FACT CHECK | ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೆ

ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತನ್ನ ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನದಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದು. “ವಂದೇ ಭಾರತ್, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳ ತ್ರಿವೇಣಿ” ಎಂದು ವಿಡಿಯೋ ಜೊತೆ ಬರೆದುಕೊಂಡಿದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲ್ವೆ ಇಲಾಖೆಯನ್ನು ಅಭಿವೃದ್ದಿ ಮಾಡುತ್ತಿದೆ ಎಂಬ ಸಂದೇಶದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

 

 

 

 

 

 

 

 

 

 

 

ವಿಡಿಯೋದಲ್ಲಿ ವಿಸ್ಟಾ ಡೋಮ್ ರೈಲೊಂದನ್ನು ತೋರಿಸಲಾಗಿತ್ತು. ಸಚಿವರು ವಿಡಿಯೋ ಪೋಸ್ಟ್ ಮಾಡಿದ್ದ ಸ್ವಲ್ಪ ಹೊತ್ತಿನಲ್ಲೇ ಅದನ್ನು ಡಿಲಿಟ್ ಮಾಡಿದ್ದರು. ಅಷ್ಟರದಲ್ಲಿ ಅದನ್ನು ಸಾವಿರಾರು ಜನರು ನೋಡಿ ಕಮೆಂಟ್‌ ಮಾಡಿದ್ದರು. “ವಿಸ್ಟಾ ಡೋಮ್’ ಎಂದು ತೋರಿಸಲಾದ ರೈಲಿನ ಮೇಲೆ ‘ಪೆರು ರೈಲ್’ ಎಂದು ಬರೆಯಲಾಗಿತ್ತು. ಹಾಗಿದ್ದರೆ ಸಚಿವರು ಹಂಚಿಕೊಂಡ ವಿಡಿಯೋ ದೃಶ್ಯಗಳಲ್ಲಿ ಹಂಚಿಕೊಂಡ ರೈಲು ವಾಸ್ತವವಾಗಿ ಎಲ್ಲಿಯದ್ದು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ನಂತರ ಡಿಲೀಟ್‌ ಮಾಡಿದ್ದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ತೆಗೆದು ಕೀ ಫ್ರೇಮ್‌ಗಳನ್ನು ಗೂಗಲ್ ಲೆನ್ಸ್‌ ಮೂಲಕ ಸರ್ಚ್ ಮಾಡಿದಾಗ, DrGariS  ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮಾರ್ಚ್ 5,2020ರಂದು “PERU RAIL Train to Machu Picchu service on Vistadome class!” ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ.

ವಿಡಿಯೋ ನೋಡಿದಾಗ ಅದರಲ್ಲಿರುವ ಪೆರು ರೈಲು ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದ ವಿಡಿಯೋದಲ್ಲಿದ್ದ ರೈಲು ಒಂದೇ ಎಂದು ನಮಗೆ ಗೊತ್ತಾಗಿದೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ಇರುವ ರೈಲಿನ ಮೇಲೆ ಬರೆದಿದಿರುವ 534 ಎಂಬ ಸಂಖ್ಯೆಯನ್ನೇ ಸಚಿವರು ಹಂಚಿಕೊಂಡಿದ್ದ ರೈಲಿನ ಮೇಲೂ ಬರೆಯಲಾಗಿತ್ತು. ಹಾಗಾಗಿ, ಸಚಿವರು ವಿಡಿಯೋ ಹಂಚಿಕೊಂಡಿರುವುದು ಭಾರತದ ರೈಲಿನದ್ದಲ್ಲ, ಪೆರು ರೈಲಿನದ್ದು ಎಂದು ನಮಗೆ ಖಚಿತವಾಗಿದೆ.

ಸಚಿವರು ಹಂಚಿಕೊಂಡಿದ್ದ ವಿಡಿಯೋದಲ್ಲಿ ವಿಸ್ಟಾ ಡೋಮ್ ರೈಲಿನ ಒಳ ಭಾಗವನ್ನೂ ತೋರಿಸಲಾಗಿತ್ತು. ಆ ದೃಶ್ಯಗಳ ಕುರಿತು ನಾವು ಪರಿಶೀಲನೆ ನಡೆಸಿದಾಗ, ಅದು PeruRail ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಕ್ಟೋಬರ್ 8, 2019ರಂದು ಹಂಚಿಕೊಂಡಿರುವ ವಿಡಿಯೋದ ತುಣುಕು ಎಂದು ಗೊತ್ತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಚಿವ ವೈಷ್ಣವ್ ಅವರು ಹಂಚಿಕೊಂಡಿದ್ದ ವಿಡಿಯೋದಲ್ಲಿ ಪೆರು ರೈಲಿನ ದೃಶ್ಯಗಳಿರುವುದನ್ನು ಕಂಡು ಅನೇಕರು ವ್ಯಂಗ್ಯವಾಡಿದ್ದರು. ಸಚಿವರ ಕಾಲೆಳೆದಿದ್ದರು. ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ವಿಡಿಯೋ ಡಿಲಿಟ್ ಮಾಡಿದ ಸಚಿವರು, ಸೆಪ್ಟೆಂಬರ್ 28ರಂದೇ ಭಾರತೀಯ ವಿಸ್ಟಾಡೋಮ್ ರೈಲುಗಳ ತುಣುಕುಗಳಿರುವ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದರು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2024 ವಕ್ಫ್ (ತಿದ್ದುಪಡಿ) ಮಸೂದೆ ವಿರೋದಿಸಿ ದೆಹಲಿಯಲ್ಲಿ ಪ್ರತಿಭಟನೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights