮೇಲಿನ ನಿಯಂತ್ರಣದ ಚುಕ್ಕಾಣಿ ಹಿಡಿಯಲು ನೆಲವನ್ನು ಸಿದ್ಧಪಡಿಸುತ್ತಿದೆ.

“ಶಾಶ್ವತ ಸರ್ಕಾರ” ಎಂದು ಪರಿಗಣಿಸಲ್ಪಟ್ಟ ಅಧಿಕಾರಶಾಹಿ ವರ್ಗವು ಈಗ ಪಾರ್ಶ್ವ ಪ್ರವೇಶ (lateral-entry policy) ಮೂಲಕ “ಡೊಮೇನ್ ತಜ್ಞರನ್ನು” ತುಂಬುತ್ತಿದೆ. ಹೀಗೆ ತುಂಬಲ್ಪಟ್ಟವರ ಸಾಮಾಜಿಕ ಹಿನ್ನೆಲೆ ಮತ್ತು ಸೈದ್ಧಾಂತಿಕ ನಿಲುವು ಏನು? ಎಂದು ಗಮನಿಸಿದಾಗ, ಇಂತಹ ನೇಮಕಾತಿಗಳ ಮೂಲಕ ಒಬಿಸಿ ಅಥವಾ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಉಲ್ಲಂಘಿಸಲಾಗುತ್ತಿದೆ ಮತ್ತು ಮೇಲ್ವರ್ಗದವರನ್ನು ಅಲ್ಲಿಗೆ ತುಂಬಿಕೊಳ್ಳಲಾಗುತ್ತಿದೆ ಎಂಬ ದೂರುಗಳಿವೆ.

ಇದನ್ನೂ ಓದಿ: ಗಾಂಧಿಯನ್ನು ಕೊಂದ ಗೋಡ್ಸೆ ಒಬ್ಬ RSS ಭಯೋತ್ಸಾದಕ: ನಟ ಸಿದ್ದಾರ್ಥ್

ರಾಜಕೀಯ ರಚನೆಗಳನ್ನು ಮೀರಿ, ಆರ್‌ಎಸ್‌ಎಸ್ ಮತ್ತು ಅದರ ಕಾರ್ಯಸೂಚಿಗಳು ರಾಜಕೀಯವಾಗಿ ಕೇಂದ್ರ ಹಂತಕ್ಕೆ ಸಾಗಿದೆ. ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷವು ಗೌಶಾಲರು ಅಥವಾ ಜಾನುವಾರು ಆಶ್ರಯಗಳಿಗೆ ತನ್ನ ಬದ್ಧತೆಯನ್ನು ಪ್ರತಿಪಾದಿಸಲು ಹೊರಟಿತು. ಈ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿಯೂ ಸಹ ನೀಡಿತು. ತೀರಾ ಇತ್ತೀಚೆಗೆ, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗ) ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸಲು ಮುಂದಾಗಿತ್ತು.

ಹಿಂದೂ ಧಾರ್ಮಿಕ ಗುರುತುಗಳನ್ನು ಒಪ್ಪಿಕೊಳ್ಳುವುದು, ಅಲ್ಪಸಂಖ್ಯಾತರ ಧಾರ್ಮಿಕ ಚಿಹ್ನೆಗಳನ್ನು ದೂರವಿಡುವುದು ಮತ್ತು ನಿರಾಕರಿಸುವುದು ಭಾರತದಲ್ಲಿ ಹೊಸ ವಿದ್ಯಾಮಾನವೂ, ಜ್ಞಾನವೂ ಆಗಿ ಮಾರ್ಪಟ್ಟಿದೆ. ಉದಾಹರಣೆಗೆ, ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು 2019-20ರಲ್ಲಿ ಶಾಹೀನ್ ಬಾಗ್‌ನಲ್ಲಿ ಹಲವು ತಿಂಗಳುಗಳ ಕಾಲ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ನಿರಾಕರಿಸಲಿಲ್ಲ, ಆದರೆ ವಿಧಾನಸಭಾ ಚುನಾವಣೆಗೆ ಒಂದು ದಿನ ಮೊದಲು ಅವರು ಹನುಮಾನ್ ಚಾಲಿಸಾವನ್ನು ಪಠಿಸಿದರು.

ಪ್ರಸ್ತುತ ವಿಷಯಗಳ ಯೋಜನೆಯಲ್ಲಿ, ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರವನ್ನು ವಹಿಸಿಕೊಂಡರೆ ಪರವಾಗಿಲ್ಲ. ಆದರೆ, ಮುಂದಿನ ಪ್ರಧಾನಿ ಹುದ್ದೆಗೆ ಆರ್‌ಎಸ್‌ಎಸ್ ಈಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಆದ್ಯತೆ ನೀಡುತ್ತಿದೆ. ಇತರ ಎಲ್ಲಾ ಸಾಂಭವ್ಯ ಅಭ್ಯರ್ಥಿಗಳಿಗಿಂತ ಆರ್‌ಎಸ್‌ಎಸ್-ಬಿಜೆಪಿ ಪ್ರಚಾರ ಮಾಡುತ್ತಿರುವ ಹಿಂದೂ ರಾಜ್ಯವೊಂದರ ಧಾರ್ಮಿಕ / ಪ್ರಾಚೀನ ಕಲ್ಪನೆಗೆ ಯೋಗಿ ಆದಿತ್ಯನಾಥ್ ಹೊಂದಿಕೊಳ್ಳುವುದರಿಂದ ಮುಂದಿನ ಪ್ರಧಾನಿ ಹುದ್ದೆಗೆ ಯೋಗ್ಯ ಎಂದು ಆರ್‌ಎಸ್‌ಎಸ್‌ ಗುರುತಿಸಿದೆ. ಅದಾಗ್ಯೂ, ಅದು ಕ್ಷತ್ರಿಯ ಜಾತಿಗೆ ಸೇರಿದ ಹಿಂದೂ ಯೋಗಿಯ ನೇತೃತ್ವದ ಅಧಿಕಾರವಾಗಲಿದೆ.

ಇದಲ್ಲದೆ, ಅನೇಕ ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್‌ನ ದೊಡ್ಡ ನಾಯಕರು-ಮುಖಂಡರು ಮತ್ತು ಬೆಂಬಲಿಗರ ವಿಭಾಗಗಳು ಸಹ ಆರ್‌ಎಸ್‌ಎಸ್‌ ಪ್ರಾಬಲ್ಯದ ಕಲ್ಪನೆಯೊಂದಿಗೆ ನೇರ ಸಂಘರ್ಷವನ್ನು ಹೊಂದಿರುವುದಿಲ್ಲ.

ಈ ಮಾದರಿಯಲ್ಲಿ, ಆರ್ಥಿಕ ಅಭಿವೃದ್ಧಿಯ ಮಾದರಿಯ ಮೇಲೆ ರಾಜಕೀಯ ಪಕ್ಷಗಳ ನಡುವಿನ ವ್ಯತ್ಯಾಸಗಳು ಕರಗಿದಂತೆಯೇ, ಆರ್‌ಎಸ್‌ಎಸ್‌ ಸಿದ್ದಾಂತಗಳ ಮೇಲಿನ ನಿಲುವುಗಳೂ ಕರಗುತ್ತವೆ. ರಾಜಕೀಯ ಪಕ್ಷಗಳ ಕಲ್ಯಾಣ ಯೋಜನೆಗಳ ಪ್ರಮಾಣ ಮತ್ತು ಇತರ ಕೆಲವು ವಿವರಗಳ ಮೇಲೆ ಅಲ್ಪ ವ್ಯತ್ಯಾಸಗಳೊಂದಿಗೆ ನವ-ಉದಾರವಾದಿ ಬೆಳವಣಿಗೆಯ ಮಾದರಿಯೊಂದಿಗೆ ಇವು ನಿಲ್ಲುತ್ತವೆ.

ಅಂತೆಯೇ, ಎಲ್ಲಾ ಪಕ್ಷಗಳ ಕಾರ್ಯಚಟುವಟಿಕೆಯು ಹಿಂದೂ ರಾಜ್ಯವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಒಮ್ಮತದಿಂದ ಗುರುತಿಸಲ್ಪಡುತ್ತದೆ-ಜಾತಿ ಹಿಂದೂಗಳ ಪ್ರಾಬಲ್ಯ ಮತ್ತು ಧಾರ್ಮಿಕ ಸಾಂಕೇತಿಕತೆಯೊಂದಿಗೆ ತುಂಬಿರುತ್ತದೆ. ವ್ಯಕ್ತಿಗಳು ಸಮರ್ಥಿಸಬಹುದಾದ ನಂಬಿಕೆ ವ್ಯವಸ್ಥೆಗಳಲ್ಲಿ ಮಾತ್ರ ವ್ಯತ್ಯಾಸಗಳು ಉಳಿಯುತ್ತವೆ.

ಪ್ರಸ್ತುತ ಆಡಳಿತವು ಈ ಕಾರ್ಯಸೂಚಿಗೆ ಅನುಗುಣವಾಗಿ ತಮ್ಮ ನೆಲೆಯನ್ನು ಸಿದ್ಧಪಡಿಸಿದೆ. ಉದಾಹರಣೆಗೆ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ರಾಜಕೀಯ ಸಂಬಂಧಗಳನ್ನು ಮೀರಿದ ಹಲವಾರು ವ್ಯಕ್ತಿಗಳನ್ನು ಬಂಧಿಸಿದೆ. ಇದು ಅಂತಿಮವಾಗಿ, ಆರ್‌ಎಸ್‌ಎಸ್‌ನ ಏಕಾಧಿಪತ್ಯ ಮತ್ತು ನಿರಂಕುಶ ಪ್ರಭುತ್ವದ ಕಲ್ಪನೆಯನ್ನು ವಿರೋಧಿಸುವ ಭಿನ್ನ ವ್ಯಕ್ತಿಗಳಿಗೂ ಅವಕಾಶವಿಲ್ಲ ಎಂಬ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: RSS-BJP ಸಂಪರ್ಕ ಹೊಂದಿರುವವರನ್ನು ಆಡಳಿತದಿಂದ ಹೊರಗಿಟ್ಟ ಬೈಡೆನ್!

ಇಂತಹ ಏಕಾಧಿಪತ್ಯದ ಕಲ್ಪನೆಗೆ ಸರಿಹೊಂದುವ ಆರ್ಥಿಕ ಮಾದರಿಯ ಪರಿಸರ ವ್ಯವಸ್ಥೆಯನ್ನು ಸಹ ರೂಪಿಸಲಾಗಿದೆ. ಏಕಸ್ವಾಮ್ಯ-ಕ್ರೋನಿ ಬಂಡವಾಳಶಾಹಿಗಳು ಪೋಷಕರಾಗುತ್ತಾರೆ, ಉಳಿದವರೆಲ್ಲರನ್ನೂ ಕೈ ಬಿಡಲಾಗುತ್ತದೆ. ಇದೆಲ್ಲದರ ನಂತರ, ಅನೇಕರಿಗಿಂತ ಕೆಲವನ್ನು ನಿಯಂತ್ರಿಸುವುದು ಸುಲಭ, ಆಗ ಆರ್ಥಿಕ ಅಧಿಪತ್ಯ ಮತ್ತು ನಿಯಂತ್ರಣಗಳು ಸಾಂಸ್ಕೃತಿಕ ಮಾದರಿಯ ಅಧಿಪತ್ಯದಲ್ಲಿ ಸೇರಿಕೊಳ್ಳುತ್ತವೆ.

ಭಾರತವು ದುರ್ಬಲ ಆರ್ಥಿಕತೆಯನ್ನು ಹೊಂದಿರಬಹುದು. ಆದರೆ ಪ್ರಬಲ ಕಾರ್ಪೊರೇಟ್ ಸಂಸ್ಥೆಗಳು ಹಿಂದೂ ರಾಷ್ಟ್ರದ ಆಳುವ ಕಲ್ಪನೆಯನ್ನು ಬೆಂಬಲಿಸುವವರೆಗೂ ಅವು ಉಳಿದಿರುತ್ತವೆ. ಅವು ನಂತರದಲ್ಲಿ ಬಲವಾದ ಸಾಂಸ್ಕೃತಿಕ ಏಕೀಕರಣದೊಂದಿಗೆ ಕೊನೆಗೊಳ್ಳಬಹುದು. ವಾಸ್ತವವಾಗಿ, ದುರ್ಬಲ ಆರ್ಥಿಕತೆಯು ಈ ವಿಶ್ವ ದೃಷ್ಟಿಕೋನಕ್ಕೆ ಸಹಾಯಕವಾಗಬಹುದು. ಏಕೆಂದರೆ ಇದು ಜನಸಂಖ್ಯೆಯ ಬಹುಪಾಲು ಜನರನ್ನು ದುರ್ಬಲ ಮತ್ತು ಅಧಿಕಾರರಹಿತರನ್ನಾಗಿ ಮಾಡುತ್ತದೆ.

ಆರ್‌ಎಸ್‌ಎಸ್‌ ಪದೇ ಪದೇ ಖಾಲಿ ರಾಷ್ಟ್ರೀಯವಾದಿ ಸದ್ದುಗಳನ್ನು ಮಾಡುತ್ತದೆ. ಆದರೆ ಸಾರ್ವಜನಿಕ ವಲಯದ ಘಟಕಗಳನ್ನು ಕಾರ್ಪೊರೇಟ್ ವಲಯಕ್ಕೆ ಮಾರಾಟ ಮಾಡಲಾಗುತ್ತದೆ ಅಥವಾ ಸುಧಾರಣೆಗಳ ಹೆಸರಿನಲ್ಲಿ ಸಂಪೂರ್ಣ ಕೃಷಿ ಕಾರ್ಪೋರೇಟ್‌ ಕೈ ಸೇರುತ್ತದೆ. ಆದರೆ ಅದು ನಿಜವಾದ ಪ್ರತಿರೋಧವನ್ನು ಒಳಗೊಳ್ಳುವುದಿಲ್ಲ. ಅದು ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆಯೆಂದರೆ ಅದು ಸಾರ್ವಜನಿಕ ಬಳಕೆಗಾಗಿ ಎಂಬ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದರಲ್ಲಿ ನಿಸ್ಸೀಮವಾಗಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ, ನೀತಿಯನ್ನು ನಿಯಂತ್ರಿಸುವ ಕಾರ್ಪೊರೇಟ್‌ನ “ಗುಪ್ತ ಕೈ” ಯಂತೆ,  ಆರ್‌ಎಸ್‌ಎಸ್ ಭಾರತದಲ್ಲಿ ಸಾಂಸ್ಥಿಕವಾಗಿ ನಿಯಂತ್ರಣವನ್ನು ಸಾಧಿಸುತ್ತದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಕಾರ್ಯಸೂಚಿಯನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ಮಾತ್ರ ಇದು ಕೆಲಸ ಮಾಡುತ್ತದೆ.

ಪ್ರಾಚೀನ ಹಿಂದೂ ಕಲ್ಪನೆಯ ಭಾಗವಾಗಿ, ಆರ್‌ಎಸ್‌ಎಸ್‌ ನೇರವಾಗಿ ಅಧಿಕಾರಕ್ಕೆ ಬಾರದೆ ನಿಯಂತ್ರಣವನ್ನು ಸಾಧಿಸುತ್ತದೆ ಮತ್ತು ಪ್ರಾಚೀನ ಭಾರತದ ಬ್ರಾಹ್ಮಣರಂತೆ ಅಥವಾ ಆಧುನಿಕ ಭಾರತದ “ಶಾಶ್ವತ ಸರ್ಕಾರ” ದಂತೆ “ಸಾಂಸ್ಕೃತಿಕ ಸಂಘಟನೆಯಾಗಿ” ಉಳಿಯುತ್ತದೆ.

ಅಂತಿಮ ಅರ್ಥದಲ್ಲಿ, ಪಕ್ಷಗಳು, ನೀತಿಗಳು, ಪ್ರಕ್ರಿಯೆಗಳು ಮತ್ತು ಸಂಸ್ಥೆಗಳು ಒಂದೇ ಕಲ್ಪನೆಯ ಮತ್ತು ಒಂದು ಸಂಸ್ಥೆಯೊಳಗೆ ಸೇರಿಕೊಳ್ಳುತ್ತವೆ. ಆರ್‌ಎಸ್‌ಎಸ್‌ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅನಿವಾರ್ಯವಲ್ಲ- ಈ ಯೋಜನೆ ಅವರಿಗಿಂತ ದೊಡ್ಡದಾಗಿದೆ. ವಾಸ್ತವವಾಗಿ, ಅದು ಅವುಗಳನ್ನು ಮತ್ತು ಚುನಾವಣೆಗಳನ್ನು ಮೀರಿದಾಗ ಮಾತ್ರ ಅದು ಅಧಿಕೃತವಾಗುತ್ತದೆ.

ಮೂಲ: ನ್ಯೂಸ್‌ ಕ್ಲಿಕ್‌

ಕನ್ನಡಕ್ಕೆ: ಸೋಮಶೇಖರ್‌ ಚಲ್ಯ


ಇದನ್ನೂ ಓದಿ: Bjp-RSS ಹೇಳುವ ಭಾರತದಲ್ಲಿ ದಲಿತರು-ಆದಿವಾಸಿಗಳಿಗೆ ಶಿಕ್ಷಣವಿಲ್ಲ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights